ಇಪ್ಪತ್ತರ ಹರೆಯದ ಮನೆಯ ಮುದ್ದು ಮಗಳು ಪ್ರೇಮಿಸಿ ಓಡಿಹೋದ ವಿಷಯವನ್ನು ಅವಳ ಗೆಳತಿ ಫೋನ್ ಮಾಡಿ ಹೇಳಿದ್ದಳು. ವಿಷಯ ಸಿಡಿಲಿನಂತೆ ಬಂದೆರಗಿತ್ತು. ಅಮ್ಮನ ಒಡಲ ಸಂಕಟ ಹೇಳತೀರದು.ಅಂದು ಮಗಳು ತುಂಡರಿಸಿದ್ದು ಇಪ್ಪತ್ತು ವರ್ಷಗಳ ಸಂಬಂಧ ಮಾತ್ರವಲ್ಲ, ಅಷ್ಟೇ ವರ್ಷಗಳ ತಾಯಿಯ ಪ್ರೀತಿ ಕೂಡಾ. ತಾನು ಅವನನ್ನು ಪ್ರೇಮಿಸುವ ಸಂದರ್ಭದಲ್ಲಿ ತನಗೆ ಜನ್ಮ ಕೊಟ್ಟ ತಾಯಿ ಅನುಭವಿಸಿದ ಕಷ್ಟ ಒಮ್ಮೆಯೂ ನೆನಪಿಗೆ ಬಂದಿರಲಿಲ್ಲ. ಈಕೆಯ ಪ್ರತಿ ಮಾತನ್ನು ಹೌದೆನ್ನುತ್ತಿದ್ದ ಆತನ ಎದುರಲ್ಲಿ, ಮಗುವಿಗೆ ಮಾತು ಬರುವ ಮುನ್ನ ಅಳುವನ್ನು ಅರ್ಥೈಸಿಕೊಂಡೇ ಸರಿಯಾಗಿ ಪೋಷಿಸುತ್ತಿದ್ದ ತಾಯಿಯ ನೆನಪು ಬರಲೇ ಇಲ್ಲ. ಆತನ ಅಪ್ಪುಗೆಯಲ್ಲಿ ತಾಯಿಯ ಪ್ರೀತಿಯ ಅಪ್ಪುಗೆ, ಹಾರೈಕೆ, ಸಾಂತ್ವಾನ ಎಲ್ಲವೂ ಗೌಣವಾಗಿ ಹೋಗಿತ್ತು. ಆತ ಚಮಚದಲ್ಲಿ ಐಸ್ ಕ್ರೀಮ್ ತಿನ್ನಿಸುವಾಗ, ತಾಯಿಯ ಕೈತುತ್ತು ಕಳೆದು ಹೋಗಿತ್ತು. ಈಕೆ ತಪ್ಪು ಮಾಡಿದಾಗ ಆತನ ಒಂದು ಕಿರುನಗೆ, ತಾಯಿಯ ತಪ್ಪು ತಿದ್ದುವ ಪೆಟ್ಟನ್ನು ಖರೀದಿಸಿತ್ತು. ಪ್ರತಿನಿತ್ಯ ಆತ ಹೇಳುವ ಟೇಕ್ ಕೇರ್, ತಾಯಿಯ ಕಾಳಜಿಯ ಕನವರಿಕೆಯನ್ನು ಕೊಂದಿತ್ತು. ಒಟ್ಟಾರೆ ತಾಯಿ ಕಂಡ ಕನಸು ಕರಗಿ ಹೋಗಿತ್ತು. ವರ್ಷದ ಹಿಂದೆ ಹೊತ್ತ ಹರಕೆಯನ್ನು ದೇವರೂ ಸಹ ಮರೆತಂತಿತ್ತು..!!
ಮಗಳ ಪ್ರೇಮ ವಿಷಯ ಹಿಂದಿನ ದಿನವೇ ಗೊತ್ತಾಗಿತ್ತು. ಸಾಯಂಕಾಲದಲ್ಲಿ ಒಮ್ಮೆ ವಾಗ್ಯುದ್ದ ನಡೆದು ಅಪ್ಪ ಮಗಳ ಕೆನ್ನೆಗೆ ಒಂದು ಏಟು ಬಾರಿಸಿಯೂ ಆಗಿತ್ತು. ಅಪ್ಪ ಅಮ್ಮ ಇಬ್ಬರೂ ಒಂದಷ್ಟು ಪ್ರಯತ್ನಪಟ್ಟು ಅವರಿಬ್ಬರನ್ನು ಬಿಡಿಸಲು ನೋಡಿದ್ದರು. ನಿನ್ನೆ ನಾನು ಬೈದದ್ದೇ ಹೆಚ್ಚಾಯಿತೇನೋ ಎಂದು ಇಂದು ಅಮ್ಮ ಗೋಳಿಡುತ್ತಿದ್ದಳು. ತಾನು ನಿನ್ನೆ ಕೆನ್ನೆಗೆ ಹೊಡೆದ ಕೈಯನ್ನೇ ನೋಡುತ್ತಿದ್ದ ಅಪ್ಪ ನಿಧಾನವಾಗಿ ಎದ್ದು ಹೋಗಿ ಮಗಳು ಬಳಸುತ್ತಿದ್ದ ಪೆನ್ ತೆಗದುಕೊಂಡು ಆಕೆಯ ಪಟ್ಟಿಯಿಂದಲೇ ಒಂದು ಹಾಳೆಯನ್ನು ಹರಿದು ಅದರಲ್ಲಿ ಬರೆಯಲು ಪ್ರಾರಂಭಿಸಿದ.
ಮಗಳೇ….
ಈ ರೀತಿಯ ಪತ್ರ ಬರೆಯುವ ಸಂದರ್ಭ ಬರಬಹುದೆಂಬ ಕಲ್ಪನೆಯೂ ಇರಲಿಲ್ಲ. ಪತ್ರವನ್ನು ಹೇಗೆ ಪ್ರಾರಂಭಿಸಬೇಕು ಅಂತ ಗೊತ್ತಾಗುತ್ತಿಲ್ಲ. ನಮಗಿರೋದು ಒಂದು ಎಕರೆ ಅಡಿಕೆ ತೋಟ ಹೊಂದಿರೋ ಸಣ್ಣ ಜಮೀನು, ಒಂದು ಪುಟ್ಟ ಮನೆ. ಬಡತನದ ರೇಖೆಗೆ ತಾಗಿಕೊಂಡು ಬದುಕುತ್ತಿರುವ ಮಧ್ಯಮ ವರ್ಗದ ಸಂಸಾರ ನಮ್ಮದು. ನೀನು ಹುಟ್ಟಿದಾಗ ಭಾಗ್ಯಲಕ್ಷ್ಮಿನೇ ಮನೆಗೆ ಬಂತು ಅಂತ ಸಂತೋಷ ಪಟ್ಟೆವು. ಮೊದಲಿಂದನೂ ನೀನು ಹಠಮಾರಿ. ಸಣ್ಣವಳಾಗಿದ್ದಾಗ ಹಠ ಮಾಡದ ದಿನವೇ ಇಲ್ಲವೇನೋ. ಪೇಟೆಯಲ್ಲಿ ನಿನ್ನ ಹೊತ್ತಿಕೊಂಡು ತಿರುಗುವಾಗ ನೀನು ಬೇಕಂದಿದ್ದನ್ನು ಕೊಡಿಸದೇ ಮನೆಗೆ ಬಂದ ನೆನಪಿಲ್ಲ. ಅಮ್ಮ ಯಾವಾಗ್ಲೂ ಹೇಳತಿದ್ಲು – ನೀವು ಮುದ್ದು ಜಾಸ್ತಿ ಮಾಡ್ತೀರಾ ಅದಕ್ಕೆ ಅವಳದ್ದು ಹಠ ಜಾಸ್ತಿ. ಬೇಕು ಹೇಳಿದ್ದೆಲ್ಲಾ ಕೊಡಿಸಲೇ ಬೇಕಾ ? ಏನೋ ಸಣ್ಣ ಮಕ್ಕಳು ಸ್ವಲ್ಪ ಹೊತ್ತು ಅತ್ತು ಆಮೇಲೆ ಸುಮ್ಮನಾಗ್ತಾರೆ – ಅಂತ. ಹಾಗಂದ ಮಾತ್ರಕ್ಕೆ ಅಮ್ಮನಿಗೆ ನಿನ್ನ ಮೇಲೆ ಪ್ರೀತಿ ಕಡಿಮೆ ಇತ್ತು ಅಂತಲ್ಲ. ಅಮ್ಮನಿಗೆ ನಮ್ಮ ಹರುಕು ಸಂಸಾರದ ಕಥೆ ಗೊತ್ತಿತ್ತು. ನಿನಗೆ ಪ್ರತಿ ದುಬಾರಿ ವಸ್ತು ಕೊಡಿಸುವಾಗಲೂ ಆಕೆ ನನ್ನ ಕೈ ಅನ್ನು ಒಮ್ಮೆ ಗಟ್ಟಿಯಾಗಿ ಹಿಡಿಯುತ್ತಿದ್ದಳು. ನಾನು ಆಕೆಯ ಮುಖ ನೋಡಿ ಕಣ್ರೆಪ್ಪೆ ಮಿಟುಕಿಸಿ ಸುಮ್ಮನುಳಿಸುತ್ತಿದ್ದೆ. ಮದುವೆಯಾದ ಮೊದಲ ದಿನದಿಂದ ಇಲ್ಲಿಯ ತನಕ ಒಮ್ಮೆಯೂ ನಿನ್ನ ಅಮ್ಮ ನನಗೆ ಬಂಗಾರದ ಬಳೆ ಬೇಕಿತ್ತು ಅಂತ ಹೇಳಿಲ್ಲ. ಯಾರದ್ದೋ ಮನೆಯ ವಿಶೇಷಕ್ಕೆ ಹೋಗುವಾಗಲೂ ಆಕೆ ನಿರಾಭರಣಳಾಗಿಯೇ ಹೋಗೋಳು. ಕಾರ್ಯಕ್ರಮ ಮುಗಿಸಿ ಬಂದ ಮೇಲೂ ಅವಳು ಅಷ್ಟು ಬಂಗಾರ ಹಾಕಿಕೊಂಡು ಬಂದಿದ್ಲು, ಅವಳ ಬಳೆ ಚೆನ್ನಾಗಿತ್ತು, ಆಕೆಯ ಬಂಗಾರದ ಸರ ನೋಡೋಕೆ ಚೆನ್ನಾಗಿದೆ ಅಂತ ಒಮ್ಮೆಯೂ ಹೇಳಿಲ್ಲ. ನಾನು ವರ್ಷಕ್ಕೊಮ್ಮೆ ಸೀರೆ ತಂದು ಕೊಟ್ಟಾಗಲೂ – ಯಾಕೆ ಇಷ್ಟೆಲ್ಲಾ ದುಬಾರಿ ಸೀರೆ ತರೋಕ್ ಹೋದ್ರಿ ಅಂತಾನೆ ಕೇಳೋಳು. ಮನಸಿನ ತುಂಬಾ ಕನಸಿನ ಅರಮನೆಯನ್ನೇ ಹೊತ್ತು ಸಂಸಾರಕ್ಕಾಗಿ ತನ್ನ ಕನಸನ್ನೇ ಕರಗಿಸಿರೋ ನಿನ್ ಅಮ್ಮ ಈ ಮನೆಯ ಸೌಭಾಗ್ಯ. ನೀನು ಬೆಳೆದು ದೊಡ್ಡವಳಾಗಿ ಕಾಲೇಜ್ ಅಭ್ಯಾಸ ಮುಗಿಸುವ ತನಕವೂ ನಿನ್ನ ಅಭ್ಯಾಸಕ್ಕೆ ಒಂದು ಚೂರೂ ತೊಂದರೆ ಆಗಬಾರದು ಅಂತಾನೆ ನೀನು ಹೇಳಿದ್ದು ಕೇಳಿದ್ದು ಎಲ್ಲಾ ಕೊಡಿಸಿದೆ. ಮಗಳು ಚೆನ್ನಾಗಿ ಓದಲಿ ಅಂತ ಇಂಗ್ಲೀಷ್ ಮೀಡಿಯಂಗೆ ಸೇರಿಸಿದೆ. ನಿನ್ನ ಹೈಸ್ಕೂಲ್ ಫೀಸ್ ತುಂಬಲು ಬೇಕಾದಷ್ಟು ಹಣ ಇಲ್ಲದಿದ್ದಾಗ ಸೊಸೈಟಿಯಲ್ಲಿ ಸಾಲ ಶುರು ಮಾಡಿದೆ. ನೀನು ಕಾಲೇಜ್ ಓದಿ ಮುಗಿಸುವಷ್ಟರಲ್ಲಿ ಸಾಲದ ಖಾತೆ ದೊಡ್ಡದಾಗಿ ಬೆಳೆದಿತ್ತು.
ನಿನಗೆ ನೆನಪಿದೆಯಾ? ಮಣ್ಣು ನೆಲದ ನಮ್ಮ ಮನೆಯನ್ನು red oxide ಸಿಮೆಂಟ್ ನೆಲವನ್ನಾಗಿ ಮಾಡಿದ್ದು ಐದು ವರ್ಷದ ಹಿಂದೆ. ಸಾಮಾನ್ಯ ಬಡವರ ಮೊದಲ ಕನಸು ಇದು. ನಿನ್ನ ಅಮ್ಮನದೂ ಕೂಡಾ ಆಗಿತ್ತು. ಆ ಕನಸನ್ನು ನನಸು ಮಾಡಲಿಕ್ಕೆ ನನಗೆ ಬೇಕಾಗಿದ್ದು ಹದಿನೈದು ವರ್ಷ..! ನಮ್ಮ ಪರಿಸ್ಥಿತಿ ಹೀಗಿದೆ..!! ಈ ನಡುವೆ ಎಕರೆಗೆ ಬರೋ ಐದು ಕ್ವಿಂಟಾಲ್ ಅಡಿಕೆ ವರ್ಷದ ಕರ್ಚಿಗೆ ಅಲ್ಲಿಂದಲ್ಲಿಗೆ ಆಗೋದು. ಹೀಗಿರುವಾಗ ಸಾಲ ತೀರಿಸೋದು ಹೇಗೆ ಅನ್ನೋ ಭಯ ಇತ್ತು. ಆದರೆ ಈಗ ನೀನು ಚೆನ್ನಾಗಿ ಓದಿ ಪಾಸ್ ಆಗಿದೀಯ. ಇನ್ನು ಕೆಲಸ ಮಾಡ್ತೀಯ. ಸಮಸ್ಯೆಗಳು ಒಂದೊಂದಾಗಿ ನಿವಾರಣೆ ಆಗತ್ತೆ ಅನ್ನೋ ಸಂದರ್ಭದಲ್ಲಿ ನೀನು ಮಾಡಿದ್ದು ಸರಿನಾ ?
ನಿನ್ನೆ ನೀನು ಆಡಿದ ಒಂದೊಂದು ಮಾತಿನ ಅರ್ಥ ನಿನಗೆ ಗೊತ್ತಾ ? ಪ್ರೇಮಿಸಬೇಡ ಅಂತ ನಾವಿಬ್ಬರೂ ಹೇಳಲಿಲ್ಲ. ಆತ ಬೇಡ ಅಂತ ಮಾತ್ರ ಹೇಳಿದ್ದು. ಆತನ ಬಗ್ಗೆ ನಿಮಗೇನು ಗೊತ್ತು ಎಂದು ಕೇಳಿದ ನಿನ್ನ ದನಿಯಲ್ಲಿ ನಮಗಿಂತ ಆತನೇ ನಿನಗೆ ಹತ್ತಿರವಾಗಿದ್ದ. ನಮಗೆ ಆತನ ಬಗ್ಗೆ ಗೊತ್ತೇ ಇಲ್ಲವೆಂದೇನಲ್ಲ. ಆದರೆ ನಿನ್ನ ಬಗ್ಗೆ ಪೂರ್ತಿಯಾಗಿ ಗೊತ್ತಿತ್ತು. ಅದಕ್ಕೇ ಬೇಡ ಎಂದಿದ್ದು. ನಿನ್ನಲ್ಲಿರುವ ಮುಗ್ದತೆ, ಎಲ್ಲರ ಮೇಲೆ ನೀ ತೋರುವ ನಮ್ರತೆ ನಿನಗೆ ಮುಳ್ಳಾಯಿತಲ್ಲಾ, ನಿನ್ನ ಒಳ್ಳೆತನವನ್ನು ಬಳಸಿಕೊಂಡು ನಿನ್ನನ್ನೇ ಒಳಹಾಕಿಕೊಂಡರಲ್ಲಾ ಎಂಬ ಬೇಸರದಿಂದ ಹೇಳಿದ್ದು. ನಿನ್ನ ಮುಂದಿನ ಬದುಕು ಬರ್ಬರ ಆಗುವುದು ಬೇಡ ಎಂಬ ಮುನ್ನೆಚ್ಚರಿಕೆ ಇಂದ ಹೇಳಿದ್ದು ಅದು. ಆದರೆ ನಾವು ಎಷ್ಟೇ ತಿಳಿ ಹೇಳಿದರೂ ಕೇಳುವ ಹಂತದಲ್ಲಿ ಇರಲಿಲ್ಲ ನೀನು. ಮಗಳನ್ನು ಅರ್ಥ ಮಾಡಿಕೊಳ್ಳದ ನೀನೂ ಒಂದು ಅಮ್ಮಾನಾ ? ಅಂದಾಗ ಮಾತ್ರ ಸಿಟ್ಟು ನೆತ್ತಿಗೇರಿ ನಿನ್ನ ಕೆನ್ನೆಗೆ ಹೊಡೆದಿದ್ದೆ. ಆಗಲೇ ನಿನಗೆ ಉತ್ತರ ಕೊಡಬೇಕೆಂದಿದ್ದೆ. ಆದರೆ ನೀನು ಓಡಿ ಹೋಗಿ ಬಾಗಿಲು ಹಾಕಿಕೊಂಡು ಬಿಟ್ಟೆ. ಇಲ್ಲದಿದ್ದರೆ ಈ ಪತ್ರ ಬರೆಯುವ ಅನಿವಾರ್ಯತೆ ಬರುತ್ತಿರಲಿಲ್ಲ.“ಮಗಳನ್ನು ಅರ್ಥೈಸಿಕೊಳ್ಳದ ನೀನೂ ಅಮ್ಮನಾ ?” ಅಂತ ಕೇಳಿದಾಗಲೇ ನೀನು ಏನು ಅಂತ ಅರ್ಥ ಆಗಿ ಹೋಗಿತ್ತು. ಇನ್ನೂ ಹೆಚ್ಚು ಅರ್ಥವಾಗುವುದು ಬೇಕಿರಲಿಲ್ಲ. ನಿನಗಾಗಿ ನಿನ್ನಮ್ಮ ಮಾಡಿದ ತ್ಯಾಗ ನಿನಗೇನು ಗೊತ್ತು? ನೀನು ಹುಟ್ಟಿದ ಮೇಲಿಂದ ನಿನಗೆ ನಿನ್ನ ಅಮ್ಮನ ಮೇಲೆ ಪ್ರೀತಿಯಾದರೆ ನಿನ್ನಮ್ಮನಿಗೆ ನೀನು ಹುಟ್ಟುವ ಮೊದಲಿನಿಂದಲೂ ಪ್ರೀತಿ. ಚಿಕ್ಕವಳಿದ್ದಾಗ ಆಕೆಗೆ ಒದ್ದಾಗ ನಿನ್ನ ಕಾಲಿಗೆ ನೋವಾಯಿತೇನೋ ಎಂದು ಚುಂಬಿಸಿದವಳು. ನಿನ್ನ ಅಳುವು ಅದೆಷ್ಟೋ ಆಕೆಯ ರಾತ್ರಿಯನ್ನೇ ಕಸಿದಿದ್ದವು. ನಿನ್ನ ಒಳಿತಿಗಾಗಿ ಅವಳು ಬೇಡಿಕೊಂಡ ದೇವರುಗಳೆಷ್ಟೋ…ಹೊತ್ತ ಹರಕೆಗಳೆಷ್ಟೋ..! ಈ ವರ್ಷ ನಮ್ ನೆಂಟರ-ಇಷ್ಟರ ಯಾರ ಮದುವೇನೂ ಇಲ್ಲ ಹಾಗಾಗಿ ನನಗೆ ಸೀರೆ ಬದಲು ಮಗಳಿಗೆ ಒಂದು ಚೆನ್ನಾಗಿರೋ ಡ್ರೆಸ್ ಕೊಡಿಸಿ ಸಾಕು ಅಂದ ಮಹಾತಾಯಿ ಅವಳು. ನಿನ್ನ ಉಸಿರಲ್ಲೇ ಭಾವನೆಗಳನ್ನು ಅರ್ಥ ಮಾಡ್ಕೊಳವಳು. ಆಕೆಗೆ ಹುಷಾರಿಲ್ಲದಿದ್ದರೂ ನಿನ್ನನ್ನು ಅಡುಗೆ ಮಾಡುವಂತೆ ಒಮ್ಮೆಯೂ ಹೇಳದೆ ನಿನ್ನನ್ನು ನಿನ್ನಿಷ್ಟದಂತೆ ಇರಲು ಬಿಟ್ಟವಳು. ನೀನು ಕಾಲೇಜ್ ಮೆಟ್ಟಿಲೇರಿದಾಗ ನಿನ್ನ ಧೈರ್ಯಕ್ಕಾಗಿ ನನಗೆ ಹಠಬಿದ್ದು ಮೊಬೈಲ್ ಕೊಡಿಸಿದವಳು. ತಾನು ಪಕ್ಕದ ಮನೆಗೆ ಹೋಗುವಾಗ ಬರಿಗಾಲಲ್ಲಿ ಹೋಗಿ ನಿನಗೆ ಹೈ ಹೀಲ್ಸ್ ಚಪ್ಪಲಿ ಕೊಡಸಿದಳು. ತನ್ನೆಲ್ಲ ಸುಖವನ್ನು ನಿನಗಾಗಿ ತ್ಯಾಗ ಮಾಡಿದ್ಳು. ನಿನ್ನ ಎದೆ ಬಡಿತದಲ್ಲೇ ಗಾಬರಿ ಅರ್ಥ ಮಾಡಿಕೊಳ್ಳೋ ಅವಳು ನಿನ್ನನ್ನು ಇನ್ನೂ ಎಷ್ಟು ಅರ್ಥ ಮಾಡ್ಕೋಬೇಕಿತ್ತು? ತನ್ನೊಳಗಡೆ ಅದೆಷ್ಟೋ ಆಸೆಗಳನ್ನು ಅದುಮಿ ಬದುಕುತ್ತಿರೋ ನಿನ್ನ ತಾಯಿಗೆ ನಿನ್ನ ಬಾಯಿಂದ ಬಂದ ಮಾತು ಅದೆಷ್ಟು ಪೆಟ್ಟು ಮಾಡಿರಬೇಡ..! ನಿನಗೆ ಮಾತನ್ನು ಕಲಿಸಿದವಳೇ ಅವಳು. ಈಗ ನಿನ್ನ ಬಾಯಿಂದ ಈ ಮಾತನ್ನು ಕೇಳೋ ದೌರ್ಭಾಗ್ಯ ಆಕೆದು..!! ತನ್ನ ಸಂಸಾರದ ಗುಟ್ಟನ್ನು ಒಂದಿಂಚೂ ಸಹ ಹೊರಗಡೆ ಬರದಂತೆ ಕಾದಿಟ್ಟುಕೊಂಡು ಬಂದ ನಿನ್ನಮ್ಮ ಇಂದು ತಲೆ ಎತ್ತದ ಹಂತಕ್ಕೆ ಬಂದು ಕುಳಿತಿದಾಳೆ. ಮಗಳೇ ನೀನು ಬೇರೊಬ್ಬರ ಮನೆ ಬೆಳಗಿ ಅಪ್ಪ ಅಮ್ಮನಿಗೆ ಕೀರ್ತಿ ತರ್ತೀಯಾ ಅಂತ ತಿಳ್ಕೊಂಡಿದ್ದೆ, ಆದರೆ ನೀನು ಓಡಿ ಹೋಗುವಾಗ ಮನೆ ಮರ್ಯಾದೆಯನ್ನೂ ತೆಗೆದುಕೊಂಡು ಹೋಗಿಬಿಟ್ಟೆಯಲ್ಲಾ ಅಂತ ಬಿಕ್ಕಿ ಬಿಕ್ಕಿ ಅಳ್ತಾ ಇದ್ದಾಳೆ. ನಿಜ… ನೀನು ಓಡಿ ಹೋದಾಗ ತುಂಡರಿಸಿದ್ದು ನಮ್ಮ ನಡುವಿನ ಇಪ್ಪತ್ತು ವರ್ಷದ ಸಂಬಂಧದ ನಂಟನ್ನ ಮಾತ್ರವಲ್ಲ, ಅಷ್ಟು ವರ್ಷದ ಆಸೆ, ಆಕಾಂಕ್ಷೆ, ಪ್ರೀತಿ, ಕಾಳಜಿ, ನಂಬಿಕೆ, ಆರೈಕೆ, ಹಾರೈಕೆ, ತ್ಯಾಗ… ಎಲ್ಲವನ್ನೂ ಒಂದೇ ಹೊಡೆತಕ್ಕೆ ಕತ್ತರಿಸಿಬಿಟ್ಟೆ..! ಇದ್ದ ಒಂದು ಮಗಳು ಇಲ್ಲದಂತಾಗಿದೆ ಈಗ. ಇಷ್ಟು ವರ್ಷ ಯಾವ ಜೀವಕ್ಕಾಗಿ ನಮ್ಮ ಜೀವನ ಸವೆಸಿದ್ದೆವೋ ಆ ಜೀವಕ್ಕೆ ನಾವೇ ಬೇಡ ಅಂತ ಆದಮೇಲೆ ನಾವ್ಯಾಕೆ ಬದುಕಬೇಕು ಅಂತ ಅನಿಸುತ್ತೆ ಕೆಲವೊಮ್ಮೆ. ಆದರೆ ತ್ಯಾಗಮೂರ್ತಿ ನನ್ನ ಹೆಂಡತಿಗಾದರೂ ನಾನು ಬದುಕಲೇ ಬೇಕು. ಆಕೆ ಸಹ ಹಾಗೇ ಹೇಳುತ್ತಿದ್ದಾಳೆ. ಇನ್ನು ಮುಂದೆ ಆಕೆಗೆ ನಾನು ನನಗೆ ಆಕೆ. ನಿನ್ನ ಗೆಜ್ಜೆ ಸಪ್ಪಳ ಕೇಳುತ್ತಿದ್ದ ನಮ್ಮ ಮನೆಯಲ್ಲಿ ಇನ್ನು ಮುಂದೆ ನಮ್ಮಿಬ್ಬರ ಉಸಿರು ಕೇಳುವಷ್ಟು ನಿಶ್ಯಬ್ದವಾಗಬಹುದು. ಚಿಂತೆಯಿಲ್ಲ.
ಕೊನೆಯಲ್ಲೊಂದು ಮಾತು ನೆನಪಿಟ್ಟುಕೋ. ನಿನ್ನ ಜೀವನದಲ್ಲಿ ಮುಂದೆ ಏನಾದರೂ ಆಕಸ್ಮಿಕ ತೊಂದರೆ ಆದಲ್ಲಿ (ಆಗುವುದು ಬೇಡ ಎಂದೇ ದೇವರಲ್ಲಿ ಕೇಳಿಕೊಳ್ಳುತ್ತೇನೆ) ಎಲ್ಲಿ ಹೋಗಬೇಕು, ಏನು ಮಾಡಬೇಕು, ಮುಂದಿನ ದಾರಿ ಏನು ಎಂಬ ಗೊಂದಲ ಉಂಟಾದಲ್ಲಿ ನೇರವಾಗಿ ನಿನ್ನ ಅಪ್ಪನ ಮನೆಗೆ ಬಾ. ನಿನಗಾಗಿ ಈ ಮನೆಯ ಬಾಗಿಲು ದಿನಪೂರ್ತಿ ತೆಗೆದಿರುತ್ತದೆ. ಚಿಂತಿಸಬೇಡ.
ಇಂತಿ ನಿನ್ನ
ನತದೃಷ್ಟ ಅಪ್ಪ..!!
ಇಷ್ಟನ್ನು ಬರೆಯುವಾಗ ಆ ಹಾಳೆಯ ಮೇಲೆ ಆರೆಂಟು ಕಡೆ ಕಣ್ಣೀರ ಹನಿ ಬಿದ್ದ ಕಲೆಯಾಗಿತ್ತು. ಕಾಗದವನ್ನು ಮಡಿಸಿ ಒಂದು ಬೆಳ್ಳಗಿನ ಕವರ್ನಲ್ಲಿ ಇರಿಸಿ ತನ್ನ ಮಗಳ ಗೆಳತಿಯ ಮನೆಗೆ ಹೋಗಿ, ಆಕೆಯ ಬಳಿ “ನಮ್ ಮಗಳಿಗೆ ನಮಗಿಂತಾ ಬೇರೆಯವರೇ ಜಾಸ್ತಿ ಹತ್ತಿರ ಅಂತ ಗೊತ್ತಾಯ್ತಮ್ಮ. ಆಕೆ ನಿನಗೆ ಸಿಕ್ಕಾಗ ಈ ಪತ್ರ ಕೊಡು. ಮರೀಬೇಡ..” ಅಂತ ಹೇಳಿ ಮನೆಗೆ ಬಂದ. ತನ್ನ ಮಗಳು ಓಡಿ ಹೋಗಲು ಈಕೆಯ ಸಹಾಯ ಇದೆ ಅಂತ ಅಪ್ಪನಿಗೆ ಗೊತ್ತು. ಹಾಗಾಗಿ ಆ ಕವರ್ ನ ಒಂದು ಕಡೆ ತೆರೆದೇ ಇರಿಸಿದ್ದ..! ಈ ಪತ್ರವನ್ನು ಈಕೆಯೂ ಒಮ್ಮೆ ಓದಲಿ ಎಂಬುದು ಅಪ್ಪನ ಆಸೆ. ಆಕೆ ಪತ್ರ ಓದಿ ಮತ್ತೆ ಕವರ್ನಲ್ಲಿ ಇರಿಸುವಾಗ ಎರಡು ಹನಿ ಕಣ್ಣೀರು ಜಾಸ್ತಿಯಾದ ಗುರುತಿತ್ತು.!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.