News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 4th November 2026

×
Home About Us Advertise With s Contact Us

ರಷ್ಯಾವಿದೇಶಾಂಗ ಸಚಿವರ ನಕಲಿ ವಿಡಿಯೋ ಹಂಚಿಕೆ: ಪ್ರಶಾಂತ್‌ ಭೂಷಣ್‌ ವಿರುದ್ಧ FIR

ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ವಿಡಿಯೋ ಒಂದನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ತಿರುಚಿ, ಅದರಲ್ಲಿ ಭಾರತದ ವಿರುದ್ಧ ಪ್ರತಿಕೂಲ ಹೇಳಿಕೆಗಳಿವೆ ಎಂಬಂತೆ ಬಿಂಬಿಸಿ ಹಂಚಿಕೊಂಡ ಆರೋಪದ ಮೇಲೆ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 3 ರಂದು ಪೊಲೀಸರು ಸೈಬರ್ ಜಾಲತಾಣಗಳಲ್ಲಿ ನಿಗಾ ವಹಿಸುತ್ತಿದ್ದಾಗ, ‘@thequotesnews’ ಎಂಬ ಸಾಮಾಜಿಕ ಜಾಲತಾಣ ಖಾತೆಯೊಂದು ಪೋಸ್ಟ್ ಅನ್ನು ಗಮನಿಸಿದರು. ರಷ್ಯಾದ ವಿದೇಶಾಂಗ ಸಚಿವರ ತಿರುಚಿದ ವಿಡಿಯೋವನ್ನು ಪ್ರಶಾಂತ್ ಭೂಷಣ್ ಅವರ ‘ಎಕ್ಸ್’ (X) ಖಾತೆಯಿಂದ ಹಂಚಿಕೊಳ್ಳಲಾಗಿದೆ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿತ್ತು.

ಈ ವಿಡಿಯೋದಲ್ಲಿ ದಾರಿತಪ್ಪಿಸುವ ಮತ್ತು ಪ್ರಚೋದನಕಾರಿ ವಿಷಯಗಳಿದ್ದು, ಇವು ವದಂತಿಗಳನ್ನು ಹರಡಲು, ವ್ಯಕ್ತಿಗಳ ಮಾನಹಾನಿ ಮಾಡಲು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಕ್ಷನ್ 336 (4) (ನಕಲಿ ದಾಖಲೆ ಸೃಷ್ಟಿಸುವುದು), 353 (1) (c) (ಸಾರ್ವಜನಿಕ ಗೊಂದಲಕ್ಕೆ ಕಾರಣವಾಗುವ ಹೇಳಿಕೆಗಳು), 356 (ಮಾನಹಾನಿ) ಮತ್ತು 340 (2) (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ (ಗುರುತಿನ ಕಳ್ಳತನಕ್ಕೆ ಶಿಕ್ಷೆ) ಅಡಿಯಲ್ಲಿ ‘ಸ್ಪೆಷಲ್ ಸೆಲ್’ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ರಷ್ಯಾದ ವಿದೇಶಾಂಗ ಸಚಿವರಿಗೆ ಸಂಬಂಧಿಸಿದ್ದೆಂದು ತಪ್ಪಾಗಿ ಬಿಂಬಿಸಲಾದ ಈ ಡಿಜಿಟಲ್ ತಿರುಚಿದ ವಿಡಿಯೋವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪರಿಶೀಲಿಸಿ, ಅದು ಸುಳ್ಳು ಎಂದು ದೃಢಪಡಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಈ ಕೃತಕ ವಿಡಿಯೋದಲ್ಲಿ, ರಷ್ಯಾದ ವಿದೇಶಾಂಗ ಸಚಿವರು ಭಾರತದ ಆಂತರಿಕ ವ್ಯವಹಾರಗಳು ಮತ್ತು ತೈಲ ಖರೀದಿಯ ಕುರಿತು ಟೀಕಾತ್ಮಕ ಹೇಳಿಕೆಗಳನ್ನು ನೀಡುತ್ತಿರುವಂತೆ ತೋರಿಸಲಾಗಿತ್ತು.

ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದು, ವಿಡಿಯೋದಲ್ಲಿರುವ ವಿಷಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದು ಹರಡಿದ ರೀತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top