ಹನುಮಂತನು ಸೀತೆಯನ್ನು ಹುಡುಕಲು ನೂರು ಯೋಜನಗಳಷ್ಟು ವಿಸ್ತೀರ್ಣವಾದ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟನು. ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿ, ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ ಲಂಕಾಪುರಿಯನ್ನೇ ತನ್ನ ಬಾಲದ ಬೆಂಕಿಯಿಂದ ಸುಟ್ಟು ಮತ್ತೆ ಸಾಗರವನ್ನು ದಾಟಿ ಹಿಂತಿರುಗಿ ಶ್ರೀರಾಮನಿಗೆ ಸೀತೆಯನ್ನು ಕಂಡು ಹಿಡಿದ ಪ್ರಿಯವಾರ್ತೆಯನ್ನು ತಿಳಿಸಿದನು.
ಸಂತೋಷಭರಿತನಾದ ಶ್ರೀರಾಮನು ರಾವಣನ ಸೆರೆಯಿಂದ ಸೀತೆಯನ್ನು ಬಿಡಿಸಿ ತರಲು ಸುಗ್ರೀವಾದಿ ವಾನರ ಸೈನ್ಯದ ಸಮೇತ ಈಗಿನ ರಾಮೇಶ್ವರದ ಬಳಿಯಿರುವ ಧನುಷ್ಕೋಟಿಯ ಸಮುದ್ರತೀರಕ್ಕೆ ಬಂದನು. ಎದುರಿಗೆ ವಿಶಾಲವಾದ ಮಹಾಸಾಗರ. ರಾಮನಿಗೆ ಸೀತೆಯನ್ನು ರಾವಣನ ಸೆರೆಯಿಂದ ಬಿಡಿಸಲು ಈ ಮಹಾಸಮುದ್ರವನ್ನು ವಾನರ ಸೈನ್ಯದೊಂದಿಗೆ ಹೇಗೆ ದಾಟಬೇಕೆಂಬ ಚಿಂತೆ ಶುರುವಾಯಿತು. ಆ ಮಹಾಸಮುದ್ರವನ್ನು ದಾಟಲು ಸಹಾಯಮಾಡುವಂತೆ ರಾಮಚಂದ್ರ ಸಮುದ್ರರಾಜನನ್ನೇ ಪ್ರಾರ್ಥಿಸಿದನು. ಮೂರುದಿನ ಪ್ರಾರ್ಥಿಸಿದರೂ ಸಮುದ್ರರಾಜನು ಪ್ರತ್ಯಕ್ಷವಾಗದಿದ್ದಾಗ ಶ್ರೀರಾಮನು ಅತ್ಯಂತ ಕೋಪಾವೇಶದಿಂದ ಸಮುದ್ರವನ್ನೇ ತನ್ನ ಬಾಣಗಳಿಂದ ಇಂಗಿಸುವುದಾಗಿ ಬಿಲ್ಲನೆತ್ತಿದ.
ಆಗ ಭಯದಿಂದ ಸಮುದ್ರರಾಜನು ರಾಮನ ಮುಂದೆ ಪ್ರತ್ಯಕ್ಷನಾಗಿ ಸಮುದ್ರವನ್ನು ದಾಟಲು ಸಾಧ್ಯವಾಗುವಂತೆ ಸಲಹೆ ನೀಡುತ್ತಾನೆ. ವಾನರಸೈನ್ಯದಲ್ಲಿ ವಿಶ್ವಕರ್ಮನ ಮಗನಾದ ನೀಲನೆಂಬ ವಾನರನನ್ನು ತೋರಿಸಿ, ಆತನು ತನ್ನ ತಂದೆಯಂತೆಯೇ ಅರಮನೆ, ಸೇತುವೆ ಇತ್ಯಾದಿಗಳನ್ನು ಕಟ್ಟುವಲ್ಲಿ ಮಹಾನಿಪುಣ. ಆತನು ತನಗೆ ಸೇತುವೆಯನ್ನು ಕಟ್ಟಲಿ, ಅದನ್ನು ತಾನು ಮುಳುಗದಂತೆ ಧರಿಸುವೆನು ಎಂದು ಹೇಳಿ ಸಮುದ್ರರಾಜನು ಅದೃಶ್ಯನಾದನು.
ನೀಲ ಎಂಬ ಮೇಲ್ವಿಚಾರಣೆಯಲ್ಲಿ ಲಕ್ಷಗಟ್ಟಲೆ ವಾನರವೀರರು ಕಾಡಿಗೆ ಹೋಗಿ ಅನೇಕ ವಿಧವಾದ ಮರಗಳನ್ನು ಕಿತ್ತುತಂದು ಸಮುದ್ರಕ್ಕೆ ತುಂಬಿದರು. ಮಹಾಬಲರಾದ ವಾನರರು ಆನೆಯಗಾತ್ರದ ಕಲ್ಲುಗಳನ್ನು, ಪರ್ವತಗಳನ್ನು ಕಿತ್ತು ಸಾಗಿಸಿ ಸಮುದ್ರದಲ್ಲಿ ತುಂಬಿದರು. ವಾನರರು ತಂದು ಹಾಕಿದ ಬೃಹತ್ಮರಗಳನ್ನೂ, ಬಂಡೆಗಳನ್ನೂ, ಪರ್ವತಗಳನ್ನೂ ಜೋಡಿಸಿ ನೀಲನು ಸಾಗರಕ್ಕೆ ಮಹಾಸೇತುವೆಯನ್ನು ಕಟ್ಟಿದನು.
ಅಳಿಲು ಸೇವೆ
ಅಳಿಲೊಂದು ಬಂಡೆಯಷ್ಟು ಭಾರ ತನ್ನಿಂದ ಹೊತ್ತು ತರಲಾಗುವುದಿಲ್ಲ ಎಂಬ ಕಾರಣದಿಂದಾಗಿ ಸುಮ್ಮನೆ ಕುಳಿತು ನೋಡುತ್ತಾ ಕಾಲಹರಣ ಮಾಡುವುದಿಲ್ಲ. ತನ್ನಿಂದ ಹೊತ್ತು ತರಲು ಸಾಧ್ಯವಾಗಬಹುದಾದ ಮರಳನ್ನು ಸೇತುವೆಯ ನಿರ್ಮಾಣಕ್ಕೆ ಪೂರಕವಾಗಿ ಅದು ಜಮಾಯಿಸುತ್ತದೆ. ಹಾಗೆ ಜಮಾಯಿಸುವ ಆ ಅಳಿಲಿನ ರೀತಿ ಕೂಡಾ ವಿಚಿತ್ರ. ಮೈಯನ್ನು ನೀರಲ್ಲಿ ಒದ್ದೆಮಾಡಿಕೊಂಡು, ದಡದ ಮರಳಲ್ಲಿ ಹೊರಳಾಡಿ, ಸೇತುವೆ ಕಟ್ಟುವ ಸ್ಥಳಕ್ಕೆ ಹೋಗಿ ಅಳಿಲು ತನ್ನ ಮೈಯನ್ನು ಜಾಡಿಸಿ ಮೈಗೆ ಅಂಟಿಕೊಂಡ ಮರಳನ್ನು ಬೀಳಿಸುತ್ತದೆ. ಅದನ್ನು ನೋಡಿದ ರಾಮನಿಗೆ ಸಶಕ್ತನಾದ ಆಂಜನೇಯ ಮತ್ತು ಆತನ ಬಂಟರ ಭಕ್ತಿ ಮತ್ತು ಸೇವೆಗಿಂತ ಅಶಕ್ತವಾದ ಆ ಪುಟ್ಟ ಅಳಿಲಿನ ಭಕ್ತಿ ಮತ್ತು ಸೇವೆ ಹಿರಿದಾಗಿ ಕಾಣುತ್ತದೆ. ರಾಮನು ಪ್ರೀತಿಯಿಂದ ಅಳಿಲಿನ ಮೈಸವರಿ ತನ್ನ ಕೃತಜ್ಞತೆಯನ್ನು ಸಲ್ಲಿಸಿದನಂತೆ. ಅಂದಿನಿಂದ ರಾಮನ ಬೆರಳಿನ ಗುರುತು ಅಳಿಲುಗಳ ಬೆನ್ನಮೇಲೆ ಶಾಶ್ವತವಾಗಿ ಉಳಿದವಂತೆ. ಮಹತ್ತರವಾದ ಕಾರ್ಯ ಸಾಧಿಸುವಾಗ ಚಿಕ್ಕವರ ಸೇವೆಯೂ ಮುಖ್ಯ.
ನಾಮದ ಮಹಿಮೆ
ರಾಮನು ಸಮುದ್ರದಡದ ಒಂದು ಬಂಡೆಯ ಮೇಲೆ ಕುಳಿತು ನೋಡುತ್ತಿದ್ದಾನೆ, ಕಪಿಗಳು ಸೇತುವೆ ಕಟ್ಟಲು ಒಂದೊಂದೆ ಬಂಡೆತಂದು ನೀರಿಗೆ ಹಾಕಿದರೆ ಅದು ಮುಳುಗಿ ಹೋಗುತ್ತಿದೆ. ಕಡೆಗೆ ಕಪಿಗಳೆಲ್ಲ ಸೇರಿ ಒಂದು ಉಪಾಯ ಮಾಡಿದವು. ಪ್ರತಿ ಬಂಡೆಯ ಮೇಲೆಯು ಬಣ್ಣದಿಂದ ’ಶ್ರೀರಾಮ’ ಎಂದು ಬರೆದು, ಆ ಕಲ್ಲಿನ ಬಂಡೆಯನ್ನು ತಂದು ಸಮುದ್ರದಲ್ಲಿ ಹಾಕಿದವು, ಕಪಿಗಳು ಎಲ್ಲ ಬಂಡೆಗಳ ಮೇಲು ಶ್ರೀರಾಮ ನಾಮವನ್ನು ಬರೆದು ಒಂದರ ಪಕ್ಕ ಒಂದು ಜೋಡಿಸುತ್ತ ಹೋದಂತೆ ಸಿದ್ದವಾಗುತ್ತಿದೆ ರಾಮಸೇತು ದಡದಲ್ಲಿ ನೋಡುತ್ತ ಕುಳಿತ ರಾಮ ಆಶ್ಚರ್ಯದಿಂದ ನೋಡುತ್ತಿದ್ದಾನೆ, ಕಲ್ಲುಬಂಡೆ ನೀರಿನಲ್ಲಿ ಮುಳುಗುವುದು ಪ್ರಕೃತಿ ಸಹಜ ಆದರೆ ಇದೇನು ನನ್ನ ಹೆಸರನ್ನು ಬಂಡೆಯ ಮೇಲೆ ಬರೆದ ಮಾತ್ರಕ್ಕೆ ಅದು ಮುಳುಗದೆ ನೀರಿನಲ್ಲಿ ತೇಲುತ್ತದೆ. ಅವನಿಗೆ ಅಚ್ಚರಿ! ತಾನು ಒಮ್ಮೆ ಆ ರೀತಿ ರಾಮನಾಮ ಬರೆದು ನೀರಿನಲ್ಲಿ ಬಂಡೆಯನ್ನು ಹಾಕಿ ನೋಡುವಾಸೆ. ಆದರೆ ಸಂಕೋಚ. ಕಪಿಗಳೆಲ್ಲ ತನ್ನ ಬಗ್ಗೆ ಏನು ತಿಳಿದಾವು.
ರಾತ್ರಿಯಾಯಿತು, ಸೇತುವೆ ಕೆಲಸವನ್ನು ಅರ್ದಕ್ಕೆ ನಿಲ್ಲಿಸಿ ಎಲ್ಲರು ವಿಶ್ರಾಂತಿಗೆ ಹೋದರು. ರಾಮನಿಗೆ ತನ್ನ ಗುಡಾರದಲ್ಲಿದ್ದರು ಏನೊ ತೀರದ ಅಧಮ್ಯ ಕುತೂಹಲ. ಎಲ್ಲರು ಮಲಗಿದ ಮೇಲೆ ನಿದಾನಕ್ಕೆ ತಾನೊಬ್ಬನೆ ಎದ್ದ. ಸುತ್ತ ಮುತ್ತ ನೋಡಿದ. ಮೆಲ್ಲಗೆ ಸಮುದ್ರ ತೀರಕ್ಕೆ ಬಂದು ನಿಂತ. ಅಲ್ಲಿಯೆ ಕಪಿಗಳೆಲ್ಲ ಬಿಟ್ಟು ಹೋದ ಬಂಡೆ ಮತ್ತು ಬಣ್ಣಗಳಿದ್ದವು. ತಾನು ಕುಳಿತು ಒಂದು ಬಂಡೆಯ ಮೇಲೆ ’ಶ್ರೀರಾಮ’ ಎಂದು ಬರೆದ. ಆ ಬಂಡೆಯನ್ನು ಎತ್ತಿ ನಿದಾನಕ್ಕೆ ನೀರಿಗೆ ಬಿಟ್ಟ. ಆಗುವುದೇನು! ಬುಳುಕ್ ಎಂದು ಆ ಬಂಡೆ ನೀರಿನಲ್ಲಿ ಮುಳುಗಿ ಹೋಯಿತು !!!
ಚಕಿತನಾಗಿ ನಿಂತ ರಾಮ. ಇದೇನು ಚೋದ್ಯ . ತನ್ನ ಹೆಸರನ್ನು ಕಪಿಗಳು ಬರೆದ ಮಾತ್ರಕ್ಕೆ ತೇಲಿದ ಬಂಡೆ ಸ್ವತಃ ತಾನೆ ತನ್ನ ಹೆಸರನ್ನು ಬರೆದು ನೀರಿನಲ್ಲಿ ಹಾಕಿದಾಗ ಮುಳುಗಿಹೋಯಿತೇಕೆ ಎಂದು ಚಿಂತಿಸುತ್ತಿದ್ದಾನೆ. ಹಿಂದಿನಿಂದ ನಗುವ ಶಬ್ದ ಕೇಳಿಸಿತು. ಆಶ್ಚರ್ಯದಿಂದ ತಿರುಗಿ ನೋಡಿದ. ಅವನ ಭಕ್ತ ಆಂಜನೇಯ ನಿಂತಿದ್ದಾನೆ. ಸದಾ ರಾಮನ ರಕ್ಷಣೆಯ ಆತಂಕದಲ್ಲಿಯೆ ಇದ್ದ ಹನುಮ, ರಾಮನು ಒಬ್ಬನೆ ಬಂದಿದ್ದನು ಕಂಡು ಸದ್ದಿಲ್ಲದೆ ಬಂದು ಹಿಂದೆ ನಿಂತಿದ್ದ, ರಾಮನು ಮಾಡಿದ ಕೆಲಸ ಕಂಡು ನಗುತ್ತಿದ್ದಾನೆ. ರಾಮನು ಸಂಕೋಚದ ಮುಖ ಮಾಡಿ ನಿಂತ.
ಹನುಮ ನುಡಿದ “ಇದರಲ್ಲಿ ಆಶ್ಚರ್ಯವೇನು ಇಲ್ಲ ಪ್ರಭು, ಕಪಿಗಳು ಹಾಗು ನಾನು ಎಲ್ಲರು ನಿನ್ನ ಭಕ್ತರು. ನಿನ್ನ ನಾಮದ ಬಲವೊಂದೆ ಸಾಕು ಏನನ್ನಾದರು ಸಾದಿಸಬಲ್ಲೆವು ಎಂಬ ನಂಭಿಕೆ. ಹಾಗಿರುವಾಗ ಆ ನಂಭಿಕೆಯ ಬಲ , ನಿನ್ನ ನಾಮಕ್ಕೆ ಇರುವ ಬಲ ಬಂಡೆಯನ್ನು ತೇಲಿಸಿತು. ಆದರೆ ನಿನಗೆ ಇರುವುದು ಕುತೂಹಲ ಮಾತ್ರ , ನಿನ್ನ ಬಗ್ಗೆ ನಿನಗೆ ಭಕ್ತಿ ಇರಲು ಹೇಗೆ ಸಾದ್ಯ, ಆ ಭಕ್ತಿಯ ನಂಭಿಕೆಯ ಶಕ್ತಿ ಇಲ್ಲದ್ದರಿಂದ ಬಂಡೆ ನೀರಿನಲ್ಲಿ ಮುಳುಗಿತು ಅಷ್ಟೆ’ ರಾಮನು ನಗುತ್ತ ಒಪ್ಪಿಕೊಂಡ.
ಮೊದಲನೆಯ ದಿವಸ 14 ಯೋಜನ ಉದ್ದದ ಸೇತುವೆಯನ್ನು, ಎರಡನೆಯ ದಿವಸ 20 ಯೋಜನ, ಮೂರನೆಯ ದಿವಸ 21 ಯೋಜನ, ನಾಲ್ಕನೆಯ ದಿವಸ 22 ಯೋಜನ ಮತ್ತು ಐದನೆಯ ದಿವಸ 23 ಯೋಜನ, ಒಟ್ಟು 100 ಯೋಜನ ಉದ್ದದ ಸೇತುವೆಯನ್ನು ರಾಮೇಶ್ವರದಿಂದ ರಾವಣನ ಲಂಕಾಪುರಿಗೆ ವಾನರವೀರರು ಕಟ್ಟಿದರು! ಆಮೇಲೆ ಈ ಸೇತುವೆಯನ್ನು ರಾಮಲಕ್ಷ್ಮಣರು ಸಮಸ್ತ ವಾನರ ಸೈನ್ಯದೊಂದಿಗೆ ದಾಟಿ ರಾವಣನ್ನು ಕೊಂದು ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗುತ್ತಾರೆ.
ತ್ರೇತಾಯುಗದಲ್ಲಿ ಅಂದರೆ ಸುಮಾರು ಹದಿನೇಳು ಲಕ್ಷವರ್ಷಗಳಷ್ಟು ಹಿಂದೆ ನಡೆದ ರಾಮಾಯಣದಲ್ಲಿ ಭಾರತದ ದಕ್ಷಿಣದ ರಾಮೇಶ್ವರ ದ್ವೀಪದಿಂದ ರಾವಣನ ಲಂಕೆಗೆ ವಾನರವೀರರು ಕಟ್ಟಿರುವ ಸೇತುವೆ, ಕಲಿಯುಗದ ಇಂದಿನ ದಿನವೂ ನಮ್ಮ ಕಣ್ಣೆದುರಿಗೇ ಇದೆ ಎಂದರೆ ನಂಬುತ್ತೀರ! ಕೆಲವು ವರ್ಷಗಳ ಹಿಂದೆ ಅಮೆರಿಕದ ‘ನಾಸಾ’ ಬಾಹ್ಯಾಕಾಶ ಸಂಸ್ಥೆಯು ತೆಗೆದ ಉಪಗ್ರಹ ಚಿತ್ರಗಳು ಈ ಸೇತುವೆಯ ಇರುವಿಕೆಯನ್ನು ದೃಢಪಡಿಸಿವೆ. ಭಾರತದ ತಮಿಳುನಾಡಿನ ರಾಮೇಶ್ವರ ದ್ವೀಪದಿಂದ ಶ್ರೀಲಂಕಾದ ಮನ್ನಾರ್ದ್ವೀಪದ ನಡುವೆ ಹರಡಿರುವ ಪಾಕ್ಜಲಸಂಧಿಯಲ್ಲಿ ಬಂಡೆಕಲ್ಲುಗಳ ಸೇತುವೆಯೊಂದು(ಬಿಳಿ ಗೆರೆ) ಹಾದು ಹೋಗಿರುವ ದೃಶ್ಯವನ್ನು ನೀವು ಆ ಚಿತ್ರಗಳಲ್ಲಿ ಕಾಣಬಹುದು. ಶ್ರೀರಾಮನು ಕಟ್ಟಿಸಿದ್ದ ‘ಶ್ರೀರಾಮ ಸೇತುವೆ’ ಅಥವಾ ‘ನಳ ಸೇತುವೆ’ಗೆ ನಾಸಾದವರು ‘ಆಡಮ್ಸ್ಬ್ರಿಡ್ಜ್’ ಎಂದು ಹೆಸರಿಟ್ಟಿದ್ದಾರೆ! ಆದರೆ ನಮಗದು ಶ್ರೀರಾಮಸೇತುವೆ ಎಂದೇ ಚಿರಪರಿಚಿತ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.