ಬೆಳ್ತಂಗಡಿ : ವಿಠಲ ಮಲೆಕುಡಿಯ ಹಾಗು ಆತನ ತಂದೆಯ ಮೇಲೆ ನಕ್ಸಲೀಯರಂದು ಸುಳ್ಳು ಆರೋಪ ಪಟ್ಟಿಸಲ್ಲಿಸುವ ಮೂಲಕ ರಾಜ್ಯ ಸರಕಾರ ಮೂಲನಿವಾಸಿಗಳನ್ನು ಹೆದರಿಸಿ ಅರಣ್ಯದಿಂದ ಹೊರದೂಡಲು ಪ್ರಯತ್ನಿಸುತ್ತಿದೆ . ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ವಿಠಲನ ವಿರುದ್ದದ ಆರೋಪ ಪಟ್ಟಿಯನ್ನು ಹಿಂಪಡೆಯುವ ವರೆಗೆ ಹೋರಾಟವನ್ನು ಮುಂದುವರಿಯಲಿದೆ ಎಂದು ಡಿವೈಎಫ್ಐ ಯ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಬೆಳ್ತಂಗಡಿಯಲ್ಲಿ ಡಿವೈಎಫ್ಐ ತಾಲೂಕು ಸಮಿತಿ, ಹಾಗು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವತಿಯಿಂದ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಸೋಮವಾರ ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ವಿಠಲ ಮಲೆಕುಡಿಯ ಹಾಗು ಆತನ ತಂದೆಯ ವಿರುದ್ದ ನಕ್ಸಲ್ ಆರೋಪಹೊರಿಸಿ ಆರೋಪ ಪಟ್ಟಿ ಸಲ್ಲಿಸಿರುವುದನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಮೂರು ವರ್ಷದ ಹಿಂದೆ ನಕ್ಸಲ್ ನಿಗ್ರಹ ದಳದವರು ವಿಠಲನ ಮನೆಯಲ್ಲಿ ಚಾಹುಡಿ, ಸಕ್ಕರೆ, ಭಗತ್ಸಿಂಗ್ ಪುಸ್ತಕ ಸಿಕ್ಕಿತೆಂದು ಆರೋಪಿಸಿ ಅವರನ್ನು ಬಂಧಿಸಿತ್ತು. ಆದರೆ ಇದೀಗ ಅವರ ಮೇಲೆ ನಕ್ಸಲರೊಂದಿಗೆ ಸಭೆ ನಡೆಸಿದ್ದಾರೆ ಎಂದು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಮೂರು ವರ್ಷದ ಬಳಿಕ ಈಗ ಆರೋಪ ಪಟ್ಟಿ ಸಲ್ಲಿಸಿರುವುದರ ಹಿಂದೆ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ. ಒಕ್ಕಲೇಳಲು ಸಿದ್ದರಿಲ್ಲದವರು ನಕ್ಸಲ್ ಆರೋಪ ಎದುರಿಸ ಬೇಕಾಗಲಿದೆ ಎಂಬ ಸಂದೇಶ ಈ ಮೂಲಕ ನೀಡಿದ್ದಾರೆ ಇದನ್ನು ಎದುರಿಸಿ ನಿಲ್ಲಬೇಕಾಗಿದೆ ಎಂದರು. ಒರ್ವ ಬಡ ವಿದ್ಯಾರ್ಧಿಯ ಜೀವನದೊಂದಿಗೆ ಪೋಲೀಸರು ಚೆಲ್ಲಾಟ ವಾಡುತ್ತಿದ್ದಾರೆ ಆತನನ್ನು ಜೀವನ ಪೂರ್ತಿ ಕಾಡುವ ಯೋಜನೆ ಅವರದ್ದಾಗಿದೆ. ಇದರ ವಿರುದ್ದ ಮುಂದಿನ ಹಂತದಲ್ಲಿ ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮುಖಂಡ ಬಿ.ಎಂ.ಭಟ್ ಕಾಡಿನಲ್ಲಿರುವ ನಕ್ಸಲೀಯರಿಗೆ ನಾಡಿಗೆ ಬನ್ನಿ ಎಂದು ಕರೆನೀಡುವ ಸರಕಾರ ಮುಗ್ದ ಆದಿವಾಸಿಗಳನ್ನು ನಕ್ಸಲೀಯರಂದು ಬಿಂಬಿಸಿ ಅವರ ಬದುಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಹಾಗು ಕಾಂಗ್ರೆಸ್ ಸರಕಾರಗಳು ಈ ವಿಚಾರದಲ್ಲಿ ಒಂದೇ ನೀತಿಯುನ್ನು ಅನುಸರಿಸುತ್ತಿದೆ ,ಬಡವರ ಬದುಕನ್ನು ಕಸಿದು ಕೊಳ್ಳಲು ಎರಡೂ ಸರಕಾರಗಳು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ನಕ್ಸಲೀಯರೊಂದಿಗೆ ವಿಠಲನ ಹೆಸರನ್ನು ಸೇರಿಸಿ ಆತ ಜೀವಮಾನವಿಡಿ ಅಲೆಯುವಂತೆ ಮಾಡುತ್ತಿದ್ದಾರೆ. ಇದರ ನಡುವೆ ಅರಣ್ಯದಿಂದ ಒಕ್ಕಲೇಳುವಂತೆ ನೋಟೀಸು ನೀಡಲಾಗುತ್ತದೆ ಇದೆಲ್ಲವನ್ನು ನೋಡುವಾಗ ಸರಕಾರದ ನೀತಿಯ ಬಗ್ಗೆ ಅನುಮಾನ ಮೂಡುತ್ತಿದೆ. ವಿಠಲನ ವಿರುದ್ದದ ಪ್ರಕರನ ಹಿಂಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು. ಪ್ರತಿಭಟನೆಯಲ್ಲಿ ವಿಠಲ ಮಲೆಕುಡಿಯ ಹಾಗು ಆತನ ತಂದೆ ಲಿಂಗಪ್ಪ ಮಲೆಕುಡಿಯ ಹಾಗು ಮನೆಯವರು ಭಾಗವಹಿಸಿದ್ದರು.
ಪ್ರತಿಭಟನೆಯ ನೇತೃತ್ವವನ್ನು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಸಂಚಾಲಕ ಶೇಖರ ಲಾಯಿಲ, ಸಿಪಿಐಎಂ ಮುಖಂಡರುಗಳಾದ ಶ್ಯಾಮರಾಜ್ ಪಟ್ರಮೆ, ಸುಕನ್ಯ, ನೆಬಿಸ, ಡಿವೈಎಫ್ಐ ಮುಖಂಡರುಗಳಾದ ಯುವರಾಜ್, ಧನಂಜಯ ಗೌಡ, ಮಧುಸೂದನ, ಹರೀಶ್ ಪಟ್ರಮೆ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರುಗಳಾದ ವಸಂತ ನಡ, ಈಶ್ವರಿ, ಪೂವಪ್ಪ ಮಲೆಕುಡಿಯ,ಸುಧಾಕರ ಮತ್ತಿತರರು ವಹಿಸಿದ್ದರು. ಪ್ರತಿಭಟನಾಕಾರರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.