ಸುಳ್ಯ : ನಿಸರ್ಗವು ಕಲಿಕೆಯ ಸಾಧನವಾಗಿದೆ. ಪ್ರಕೃತಿಯಲ್ಲಿ ದಿನನಿತ್ಯ ಘಟಿಸುವ ವಿದ್ಯಮಾನಗಳಿಂದ ಮಕ್ಕಳು ಬಹಳಷ್ಟನ್ನು ಕಲಿಯುತ್ತಾರೆ, ಇಂತಹ ಕಲಿಕೆ ಪರಿಪೂರ್ಣವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್. ಜಿ. ಸಿದ್ದರಾಮಯ್ಯ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹೇಳಿದರು. ಅವರು ದಿನಾಂಕ 11-5-2017 ರಂದು ಸ್ನೇಹ ಶಿಕ್ಷಣ ಸಂಸ್ಥೆಯ ಭೇಟಿಯ ಸಂದರ್ಭದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
ಮಕ್ಕಳು ತಮ್ಮ ಭಾವನೆಗಳನ್ನು ಸ್ಪಷ್ಟ ಮತ್ತು ಸ್ಫುಟವಾಗಿ ವ್ಯಕ್ತಪಡಿಸಲು ಮತ್ತು ಕಲಿಕೆ ಸಬಲವಾಗಲು ಸ್ನೇಹ ಶಿಕ್ಷಣ ಸಂಸ್ಥೆಯ ಪರಿಸರ ಪೂರಕವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸ್ನೇಹ ಶಿಕ್ಷಣ ಸಂಸ್ಥೆಯ ಸೌಲಭ್ಯಗಳನ್ನು ವೀಕ್ಷಿಸಿದ ಅವರು ಇದು ಪ್ರಾಥಮಿಕ ಶಾಲೆಯ ನಲಿ-ಕಲಿ ಪದ್ಧತಿಗೆ ಪೂರಕವಾಗಿದೆ ಮಾತ್ರವಲ್ಲ ಇಲ್ಲಿನ ಉತ್ತಮ ಕಲಿಕಾ ವಾತಾವರಣವನ್ನು ಸರಕಾರಿ ಶಾಲೆಗಳೂ ಅಳವಡಿಸಿಕೊಳ್ಳುವುದು ಅವಶ್ಯಕ ಎಂದರು. ಆರ್ ಟಿ ಇ ಗಾಗಿ ಸರಕಾರ ಹಣವನ್ನು ಪೋಲು ಮಾಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಕನ್ನಡ ಶಾಲೆಗಳ ಉಳಿವಿಗೆ ಮತ್ತು ಅಭಿವೃದ್ಧಿಗೆ ಆ ಹಣವನ್ನು ಬಳಸುವುದು ಉತ್ತಮ ಎಂಬ ಭಾವನೆ ವ್ಯಕ್ತಪಡಿಸಿದರು.
ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ರಚಿತವಾಗಿರುವ ಹಸ್ತಪ್ರತಿಗಳಾದ ’ಅಂಕುರ’ ಮತ್ತು ’ಇಂಚರ’ಗಳನ್ನು ವೀಕ್ಷಿಸಿದ ಅವರು ಕನ್ನಡ ಜ್ಞಾನದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಮುರಳೀಧರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ| ಚಂದ್ರಶೇಖರ ದಾಮ್ಲೆ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಡಾ| ವಿದ್ಯಾಶಾಂಭವ ಪಾರೆ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.