ಒಂದಲ್ಲ ಎರಡಲ್ಲ ಸುದೀರ್ಘ 53 ವರ್ಷ ನೀರಿನ ಮೇಲೆ ಬದುಕು ಸಾಗಿಸಿದ ಅಂಬಿಗನ ಕಥೆಯಿದು. ನದಿಯ ಮೇಲೆ ಬದುಕನ್ನು ಕಟ್ಟಿಕೊಂಡಿರುವ ಈ ಅಂಬಿಗ ವರ್ಷದ ಪ್ರತೀ ದಿನವೂ ಬೆಳಗ್ಗೆ 6 ರಿಂದ ರಾತ್ರಿ 8.30 ವರಗೆ ಮಳೆ, ಗಾಳಿ, ಚಳಿ, ಬಿಸಿಲಿಗೆ ಮೈಯೊಡ್ಡಿ ಆ ದಡದಿಂದ ಈ ದಡಕ್ಕೆ, ಈ ದಡದಿಂದ ಆ ದಡಕ್ಕೆ ಜನರನ್ನು ದೋಣಿಯಲ್ಲಿ ಸಾಗಿಸಿ ತನ್ನ ಜೀವನದ ಅಮೂಲ್ಯ ಸಮಯವನ್ನು ಕಳೆದಿದ್ದಾರೆ.
ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಇನೋಳಿಯ ನಾರ್ಟಿಗೋಲಿ ಎಂಬಲ್ಲಿನ ನಿವಾಸಿ ದಿವಂಗತ ಓಮಯ ಸಾಫಲ್ಯ ಎಂಬವರ ಪುತ್ರ ನಾರಾಯಣ ಸಾಪಾಲ್ಯ ಎಂಬವರೇ ಈ ಅಂಬಿಗ. 70 ವರ್ಷದ ಇವರು ನೇತ್ರಾವತಿ ನದಿಯ ಫರಂಗಿಪೇಟೆ-ಇನೋಳಿ ಕಡವಿಗೆ ದಿನನಿತ್ಯ ದೋಣಿಯಲ್ಲಿ ಜನರನ್ನು ಸಾಗಿಸುವುದು ತನ್ನ ಅನ್ನ ಸಂಪಾದನೆಗಾದರೂ ಈ ಮುದಿ ವಯಸ್ಸಿನಲ್ಲಿ ಅವರು ಅನುಭವಿಸುತ್ತಿರುವಾಗ ಕಷ್ಟ ನಷ್ಟಗಳು ಅವರು ಜನತೆಗೆ ನೀಡುವ ಸೇವೆ ಎಂದರೂ ತಪ್ಪಾಗಲಾರದು.
ವರ್ಷಗಳ ಹಿಂದೆ ಇನೋಳಿ ಮೂಲಭೂತ ಸೌಕರ್ಯ ವಂಚಿತ ಹಳ್ಳಿಯಾಗಿತ್ತು. ಈ ಭಾಗದ ಬಹುತೇಕ ಜನರು ಕೃಷಿಯನ್ನೇ ಅವಲಂಬಿತರಾಗಿದ್ದರು. ಇಲ್ಲಿನ ಮುಗ್ದ ನಾಗರಿಕರಿಗೆ ಶಾಲೆ, ಕಾಲೇಜು, ಅಂಗಡಿ, ಚಿಕಿತ್ಸೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕಾಗಿ ತಮ್ಮ ಹಳ್ಳಿಯಿಂದ ಹಾದು ಹೋಗಿರುವ ನೇತ್ರಾವತಿ ನದಿಯ ಈ ಕಡೆ ಇರುವ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಎಂಬ ಪಟ್ಟಣವನ್ನು ಆಶ್ರಯಿಸಬೇಕಿತ್ತು. ಆದರೆ ಇನೋಳಿಯ ನಜತೆಗೆ ತಮ್ಮ ಕಾರ್ಯಕ್ಕಾಗಿ ಈ ನದಿಯನ್ನು ದಾಟಿ ಫರಂಗಿಪೇಟೆಗೆ ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ಆ ಸಮಯದಲ್ಲಿ ನಾರಾಯಣ ಸಾಫಲ್ಯರ ತಂದೆ ಓಮಯ ಸಾಫಲ್ಯ ಚಿಕ್ಕದೊಂದು ದೋಣಿಯನ್ನು ನದಿಗೆ ಇಳಿಸಿಯೇ ಬಿಟ್ಟರು. ಅಂದಿನಿಂದ ಇನೋಳಿ ಫರಂಗಿಪೇಟೆ ಕಡವಿಗೆ ದೋಣಿ ಯುಗ ಆರಂಭವಾಯಿತು.
ಓಮಯ ಸಾಫಲ್ಯ ದಿನನಿತ್ಯ ಇನೋಳಿಯಿಂದ ಫರಂಗಿಪೇಟೆಗೆ, ಫರಂಗಿಪೇಟೆಯಿಂದ ಇನೋಳಿಗೆ ಜನರನ್ನು ಸಾಗಿಸುವುದನ್ನೇ ತನ್ನ ಕಾಯಕವನ್ನಾಗಿಸಿಕೊಂಡರು. ಶಾಲೆಯ ಮೆಟ್ಟಿಲನ್ನೇ ಹತ್ತದ ಮಗ ನಾರಾಯಣ ಸಾಫಲ್ಯ ಬಾಲ್ಯದಲ್ಲೇ ತಂದೆಯೊಂದಿಗೆ ಸೇರಿ ದೋಣಿ ನಡೆಸುವುದನ್ನು ಕಲಿತರು. ತಂದೆ ಓಮಯ ಸಾಫಲ್ಯ ಸುಮಾರು 20 ವರ್ಷಗಳ ಕಾಲ ದೋಣಿ ನಡೆಸಿ ಅಸೌಖ್ಯದ ಕಾರಣ ಈ ಕೆಲಸದಿಂದ ದೂರ ಸರಿದಾಗ ಮಗ ನಾರಾಯಣ ಸಾಫಲ್ಯ ಈ ಕಾಯಕವನ್ನು ಮುಂದುವರಿಸಿದರು. ಆಗ ನಾರಾಯಣ ಸಾಫಲ್ಯರ ಪ್ರಾಯ 17 ವರ್ಷ. ಅಂದಿನಿಂದ ಇಂದಿನವರೆಗೆ ನದಿಯ ದಡದಿಂದ ದಡಕ್ಕೆ ಜನರನ್ನು ಸಾಗಿಸುವುದರಲ್ಲಿ ನಿರಂತರವಾಗಿದ್ದಾರೆ.
ತನ್ನ ಜೀವನಾನುಭವದ ಕುರಿತು ಅವರು ಈ ರೀತಿ ವಿವರಿಸುತ್ತಾರೆ. ನಾನು ಸುಮಾರು 52 ವರ್ಷಗಳಿಂದ ಈ ಕೆಲಸವನ್ನು ನಿರ್ವಹಿಸುತ್ತಾ ಬಂದಿದ್ದೇನೆ. ಪ್ರತೀ ದಿನವು ಬೆಳಗ್ಗೆ 6 ರಿಂದ ರಾತ್ರಿ 8.30 ಗಂಟೆಯವರೆಗೆ ದೋಣಿಯನ್ನು ನಡೆಸುತ್ತೇನೆ. ಇದರಿಂದ ಬೆಳಗ್ಗೆ ಬೇಗ ಎದ್ದು ಕೆಲಸಕ್ಕೆ ಹೋಗುವವರಿಗೆ ಮತ್ತು ರಾತ್ರಿ ಕೆಲಸ ಬಿಟ್ಟು ಮನೆಗೆ ಬರುವವರಿಗೆ ಸಹಾಯವಾಗುತ್ತದೆ. ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಚಾ ಎಲ್ಲವೂ ದೋಣಿಯಲ್ಲೇ ಮಾಡುತ್ತೇನೆ ಎಂದು ನಾರಾಯಣ ಹೇಳುತ್ತಾರೆ.
ಪ್ರವಾಹದಿಂದ ನೀರಿನ ಮಟ್ಟ ಜಾಸ್ತಿಯಾದಾಗ ಮಾತ್ರ ದೋಣಿಯನ್ನು ನಡೆಸಲಾಗುವುದಿಲ್ಲ. ಉಳಿದಂತೆ ಎಲ್ಲಾ ದಿನವೂ ದೋಣೀ ನಡೆಸುತ್ತೇನೆ. ಬೇಸಿಗೆ ಕಾಲದಲ್ಲಿ ಬಿಸಿಲ ಝಲ ಹೆಚ್ಚಾಗಿರುತ್ತದೆ. ನದಿಯ ಮರಳಿತ ತಾಪ ಹಾಗೂ ಸುಡುವ ಬಿಸಿಲಿಗೆ ಮೈಯೊಡ್ಡಿ ದೋಣಿ ಸಾಗಿಸುವುದ ಸುಲಭದ ಕೆಲಸವಲ್ಲ. ಹಾಗೆಯೇ ಮಳೆಗಾಲದಲ್ಲಿ ಮಳೆಯಲ್ಲೇ ನೆನೆದು ಚಳಿಯಲ್ಲಿ ನಡುಗಿಯೇ ದೋಣಿ ಸಾಗಿಸಬೇಕಾಗುತ್ತದೆ. ಅಲ್ಲದೆ ಮಳೆ ಬರುವಾಗ ಬೀಸುವ ಭಾರೀ ಗಾಳಿಯನ್ನು ದೋಣಿಯನ್ನು ನಿಯಂತ್ರಿಸುವುದು ಸಾಹಸದ ಕೆಲಸ. ಆಗ ದೋಣಿಯಲ್ಲಿರುವ ಜನರನ್ನು ದಡ ಸೇರಿಸುವುದರಲ್ಲಿ ಅರ್ಧ ಜೀವವೇ ಹೋದ ಆದಾಗೆ ಆಗುತ್ತದೆ ಎಂದು ಮಳೆ, ಬೇಸಿಗೆ ಕಾಲದ ಸಂಕಷ್ಟವನ್ನು ಎಳೆ ಎಳೆಯಾಗಿ ನಾರಾಯಣ ಸಾಫಲ್ಯ ವಿವರಿಸುತ್ತಾರೆ.
ಮಳೆಗಾಲದಲ್ಲಿ ನದಿ ಮೈದುಂಬಿ ಹರಿಯುವುದರಿಂದ ನೀರಿನ ಸೆಳೆತ ಭಾರೀ ಮಟ್ಟದಲ್ಲಿ ಇರುತ್ತದೆ. ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ದೋಣಿಯನ್ನು ಸಾಗಿಸಬೇಕಾದರೆ ಮೊದಲು ಈ ದಡದ ಬದಿಯಿಂದಲೇ ಸುಮಾರು 400 ರಿಂದ 500 ಮೀಟರ್ನಷ್ಟು ವಿರುದ್ಧ ದಿಕ್ಕಿಗೆ ಸಾಗಿ ನದಿಯನ್ನು ದಾಟಬೇಕು. ಆದರೂ ನೀರಿನ ಸೆಳೆತಕ್ಕೆ ದೋಣಿ ಆ ದಡದ ಸುಮಾರು 400 ರಿಂದ 500 ಮೀಟರ್ ಕೆಲಗೆ ಹೋಗಿ ತಲುಪುತ್ತದೆ. ಅಲ್ಲಿಂದ ರಭಸದಿಂದ ಹರಿಯುವ ನೀರಿನಲ್ಲಿ ದೋಣಿಯನ್ನು ಭಾರೀ ಪ್ರಯತ್ನದಿಂದ ಮೇಲೆ ತರಬೇಕಾಗುತ್ತದೆ ಎಂದು ಮಳೆಗಾಲದಲ್ಲಿ ದೋಣಿ ನಡೆಸುವ ರೀತಿಯನ್ನು ನಾರಾಯಣ ಹೇಳುತ್ತಾರೆ.
1974 ರಲ್ಲಿ ಬಂದ ಪ್ರವಾಹ ಕರಾವಳಿಯ ನಜಜೀವನವನ್ನು ಅಲ್ಲೋಲಕಲ್ಲೋಲ ಮಾಡಿತ್ತು. ನೆರೆಯಿಂದ ಆದಷ್ಟು ಮನೆಗಳು, ಜಾನುವಾರುಗು ನೀರಿನಲ್ಲಿ ಕೊಚ್ಚಿ ಹೋಗಿ ಆಸ್ತಿ ಪಾಸ್ತಿಗಳು ನಾಶವಾಗಿತ್ತು. ಸಾವಿರಾರು ಮಂದಿ ನಿರಾಶಿತರಾಗಿದ್ದರು. ಎಲ್ಲೋಲ್ಲೂ ಆಕ್ರಂದನ ಕೇಳಿ ಬರುತ್ತಿತ್ತು. ಆ ಸಂದರ್ಭದಲ್ಲಿ ನಾನು ಈ ಪುಟ್ಟ ದೋಣಿಯನ್ನು ಹಿಡಿದುಕೊಂಡು ಇನೋಳಿಯಾದ್ಯಂತ ನೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದವರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿದ್ದೆ. ಹಗಲು ರಾತ್ರಿ ನಿದ್ದೆ ಬಿಟ್ಟು ಕಾರ್ಯಪ್ರವೃತ್ತನಾಗಿದ್ದೆ ಎಂದು 1974 ರ ಭಾರೀ ಪ್ರವಾಹವನ್ನು ವಿವರಿಸುತ್ತಾರೆ. ಮಾತ್ರವಲ್ಲ ಈಗಲೂ ನೆರೆ ಬಂದಾಗ ರಾತ್ರಿ ಸಮಯ ಮಳಗದೆ ಎಚ್ಚರದಿಂದ ಇರುತ್ತೇನೆ ಎಂದು ಅವರು ಹೇಳುತ್ತಾರೆ.
ನನ್ನ ದೋಣಿಯ ಮೂಲಕ ನದಿ ದಾಟಿ ಶಾಲಾ ಕಾಲೇಜಿಗೆ ಹೋಗಿ ಉನ್ನತ ವ್ಯಾಸಾಂಗ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಶಿಕ್ಷಕರು ಎಂಜಿನಿಯರ್, ಸರಕಾರಿ ಕೆಲಸ ಹಾಗೂ ವಿದೇಶಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದು ನಾರಾಯಣ ಸಾಫಲ್ಯ ಹರ್ಷ ವ್ಯಕ್ತಪಡಿಸುತ್ತಾರೆ. 50 ಪೈಸೆ 1 ರೂಪಾಯಿ ಕೊಟ್ಟು ಈ ದೋಣಿಯಲ್ಲಿ ಶಾಲೆಗೆ ಹೋಗಿ ಕಲಿತ ಮಕ್ಕಳು ಇಂದು ಐಶಾರಾಮಿ ಕಾರಿನಲ್ಲಿ ಸುತ್ತಾಡುವುದನ್ನು ನೋಡುವಾಗ ಇನ್ನಷ್ಟು ಖುಷಿ ತರುತ್ತದೆ ಎಂದು ನಾರಾಯಣ ಹೇಳುತ್ತಾರೆ.
ಈಗ ಮೊದಲಿನಂತಲ್ಲ. ಇನೋಳಿಯಿಂದ ಮಂಗಳೂರಿಗೆ ಬೇಕಾದಷ್ಟು ಬಸ್ಗಳಿವೆ. ಇನ್ನು ಹೆಚ್ಚಿನವರಿಗೆ ಸ್ವಂತ ವಾಹನಗಳಿವೆ. ಆದ್ದರಿಂದ ದೋಣಿಯ ಮೂಲಕ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಇದರಿಂದ ಬರುವ ಆದಾಯವು ಕಡಿಮೆಯಾಗಿದೆ ಎಂದು ದೋಣಿ ನಡೆಸುವುದನ್ನು ಬಿಟ್ಟರೆ ದೋಣಿಯನ್ನೇ ಅವಲಂಬಿತರಾದ ಅಲ್ಪ ಸ್ವಲ್ಪ ಮಂದಿಗೆ ತೊಂದರೆಯಾಗುತ್ತದೆ. ಆದ್ದರಿಂದ ಆದಾಯಕ್ಕಿಂತ ಜನರ ಕಷ್ಟಕ್ಕೆ ಸ್ಪಂದಿಸುವುದೇ ಧರ್ಮವೆಂದು ದೋಣಿ ನಡೆಸುವುದನ್ನು ಇಂದಿಗೂ ಬಿಟ್ಟಿಲ್ಲ ಎಂದು ಅವರು ತನ್ನ ಸೇವೆಯ ಕುರಿತು ಹೇಳುತ್ತಾರೆ. ವರ್ಷ ಪ್ರತೀ ದೋಣಿಯ ದುರಸ್ಥಿಗೆ 15 ರಿಂದ 20 ಸಾವಿರ ಖರ್ಚು ಆಗುತ್ತದೆ. ಅದೆಲ್ಲವೂ ಇದರಿಂದ ಭರಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.