24 ಮತ್ತು 25 ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ 15,000 ಉದ್ಯೋಗಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ; ಹೊರ ರಾಜ್ಯಗಳಿಂದಲೂ ಅಭ್ಯರ್ಥಿಗಳು.
ಮೂಡುಬಿದಿರೆ: ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಸಹಸ್ರಾರು ಉದ್ಯೋಗಕಾಂಕ್ಷಿಗಳ ನಡುವೆ ಕೊಂಡಿಯಾಗಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ಜೂನ್ 24, 25ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ನಲ್ಲಿ ಪ್ರಾರಂಭವಾಗಿದೆ.
ರಾಜ್ಯ ಕ್ರೀಡಾ ಹಾಗೂ ಯುವಜನ ಸೇವಾ ಖಾತೆಯ ಸಚಿವ ಪ್ರಮೋದ್ ಮದ್ವರಾಜ್ ಉದ್ಯೋಗ ಮೇಳವನ್ನು ಉದ್ಘಾಟಿಸಿ, ಶೈಕ್ಷಣಿಕ ಗುಣಮಟ್ಟದಲ್ಲಿ ಉಡುಪಿ, ದ.ಕ ಜಿಲ್ಲೆ ಅಗ್ರಪಂಕ್ತಿಯಲ್ಲಿದ್ದು, ಅಗಾಧವಾದ ಮಾನವ ಸಂಪನ್ಮೂಲವನ್ನು ಸೃಷ್ಠಿಸುವ ಕೇಂದ್ರವಾಗಿಯೂ ಬೆಳೆದಿದೆ. ವಿವಿಧ ಕಂಪೆನಿಗಳು ಮಾನವಸಂಪನ್ಮೂಲಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದು, ಗುಣಮಟ್ಟ ಸಹಿತ ಉತ್ತಮ ಸಾಮಥ್ರ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಗಮನಹರಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಜನರ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಯುವಕರಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರವು 6 ಕೋಟಿಗೂ ಅಧಿಕ ಅನುದಾನವನ್ನು ವಿನಿಯೋಗಿಸುತ್ತಿದೆ. ಯುವಕರು ಉದ್ಯೋಗಾಂಕ್ಷಿಗಳಾಗುವುದು ಮಾತ್ರವಲ್ಲ. ಹೊಸ ಉದ್ದಿಮೆಗಳನ್ನು ಸ್ಥಾಪಿಸಿ, ಉದ್ಯೋಗ ಸೃಷ್ಟಿಸುವ ಕೆಲಸಕ್ಕೂ ಮುಂದಾಗಬೇಕು. ಸ್ವಸಾಮಥ್ರ್ಯದ ಬಗ್ಗೆ ನಂಬಿಕೆಯಿರಿಸಿ, ಅದನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ಅಬುದಾಬಿಯಲ್ಲಿರುವ ಬಿಆರ್ಎಸ್ ವೆಂಚರ್ಸ್ನ ಸಿಇಒ ಬಿನಯ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತವು ಇಂದು ದೊಟ್ಟಮಟ್ಟದಲ್ಲಿ ಸ್ಟಾರ್ಟ್ ಅಪ್ ದೇಶವಾಗಿ ಬೆಳೆಯುತ್ತಿದ್ದು, ಯುವಜನರಿಗೆ ಸಾಕಷ್ಟು ಉದ್ಯೋಗಗಳು ಕೂಡ ಸೃಷ್ಟಿಯಾಗುತ್ತಿದೆ ಎಂದರು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು. ದೀಪಾ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.
9ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಕರ್ನಾಟಕ ಮಾತ್ರವಲ್ಲದೆ ಕೇರಳ, ತೆಲಂಗಾಣ, ತಮಿಳುನಾಡು, ಅಸ್ಸಾಂ ಸಹಿತ ಹೊರರಾಜ್ಯಗಳಿಂದಲೂ ಸುಮಾರು 15 ಸಾವಿರ ಉದ್ಯೋಗಾಂಕ್ಷಿಗಳು ಬರುವ ನಿರೀಕ್ಷೆಯಿದೆ. ಸಾವಿರಾರು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು 200ಕ್ಕೂ ಅಧಿಕ ಕಂಪೆನಿಗಳು ವಿದ್ಯಾಗಿರಿಗೆ ಬಂದಿವೆ. ಎರಡು ದಿನಗಳಲ್ಲಿ ವಿವಿಧ ಕಂಪೆನಿಗಳ 600ಕ್ಕೂ ಅಧಿಕ ಎಚ್ಆರ್ಗಳು ಅಭ್ಯರ್ಥಿಗಳನ್ನು ಸಂದರ್ಶಿಸಲಿದ್ದಾರೆ.
ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ವಿಶೇಷ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ. ಕಂಪೆನಿಗಳ ಸಂದರ್ಶನದ ಮೊದಲು, ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡಲು ಹಾಗೂ ಅವರಲ್ಲಿರುವ ಗೊಂದಲಗಳನ್ನು ನಿವಾರಿಸಲು ಕ್ಲಾರಿಟಿ ಕೇಂದ್ರವನ್ನೂ ತೆರೆಯಲಾಗಿದೆ. 1500 ಸ್ವಯಂಸೇವಕರು ವಿವಿಧ ರೀತಿಯಲ್ಲಿ ಅಭ್ಯರ್ಥಿಗಳಿಗೆ ಹಾಗೂ ಕಂಪೆನಿಗಳ ಎಚ್ಆರ್ಗಳಿಗೆ ನೆರವಾಗಲಿದ್ದಾರೆ.
ಐಟಿ, ಐಟಿಈಎಸ್, ಮ್ಯಾನುಫ್ಯಾಕ್ಚರಿಂಗ್, ಸೇಲ್ಸ್ ಹಾಗೂ ರಿಟೇಲ್ಸ್, ಬ್ಯಾಂಕಿಂಗ್ ಹಾಗೂ ಫಿನಾನ್ಸ್, ಹಾಸ್ಪಿಟ್ಯಾಲಿಟಿ, ಎನ್ಜಿಒ ಹಾಗೂ ಶಿಕ್ಷಣ ಕ್ಷೇತ್ರವನ್ನು ತೆರದಿಡಲಿದೆ. ಈ ಉದ್ಯೋಗ ಮೇಳವು ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿವಿಧ ಕ್ಷೇತ್ರಗಳಾದ ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲೆ, ವಾಣಿಜ್ಯ, ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೋಮಾ, ಹಾಗೂ ಕೌಶಲಭರಿತ ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಸೂಕ್ತವಾದ ಉದ್ಯೋಗ ಪಡೆಯಲು ಪ್ರಗತಿ ಉತ್ತಮ ಅವಕಾಶವಾಗಿದೆ. ಆಳ್ವಾಸ್ ಸಂಸ್ಥೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅರ್ಹ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶಕ್ಕೆ ಕೊಂಡಿಯಾಗಿರುತ್ತಿದ್ದು, ಯುವ ಶಕ್ತಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬದುಕು ರೂಪಿಸಬೇಕೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಉದ್ಯೋಗ ಮೇಳದ ಬಗ್ಗೆ ಮಾಹಿತಿ ನೀಡಿ ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.