ಬೆಂಗಳೂರು : ಬರಗಾಲದ ತೀವ್ರತೆಯಿಂದ ಮೇವಿಲ್ಲದೆ ಪ್ರಾಣಾಪಾಯದಲ್ಲಿರುವ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಲಕ್ಷಾಂತರ ಗೋವುಗಳಿಗೆ ಶ್ರೀರಾಮಚಂದ್ರಾಪುರಮಠವು “ಗೋಪ್ರಾಣಭಿಕ್ಷಾ” ಆಂದೋಲನದ ಮೂಲಕ ಸಾರ್ವಜನಿಕರ ಸಹಕಾರದೊಂದಿಗೆ ಮೇವನ್ನು ಒದಗಿಸುತ್ತಿದ್ದು, ಒಟ್ಟು 13 ಕೇಂದ್ರಗಳಲ್ಲಿ ಈಗಾಗಲೇ ಸುಮಾರು 1100 ಟನ್ ಜೋಳ, ಕಬ್ಬು, ಅಡಿಕೆಹಾಳೆ ಮುಂತಾದ ಮೇವನ್ನು ಪೂರೈಸಿದೆ.
ಗೋಪ್ರಾಣಭಿಕ್ಷಾ ಆಂದೋಲನಕ್ಕೆ ನಾಡಿನ ಎಲ್ಲಾ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬೆಂಗಳೂರು, ಕರಾವಳಿ, ಮಲೆನಾಡು, ಹುಬ್ಬಳ್ಳಿ ಹಾಗೂ ಬೆಳಗಾವಿ ಮುಂತಾದ ಪ್ರದೇಶಗಳಲ್ಲಿ ಜನರು ಧನ – ಧಾನ್ಯ ಹಾಗೂ ಮೇವಿನ ರೂಪದಲ್ಲಿ ಸಹಕಾರ ನೀಡುತ್ತಿದ್ದಾರೆ. ಅಡಿಕೆ ಬೆಳೆಗಾರರು ಅಡಿಕೆ ಹಾಳೆಯನ್ನು ನೀಡಿದರೆ, ಕೃಷಿಕರು ಜೋಳದ ಹುಲ್ಲು, ಕಬ್ಬು, ಜೋಳದ ಧಾನ್ಯ ಮುಂತಾದವುಗಳನ್ನು ನೀಡುತ್ತಿದ್ದಾರೆ. ಹಲವಾರು ಗೋಪ್ರೇಮಿಗಳು ಮೇವಿನ ಲೋಡಿನ ಪ್ರಾಯೋಜಕತ್ವ ವಹಿಸಿಕೊಳ್ಳುತ್ತಿದ್ದು, ತಮ್ಮಿಂದಾದ ಧನಸಹಾಯ ಮಾಡುತ್ತಿದ್ದಾರೆ.
ಗೋವಿಗಾಗಿ ಭಿಕ್ಷೆ ಬೇಡಿದ ಗೋಕಿಂಕರರು:
ಹೊನ್ನಾವರ, ಬೆಂಗಳೂರು ಸೇರಿದಂತೆ ಹಲವು ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ ಗೋವಿಗಾಗಿ ಭಿಕ್ಷೆ ಬೇಡುವ ಮೂಲಕ ಗೋಪ್ರಾಣಭಿಕ್ಷಾ ಆಂದೋಲನದ ಕುರಿತು ಸಾರ್ವಜನಿಕರ ಗಮನಸೆಳೆಯಲಾಗುತ್ತಿದ್ದು, ಅಂಗಡಿ ವ್ಯಾಪಾರಸ್ಥರು – ಕೃಷಿಕರು – ಉದ್ಯೋಗಿಗಳು ಹಾಗು ಸಾರ್ವಜನಿಕರಿಂದ ಅದ್ಭುತವಾದ ಸ್ಪಂದನೆ ವ್ಯಕ್ತವಾಗಿದೆ.
ಪದ್ಮಶ್ರೀ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ, ಡಾ. ಎಂಪಿ ಕರ್ಕಿ ಮುಂತಾದ ಹಿರಿಯರ ಆದಿಯಾಗಿ ಅನೇಕ ಗೋಪ್ರೇಮಿಗಳು ಹೊನ್ನಾವರದಲ್ಲಿ ಗೋವಿಗಾಗಿ ಭಿಕ್ಷೆ ಬೇಡಿದರು. ಬೆಂಗಳೂರಿನ ಗಿರಿನಗರ, ಹನುಮಂತ ನಗರಗಳಲ್ಲಿ ಗೋವಿನ ಮೇವಿಗಾಗಿ ಭಿಕ್ಷಾಟನೆ ನಡೆಯುತ್ತಿದ್ದು, ಉಳಿದ ನಗರಗಳಲ್ಲಿ ಮುಂಬರುವ ದಿನಗಳಂದು ನಡೆಯಲಿದೆ.
ಸೋಮವಾರ ಊಟಬಿಟ್ಟು ಗೋವಿನ ಮೇವಿಗೆ ಸಹಾಯ :
ವಾರದಲ್ಲಿ ಒಂದು ದಿನ ಅಥವಾ ಒಂದು ಹೊತ್ತು ಊಟವನ್ನು ಬಿಟ್ಟು ಮೂರು ತಿಂಗಳುಗಳಕಾಲ ಸರಳಜೀವನ ನಡೆಸಲು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಪ್ರೇಮಿಗಳಿಗೆ ಕರೆನೀಡಿದ್ದು, ಎಲ್ಲಾ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. #GiveUpAMeal #GouPranaBhiksha ಎಂಬ ಹ್ಯಾಷ್’ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಕೈಗೊಳ್ಳಲಾಗುತ್ತಿದ್ದು, ರಾಜ್ಯ – ಹೊರರಾಜ್ಯಗಳ ಜಾಲತಾಣಿಗರು ಬೆಂಬಲ ನೀಡುವ ಮೂಲಕ ಗೋವಿಗೆ ಮೇವು ಪೂರೈಸಲು ನೆರವಾಗುತ್ತಿದ್ದಾರೆ.
ಮಕ್ಕಳು ಮಹಿಳೆಯರು ಸೇರಿದಂತೆ ನೂರಾರು ಮಂದಿ ಈಗಾಗಲೇ ತಮ್ಮ ಆಭರಣಗಳನ್ನೇ ಗೋಪ್ರಾಣಭಿಕ್ಷಾ ಆಂದೋಲನಕ್ಕೆ ಸಮರ್ಮಿಸಿದ್ದು, ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ಹೆಚ್ಚನ ಸಿಹಿಪದಾರ್ಥ ಮಾಡದೇ ಹಣವನ್ನು ಗೋವಿಗಾಗಿ ನೀಡುತ್ತಿರುವುದು ಕರಾವಳಿ ಮಲೆನಾಡು ಪ್ರದೇಶಗಳಲ್ಲಿ ಕಾಣಬಹುದಾಗಿದೆ.
ಲಕ್ಷಾಂತರ ಗೋವುಗಳು ಮೇವಿಲ್ಲದೇ ತತ್ತರಿಸಿರುವುದರಿಂದ, ಇನ್ನೂ ಹೆಚ್ಚಿನ ಸಾರ್ವಜನಿಕರ ಸಹಕಾರದ ಅವಶ್ಯಕತೆ ಇದ್ದು, ಗೋಪ್ರೇಮಿಗಳು ಯಥಾಶಕ್ತಿ ದೇಣಿಗೆ ನೀಡುವ ಮೂಲಕ ಸಹಕರಿಸಬಹುದಾಗಿದೆ. (A/C 0992500101611901 IFSC KARB0000099 Karnataka Bank, Srinagar, Bangalore) (80G ವಿನಾಯಿತಿ ಇದೆ) ಮೇವಿಗಾಗಿ ದೇಣಿಗೆ ನೀಡಿದವವರು ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ಸ್ವಹಸ್ತದಿಂದ ಮೇವು ನೀಡಲು ಅವಕಾಶ ಕಲ್ಪಿಸಲಾಗಿದ್ದು, ಗೋಪ್ರೇಮಿಗಳು ಧನ – ಧಾನ್ಯಗಳ ರೂಪದಲ್ಲಿ ಸಹಕಾರ ನೀಡಬಹುದಾಗಿದೆ. (Contact 9449595206).
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.