ಬಳ್ಳಾರಿ: ವಿವೇಕ ತೋರಣ ಆಯೋಜಿಸಿರುವ ಬಳ್ಳಾರಿ ರಾಮೋತ್ಸವ ಕಾರ್ಯಕ್ರಮದ 5 ನೇ ದಿನದ ವಿಶೇಷ ಸಂಗೀತ ಮಹೋತ್ಸವದಲ್ಲಿ ಇಂದು ಹರಿದಾಸರ ಕೀರ್ತನೆಗಳನ್ನು ಬೆಂಗಳೂರಿನ ಹುಸೇನ್ಸಾಬ್ ಕನಕಗಿರಿಯವರು ಪ್ರಸ್ತುತ ಪಡಿಸಿದರು.
ತೀರ ಕಠಿಣ ತಪಸ್ಸಿನಿಂದ ಮಾತ್ರ ದೇವರನ್ನು ಒಲಿಸಿಕೊಳ್ಳುತ್ತೇವೆ ಎಂಬುದು ಸರಿಯಲ್ಲ. ಸರಳವಾದ ಭಕ್ತಿ ಮಾರ್ಗದ ಮೂಲಕ ದೇವರ ಕೃಪೆಗೆ ಪಾತ್ರರಾಗುವುದು ಸಾಧ್ಯ ಎಂದು ಹುಸೇನ್ ಸಾಬ್ ಹೇಳಿದರು.
ಶ್ಯಾಮಸುಂದರ ದಾಸರ ‘ಆರಂಭದಲಿ ನಮಿಪೆ ಬಾಗಿ ಶಿರವ’ ಎಂಬ ಗೀತೆಯನ್ನು ತಾವೇ ರಾಗ ಸಂಯೋಜಿಸಿ ಹಾಡಿ ಶುಭಾರಂಭ ನೀಡಿದರು. ನಂತರ ಕನಕದಾಸರ ‘ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೋ, ನೀ ದೇಹದೊಳಗೋ? ನಿನ್ನೊಳು ದೇಹವೋ ?’ ಎಂಬ ಜನಪ್ರಿಯ ಕೀರ್ತನೆ ಪ್ರಸ್ತುತಪಡಿಸಿದರು.
ಪುರಂದರ, ಕನಕರ ಬಗ್ಗೆ ವಿವರಿಸಿದ ಅವರು, ಕನಕದಾಸರು ಹರಿಭಕ್ತ ಪರಂಪರೆಯ ದ್ವೈತ, ಅದ್ವೈತ ಹಾಗೂ ವಿಶಿಷ್ಟಾದ್ವೈತಗಳ ತ್ರಿವೇಣಿ ಸಂಗಮವೆಂದು ಅಭಿಪ್ರಾಯಪಟ್ಟರು.
ಮಹಿಪತಿ ದಾಸರ ಕೃತಿ ಹಾಡಿದ ನಂತರ ಪುರಂದರದಾಸರ ಅಪರೂಪದ ಕೃತಿ ‘ಬ್ಯಾಡ ಒಬ್ಬರ ಮನೆಗೆ’ ಹಾಡು ನೆರೆದವರನ್ನು ಮಂತ್ರಮುಗ್ಧಗೊಳಿಸಿತು. ಶ್ರೀಪಾದ ರಾಯರ ಹರೇ ವೆಂಕಟ ಶೈಲ ವಲ್ಲಭ ಕೀರ್ತನೆಯೊಂದಿಗೆ ಮಂಗಳ ಹಾಡಿದರು.
ಹುಸೇನಸಾಹೇಬರು ಅನೇಕ ದಾಸರ ಪದಗಳಿಗೆ ತಾವೇ ರಾಗ ಸಂಯೋಜಿಸಿ ಹಾಡಿದ್ದು ಭಕ್ತರ ಮೈಮರೆಸಿತು. ಅನ್ನು ಮೋಹನ ಕಲಬುರ್ಗಿ ಹಾರ್ಮೊನಿಯಂ, ಪವಮಾನ ಅರಳಿಕಟ್ಟಿ ತಬಲಾ ಹಾಗೂ ಪ್ರಸನ್ನ ಬಂಗಾಳಿ ತಾಳವಾದ್ಯ ನುಡಿಸಿದರು.
ಹುಸೇನ್ಸಾಬ ಹಾಗೂ ಎಲ್ಲ ಕಲಾವಿದರಿಗೆ ಸನ್ಮಾನ ಮಾಡಲಾಯಿತು. ಸ್ವಾಮಿ ಚಿದ್ರೂಪಾನಂದ ಸರಸ್ವತಿ, ಡಾ. ಜಿ.ಆರ್. ವಸ್ತ್ರದ, ಡಾ.ಕೃಷ್ಣ, ಸೊಂತ ಗಿರಿಧರ, ಬೈರಾಪುರ ನಾರಾಯಣಶೆಟ್ಟಿ, ಕೆ.ಹೆಚ್. ಹರಿಕುಮಾರ, ಪ್ರಭುದೇವ ಕಪ್ಪಗಲ್ಲು ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.