ಕೆಲವು ದಿನಗಳ ಹಿಂದೆ ಪಾಕಿಸ್ಥಾನಿ ಮೂಲದ ಉಗ್ರ ಲಕ್ವಿಯನ್ನು ವಿಶ್ವ ಸಂಸ್ಥೆ ಉಗ್ರನೆಂದು ಘೋಷಣೆ ಮಾಡೋದಕ್ಕೆ ಚೀನಾ ಅಡ್ಡಗಾಲು ಹಾಕಿದಾಗ ವಾಟ್ಸಾಪ್ಪ್ ನಲ್ಲಿ “Boycott China” ಎಂಬ ಮೆಸೇಜ್ಗಳು ಹರಿದಾಡಿದವು. ಅದರ ಹೊರತಾಗಿಯೂ ಭಾರತ- ಚೀನಾದ ನಡುವಿನ ‘Trade deficit’ 2016-17ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಸುಮಾರು 53 ಬಿಲಿಯನ್ ಡಾಲರ್ ಆಗಿತ್ತು (ಚೀನಾದ ಪರವಾಗಿ)!. ಭಾರತದಂತಹ ದೇಶದಲ್ಲಿ ಅತ್ಯಂತ ಹೆಚ್ಚು ಯುವಕರಿರುವ, ನಿರುದ್ಯೋಗದ ಸಮಸ್ಯೆ ಇರುವ, ಬಡತನ ಇದ್ದಾಗ್ಯೂ ಚೀನಾದ ಬೊಕ್ಕಸ ಭಾರತೀಯರಿಂದ ತುಂಬುತ್ತಿದೆ. ಅದು ಶತ್ರುವಿನ ಬೊಕ್ಕಸ!.
ಫುಟ್ಬಾಲ್ನಲ್ಲಿ ಮೆಸ್ಸಿ ಅಥವಾ ರೊನಾಲ್ಡೊ ಆಡುವ ಕ್ಲಬ್ಗಳು ಎದುರಾಳಿ ತಂಡವನ್ನು ಸಂಪೂರ್ಣ ಆಕ್ರಮಿಸಿಕೊಳ್ಳುತ್ತವೆ, ಇದನ್ನು “blow out” ಎನ್ನುತ್ತಾರೆ. ಚೀನಾ ಆರ್ಥಿಕವಾಗಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಜೊತೆ ಮಾಡುತ್ತಿರುವುದು ಇದೇ blow out! ಆರ್ಥಿಕವಾಗಿ ಈ ಶಬ್ದ ಉಪಯೋಗಿಸಬಹುದಾದ ಇನ್ನೊಂದು ದೃಷ್ಟಾಂತ ನನಗೆ ನೆನಪಿರೋ ಹಾಗೆ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯದ್ದು. ಬ್ರಿಟೀಷರ ಅಂದಿನ ನಡವಳಿಕೆಯಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ವ್ಯಾಪಾರಕ್ಕಾಗಿ ಬಂದ ಬ್ರಿಟೀಷರು ನಮ್ಮ ದೇಶೀಯ ಗುಡಿ ಕೈಗಾರಿಕೆಗಳನ್ನು ನೆಲಸಮ ಮಾದಿದ್ದರು. ನಂತರ ಒಂದೊಂದರಂತೆ ನಮ್ಮ ಇಡೀ ದೇಶವನ್ನೇ ವಶಕ್ಕೆ ತೆಗೆದುಕೊಂಡರು. ಚೀನಾ ಆಗಾಗ ಅರುಣಾಚಲದ ಅಸೆ ತೋರಿಸುವಾಗ ಅದೇ ಹಳೇ ನೆನಪು ಮರುಕಳಿಸುತ್ತದೆ! ಹೀಗೆ ಹೇಳುವಾಗ ನನ್ನನ್ನು ಜಾಗತೀಕರಣದ ವಿರೋಧಿ ಅನ್ನೋ ಪಟ್ಟ ಕಟ್ಟಬೇಡಿ. ನಿಜವಾಗಿ ಇಲ್ಲ. ಅಭಿವೃದ್ಧಿ ಶೀಲ ನಮ್ಮ ದೇಶಕ್ಕೆ ಜಾಗತೀಕರಣ ಅತಿ ಅವಶ್ಯಕ. ಇನ್ಫೋಸಿಸ್ನಲ್ಲಿ ನಮ್ಮ ಇಂಜಿನಿಯರ್ಗಳು ಬರಿಯೋ ಕೋಡ್ ಅಮೇರಿಕಾದಲ್ಲಿ ಮಾರಾಟವಾಗದೆ ಇದ್ದರೆ, ಸೌದಿ ಅರೇಬಿಯಾದಿಂದ ಪೆಟ್ರೋಲ್ ಖರೀದಿಗೆ ನಮ್ಮಲ್ಲಿ ಡಾಲರ್ ಇರಲ್ಲ, ನಮ್ಮ ಕಾರುಗಳು ಮನೆಯ ಗ್ಯಾರೇಜ್ನಿಂದ ಹೊರಗೆ ಹೊರೊಡಲ್ಲಾ ಅನ್ನೋ ಸತ್ಯ ಎಲ್ಲರೂ ಒಪ್ಪಬೇಕೇ? ಹಾಗೆ ನಮ್ಮ ವಿರೋಧವಿರಬೇಕಾದದ್ದು ಚೀನಾದ ಕುಟ್ಟಿತ್ವ ವ್ಯಾವಹಾರಿಕ ನೀತಿಯ ಬಗ್ಗೆಯೇ ಹೊರತು ಜಾಗತೀಕರಣದ ವಿರುದ್ಧ ಅಲ್ಲ.
ಅಷ್ಟಕ್ಕೂ ಚೀನಾ ಮಾಡುತ್ತಿರುವುದು ಏನು?
ಸ್ಥಿತಿ ಹೇಗಿದೆ ಎಂದರೆ ಹೋಳಿ ನಮ್ಮದು, ಹೋಳಿಗೆ ಬರುವ ಬಣ್ಣ ಚೀನಾದ್ದು, ಗಣೇಶ ಚತುರ್ಥಿ ನಮ್ಮದು, ಗಣೇಶನ ಮೂರ್ತಿ ಚೀನಾದ್ದು, ದೀಪಾವಳಿ ನಮ್ಮದು ಪಟಾಕಿ ಚೀನಾದ್ದು! ಸೂಪರ್ ಫಾಸ್ಟ್ ಟ್ರೈನ್ನಿಂದ ಸೂಪರ್ ಕಂಪ್ಯೂಟರ್ ಸಹ ಚೀನಾದಲ್ಲಿದೆ. ಆಟೋಮೊಬೈಲ್, ಮೊಬೈಲ್ ಫೋನ್ನಿಂದ ಹಿಡಿದು ತಿನ್ನುವ ಅಕ್ಕಿಗೆ ಬದಲಾಗಿ ಪ್ಲಾಸ್ಟಿಕ್ ಅಕ್ಕಿ ಸಹ ಚೀನಾ ನಮ್ಮ ದೇಶದಲ್ಲಿ ಮಾರುತ್ತಿದೆ! ಇವತ್ತು ಚೈನೀಸ್ ವಸ್ತುಗಳೇ ಇಲ್ಲದ ಮನೆ ಯಾವುದಾದರು ಇದ್ದರೆ, ಅದನ್ನು ಪ್ರೇಕ್ಷಣೀಯ ಸ್ಥಳ ಎಂದು ಸರ್ಕಾರ ವಶಕ್ಕೆ ತೆಗೆದುಕೊಂಡು ಬಿಡಬೇಕು!
ಚೀನಾದ ವಸ್ತು ಅತೀ ಹೆಚ್ಚು ಮಾರಾಟವಾಗಲು ಮುಖ್ಯ ಕಾರಣ ಅದರ ಬೆಲೆ. ಅತ್ಯಂತ ಕಡಿಮೆ ಬೆಲೆಗೆ ಸಿಗುವ ಈ ವಸ್ತುಗಳ ಎದುರು ನಮ್ಮ ದೇಶೀಯ ಕಂಪನಿಗಳು ಸೋಲುತ್ತಿವೆ. ಹೀಗೆ ಸೋಲು ಆ ಕಂಪನಿಗಳನ್ನೇ ಮುಚ್ಚಿ ಅಲ್ಲಿ ಚೀನಾದ ವಸ್ತುಗಳು ಮಾತ್ರವೇ ಉಳಿದು ಹೋಗುತ್ತವೆ. ಇದನ್ನ ಆರ್ಥಿಕ ಭಾಷೆಯಲ್ಲಿ ‘monopoly’ ಅನ್ನುತ್ತಾರೆ. ಒಮ್ಮೆ ಜನರಿಗೆ ಅತೀ ಅವಶ್ಯಕವಾದ ವಸ್ತು ಬೇರೆಲ್ಲೂ ಸಿಗಲ್ಲ ಅಂತ ಆದಾಗ ತಾನು ಹೇಳಿದ್ದೇ ಬೆಲೆ, ಮಾಡಿದ್ದೇ ಕಾನೂನು! ಹೀಗೆ ಆರಂಭದಲ್ಲಿ ನಷ್ಟದಲ್ಲಿ ಓಡಿಸಿ, ನಂತರ ಸುಲಿಗೆ ಮಾಡೋ ಚೀನಾದ ಆರ್ಥಿಕ ತಂತ್ರಗಾರಿಕೆಗೆ ಪೂರಕವಾಗಿ ಚೀನಾದ ಕಾನೂನುಗಳಿವೆ.
ನೀವು ನೋಡಿರಬಹುದು, ಎಂಟು ಗಂಟೆಗಿಂತ ಜಾಸ್ತಿ ಕೆಲಸ ಮಾಡಲ್ಲ ಎಂದು, ಹೆಚ್ಚು ಸಂಬಳ ಕೊಡಲಿಲ್ಲ ಎಂದರೆ ಕೆಲಸಕ್ಕೆ ಹೋಗಲ್ಲ ಎಂದು ಕೆಂಪು ಬಾವುಟ ಹಿಡಿದು ಕೆಲಸಕ್ಕಿಂತ ಹೆಚ್ಚು ‘ಹರತಾಳ’ ದಲ್ಲೇ ಕಾಲ ಕಳೆಯುವವರು ನಮ್ಮ ದೇಶದಲ್ಲಿ ಕಡಿಮೆ ಏನಿಲ್ಲ.
ಚೀನಾದ ಪ್ರಸಿದ್ಧ ಮೊಬೈಲ್ ಕಂಪನಿ ಒಂದರಲ್ಲಿ ಕೆಲಸದ ರೀತಿ ಬಗ್ಗೆ ಒಬ್ಬ ಪತ್ರಕರ್ತ ಬರೆದ ಲೇಖನವು ಅಲ್ಲಿನ ಕೆಂಪು ಬಾವುಟಗಳು ಏನು ಮಾಡುತ್ತಿವೆ ಅನ್ನೋ ಪ್ರಶ್ನೆ ಮೂಡಿಸುತ್ತದೆ. ಆ ಕಂಪನಿಯಲ್ಲಿ ಪ್ರತಿಯೊಬ್ಬನೂ ಎರಡು ಶಿಫ್ಟ್ನಲ್ಲಿ 16 ಗಂಟೆ ಕೆಲಸ ಮಾಡಬೇಕು! ಅವರಿಗೆ ಉಳಿದುಕೊಳ್ಳಲು ವಸತಿಗೃಹದಲ್ಲಿ ಇಬ್ಬರಿಗೆ ಎಂಬಂತೆ ಒಂದು ಬೆಡ್ ಕೊಟ್ಟಿರುತ್ತಾರೆ. ಅದರ ಅರ್ಥ – ಒಬ್ಬ ಮಲಗಿರುವಾಗ ಮತ್ತೊಬ್ಬ ಡ್ಯೂಟಿಗೆ ಹೋಗುತ್ತಾನೆ, ಆತ ತಿರುಗಿ ಬಂದು ಈ ಬೆಡ್ನ ಮೇಲೆ ಮಲಗುವಾಗ ಈತ ಕೆಲಸಕ್ಕೆ ಹೋಗಬೇಕು! ದಿನದ 24 ಗಂಟೆಯೂ ಕಂಪನಿ ಕಾರ್ಯ ನಿರ್ವಹಿಸುತ್ತಿರುತ್ತದೆ. ವರ್ಷಕ್ಕೆ ರಜೆ ಇರುವುದು 15 ದಿನ ಮಾತ್ರ. ಸಂಡೇ, ವೀಕೆಂಡ್ಗಳ ಕಲ್ಪನೆ ಇಲ್ಲ. ಇಷ್ಟೆಲ್ಲ ಆದರೂ ಯಾವುದೇ ಕಾನೂನು-ಕಾಯ್ದೆ ಅಡ್ಡ ಬರುವುದಿಲ್ಲ!
ಗುಜರಾತ್ನಲ್ಲಿ ನದಿಗೆ ಆಣೆಕಟ್ಟು ಕಟ್ಟುವಾಗ, ತಮಿಳುನಾಡಿನಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವಾಗ ವರ್ಷಗಟ್ಟಲೆ ಹೋರಾಟಗಳು ನಡೆದವು. ಚೀನಾದಲ್ಲಿ ಸರ್ಕಾರ ಒಂದು ಜಾಗದಲ್ಲಿ ಒಂದು ಕಂಪನಿ ತೆರೆಯ ಬಯಸಿದರೆ, 15 ದಿನಗಳ ನೋಟಿಸ್ ಬರುತ್ತದೆ, ಜಾಗ ಖಾಲಿ ಮಾಡಬೇಕಷ್ಟೇ. ತಕರಾರು ತೆಗೆಯಲು ಅವಕಾಶವೇ ಇಲ್ಲ. ತನ್ನದೇ ಜನರನ್ನು ಶೋಷಿಸಿ ಚೈನೀಸ್ ಸರಕಾರ ಅತ್ಯಂತ ಕಡಿಮೆ ಬೆಲೆಯಲ್ಲಿ ಕಳಪೆ ವಸ್ತುಗಳನ್ನು ತಯಾರಿಸಿ ವಿಶ್ವ ಮಾರುಕಟ್ಟೆಗೆ ಬಿಡುತ್ತಿದೆ.
1979 ರ ಹೊತ್ತಿಗೆ ಸುಮಾರು ಭಾರತದಷ್ಟೇ ಇದ್ದ ಚೀನಾದ ಆರ್ಥಿಕತೆ ಇಂದು ನಮಗಿಂತ 5 ಪಟ್ಟು ದೊಡ್ಡದು, ಸುಮಾರು 3000 trillion USD ಅಷ್ಟು ವಿದೇಶಿ ಕರೆನ್ಸಿಯನ್ನು ಇಟ್ಟುಕೊಂಡಿರುವ ಚೀನಾಕ್ಕೆ ವಿಶ್ವದಲ್ಲೇ ಸರಿ ಸಾಟಿ ಇಲ್ಲ. ಸಾಮಾನ್ಯವಾಗಿ ಬೇಡಿಕೆ ಜಾಸ್ತಿ ಆದಾಗ ಬೆಲೆ ಏರುತ್ತದೆ, ಬೆಲೆ ಏರಿದಾಗಿ ಮತ್ತೆ ಬೇಡಿಕೆ ಕುಸಿಯುತ್ತದೆ. ಇದು ಅರ್ಥಶಾಸ್ತ್ರದ ಮೂಲ ನಿಯಮ. ಆದರೆ ಚೀನಾ ತನ್ನ ಕರೆನ್ಸಿ Renminbi(Yuan) ಅನ್ನು ವ್ಯವಸ್ಥಿತವಾಗಿ ಕುಸಿದು ವಿದೇಶಿ ಮಾರುಕಟ್ಟೆಯಲ್ಲಿ ತನ್ನ ವಸ್ತುವಿನ ಬೆಲೆ ಏರದಂತೆ ನೋಡಿಕೊಳ್ಳುತ್ತದೆ! ಇದೆಲ್ಲವೂ ಜಾಗತಿರಣದ ನಿಯಮಕ್ಕೆ ವಿರುದ್ಧವಾದದ್ದು. ಚೀನಾ ಇಷ್ಟೆಲ್ಲಾ ಕಪಟಿ ಆಟದ ನಂತರವೂ ಗೆಲ್ಲುತ್ತಿರುವುದು ಅಂತಾರಾಷ್ಟ್ರೀಯ ಸ್ತರದಲ್ಲಿ ನಾಯಕತ್ವದ ಕೊರತೆ ಎದ್ದು ತೋರಿಸುತ್ತಿದೆ.
ಬೆಳೆಯುತ್ತಿರುವ ನಮ್ಮ ದೇಶಕ್ಕೆ ಸ್ಟೀಲ್ನ ಅವಶ್ಯಕತೆ ತುಂಬಾ ಇದೆ. ಹಾಗಾಗಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ ದೊಡ್ಡ-ದೊಡ್ಡ ಸ್ಟೀಲ್ ಕಂಪನಿಗಳು ಹುಟ್ಟಿ ಕೊಂಡವು. ಭಾರತದ ಈ ಬೃಹತ್ ಮಾರುಕಟ್ಟೆ ಮೇಲೆ ಚೀನಾದ ಕಣ್ಣು ಬಿತ್ತು. ಅಲ್ಲಿಂದ ಶುರುವಾದ ‘dumping’ ನಿಂದ ಇವತ್ತು ನಮ್ಮ ಸ್ವದೇಶಿ ಸ್ಟೀಲ್ ಮಾರುಕಟ್ಟೆ ಕೊಚ್ಚಿ ಹೋಗಿದೆ. ದೇಶದ ಬ್ಯಾಂಕ್ಗಳಲ್ಲಿ ಅತಿ ದೊಡ್ಡ NPA ಒಂದು ಸ್ಟೀಲ್ ಕಂಪನಿಯದ್ದು, ಅದು 90000 ಸಾವಿರ ಕೋಟಿಯಷ್ಟು! ಚೈನೀಸ್ ಸ್ಟೀಲ್ ಪ್ಲೇಟ್ ಕೊಳ್ಳುವಾಗ ನಮ್ಮ ದೇಶದ ಜನ ಉಳಿಸಿದ 10 ರೂಪಾಯಿ ಹೀಗೆ ಹೋಗುತ್ತಿದೆ.
ಇವತ್ತು ಪ್ರಪಂಚದ ಎಲ್ಲ ಮುಖ್ಯ ರಾಷ್ಟ್ರಗಳು ಅಣು ಬಾಂಬ್ ಹೊಂದಿರುವಾಗ ಮಿಲಿಟರಿ ಯುದ್ದಕ್ಕೆ ಹೋಗುವ ಧೈರ್ಯ ಯಾರಿಗೂ ಇಲ್ಲ. ಹಾಗೇನಾದರೂ ಆದರೆ ಅದರಲ್ಲಿ ಯಾರು ಗೆಲ್ಲೊಲ್ಲಾ. ಅದಕ್ಕಾಗಿ, ಈ ಆರ್ಥಿಕ ಯುದ್ಧ! ವೈರಿಯನ್ನು ಬುಲೆಟ್ ಮಾತ್ರವಲ್ಲ, ಹಸಿವು ಸಹ ಸಾಯಿಸಬಲ್ಲುದು ಅನ್ನೋ ಸತ್ಯ ಚೀನಾ ಸರಿಯಾಗಿ ಅರ್ಥ ಮಾಡಿಕೊಂಡಿದೆ, ಆದರೆ ನಮಗೆ ಯಾವಾಗ ಅರ್ಥವಾಗೋದು ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.