ಕಲಘಟಗಿ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಭಗೇನಾಗರಕೊಪ್ಪದ ಗ್ರಾಮದಲ್ಲಿ ಅನುಭಾವಿ ಸಂತ ಶ್ರೀ ಸಮರ್ಥ ರಾಮದಾಸರು ಸ್ಥಾಪಿಸಿದ ಶ್ರೀ ಮಾರುತಿ (ಹನುಮಂತ) ದೇವಸ್ಥಾನದ ಸ್ಥಳ ಬಹಳ ಕಾರಣಿಕವಾದುದು.
ಐತಿಹ್ಯ
ಛತ್ರಪತಿ ಶಿವಾಜಿ ಅಧ್ಯಾತ್ಮಿಕ ಗುರುಗಳಾದ ಸಂತ ಶ್ರೀ ಸಮರ್ಥ ರಾಮದಾಸರು ಮರಾಠಾ ಸಾಮ್ರಾಜ್ಯ ಇದ್ದಡೆಯೆಲ್ಲಾ ಸಂಚರಿಸುತ್ತಿದ್ದರು. ಭಗೇನಾಗರಕೊಪ್ಪದಲ್ಲಿ ಛತ್ರಪತಿ ಶಿವಾಜಿ ಅವರಿಂದ ಐದು ಹಳ್ಳಿಗಳನ್ನು ಇನಾಂ ಪಡೆದು ಆಡಳಿತ ನಡೆಸುತ್ತಿದ್ದ ದೇಸಾಯಿಯವರ ವಾಡೆಗೆ ಪರ್ಯಟನೆಯಲ್ಲಿ ಇದ್ದಾಗ ಭೇಟಿ ನೀಡಿದರು.
ಬೆಳಿಗ್ಗೆ ವಾಡೆದಲ್ಲಿ ಆತಿಥ್ಯ ಸ್ವೀಕರಿಸಿ ಸಂಧ್ಯಾವಂದನೆಯನ್ನು ಮುಗಿಸಿ ಗ್ರಾಮದ ಹೊಂಡದ ಕೋಡೆಯ ಮೇಲೆ ಮಾರುತಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಸಮರ್ಥರು ಬಂದು ಹೋಗಿದ್ದರಿಂದ ಗ್ರಾಮದ ಹೆಸರು ಮುನಿರಾಮನಕೊಪ್ಪ ಎಂದಾಗಿತ್ತು. ಕಾಲ ಕ್ರಮೇಣ ಊರ ಹೆಸರು ಭಾಗ್ಯನಗರಕೊಪ್ಪ, ನಂತರ ಭೋಗೇನಾಗರಕೊಪ್ಪ ಎಂದಾಯಿತು.
ಶ್ರೀ ಸಮರ್ಥರ ಉದ್ದೇಶ ಜನರಲ್ಲಿ ಭಕ್ತಿ-ಭಾವ ಬೆಳೆಸುವುದಷ್ಟೆ ಅಲ್ಲದೆ ಹಿಂದವೀ ಸ್ವರಾಜ್ಯ ಸ್ಥಾಪಿಸುವುದು. ಅದಕ್ಕಾಗಿ ಯುವಕರಲ್ಲಿ ದೇಹದಾರ್ಢ್ಯತೆ ಬೆಳೆಸಲು ಶ್ರೀ ಮಾರುತಿ ದೇವಸ್ಥಾನದ ಪಕ್ಕದಲ್ಲೇ ಗರಡಿ ಮನೆಯನ್ನು ದೇಶದೆಲ್ಲೆಡೆ 1200 ಕಡೆ ಸ್ಥಾಪಿಸಿದರು. ಅದರಲ್ಲಿ ಭೋಗೇನಾಗರಕೊಪ್ಪವು ಒಂದೆಂಬುದು ಹೆಮ್ಮೆಯ ವಿಷಯ. ಶಕ್ತಿ-ಭಕ್ತಿ ಆರಾಧಕ ಶ್ರೀ ಮಾರುತಿ ಆರಾಧನೆಗೆ ಕರೆ ನೀಡಿದ್ದು ಪ್ರಸಿದ್ಧಿಯಾಯಿತು. ದೇಗುಲದ ಬಿರುದು ಗೋಡೆಗೆ ಹೊಂದಿಕೊಂಡು ಗರಡಿಮನೆ ನಿರ್ಮಿಸಿದ್ದಾರೆ.
ಈ ದೇಗುಲದ ಮಹತ್ವ ತಿಳಿದ ಧಾರವಾಡದ ಬ್ರಿಟಿಷ್ ಕಲೆಕ್ಟರ್ ಆಗಿದ್ದ ಎಂ.ಸಿ.ಗಿಬ್ಬ್ ದೇವಸ್ಥಾನಕ್ಕೆ ಬ್ರಿಟಿಷ್ ಖಜಾನೆಯಿಂದ ವಾರ್ಷಿಕ 2 ರೂಪಾಯಿ ವರ್ಷಾಶನ ನೀಡಲು ಆದೇಶಿಸಿದರೆ ನಂತರ ಬಂದ ಕಲೆಕ್ಟರ್ ಜಾರ್ಜ ಹಡ್ಸನ್ ಅನುಮೋದಿಸಿ ಅಂತಿಮ ಆದೇಶ ಶ್ರೀ ಅಂಣ್ಣಾಜಿ ಬಸವಂತ ಹೆಸರಲ್ಲಿ ಸನದು ನೀಡಿದ್ದರು; ಇದು ಬ್ರಿಟಿಷ್ ಸರ್ಕಾರ ಇರುವವರೆಗೂ ಬರುತ್ತಿತ್ತು.
ಹನುಮ ಜಯಂತಿ, ದೀಪಾವಳಿಯಂದು ಬೆಳಿಗ್ಗೆ ಪವಮಾನದೊಂದಿಗೆ ಶ್ರೀ ಮಾರುತಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ವಿಶೇಷ ಕುಂಕುಮಾರ್ಚನೆ, ಅಲಂಕಾರ ಪೂಜೆ, ಮಹಾನೈವೇದ್ಯ, ತೊಟ್ಟಿಲು ಪೂಜೆ ಹಾಗೂ ಹನುಮನ ಪ್ರತಿಮೆ ತೊಟ್ಟಿಲಲ್ಲಿ ಇಟ್ಟು ಸುಮಂಗಲಿಯರಿಂದ ತೊಟ್ಟಿಲೋತ್ಸವ, ನಾಮಕರಣಶಾಸ್ತ್ರ ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.