ಸ್ನೇಹಲತಾ 74 ವರ್ಷದ ನಿವೃತ್ತ ಸರ್ಕಾರಿ ಶಿಕ್ಷಕಿ. ವಿಶ್ರಾಂತ ಜೀವನವನ್ನು ಆರಾಮವಾಗಿ ಕಳೆಯುವ ಅವಕಾಶವಿದ್ದರೂ ಅವರು ಆಯ್ದುಕೊಂಡಿದ್ದು ಸಾಮಾಜಿಕ ಕಾರ್ಯವನ್ನು. ಬಡ ಮಕ್ಕಳಿಗಾಗಿ ಶಾಲೆ ನಡೆಸುತ್ತಿರುವ ಇವರು ಬಡ ಮಕ್ಕಳಿಗೆ ಗುರು ಮಾತ್ರವಲ್ಲ ತಾಯಿಯೂ ಆಗಿದ್ದಾರೆ.
ದೆಹಲಿಯ ಸರ್ಕಾರಿ ಶಾಲೆಯಲ್ಲಿ 40 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ಇದೀಗ ಗುರುಗ್ರಾಮ್ನ ಸೇಕ್ಟರ್ 43ಯಲ್ಲಿ ಶಾಲೆಯೊಂದನ್ನು ನಿರ್ಮಿಸಿದ್ದಾರೆ. ಕಾರ್ಮಿಕರ, ಮನೆಗೆಲಸದವರ, ಚಿಂದಿ ಆಯುವವರ ಮತ್ತು ಇತರ ವರ್ಗದ ಬಡವರ ಮಕ್ಕಳೇ ಈ ಶಾಲೆಯ ವಿದ್ಯಾರ್ಥಿಗಳು.
ಮಕ್ಕಳನ್ನು ದುಡಿಮೆ ಕಳುಹಿಸಿದರೆ ನಾಲ್ಕು ಕಾಸಾದರೂ ಆಗುತ್ತದೆ, ಶಾಲೆಗೆ ಕಳುಹಿಸಿದರೆ ಸಮಯ ವ್ಯರ್ಥವೆಂದು ಭಾವಿಸುವ ಕೂಲಿ ಕಾರ್ಮಿಕರಿಗೆ ತಿಳಿ ಹೇಳಿ, ಅವರನ್ನು ಒಪ್ಪಿಸಿ ಅವರ ಮಕ್ಕಳನ್ನು ಶಾಲೆಗೆ ಕರೆ ತರುತ್ತಾರೆ ಸ್ನೇಹಲತಾ.
ಹೆಣ್ಣು ಮಕ್ಕಳು ಶಾಲೆಗೆ ಹೋಗುವುದೇ ಅಪರಾಧ ಎಂದು ಭಾವಿಸಿದ್ದ, ಹುಡುಗಿಯರ ಮುಖಕ್ಕೆ ಪರ್ದಾ ಹಾಕಿಸುತ್ತಿದ್ದ ಕಾಲಘಟ್ಟದಲ್ಲಿ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾದ ಸ್ನೇಹಲತಾ ಇದೀಗ ಶಿಕ್ಷಣ ವಂಚಿತ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ.
ತನ್ನ ಪಿಂಚಣಿ ಹಣ ಮತ್ತು ದಾನಿಗಳ ನೆರವಿನಿಂದ ಶಾಲೆ ನಡೆಸುವ ಅವರನ್ನು ಮಕ್ಕಳು ಪ್ರೀತಿಯಿಂದ ’ಗೌರವ ಮಾ’ ಎಂದೇ ಕರೆಯುತ್ತಾರೆ. ಸ್ವಂ ಸೇವಕರಾಗಿ ಬಂದು ಇಲ್ಲಿ ಯಾರು ಬೇಕಾದರು ಮಕ್ಕಳಿಗೆ ಕಲಿಸಿ ಕೊಡಬಹುದು. ಸಮವಸ್ತ್ರ, ಪುಸ್ತಕ, ಊಟ ಎಲ್ಲವೂ ಇಲ್ಲಿ ಉಚಿತ.
‘ಪವಿತ್ರ ಹೃದಯಕ್ಕೆ ಪರ್ವತವನ್ನೂ ಅಲುಗಾಡಿಸುವ ಶಕ್ತಿ ಇರುತ್ತದೆ. ಇಂತಹ ಮಕ್ಕಳು ಶಿಕ್ಷಿತರಾದರೆ ಮಾತ್ರ ಭಾರತದ ಭವಿಷ್ಯ ಉತ್ತಮವಾಗುತ್ತದೆ. ಈ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವುದು ನಮ್ಮ ಕರ್ತವ್ಯ’ ಎಂದು ಸ್ನೇಹಲತಾ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.