News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಮೋದಿ ರವಾನಿಸಿದ ಸ್ಪಷ್ಟ ಸಂದೇಶಗಳು

Modi1ನೂತನ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಪುಟ ರಚಿಸಿರುವುದಷ್ಟೇ ಅಲ್ಲ, ಹೊಸ ಸಂದೇಶಗಳನ್ನೂ ರವಾನಿಸಿರುವುದು ಎಲ್ಲರೂ ಗಮನಿಸಬೇಕಾದ ಅಂಶ. ಬಹುಮತ ಪ್ರಾಪ್ತಿಯಾದಾಗ ಸಂಪುಟ ರಚಿಸುವುದು, ಖಾತೆಗಳನ್ನು ಹಂಚುವುದು ಎಲ್ಲ ಪ್ರಧಾನಿಗಳೂ ಮಾಡುವ ಸಾಮಾನ್ಯ ಕೆಲಸಗಳು. ಆದರೆ ಮೋದಿ ಸಂಪುಟ ರಚನೆಯಲ್ಲೂ ತಮ್ಮದೇ ಹಿರಿಮೆ ಹಾಗೂ ಭಿನ್ನತೆಯನ್ನು ಮೆರೆದಿದ್ದಾರೆ. ಕೇವಲ 46 ಸದಸ್ಯರ ಚಿಕ್ಕ ಚೊಕ್ಕ ಸಂಪುಟ ರಚಿಸಿ ಸರ್ಕಾರಿ ಖಜಾನೆಗೆ ಸಾಕಷ್ಟು ಕೋಟಿ ಹಣ ಉಳಿತಾಯ ಮಾಡಿದ್ದಾರೆ. ಸದ್ಯದಲ್ಲೇ ಸಂಪುಟ ವಿಸ್ತರಣೆ ಇರಬಹುದಾದರೂ ಮೋದಿ ಸಂಪುಟ `ಜಂಬೋಜೆಟ್’ ಸಂಪುಟ ಆಗಲಾರದು.

ಸಂಪುಟ ರಚನೆಗೆ ಮುನ್ನ ಹಿರಿಯರಾದ ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಶಾಂತಾ ಕುಮಾರ್, ಬಿ.ಸಿ. ಖಂಡೂರಿ, ಯಡಿಯೂರಪ್ಪ, ಕರಿಯ ಮುಂಡ ಅವರಿಗೆಲ್ಲ ಒಂದೊಂದು ಖಾತೆ ಸಿಗುವುದು ಗ್ಯಾರಂಟಿ ಎನ್ನುವುದು ಬಿಜೆಪಿ ನಾಯಕರ ನಿರೀಕ್ಷೆಯಾಗಿತ್ತು. ಮಾಧ್ಯಮಗಳೂ ಈ ಬಗ್ಗೆ ವದಂತಿ ಹರಡಿದ್ದವು. ಆದರೆ ಅವರಾರಿಗೂ ಮಂತ್ರಿ ಭಾಗ್ಯ ದೊರಕಿಲ್ಲ. 74ರ ವಯೋಮಿತಿ ದಾಟಿದ ಯಾರಿಗೂ ಮಂತ್ರಿಗಿರಿ ಸಿಕ್ಕಿಲ್ಲ. 74ರ ನಜ್ಮಾ ಹೆಪ್ತುಲ್ಲಾ ಹಾಗೂ 73ರ ಕಲ್‌ರಾಜ್ ಮಿಶ್ರಾ ಅವರೇ ಈಗ ಸಂಪುಟದ ಅತ್ಯಂತ ಹಿರಿಯರು.

ಮೋದಿ ಸಂಪುಟ ರಚನೆ ವೇಳೆ ವಂಶಾಡಳಿತಕ್ಕೂ ಅವರು ಕಡಿವಾಣ ಹಾಕಿರುವುದು ಗಮನಿಸಬೇಕಾದ ಇನ್ನೊಂದು ಮಹತ್ವದ ಅಂಶ. ಕುಟುಂಬ ರಾಜಕಾರಣದ ವಿರುದ್ಧ ಮೊದಲಿನಿಂದಲೂ ಟೀಕಿಸುತ್ತಲೇ ಬಂದಿದ್ದ ಮೋದಿ ತಮ್ಮ ಸಂಪುಟದಲ್ಲಿ ವಂಶಾಡಳಿತದ ಛಾಯೆ ಇರದಂತೆ ಎಚ್ಚರಿಕೆವಹಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಪುತ್ರ ದುಷ್ಯಂತ್, ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್‌ಸಿಂಗ್ ಅವರ ಪುತ್ರ ಅಭಿಷೇಕ್ ಸಿಂಗ್, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರೇಮಕುಮಾರ್ ಧುಮಲ್ ಅವರ ಪುತ್ರ ಅನುರಾಗ್ ಠಾಕೂರ್, ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರ ಪುತ್ರ ಜಯಂತ ಸಿನ್ಹಾ, ದಿವಂಗತ ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್, ಮೇನಕಾ ಗಾಂಧಿ ಪುತ್ರ ವರುಣ್ ಗಾಂಧಿ ಇವರೆಲ್ಲ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರೂ ಅವರನ್ನು ಸಚಿವರನ್ನಾಗಿಸದೆ ದೂರವೇ ಇಟ್ಟಿರುವುದು ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ. ದೇಶದಾದ್ಯಂತ ಕುಟುಂಬ ರಾಜಕಾರಣ ಅಸಹ್ಯ ಹುಟ್ಟುವಷ್ಟು ಒಂದು ಪಿಡುಗಾಗಿ ಬೆಳೆದಿರುವುದು ವರ್ತಮಾನದ ಕೆಟ್ಟ ವಿದ್ಯಮಾನ. ನೆಹರು ಕುಟುಂಬವಂತೂ ರಾಜಕಾರಣದಲ್ಲೇ ಮುಳುಗಿ ಎದ್ದಿದೆ, ಬಿಡಿ. ಆದರೆ ದೇವೇಗೌಡರ ಕುಟುಂಬ, ಎನ್‌ಟಿಆರ್ ಕುಟುಂಬ, ಕರುಣಾನಿಧಿ ಕುಟುಂಬ, ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಕುಟುಂಬ, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಕುಟುಂಬ, ಜಸ್ವಂತ್ ಸಿಂಗ್ ಕುಟುಂಬ, ಪ್ರಕಾಶ್ ಸಿಂಗ್ ಬಾದಲ್ ಕುಟುಂಬ, ಇಲ್ಲಿ ಕರ್ನಾಟಕದಲ್ಲಿ ಕತ್ತಿ ಕುಟುಂಬ, ಯಡಿಯೂರಪ್ಪ ಕುಟುಂಬ ರಾಜಕಾರಣವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯೆಂದೇ ಬಗೆದಿರುವುದು ಒಂದು ಕ್ರೂರ ವ್ಯಂಗ್ಯ.

ಮೋದಿ ರವಾನಿಸಿರುವ ಇನ್ನೊಂದು ಸಂದೇಶವಂತೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಂದು ಬ್ರಹ್ಮಾಸ್ತ್ರವೇ ಆಗಿದೆ. ಸಚಿವರಾದವರು ತಮ್ಮ ಆಪ್ತ ಸಹಾಯಕ, ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿ ಇತ್ಯಾದಿ ಹುದ್ದೆಗಳಿಗೆ ಸಂಬಂಧಿಕರು ಅಥವಾ ಕುಟುಂಬದ ಸದಸ್ಯರನ್ನು ನೇಮಿಸಿಕೊಳ್ಳುವಂತಿಲ್ಲ. ಆಯಾ ಇಲಾಖೆಗೆ ಸಂಬಂಧಿಸಿದ ಅರ್ಹ ಸಿಬ್ಬಂದಿಗಳನ್ನೇ ನೇಮಿಸಿಕೊಳ್ಳಬೇಕೆಂದು ಅವರು ಸುತ್ತೋಲೆ ಹೊರಡಿಸಿರುವುದು ಕೆಲವು ಸಚಿವರಿಗೆ ಅಷ್ಟೊಂದು ಆಪ್ಯಾಯಮಾನವೆನಿಸಿಲ್ಲದಿರಬಹುದು. ಆದರೆ ಭ್ರಷ್ಟಾಚಾರ ನಿಗ್ರಹ ದೃಷ್ಟಿಯಿಂದ ಇದೊಂದು ಉತ್ತಮ ನಡೆಯಂತೂ ಹೌದು. ಗುಜರಾತಿನಲ್ಲಿ 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಮೋದಿ, ತನ್ನ ಕುಟುಂಬದ ಸದಸ್ಯರು ಅಥವಾ ಬಂಧುಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಎಲ್ಲರೂ ಅವರವರ ಪಾಡಿಗೆ ತಮ್ಮ ಮಾಮೂಲಿ ಬದುಕು ಸಾಗಿಸಿಕೊಂಡಿದ್ದರು. ವಯಸ್ಸಾದ ತಾಯಿಯನ್ನೂ ಕೂಡ ಮೋದಿ ತಮ್ಮ ಸರ್ಕಾರಿ ನಿವಾಸಕ್ಕೆ ಆಮಂತ್ರಿಸಿರಲಿಲ್ಲ. ಆಗಾಗ ತಾವೇ ದೂರದಲ್ಲಿದ್ದ ತಾಯಿಯ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದು ಬರುತ್ತಿದ್ದರು.

ಮೊನ್ನೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಮೋದಿ ಕುಟುಂಬದ ಒಬ್ಬೇ ಒಬ್ಬ ಸದಸ್ಯರು ರಾಷ್ಟ್ರಪತಿ ಭವನದ ಆ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಮೋದಿ ತಮ್ಮ ಕುಟುಂಬದ ಸದಸ್ಯರ ಯಾವ ಪಟ್ಟಿಯನ್ನೂ ರಾಷ್ಟ್ರಪತಿ ಭವನದ ಕಾರ್ಯಾಲಯಕ್ಕೆ ಸಲ್ಲಿಸಿರಲಿಲ್ಲ. ಮೋದಿಯ 92 ರ ಇಳಿ ವಯಸ್ಸಿನ ತಾಯಿ ಹೀರಾಬೆನ್, ಸಹೋದರರಾದ ಪ್ರಹ್ಲಾದ್ ಮೋದಿ, ಸೋಮ ಭಾಯಿ ಮೋದಿ, ಪಂಕಜ್ ಮೋದಿ, ಪತ್ನಿ ಜಶೋದಾ ಬೆನ್ ಮತ್ತಿತರ ಕುಟುಂಬ ವರ್ಗದವರು ಮೋದಿ ಪ್ರಮಾಣ ವೀಕ್ಷಿಸಿದ್ದು ಅಹ್ಮದಾಬಾದ್‌ನ ತಮ್ಮ ಮನೆಯಲ್ಲಿ ಕುಳಿತು ಟಿವಿ ಮೂಲಕ. `ನೀವೇಕೆ ಆ ಕಾರ್ಯಕ್ರಮಕ್ಕೆ ದಿಲ್ಲಿಗೆ ಹೋಗಲಿಲ್ಲ?’ ಎಂದು ಪತ್ರಕರ್ತರು ಕೇಳಿದ್ದಕ್ಕೆ , `ನಮ್ಮಿಂದಾಗಿ ಮೋದಿಯವರ ವ್ಯಕ್ತಿತ್ವಕ್ಕೆ ಕಳಂಕ ತಗಲಬಾರದು’ ಎಂದು ಕುಟುಂಬದ ಸದಸ್ಯರು ತಣ್ಣಗೆ ಹೇಳಿದ್ದರು. ಆದರೆ ಮೋದಿ ಸಂಪುಟದ ಅನೇಕ ಸಚಿವರು ಪ್ರಮಾಣವಚನ ಸಮಾರಂಭಕ್ಕೆ ಊರಿನಿಂದ ತಮ್ಮ ಪತ್ನಿ ಹಾಗೂ ಮಕ್ಕಳನ್ನು ವಿಮಾನದಲ್ಲಿ ಹೇರಿಕೊಂಡು ದಿಲ್ಲಿಗೆ ಪ್ರಯಾಣಿಸಿದ್ದರು. ಅವರಾರಿಗೂ ತಾವೊಬ್ಬರೇ ಪ್ರಮಾಣವಚನ ಸಮಾರಂಭಕ್ಕೆ ಹೋದರೆ ಸಾಕು ಎಂದೆನಿಸಿರಲಿಲ್ಲ. ಹಾಗಂತ ಅವರ್‍ಯಾರೂ ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಆ ಸಮಾರಂಭಕ್ಕೆ ಕರೆದುಕೊಂಡು ಹೋಗುವ ಮನಸ್ಸು ಮಾಡಿರಲಿಲ್ಲ!

ವಂಶಾಡಳಿತ ಎನ್ನುವುದು ನಮ್ಮ ಇಡೀ ರಾಜಕೀಯ ವ್ಯವಸ್ಥೆಯನ್ನೇ ಹಾಳುಗೆಡವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟಾಚಾರ ಮೇರೆಮೀರಿ ಬೆಳೆಯುತ್ತಿರುವುದಕ್ಕೂ ಈ ವಂಶಾಡಳಿತವೇ ಕಾರಣ. ವಂಶಾಡಳಿತದಿಂದಾಗಿ ರಾಜಕೀಯ ಪಕ್ಷಗಳೂ ನೈತಿಕ ಮೌಲ್ಯ ಕಳೆದುಕೊಂಡು ಸೊರಗತೊಡಗಿವೆ. ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಆಡಳಿತದಲ್ಲಿ ಅವಕಾಶವೇ ದೊರೆಯದೆ ಅವರೆಲ್ಲ ಕಾರ್ಯಕರ್ತರಾಗಿಯೇ ಮೂಲೆಪಾಲಾಗುವ ದುಃಸ್ಥಿತಿ ಎಲ್ಲ ಪಕ್ಷಗಳಲ್ಲೂ ಕಂಡುಬರುತ್ತಿದೆ. ಯಾವುದೇ ಚುನಾವಣೆ ಎದುರಾಗಲಿ, ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ತಕ್ಷಣ ಮುಂಚೂಣಿಗೆ ಬರುವ ಹೆಸರೆಂದರೆ ಪ್ರಭಾವೀ ರಾಜಕೀಯ ನಾಯಕರ ಮಕ್ಕಳದು. ಶಿವಮೊಗ್ಗ ಕ್ಷೇತ್ರದಿಂದ ಈ ಬಾರಿ ಭರ್ಜರಿ ಬಹುಮತದಿಂದ ಗೆದ್ದಿರುವ ಯಡಿಯೂರಪ್ಪ ಅವರು ಮೊದಲು ಶಿಕಾರಿಪುರ ಶಾಸಕರಾಗಿದ್ದರು. ಈಗ ಆ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿ ಯಾರೆಂದರೆ ಅವರ ಪುತ್ರ ಬಿ.ಎಸ್. ರಾಘವೇಂದ್ರ! ಈ ಹೆಸರನ್ನು ಬಿಟ್ಟು ಆ ಸ್ಥಾನಕ್ಕೆ ಇನ್ನಾವ ಹೆಸರೂ ಕೇಳಿಬರುತ್ತಿಲ್ಲ. ಏಕೆಂದರೆ ಆ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಇನ್ನೊಬ್ಬ ಸಮರ್ಥ ಕಾರ್ಯಕರ್ತನನ್ನು ಬೆಳೆಸುವ ಕೆಲಸ ಮಾಡಿಲ್ಲ. ಕಳೆದ ಬಾರಿ ಮಂಗಳೂರು ಪದವೀಧರರ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಮೇಲ್ಮನೆಗೆ ಸ್ಪರ್ಧಿಸಿದ್ದ ಹಿರಿಯ ರಾಜಕಾರಣಿ ಡಿ.ಎಚ್. ಶಂಕರಮೂರ್ತಿ `ಇದು ನನ್ನ ಕೊನೆಯ ಚುನಾವಣೆ. ಮುಂದಿನ ಬಾರಿ ಸ್ಪರ್ಧಿಸುವುದಿಲ್ಲ. ಇನ್ನೊಬ್ಬ ಯೋಗ್ಯ ವ್ಯಕ್ತಿಗೆ ಅವಕಾಶ ಮಾಡಿಕೊಡುವೆ’ ಎಂದು ಘೋಷಿಸಿದ್ದರು. ಅವರ ಗಮನದಲ್ಲಿದ್ದ ಆ `ಯೋಗ್ಯ ವ್ಯಕ್ತಿ’ ಅವರ ಪುತ್ರನೇ ಎಂಬುದು ಮಾತ್ರ ರಹಸ್ಯವಾಗಿರಲಿಲ್ಲ. ಇನ್ನೊಬ್ಬ ಬಿಜೆಪಿಯ ಎಂಎಲ್‌ಸಿಯಂತೂ ಒಮ್ಮೆ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ , `ನೀವೆಲ್ಲ ಕಾರ್ಯಕರ್ತರು. ಪಕ್ಷಕ್ಕಾಗಿ ಸದಾಕಾಲ ದುಡಿಯುತ್ತಿರಬೇಕು. ನಾವಾದರೋ ನಾಯಕರು. ಚುನಾವಣೆಯಲ್ಲಿ ಗೆದ್ದು ಅಧಿಕಾರ ಸ್ಥಾನಗಳನ್ನು ಅನುಭವಿಸುತ್ತಿರಬೇಕು’ ಎಂದು ಅಪ್ಪಣೆ ಕೊಡಿಸಿದ್ದರು! ಅಂದರೆ ಕಾರ್ಯಕರ್ತರು ಕಾರ್ಯಕರ್ತರಾಗಿಯೇ ಸದಾಕಾಲ ಕೆಲಸ ಮಾಡುತ್ತಿರಬೇಕು. ಜಮಖಾನ ಹಾಸುವ, ಕಾಫಿ ಲೋಟ ಎತ್ತುವ, ಬಂಟಿಂಗ್ ಕಟ್ಟುವ, ಪೋಸ್ಟರ್ ಹಚ್ಚುವ ಅದೇ ಕೆಲಸಗಳಲ್ಲಿ ಧನ್ಯತೆ ಕಾಣುತ್ತಾ, ತಮ್ಮ ಬದುಕು ಸಾರ್ಥಕವಾಯಿತೆಂದು ಭಾವಿಸಬೇಕು ಎಂಬುದು ಈ ಮಹನೀಯರ ಒಟ್ಟಾರೆ ಅಭಿಪ್ರಾಯ!

ಆದರೆ ಎಲ್ಲಾ ರಾಜಕೀಯ ನಾಯಕರೂ ಹೀಗಿರುವುದಿಲ್ಲ ಎಂಬುದಕ್ಕೆ ಕೆಲವು ನಿದರ್ಶನಗಳು: ಬಿಜೆಪಿ ಹಿರಿಯ ನಾಯಕ ಆಡ್ವಾಣಿ, ಜೋಶಿ, ಕರ್ನಾಟಕದಲ್ಲಿ ದಕ್ಷ ಸಚಿವರಾಗಿದ್ದ ಡಾ. ವಿ.ಎಸ್. ಆಚಾರ್ಯ, ಶಾಸಕರಾಗಿದ್ದ ಡಾ.ಚಿತ್ತರಂಜನ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಇವರೆಲ್ಲ ರಾಜಕಾರಣಕ್ಕೆ ತಮ್ಮ ಮಕ್ಕಳನ್ನಾಗಲಿ, ಬಂಧುಗಳನ್ನಾಗಲಿ ಎಳೆದು ತರಲಿಲ್ಲ. ತಮ್ಮ ರಾಜಕೀಯ ಪ್ರಭಾವ ಬಳಸಿ ಅವರನ್ನು ಮೇಲಕ್ಕೆತ್ತಲಿಲ್ಲ. ಮಕ್ಕಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಲು ಎಂದೂ ಹವಣಿಸಲಿಲ್ಲ. ತಮ್ಮ ಮಕ್ಕಳನ್ನು ಅವರ ಪಾಡಿಗೆ ಸ್ವತಂತ್ರವಾಗಿ ಅವರಿಗಿಷ್ಟವಾದ ಉದ್ಯೋಗ ಹಿಡಿಯಲು ಬಿಟ್ಟು ಹೊಸ ಸಂಪ್ರದಾಯ ಹಾಕಿದರು. ಹಾಗಾಗಿಯೇ ಈ ಮಹನೀಯರ ಬಗ್ಗೆ ದೇಶದಲ್ಲಿ ಈಗಲೂ ಅಪಾರ ಗೌರವವಿದೆ. ಜನರು ಅವರನ್ನು ಮಾದರಿ ರಾಜಕಾರಣಿಗಳೆಂದು ಗುರುತಿಸುತ್ತಾರೆ. ನರೇಂದ್ರ ಮೋದಿ ಕೂಡ ಅದೇ ದಾರಿಯನ್ನು ಅನುಸರಿಸಿದ್ದಾರೆ.

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ರಾಜ್ಯ ಬಿಜೆಪಿಗೆ ಈ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲುವ ಅವಕಾಶವಿದೆ. ಈ ಸ್ಥಾನಕ್ಕೆ ಈಗ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಶಿವಮೊಗ್ಗದಲ್ಲಿ ಕಳೆದ ಚುನಾವಣೆಯಲ್ಲಿ ಸೋಲುಂಡಿರುವ ಈಶ್ವರಪ್ಪನವರನ್ನು ವಿಧಾನಸಭೆಯಿಂದ ಮೇಲ್ಮನೆಗೆ ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದೆಯೆಂದು ಸುದ್ದಿ. ವಿಧಾನಪರಿಷತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಮರ್ಥವಾಗಿ ಎದುರಿಸುವ ಒಬ್ಬ ನಾಯಕ ಬೇಕೆಂಬುದಕ್ಕೆ ಈ ನಿರ್ಧಾರವೆನ್ನಲಾಗುತ್ತಿದೆ. ವಿಧಾನಪರಿಷತ್ತಿನಲ್ಲಿ ಬಿಜೆಪಿಗೆ ಸಾಕಷ್ಟು ಸಮರ್ಥ ಸದಸ್ಯರಿದ್ದಾರೆ. ಅವರಲ್ಲಿ ಒಬ್ಬರನ್ನು ಪ್ರತಿಪಕ್ಷ ನಾಯಕನಾಗಿ ಏಕೆ ಬೆಳೆಸಬಾರದು? ಆ ಸ್ಥಾನಕ್ಕೆ ಈಶ್ವರಪ್ಪನವರೇ ಏಕೆ ಬೇಕು? ಈಶ್ವರಪ್ಪನವರು ಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ರಾಜ್ಯಾಧ್ಯಕ್ಷರಾಗಿ ಸಾಕಷ್ಟು ಅಧಿಕಾರವನ್ನು ಅನುಭವಿಸಿದ್ದಾರೆ. ಮತ್ತೆ ಈಗಲೂ ಅವರಿಗೇಕೆ ಅಧಿಕಾರದ ಸ್ಥಾನಮಾನ? ಅಥವಾ ಮೇಲ್ಮನೆ ಸದಸ್ಯರನ್ನಾಗಿ ಆಯ್ಕೆ ಮಾಡುವ ಮೂಲಕ ಅವರಿಗೆ ಇದು `ರಾಜಕೀಯ ಪುನರ್ವಸತಿ’ ಕಲ್ಪಿಸುವ ಹುನ್ನಾರವೆ? ಈಶ್ವರಪ್ಪನವರ ಬದಲಿಗೆ ಪಕ್ಷದ ಇನ್ನೊಬ್ಬ ಯೋಗ್ಯ ಹೊಸಬರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿ, ಅವರನ್ನೇಕೆ ರಾಜಕೀಯವಾಗಿ ಬೆಳೆಸಬಾರದು? ಹಾಗೆಂದು ಈಗ ಹಲವು ಬಿಜೆಪಿ ಕಾರ್ಯಕರ್ತರೇ ಮಾತಾಡಿಕೊಳ್ಳುತ್ತಿದ್ದಾರೆ.

ನೂತನ ಪ್ರಧಾನಿ ನರೇಂದ್ರ ಮೋದಿ ಮಾತ್ರ ಇವೆಲ್ಲಕ್ಕಿಂತ ಭಿನ್ನವಾಗಿ ಚಿಂತಿಸುತ್ತಾರೆ, ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಅವರ ಇದುವರೆಗಿನ ರಾಜಕೀಯ ಬದುಕೇ ಸಾಕ್ಷಿ. ಅದೊಂದು ತೆರೆದಿಟ್ಟ ಕನ್ನಡಿ. `ನ ಖಾವೂಂಗಾ, ನ ಖಾನೇ ದೂಂಗಾ’ (ನಾನು ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ) – ಇದು ಮೋದಿಯವರ ಸಂದೇಶ. ೨೦೦೯ರಲ್ಲಿ ಕರ್ನಾಟಕದ ಬಿಜೆಪಿ ಸಚಿವ ಸಂಪುಟದ ಸದಸ್ಯರಿಗೆ ಸುತ್ತೂರಿನಲ್ಲಿ ತರಬೇತಿ ಶಿಬಿರ ಏರ್ಪಡಿಸಿದ್ದಾಗ ಅಲ್ಲಿಗೆ ಮಾರ್ಗದರ್ಶನ ಮಾಡಲು ಬಂದಿದ್ದ ನರೇಂದ್ರ ಮೋದಿ ಹೇಳಿದ ಕೆಲವು ಮಾರ್ಮಿಕ ಮಾತುಗಳು:

* ದಿನವಿಡೀ ರಿಬ್ಬನ್ ಕಟ್ ಮಾಡುತ್ತಾ ಕುಳಿತರೆ ಅಭಿವೃದ್ಧಿ ಅಸಾಧ್ಯ. ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಮೈಮರೆಯಬೇಡಿ. ನಾನು ಇಷ್ಟು ದಿನದ ಮುಖ್ಯಮಂತ್ರಿ ಅವಧಿಯಲ್ಲಿ ಯಾವುದೇ ಸಭೆಯ ಮಧ್ಯೆ ಮೊಬೈಲ್‌ನಲ್ಲಿ ಮಾತನಾಡಿಲ್ಲ. ಅಪವಾದವೆನ್ನುವಂತೆ ಒಮ್ಮೆ ಅಂದಿನ ಪ್ರಧಾನಿ ವಾಜಪೇಯಿ ಅವರ ಕರೆ ಬಂದಾಗ, ಇನ್ನೊಮ್ಮೆ ಇಂದಿನ ಪ್ರಧಾನಿ ಮನಮೋಹನ ಸಿಂಗ್ ಅವರ ಕರೆ ಬಂದಾಗ ಮಾತ್ರ ಮೊಬೈಲ್‌ನಲ್ಲಿ ಮಾತನಾಡಬೇಕಾಯಿತು.

* ಮಂತ್ರಿಗಳಾದ ತಕ್ಷಣ ಯೋಜನೆಗಳನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸುವುದಲ್ಲ. ಆ ಯೋಜನೆ ಯಾವ ಹಂತದಲ್ಲಿದೆ, ಹೇಗೆ ಅನುಷ್ಠಾನವಾಗಿದೆ, ಯೋಜನೆಯಲ್ಲಿ ಎಲ್ಲೆಲ್ಲಿ ಲೋಪದೋಷಗಳಾಗಿವೆ ಎಂಬುದನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸುವುದು ಒಬ್ಬ ಸಮರ್ಥ ಮಂತ್ರಿಯ ಕೆಲಸ. ಯೋಜನೆಗಳನ್ನು ಜಾರಿಗೆ ತರುವುದಷ್ಟೇ ಮಂತ್ರಿಯ ಕೆಲಸವಲ್ಲ.

* ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸುವಾಗ ಇರುವ ಉತ್ಸಾಹವೇ ಅವುಗಳ ಪ್ರಗತಿ ಕುರಿತು, ಪೂರ್ಣಗೊಳಿಸುವುದರ ಕುರಿತೂ ಇರಲಿ.

* ನಮ್ಮಲ್ಲಿ ಪ್ರತಿಯೊಬ್ಬರ ವೈಯುಕ್ತಿಕ ಶೀಲವೂ ಮುಖ್ಯ. ಅದೇ ರೀತಿ ನಿಮ್ಮ ಕುಟುಂಬದ ಸದಸ್ಯರು, ನಿಮ್ಮ ಕಚೇರಿಯ ಸಿಬ್ಬಂದಿ ನಡವಳಿಕೆಗಳೂ ಅತ್ಯಂತ ಮುಖ್ಯ. ಇವರಲ್ಲಿ ಯಾರಾದರೂ ಒಬ್ಬರು ಅಕ್ರಮ ಎಸಗಿದರೆ ನಿಮ್ಮ ವ್ಯಕ್ತಿತ್ವಕ್ಕೇ ದೊಡ್ಡ ಪೆಟ್ಟು ಬೀಳುತ್ತದೆ.

* ಎಂದಿಗೂ ಮಂತ್ರಿಯಾಗಿzನೆಂದು ಬೀಗಬೇಡಿ. ನೀವು ಈ ಸ್ಥಾನಕ್ಕೆ ಬರಲು ಅಸಂಖ್ಯಾತ ಜನರ, ಸಾವಿರಾರು ಕಾರ್ಯಕರ್ತರ ತ್ಯಾಗ, ತಪಸ್ಸು ಹಾಗೂ ಪರಿಶ್ರಮ ಅಡಗಿದೆ. ಅವರ ನಿಸ್ವಾರ್ಥದಿಂದ ಕೂಡಿದ ಈ ಕೊಡುಗೆ ಎಂದಿಗೂ ನೆನಪಿನಲ್ಲಿರಲಿ.

ಮೋದಿ 12 ವರ್ಷಗಳ ಹಿಂದೆ ರಾಜಕೀಯ ಅಧಿಕಾರಕ್ಕೇರಿದ್ದಾಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಅವರಿಗೆ ಅಧಿಕಾರದ ಅಮಲು ಅಡರಿಲ್ಲ. ನಿಂತ ನೆಲವನ್ನು ಅವರೆಂದೂ ಮರೆತಿಲ್ಲ. ಅವರಿಗೆ ಸಾಥ್ ನೀಡಿರುವ ಅವರ ಸಚಿವ ಸಂಪುಟದ ಸದಸ್ಯರೂ ಹೀಗೆಯೇ ಇರಬೇಕಾದ ಅಗತ್ಯವಿದೆ. ಹೀಗೆಯೇ ಇರಬೇಕೆಂಬುದು ಮೋದಿಯವರು ರವಾನಿಸಿದ ಸಂದೇಶಗಳ ಪಾಠ. ಈ ಪಾಠಗಳು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬರಲಿವೆ? ಇದು ಈಗ ಎಲ್ಲರ ಕುತೂಹಲ.

ಮೋದಿ 12 ವರ್ಷಗಳ ಹಿಂದೆ ರಾಜಕೀಯ ಅಧಿಕಾರಕ್ಕೇರಿದ್ದಾಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಅವರಿಗೆ ಅಧಿಕಾರದ ಅಮಲು ಅಡರಿಲ್ಲ. ನಿಂತ ನೆಲವನ್ನು ಅವರೆಂದೂ ಮರೆತಿಲ್ಲ. ಅವರಿಗೆ ಸಾಥ್ ನೀಡಿರುವ ಅವರ ಸಚಿವ ಸಂಪುಟದ ಸದಸ್ಯರೂ ಹೀಗೆಯೇ ಇರಬೇಕಾದ ಅಗತ್ಯವಿದೆ. ಹೀಗೆಯೇ ಇರಬೇಕೆಂಬುದು ಮೋದಿಯವರು ರವಾನಿಸಿದ ಸಂದೇಶಗಳ ಪಾಠ. ಈ ಪಾಠಗಳು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬರಲಿವೆ? ಇದು ಈಗ ಎಲ್ಲರ ಕುತೂಹಲ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top