ನಮಗೆಲ್ಲ ಬೋಸ್ ಎಂದಾಕ್ಷಣ ನೆನಪಿಗೆ ಬರುವುದು ನೇತಾಜಿ ಸುಭಾಷ್ ಚಂದ್ರ ಬೋಸ್ ಜೀ ಮಾತ್ರ ಆದರೆ ಇದು ಅವರಲ್ಲ, Indian National Army ಕಟ್ಟಿದ ಇನ್ನೊಬ್ಬ ಮಹಾನ್ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್.
ಹೌದು ಭಾರತೀಯ ಸೇನೆ ಕಟ್ಟಿ ಅದರ ನಾಯಕತ್ವವನ್ನು ಸುಭಾಷ್ ಜೀ ಗೇ ಕೊಟ್ಟಿದ್ದು ಇದೇ ರಾಸ್ ಬಿಹಾರಿ ಬೋಸ್ ಅವರು.
ರಾಸ್ ಬಿಹಾರಿ ಬೋಸ್ ಅವರ 221 ನೇ ಜನ್ಮಜಯಂತಿ ಇಂದು, ಬನ್ನಿ ಆ ಮಹಾಪುರುಷನನ್ನು ನೆನೆಯೋಣ.
ರಾಸ್ ಬಿಹಾರಿ ಬೋಸ್ ಅವರು ಮೇ 25, 1886 ರಂದು ಪಶ್ಚಿಮ ಬಂಗಾಳದ ಬುರ್ದ್ವಾನಿನ ಸುಬಲ್ದಹಾ ಹಳ್ಳಿಯಲ್ಲಿ ಜನಿಸಿದರು. ಬೋಸರು ತಮ್ಮ ಸಣ್ಣ ವಯಸ್ಸಿನಲ್ಲೇ ರೆವಲ್ಯೂಷನರಿ ಪಾರ್ಟಿಯನ್ನು ಸೇರಿದರು.
ಕ್ರಾಂತಿಕಾರಿ ಚಟುವಟಿಕೆ
ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬ್ಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ ಬ್ರಿಟಿಷರ ವಿರುದ್ಧದ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜನ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕದಲ್ಲಿ ಡಿಸೆಂಬರ್ 23, 1912 ರಂದು ಬಾಂಬ್ ಎಸೆದಾಗ ರಾಸ್ ಬಿಹಾರಿ ಬೋಸರ ಹೆಸರು ಪ್ರಖ್ಯಾತಿ ಪಡೆಯಿತು.
ಈ ಬಾಂಬ್ ಎಸೆದ ನಂತರದಲ್ಲಿ ಬೋಸರು ಚಾಣಾಕ್ಷತನದಿಂದ ಪೋಲೀಸರ ಕಣ್ಣು ತಪ್ಪಿಸಿಕೊಂಡು ವಾರಾಣಾಸಿಯಲ್ಲಿ ಅವಿತು, ಗದರ್ ಪಕ್ಷದ ಕಾರ್ಯಕರ್ತರೊಡನೆ ಏಕಕಾಲದಲ್ಲಿ ಉತ್ತರ ಭಾರತದಲ್ಲೆಲ್ಲಾ ಧ್ವನಿಸುವಂತೆ ವಿವಿಧ ಕ್ರಾಂತಿಕಾರಕ ಹೋರಾಟಗಳಿಗೆ ಸೂತ್ರಧಾರಿಯಾದರು.
ರಾಸ್ ಬಿಹಾರಿ ಬೋಸರ ಈ ಎಲ್ಲಾ ಯತ್ನಗಳನ್ನೂ ಬ್ರಿಟಿಷರು ಸದೆಬಡಿದು ಗದರ್ ಕ್ರಾಂತಿಕಾರರಲ್ಲಿ ಬಹಳಷ್ಟು ಜನರನ್ನು ಶಿಕ್ಷೆಗೆ ಒಳಪಡಿಸಿದರಾದರೂ ರಾಸ್ ಬಿಹಾರಿ ಬೋಸರನ್ನು ಮಾತ್ರ ಹಿಡಿಯಲಾಗಲಿಲ್ಲ. ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜಪಾನಿಗೆ ತೆರಳಿದ್ದ ರಾಸ್ ಬಿಹಾರಿ ಬೋಸರ ಬಗ್ಗೆ ಆತಂಕಗೊಂಡ ಬ್ರಿಟಿಷರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತನ ಬಂಧನಕ್ಕೆ ಯತ್ನಿಸಿಯೂ ವಿಫಲರಾದರು. ಇತ್ತ ಜಪಾನಿನಲ್ಲಿ ಭೂಗತನಾಗಿದ್ದುಕೊಂಡಿದ್ದ ಬೋಸರು ಬ್ರಿಟನ್ ವಿರೋಧಿ ದೇಶಗಳ ಸಖ್ಯ ಬೆಳೆಸಿಕೊಳ್ಳತೊಡಗಿದರು.
ಇಂಡಿಯನ್ ಇಂಡಿಪೆಂಡನ್ಸ್ ಲೀಗ್
ಮಾರ್ಚ್ 1942 ರಲ್ಲಿ ಇಂಡಿಯನ್ ಇಂಡಿಪೆಂಡೆಂಟ್ಸ್ ಲೀಗ್ ಸ್ಥಾಪನೆಗಾಗಿ ಬೋಸರು ಒಂದು ಸಮಾವೇಶವನ್ನು ನಡೆಸಿದರು. ಈ ಸಂಸ್ಥೆಯ ಮೊದಲ ಅಧಿವೇಶನ ಜೂನ್ 1942 ರಲ್ಲಿ ಬ್ಯಾಂಕಾಕಿನಲ್ಲಿ ಜರುಗಿತು. ಈ ಸಮಾವೇಶದಲ್ಲಿ ಅವರಿಗೆ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆಗಾಗಿನ ಅಧಿಕಾರವನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ಅವರು ಜಪಾನಿನಲ್ಲಿದ್ದ ಯುದ್ಧ ಖೈದಿಗಳನ್ನು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟದ ಸೈನಿಕರನ್ನಾಗಿ ಸಂಘಟಿಸಿದರು. 1943 ರಲ್ಲಿ ಸಿಂಗಪೂರಿನಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯ ನಾಯಕತ್ವವನ್ನು ರಾಸ್ ಬಿಹಾರಿ ಬೋಸರು ಸುಭಾಷ್ ಚಂದ್ರ ಬೋಸರಿಗೆ ವರ್ಗಾಯಿಸಿದರು.
ರಾಸ್ ಬಿಹಾರಿ ಬೋಸರು ತೊಷಿಕೋ ಎಂಬ ಜಪಾನಿನ ಮಹಿಳೆಯನ್ನು ವರಿಸಿದ್ದರು.
ರಾಸ್ ಬಿಹಾರಿ ಬೋಸರ ಕ್ರಾಂತಿಕಾರ ಸಂಘಟನೆಯಲ್ಲಿ ಸುಭಾಷ್ ಚಂದ್ರ ಬೋಸರಲ್ಲದೆ ಅರವಿಂದ್ ಘೋಷ್, ಖದಿರಾಮ್ ಬೋಸ್ ಬಾಘಾ ಜತಿನ್ ಮುಂತಾದ ಪ್ರಮುಖರಿದ್ದರು.
ಲೇಖಕ, ಪತ್ರಕರ್ತರೂ ಆಗಿದ್ದ ರಾಸ್ ಬಿಹಾರಿ ಬೋಸರಿಗೆ ಜಪಾನ್ ಸರ್ಕಾರ Order of the Rising Sun ಎಂಬ ಗೌರವ ನೀಡಿತ್ತು.
ವಿದಾಯ
ದೇಶಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟು ಸ್ವಾರ್ಥರಹಿತ, ಕಷ್ಟಕರವಾದ ಕ್ರಾಂತಿಕಾರಕ ಮಾರ್ಗದಲ್ಲಿ ಬದುಕಿದ ರಾಸ್ ಬಿಹಾರಿ ಬೋಸರು ಜನವರಿ 21, 1945 ರಂದು ಟೋಕಿಯೋದಲ್ಲಿ ನಿಧನರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.