ಬಳ್ಳಾರಿ : ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಮತ್ತು ರೈತರ ಕೃಷಿ ಜೀವನ ಪುನಃಶ್ಚೇತನಗೊಳಿಸುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರು ನಡೆಸಿರುವ ಸರದಿ ಸತ್ಯಾಗ್ರಹವು ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬಳ್ಳಾರಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದರು ಕಳೆದ ನಾಲ್ಕು ದಿನಗಳಿಂದಲೂ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸಂಘದ ಧುರೀಣರು, ಸದಸ್ಯರು ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆ, ಬಳ್ಳಾರಿ ತಾಲ್ಲೂಕುಗಳಿಗೆ ಸೇರಿದ ನೂರಾರು ಗ್ರಾಮಗಳಲ್ಲಿ ಅವ್ಯಾಹತ ಹಾಗೂ ನಿರಂತರ ಮತ್ತು ಅಕ್ರಮ ಗಣಿಗಾರಿಕೆಯಿಂದಾಗಿ ಕೃಷಿ ಭೂಮಿ ನಾಶನವಾಗಿದೆ, ಪರಿಸರ ಹಾಳಾಗಿದೆ. ರಸ್ತೆಗಳು ಹದಗೆಟ್ಟು ಹೋಗಿವೆ. ಜನತೆಯ ಬದುಕೇ ದುಸ್ತರವಾಗಿದೆ. ಆದುದರಿಂದ ಗಣಿಗಾರಿಕೆ ನಡೆದ ಗ್ರಾಮಗಳಲ್ಲಿ ಪರಿಸರ ಪುನಃಶ್ಚೇತನ ಮತ್ತು ಕೃಷಿ ಮರುಸ್ಥಾಪನೆಗಾಗಿ ರಾಜ್ಯ ಸರ್ಕಾರವು 200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಗಣಿ ಬಾಧಿತ 3 ತಾಲ್ಲೂಕುಗಳು 40 ಸಾವಿರ ಎಕರೆಗೂ ಹೆಚ್ಚಿನ ಜಮೀನಿನಲ್ಲಿ ವ್ಯವಸಾಯ ನಡೆಸಿದ್ದ ರೈತರುಗಳು ಧೂಳಿನ ಬಾಧೆಗೆ ಪರಿಸರದ ಹಾನಿಗೆ ತುತ್ತಾಗಿ ಗಣಿ ಮಾಫಿಯಾದ ವಂಚನೆಯ ಜಾಲಕ್ಕೆ ಸಿಲುಕಿದ್ದಾರೆ. ಈ ರೈತರು ತಮ್ಮ ಕೃಷಿ ಜೀವನದ ಮರುಸ್ಥಾಪನೆಗಾಗಿ ತಮ್ಮದೇ ಆದ ಕೃಷಿ ಉತ್ಪನ್ನಗಳ ಸಹಕಾರೋದ್ಯಮದ ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರ ಸಂಘ ರಚಿಸಿಕೊಂಡಿದ್ದಾರೆ. 5018 ಜನ ಸದಸ್ಯರು ಇದರಲ್ಲಿದ್ದಾರೆ. ರಾಜ್ಯ ಸರ್ಕಾರವು ಗಣಿ ಬಾಧಿತ ಪ್ರದೇಶಗಳು ಕೃಷಿ ಜೀವನದ ಮರುಸ್ಥಾಪನೆಗೆ ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ.
ಸಂಘದ ಅಧ್ಯಕ್ಷ ಯು.ಮಹಾರುದ್ರಗೌಡ, ಕಾರ್ಯದರ್ಶಿ ಹೆಚ್.ಎಂ.ಶಿವಾನಂದಯ್ಯ ಸೇರಿದಂತೆ ಧುರೀಣರುಗಳಾದ ಸೂರ್ಯನಾಯ್ಕ್, ಆರ್ಮುಗಂ, ಸಣ್ಣ ಹನುಮಂತ, ಹೆಚ್.ವಿರೂಪಾಕ್ಷಗೌಡ, ಮಲ್ಲಿಕಾರ್ಜುನ್, ವಿ.ಮಂಜುನಾಥ್ ಮತ್ತು ಇತರರು ಪಾಲ್ಗೊಂಡಿದ್ದರು.
ನಾಳೆಯಿಂದ ಆಮರಣ ಉಪವಾಸ
ರಾಜ್ಯ ಸರ್ಕಾರ, ಜಿಲ್ಲಾ ಆಡಳಿತ ತಮ್ಮ ಬೇಡಿಕೆಯನ್ನು ಇಂದು ಸಂಜೆಯ ಒಳಗಡೆ ಈಡೇರಿಸದೇ ಹೋದಲ್ಲಿ, ನಾಳೆಯಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮಹಾರುದ್ರಗೌಡ, ಶಿವಾನಂದಯ್ಯ ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.