ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಮೇ 15 ಶುಕ್ರವಾರ ಬೆಳಿಗ್ಗೆ ಅದ್ದೂರಿಯಿಂದ ನಡೆಯಿತು.ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆಯವರು ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಚಲನಚಿತ್ರದ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು.
ತುಳು ಭಾಷೆಯೆನ್ನುವುದು ನಮ್ಮ ಮಾತೃ ಭಾಷೆ, ತುಳು ಸಂಸ್ಕೃತಿ ಎನ್ನುವುದು ನಮ್ಮ ಮನೆ ಇದ್ದ ಹಾಗೆ. ಅದನ್ನು ಉಳಿಸಲು ನಿರ್ಮಾಪಕರು ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಮೂಲಕ ಪ್ರಯತ್ನ ಪಟ್ಟಿದ್ದಾರೆ. ಎಷ್ಟೋ ವರ್ಷಗಳಲ್ಲಿ ತುಳು ಸಿನೆಮಾಗಳೇ ಬರುತ್ತಿರಲಿಲ್ಲ. ಈಗ ಒಂದರ ಹಿಂದೆ ಒಂದು ಸಿನೆಮಾ ಬರುತ್ತಿರುವುದು ತುಳುನಾಡಿನ ಹೆಮ್ಮೆ ಎಂದು ಅವರು ತಿಳಿಸಿದರು.
ಮಣಿಪಾಲ ಮೀಡಿಯಾ ನೆಟ್ ವರ್ಕ್ನ ಸಹ ಉಪಾಧ್ಯಕ್ಷರಾದ ಆನಂದ್. ಕೆ ಮಾತನಾಡಿ ಮಂಗಳೂರಿನಲ್ಲಿ ಈಗ ನಾಲ್ಕು ಸಿನೆಮಾಗಳು ಏಕಕಾಲದಲ್ಲಿ ಪ್ರದರ್ಶನಗೊಳ್ಳುವ ಕಾಲ ಬಂದಿದೆ, ಇದು ತುಳು ಪ್ರೇಕ್ಷಕರ ಸಹಕಾರದಿಂದ ಈ ಸಿನೆಮಾವನ್ನೂ ಶತದಿನ ಆಚರಿಸುವಂತೆ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಅವರು ವಿನಂತಿಸಿದರು.
ಚಿತ್ರದ ನಿರ್ದೇಶಕ ಹ.ಸೂ ರಾಜಶೇಖರ್ ಮಾತನಾಡಿ ಈಗ ತುಳು ಇಂಡಸ್ಟ್ರೀ ಬೆಳೆದಿದೆ. ತುಳು ಸಿನೆಮಾ ವೀಕ್ಷಕರ ಸಂಖ್ಯೆಯು ಜಾಸ್ತಿಯಾಗಿದೆ. ‘ಒರಿಯನ್ ತೂಂಡ ಒರಿಯಗಾಪುಜಿ’ ಪ್ರಸಕ್ತ ಪರಿಸ್ಥಿತಿಗೆ ಪೂರಕವಾಗಿದ್ದು, ಇದುವರೆಗೆ ಬಂದ ಸಿನೆಮಾಗಳಿಗಿಂತ ವಿಭಿನ್ನ ಕಥೆಯನ್ನು ಹೊಂದಿದೆ. ಪ್ರೆಕ್ಷಕರನ್ನು ನಗೆಗಡಲಲ್ಲಿ ಕೊಂಡೊಯ್ಯವುದರ ಜೊತೆಗೆ ಸನ್ನಿವೇಶಗಳನ್ನು ಕ್ರಿಯಾತ್ಮಕವಾಗಿ ಕ್ಷಣ ಕ್ಷಣಕ್ಕೂ ರೋಮಾಂಚನಗೊಳ್ಳುವಂತೆ ನಿರ್ಮಿಸಲಾಗಿದೆ ಎಂದರು.
ನಿರ್ಮಾಪಕರಾದ ಬಿ.ಅಶೋಕ್ ಕುಮಾರ್ ಹಾಗೂ ಎ. ಗಂಗಾಧರಶೆಟ್ಟಿ ತುಳು ಅಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿದರು.
ಸೆಂಟ್ರಲ್ ಚಿತ್ರಮಂದಿರವನ್ನು ಬಿಡುಗಡೆ ಸಮಾರಂಭಕ್ಕಾಗಿ ವಿಶೇಷವಾಗಿ ಶೃಂಗರಿಸಲಾಗಿತ್ತು. ಕೇರಳದ ಚಂಡೆಯ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಬಿಡುಗಡೆ ಸಮಾರಂಭದಲ್ಲಿ ಅನೇಕ ಗಣ್ಯರು, ಸಿನಿಮಾದ ತಾಂತ್ರಿಕ ವರ್ಗ, ಸಹಕಲಾವಿದರು ಪಾಲ್ಗೊಂಡಿದ್ದರು. ಮೊದಲ ಪ್ರದರ್ಶನದ ಟಿಕೇಗಾಗಿ ಜನ ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.
ಚಿತ್ರದ ಬಗ್ಗೆ
ಚಿತ್ರವು ಮೊದಲ ಹಂತದಲ್ಲಿ ಮಂಗಳೂರು ಮತ್ತು ಉಡುಪಿಯ ಐದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಮಂಗಳೂರಿನಲ್ಲಿ ಸೆಂಟ್ರಲ್ ಟಾಕೀಸ್, ಬಿಗ್ ಸಿನೆಮಾ, ಸಿನಿ ಪಾಲಿಸ್, ಪಿ.ವಿ.ಆರ್. ಹಾಗೂ ಉಡುಪಿಯ ಆಶೀರ್ವಾದ್ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಿಸಿದೆ.
ಎರಡನೇ ಹಂತದಲ್ಲಿ ಬಿ.ಸಿರೋಡು, ಪುತ್ತೂರು, ಬೆಳ್ತಂಗಡಿ, ಕಾಸರಗೋಡು, ಮೂಡಬಿದ್ರೆ, ಬೆಂಗಳೂರು, ಮುಂಬಯಿ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್ನಡಿಯಲ್ಲಿ ‘ಒರಿಯನ್ ತೂಂಡ ಒರಿಯಗಾಪುಜಿ’ ತುಳುಚಿತ್ರವು ಈ ವರೆಗೆ ಬಂದ ಚಲನಚಿತ್ರಗಳಿಗಿಂತ ವಿಭಿನ್ನವಾಗಿದ್ದು ಕಾಮಿಡಿಯೊಂದಿಗೆ ಪ್ರಸ್ತುತ ಸಮಾಜದಲ್ಲಿ ನಡೆಯುವ ವ್ಯವಹಾರಿಕ ದ್ವೇಶ ಅಸೂಯೆಗಳು ಅದಕ್ಕಾಗಿ ನಡೆಯುವ ಸಮರವನ್ನು ಮೂಲಕಥೆಯನ್ನು ಹೊಂದಿದೆ.
ಈ ಚಿತ್ರದ ವಿಶೇಷತೆಯೆಂದರೆ ಚಿತ್ರದಲ್ಲಿ ಪಂಚಭಾಷೆಗಳನ್ನು ಅಳವಡಿಸಲಾಗಿದ್ದು. ತಮಿಳು, ಕನ್ನಡ ಜೊತೆಗೆ ತುಳು ಭಾಷೆಯ ಹಾಸ್ಯ ಪಾತ್ರಗಳನ್ನು ತುಳು ಮತ್ತು ಕನ್ನಡ ಚಿತ್ರರಂಗದ ಪ್ರಭುದ್ದ ಕಲಾವಿದರು ನಿರ್ವಹಿಸಿದ್ದಾರೆ. ಚಿತ್ರದುದ್ದಕ್ಕೂ ಹಾಸ್ಯದ ಹೊಳೆಯನ್ನೇ ಹರಿಸಲಾಗಿದೆ. ಕ್ಷಣ ಕ್ಷಣದಲ್ಲೂ ರೋಮಾಂಚಕ ಸನ್ನಿವೇಶಗಳು ಎದುರಾಗಲಿವೆ.
ಮಂಗಳೂರು ಸುತ್ತು ಮುತ್ತಲು, ಕಾಂಞಗಾಂಡ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಅವುಗಳನ್ನು ಪಿಲಿಕುಳ, ಕಾಂಞಗಾಂಡ್ ಹಾಗೂ ಮಂಗಳೂರಿನ ಕೆಲವು ವಿಶೇಷ ಪ್ರಕೃತಿ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಥ್ರಿಲ್ಲರ್ ಮಂಜು ಅವರ ಮೂರು ಫೈಟ್ಗಳು ಕಥೆಗೆ ಪೂರಕವಾಗಿದೆ.ಬಿ.ಅಶೋಕ್ ಕುಮಾರ್ ಹಾಗೂ ಎ. ಗಂಗಾಧರಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಕಥೆ-ಚಿತ್ರಕಥೆ-ಸಾಹಿತ್ಯ-ಗೀತಾರಚನೆ-ರಾಗ ಸಂಯೋಜನೆ ಎ.ಗಂಗಾಧರ ಶೆಟ್ಟಿ ಅಳಕೆ ಅವರದ್ದು.
ಈ ಚಿತ್ರದಲ್ಲಿ ಕಥಾ ನಾಯಕನಾಗಿ ಅರ್ಜುನ್ ಕಾಪಿಕಾಡ್, ನಾಯಕಿಯಾಗಿ ಪ್ರಜ್ವಲ್ ಪೂವಯ್ಯ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ರೇಖಾದಾಸ್, ಭವ್ಯ ಹಾಗೂ ಮಿತ್ರ ಪ್ರಮಖ ಪಾತ್ರಗಳಲ್ಲಿದ್ದಾರೆ. ತುಳುರಂಗಭೂಮಿಯ ಚೇತನ್ ರೈ ಮಾಣಿ, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸುಂದರ್ ರೈ ಮಂದಾರ, ಸಾಯಿಕೃಷ್ಣ ಕುಡ್ಲ, ಎ.ಗಂಗಾಧರ ಶೆಟ್ಟಿ ಅಳಕೆ, ಬಿ.ಅಶೋಕ್ ಕುಮಾರ್, ನಾಗೇಶ್ ದಂಬೇಲ್, ಲೋಕೇಶ್ ಬರ್ಕೆ, ಮಂತಾದ ಕಲಾವಿದರು ಅದ್ಬುತ ಅಭಿನಯ ನೀಡಿದ್ದಾರೆ.
ಈ ಚಿತ್ರದಲ್ಲ್ಕಿ ವಿ.ಮನೋಹರ್ರವರ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತ ವಿಜಯ ಭಾರತಿ, ಸಾಹಸ: ಥ್ರಿಲ್ಲರ್ ಮಂಜು, ಹಿನ್ನೆಲೆ ಗಾಯನ ಶ್ರೀ ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯಾರ್, ಅನುರಾಧ ಭಟ್, ನೃತ್ಯ ಸಂಯೋಜನೆ : ಮದನ್ ಹರಿಣಿ, ಸಂಕಲನ: ಬಿ.ಎಸ್.ಕೆಂಪರಾಜ್, ಛಾಯಾಗ್ರಹಣ: ನಾಗೇಶ್ ಆಚಾರ್ಯ-ಗೌರಿ ವೆಂಕಟೇಶ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.