ಪ್ರೀತಿ, ಆರೈಕೆ, ಸಂಸ್ಕಾರ ಕೊಟ್ಟು ಬೆಳೆಸಿದ ಶಿಶು ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಿ, ಸಮಾಜ ನಿರ್ಮಾಣದ ಕಾರ್ಯ ಮಾಡುತ್ತದೆ. ಅದೇ ರೀತಿ ಪ್ರೀತಿಯಿಂದ ನೆಟ್ಟು, ಪೋಷಿಸಲ್ಪಟ್ಟ ಸಸಿ ಭವಿಷ್ಯದಲ್ಲಿ ಶುದ್ಧವಾದ ಗಾಳಿ, ನೆರಳು ನೀಡುವ ಹೆಮ್ಮರವಾಗಿ ಬೆಳೆಯುತ್ತದೆ. ಪರಿಸರವನ್ನು ಹಚ್ಚ ಹಸಿರಾಗಿಟ್ಟು ಸಕಲ ಜೀವಸಂಕುಲದ ಉಸಿರಾಟಕ್ಕೆ ಆರೋಗ್ಯವಾದ ಗಾಳಿಯನ್ನು ಒದಗಿಸುತ್ತದೆ.
ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಶಿಶುವಿನ ಹಂತ ಹಂತದ ಬೆಳವಣಿಗೆಗೆ ಏನು ಬೇಕು ಏನು ಬೇಡ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಅದರ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಪೌಷ್ಟಿಕ ಆಹಾರಗಳನ್ನು, ಆರೋಗ್ಯಯುತ ವಾತಾವರಣವನ್ನು, ಒಳ್ಳೆ ಸಂಸ್ಕಾರ, ಶಿಕ್ಷಣ ಶಿಶುವಿಗೆ ನೀಡಿದರೆ ಮಾತ್ರ ಅದು ಸದೃಢ ಮನುಷ್ಯನಾಗಿ ಭವ್ಯ ಭವಿಷ್ಯವನ್ನು, ಉತ್ತಮ ಸಮಾಜವನ್ನು ನಿರ್ಮಿಸುತ್ತದೆ.
ಅದೇ ರೀತಿ ಒಂದು ಸಸಿ ಕೂಡ. ಸಸಿಯನ್ನು ನೆಟ್ಟು ಅದಕ್ಕೆ ಕಾಲಕಾಲಕ್ಕೆ ಸರಿಯಾಗಿ ನೀರುಣಿಸಿ, ಗೊಬ್ಬರ ಹಾಕಿ ಆರೈಕೆ ಮಾಡಿದಾಗ ಮಾತ್ರ ಅದು ಹೆಮ್ಮರವಾಗುತ್ತದೆ. ಸವಿಯಾದ ಹಣ್ಣನ್ನೋ ಅಥವಾ ಸುಂದರವಾದ ಹೂವನ್ನೋ ನೀಡುತ್ತದೆ. ಉಸಿರಾಡಲು ಶುದ್ಧ ಗಾಳಿಯನ್ನು ಕೊಡುತ್ತದೆ, ಮನಸ್ಸಿಗೆ ಮುದ ನೀಡುತ್ತದೆ, ವಾತಾವರಣವನ್ನು ಸುಂದರಗೊಳಿಸುತ್ತದೆ, ಅಹ್ಲಾದಗೊಳಿಸುತ್ತದೆ. ಪಕ್ಷಿಗಳಿಗೆ ಆಶ್ರಯ ನೀಡುತ್ತದೆ.
ನಾವು ಸಸಿಯನ್ನು ಶಿಶುವಿನಂತೆ ಪಾಲನೆ ಮಾಡಬೇಕು, ಪೋಷಿಸಬೇಕು. ಅದರ ಹಂತ ಹಂತದ ಬೆಳವಣಿಗೆಗೆ ಬೇಕಾದ ನೀರು, ಗೊಬ್ಬರಗಳನ್ನು ಹಾಕಬೇಕು. ಅದರ ಬೆಳವಣಿಗೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು. ಅದು ಹೆಮ್ಮರವಾಗಿ ಬೆಳೆದು ನಿಲ್ಲುವವರೆಗೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು.
ಇಂದು ವಿಶ್ವ ಪರಿಸರ ದಿನ. ‘ಪ್ರಕೃತಿಯೊಂದಿಗೆ ಬೆಸೆಯಿರಿ’ ಎಂಬ ಥೀಮ್ನೊಂದಿಗೆ ವಿಶ್ವದಾದ್ಯಂತ ಇದನ್ನು ಆಚರಿಸಲಾಗುತ್ತಿದೆ. ಕನಿಷ್ಠ ಒಂದು ಗಿಡವನ್ನಾದರು ನೆಟ್ಟು ಅದನ್ನು ಶಿಶುವಿನಂತೆ ಪೋಷಣೆ, ಆರೈಕೆ ಮಾಡೋಣ. ಕಲುಷಿತಗೊಂಡಿರುವ ಪ್ರಕೃತಿಯನ್ನು ನಮಗಾಗಿ ಉಳಿಸಿಕೊಳ್ಳೋಣ.
ನಾವಿಲ್ಲದಿದ್ದರೂ ಪ್ರಕೃತಿ ಇರುತ್ತದೆ, ಇನ್ನೂ ಸುಂದರವಾಗಿರುತ್ತದೆ. ಆದರೆ ಪ್ರಕೃತಿ ಇಲ್ಲದಿದ್ದರೆ ನಾವು ಇರಲು ಸಾಧ್ಯವೇ ಇಲ್ಲ. ನಮ್ಮ ನಿರಂತರ ದಬ್ಬಾಳಿಕೆಗಳನ್ನು ಸಹಿಸಿಕೊಂಡೂ ಪ್ರಕೃತಿ ಮಾತೆ ನಮ್ಮನ್ನು ಪೋಷಣೆ ಮಾಡುತ್ತಿದ್ದಾಳೆ. ಆದರೆ ಆಕೆ ಮುನಿಸಿಕೊಂಡ ದಿನ ನಮ್ಮ ಅಸ್ತಿತ್ವ ಸರ್ವನಾಶವಾಗುತ್ತದೆ. ನಾವು ನಿರ್ಮಿಸಿದ ಕಾಂಕ್ರೀಟ್ ಕಾಡು, ಕೃತಕ ಆಮ್ಲಜನಕ ಇವು ಯಾವುದೂ ಅಂದು ನಮ್ಮ ಸಹಾಯಕ್ಕೆ ಬರಲಾರವು ಎಂಬ ಪರಿಜ್ಞಾನ ನಮಗಿದ್ದರೆ ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.