ಹುಬ್ಬಳ್ಳಿ: ನಗರದಲ್ಲಿನ ಅಟೊಮೊಬೈಲ್ನ ಬೃಹತ್ ಶೋರೂಂ ಶೋಧಾ ಟೊಯೊಟಾ ಸೋಲಾರ್ ಪಾವರ್ಗೆ ಮೊರೆ ಹೋಗಿ ಅನೇಕರಿಗೆ ಮಾದರಿಯಾಗಿದೆ.
ಮೊದಲೇ ಬರಗಾಲ. ಇನ್ನೊಂದೆಡೆ ವಿದ್ಯುತ್ ದರ ಏರಿಕೆಯ ಶಾಕ್ ಬೇರೆ ಕೊಟ್ಟಿದೆ ರಾಜ್ಯ ಸರ್ಕಾರ. ಬಡ ಹಾಗೂ ಮಧ್ಯಮ ವರ್ಗಕ್ಕಂತೂ ಹೇಳ ತೀರದ ಗೋಳು. ಆದರೆ ಇದಕ್ಕೆಲ್ಲ ಕೊಂಚ ಪರಿಹಾರ ಎಂಬಂತೆ ಕಾಣಿಸುತ್ತದೆ ಶೋಧಾ ಟೊಯೊಟಾ ಕಾರ್ಯ.
50 ಕಿ.ವ್ಯಾಟ್ನ ಸೋಲಾರ್ ಪಾವರ್ ಬಳಸಿ, ಕಾರುಗಳಿಗೆ ನೆರಳನ್ನೂ ನೀಡುವ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. 3 ವರ್ಷದ ಹಿಂದೆಯೇ ಇದನ್ನು ಅಳವಡಿಸಲಾಗಿದೆ. ಇದರ ಬಳಕೆಯಿಂದ ಮೊದಲಿಗಿಂತ ಅರ್ಧಕ್ಕರ್ಧದಷ್ಟು ವಿದ್ಯುತ್ ಖರ್ಚಿನಲ್ಲಿ ಉಳಿತಾಯವಾಗಿದೆ ಎನ್ನುತ್ತಾರೆ ಶೋರೂಂನ ಆಡಳಿತಾಧಿಕಾರಿ ಎಚ್.ಪೂಜಾರ್ ಅವರು.
1 ಕಿ.ವ್ಯಾಟ್ಗೆ ಈ ಮೊದಲು 1 ಲಕ್ಷ ಮೊತ್ತವಿತ್ತು, ಆದರೆ ಇದೀಗ ಅದರ ಬೆಲೆ ಅಂದಾಜು 65 ಸಾವಿರಕ್ಕೆ ಇಳಿದಿದೆ. ಆದ್ದರಿಂದ ಇನ್ನೂ 40 ಕಿ.ವ್ಯಾಟ್ನ ಸೋಲಾರ್ ಪ್ಲ್ಯಾಂಟ್ ಅಳವಡಿಸುವ ಆಲೋಚನೆ ಇದೆ ಎನ್ನುತ್ತಾರೆ ಅವರು.
ನಮ್ಮ ಶೋರೂಂಗೆ ಪ್ರತಿದಿನಕ್ಕೆ 500 ಯುನಿಟ್ ಅವಶ್ಯಕತೆ ಇದೆ. ಈ ಸೋಲಾರ್ ಪಾವರ್ನಿಂದ ಏನಿಲ್ಲವೆಂದರೂ 210ಕ್ಕಿಂತಲೂ ಹೆಚ್ಚು ಯುನಿಟ್ ವಿದ್ಯುತ್ ಲಭ್ಯವಾಗುತ್ತಿದೆ. ಇದರಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ. ಆರ್ಥಿಕವಾಗಿ ಅಲ್ಲದೇ, ವಿದ್ಯುತ್ ಉಳಿತಾಯದಲ್ಲಿಯೂ ಸೋಲಾರ್ ಬಹು ಸಹಕಾರಿ ಎಂಬುದು ಪೂಜಾರ್ ಅವರ ಅಭಿಪ್ರಾಯ.
ವಿದ್ಯುತ್ ಉಳಿತಾಯ, ನೈಸರ್ಗಿಕ ಶಕ್ತಿಯ ಸಮರ್ಥ ಬಳಕೆಯೊಂದಿಗೆ ವಾಹನಗಳಿಗೆ ನೆರಳಿನ ಭಾಗ್ಯವನ್ನೂ ಇಲ್ಲಿ ಕರುಣಿಸಲಾಗಿದೆ. ತಗಡು, ಪ್ಲಾಸ್ಟಿಕ್ ಇತ್ಯಾದಿ ಬಳಸಿ ಪಾರ್ಕಿಂಗ್ ನಿರ್ಮಿಸುವ ಬದಲು, ಬಹುಪಯೋಗಿ ಸೋಲಾರ್ ಪಾರ್ಕಿಂಗ್ ನಿಜಕ್ಕೂ ಮಾದರಿ ಎನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.