ಬೆಳ್ತಂಗಡಿ: ಜೀವನದ ನಾನಾ ಹಂತಗಳಲ್ಲಿ ಆಗಬೇಕಾದ ಸಂಸ್ಕಾರಗಳು ವ್ಯಕ್ತಿಯನ್ನು ಪರಿಶುದ್ಧತೆಗೆ ಕೊಂಡೊಯ್ಯುತ್ತವೆ. ಷೋಡಷ ಸಂಸ್ಕಾರದಿಂದ ಬ್ರಾಹ್ಮಣ್ಯಕ್ಕೆ ಚಿನ್ನದ ಲೇಪನದಂತೆ ಹೊಳಪು ಸಿಗುತ್ತದೆ ಇಂತಹ ಸಂದರ್ಭಗಳಲ್ಲಿ ನಮಗೆ ಸಿಗುವ ಅನುಭವಗಳು ವಿವಿಧತೆಯಿಂದ ಕೂಡಿದ್ದು ಅವುಗಳನ್ನು ಅನುಭವಿಸಿದಾಗಲೇ ಸಂತೋಷ ಪ್ರಾಪ್ತಿ ಎಂದು ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾದ ಗೌರವಾಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ ಹೇಳಿದರು.
ಅವರು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ತುಳು ಶಿವಳ್ಳಿ ಸಭಾದ ವತಿಯಿಂದ 123 ವಟುಗಳಿಗೆ 20 ದಿನಗಳ ಕಾಲ ನಡೆದ ವಸಂತ ವೇದ ಪಾಠ ಶಿಬಿರದ ಸಮಾರೋಪದಲ್ಲಿ ಮಾತನಾಡುತ್ತಿದ್ದರು.
ಶಿಬಿರದಲ್ಲಿ ಕಲಿಸಿಕೊಟ್ಟ ಸಂಧ್ಯಾವಂದನೆ, ಸ್ತೋತ್ರಗಳು, ಸೂಕ್ತಗಳು, ಪೂಜಾಪದ್ಧತಿ, ವಾಯು ಸ್ತುತಿ, ಪವಮಾನ ಸೂಕ್ತಗಳು ಮತ್ತು ರುದ್ರಾದ್ಯಾಯಗಳನ್ನು ಮನೆಯಲ್ಲಿ ನಿತ್ಯ ಪಠಿಸಿದರೆ ಮಾತ್ರ ಉಪಯೋಗ. ಇದನ್ನು ಮನೆಯಲ್ಲಿ ಹೆತ್ತವರು ಕಲಿಸಿ ಕೊಟ್ಟ ಅಂಶಗಳನ್ನು ಪುನರಾವರ್ತಿಸುವಂತೆ ಮಾಡಬೇಕು. ಇಲ್ಲದಿದ್ದರೆ ಕಲಿತದ್ದೆಲ್ಲವೂ ಮರೆತು ಹೋಗಿ ಮುಂದಿನ ಹಂತಕ್ಕೆ ತೇರ್ಗಡೆ ಅಸಾಧ್ಯವಾಗಬಹುದು ಎಂದು ಪಡ್ವೆಟ್ನಾಯ ಅವರು ಹೇಳಿದರು.
ಸಮಾರಂಭದಲ್ಲಿ ಅಚಾರ್ಯರಾದ ಅಜಯ್ ಕುಮಾರ್ ಮಾತನಾಡಿ ದೇವಋಣ, ಪಿತೃಋಣ, ಆಚಾರ್ಯ ಋಣಗಳನ್ನು ತೀರಿಸಲು ಸೂಕ್ತ ಸನ್ನಿವೇಶಗಳನ್ನು ಆಯ್ಕೆ ಮಾಡಿಕೊಳ್ಳುವ ಬುದ್ಧಿವಂತಿಕೆಯು ನಮ್ಮಲ್ಲಿರಬೇಕು. ವಟುಗಳಿಗೆ ಶಿಬಿರದಲ್ಲಿ ಕೆಲವೊಂದು ನಿಯಮಗಳನ್ನು ತಿಳಿಸಿ ಕೊಡಲಾಗಿದ್ದು ಇವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದಾಗಲೇ ದ್ವಿಜನೆನಿಸಿಕೊಂಡು ಸಮಾಜದಲ್ಲಿ ಗೌರವ ಸ್ಥಾನ ಪಡೆಯಲು ಸಾಧ್ಯ. ಅಸಾಧ್ಯವಾದುದನ್ನು ಸಾಧಿಸಲು ಏಕಾಗ್ರತೆ ಅಗತ್ಯವಾಗಿದ್ದು ಏಕಾಗ್ರತೆಯು ನಿತ್ಯಾನುಷ್ಠಾನ ಸರಿಯಾಗಿ ಪಾಲಿಸಿದಾಗ ಮಾತ್ರ ಪ್ರಾಪ್ತಿಯಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾದ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಬ್ರಾಹ್ಮಣರಾಗಿ ಹುಟ್ಟಿದ ನಾವು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ಅದಕ್ಕೆ ಬೇಕಾದ ಜ್ಞಾನ ಸಂಪತ್ತನ್ನು ಪಡೆದುಕೊಳ್ಳಲು ಈ ಶಿಬಿರವು ಒಂದು ಪೂರಕ ಹೆಜ್ಜೆಯಾಗಲಿ ಎಂದರು.
ವೇದಿಕೆಯಲ್ಲಿ ಗುರುಗಳಾದ ಸುದರ್ಶನ ಆಚಾರ್, ಕೇಶವಮೂರ್ತಿ ಉಪಸ್ಥಿತರಿದ್ದರು. ಪರಿವೀಕ್ಷಕರಾಗಿ ವೇದಮೂರ್ತಿ ಶ್ರೀಪತಿ ಎಳಚಿತ್ತಾಯ ಮತ್ತು ವಿಷ್ಣುಮೂರ್ತಿ ಭಟ್ ಸಹಕರಿಸಿದರು. ಶಿಬಿರಾರ್ಥಿಗಳ ಪರವಾಗಿ ಶ್ರೀಶ ಜಿ., ಕೌಶಿಕ್ ಜಿ.ಎನ್., ಅಕ್ಷಯ್, ಪವನ್ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು. ಸುಶ್ರುತ ಪಡ್ಡಿಲ್ಲಾಯ ಮತ್ತು ಸುಶ್ರುತ ತೋಡ್ತಿಲ್ಲಾಯ ’ಆಸ್ತಿಕ-ನಾಸ್ತಿಕ ಸಂವಾದ ನಡೆಸಿಕೊಟ್ಟರು.
ಇದೇ ಸಂದರ್ಭ ಶಿಬಿರಕ್ಕೆ ಧನ ಸಹಾಯ ಮಾಡಿ ಸಹಕರಿಸಿದ ರಘುನಾಥ ಭಟ್, ರಾಘವೇಂದ್ರ ಸೋಮಯಾಜಿ, ಗಂಗಾಧರ ರಾವ್ ಕೆವುಡೇಲು, ನಾಗೇಶ ರಾವ್ ಮುಂಡ್ರುಪ್ಪಾಡಿ, ಶಿಬಿರದಲ್ಲಿ ಸಹಕರಿಸಿದ ಮೋಹನ ಕೆದ್ಲಾಯ, ಶ್ರೀಕಾಂತ ರಾವ್, ವಿಠಲ ಅಮ್ಮಿನ್ನಾಯ, ರಾಘವೇಂದ್ರ ಮುರುಡಿತ್ತಾಯ, ರಾಧಾಕೃಷ್ಣ ಕಲ್ಲೂರಾಯ ಇವರನ್ನು ಗೌರವಿಸಲಾಯಿತು. ರಸಪ್ರಶ್ನೆ ಮತ್ತು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಟುಗಳಿಗೆ ಬಹುಮಾನ ನೀಡಲಾಯಿತು. ಪವಮಾನ ಮತ್ತು ರುದ್ರಾಧ್ಯಾಯ ಪೂರ್ಣಗೊಳಿಸಿದವರಿಗೆ ಪ್ರಮಾಣ ಪತ್ರ ಹಾಗೂ ಉಳಿದವರಿಗೆ ಸ್ಮರಣಿಕೆ, ವಿಷ್ಣುಸಹಸ್ರನಾಮ ಪುಸ್ತಕ ನೀಡಿ ಪುರಸ್ಕರಿಸಲಾಯಿತು.
ಅನ್ವಿತ್ ಕುಮಾರ್ ಪ್ರಾರ್ಥಿಸಿ, ಪರಾರಿ ವೆಂಕಟ್ರಮಣ ಹೆಬ್ಬಾರ್ ಸ್ವಾಗತಿಸಿದರು. ರಾಜಪ್ರಸಾದ್ ಪೋಳ್ನಾಯ ಶಿಬಿರದ ಮಾಹಿತಿ ನೀಡಿದರು. ಮುರಳಿಕೃಷ್ಣ ಆಚಾರ್ಯ ನಿರೂಪಿಸಿ, ರಾಜಾರಾಮ ಶರ್ಮ ಬೆಳಾಲು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.