ಧಾರವಾಡ: ಎಲ್ಲಿಯವರೆಗೆ ಕನ್ನಡದ ಫ್ಯಾಶನ್ ಚಳವಳಿ ಹಾಗೂ ಸರಕಾರದ ಪ್ಯಾಕೇಜ್ಗಳ ಮೇಲೆ ನಾವು ಅವಲಂಬನೆ ಆಗಿರುತ್ತೇವೆಯೊ ಅಲ್ಲಿಯವರೆಗೆ ನಮ್ಮ ಕನ್ನಡ ಸಮೃದ್ಧವಾಗಿ ಬೆಳೆಯಲು ಅಗದು ಎಂದು ಕ.ವಿ.ವಿ. ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ರಂಗರಾಜ ವನದುರ್ಗ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಸಂಘದ ಸಂಸ್ಥಾಪಕರು ಹಾಗೂ ಸಂಸ್ಥಾಪನಾ ಕಾರ್ಯದರ್ಶಿ ದಿ. ಶ್ರೀ ರಾ. ಹ. ದೇಶಪಾಂಡೆ ಜನ್ಮದಿನದ ಸ್ಮರಣೆ ಕಾರ್ಯಕ್ರಮದಲ್ಲಿ ‘ಕನ್ನಡದ ಮುಂದಿರುವ ಆತಂಕಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಭಾಷಿಕ ನೆಲೆಯಲ್ಲಿ ಪ್ರಾಚೀನ ಪರಂಪರೆಗೆ ಇಂದು ತೊಂದರೆ ಬಂದಿದೆ. ಅದರ ನಿವಾರಣೆಗೆ ನಾವು ಅರಿವಿನ ಕಿಡಿಗಳನ್ನು ಹೊತ್ತಿಸಬೇಕಿದೆ. ಕನ್ನಡ ಓದಿದವರಿಗೆ ಉದ್ಯೋಗ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವ ಮಹಿಷಿ ವರದಿ ಜಾರಿಗೆ ಬಾರದಿರುವುದು, ಕನ್ನಡದ ಹಳ್ಳಿಗಳು ಗುಳೆ ಹೋಗುತ್ತಿರುವುದು, ಗುಡಿ ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕುರಿತು ಮಾರ್ಮಿಕವಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪ, ನಾವು ವಿಧಾನಸೌಧದಲ್ಲಿಯೇ ಕನ್ನಡಕ್ಕೆ ಆತಂಕ ಇರುವುದನ್ನು ಕಾಣುತ್ತೇವೆ. ಅಧಿಕಾರಿಗಳನ್ನು ಸರಕಾರ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಅವರ ತಾಳಕ್ಕೆ ತಕ್ಕಂತೆ ನಡೆಯುತ್ತಿರುವ ಸರಕಾರದ ಧೋರಣೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.
ಸಂಘದ ಕಾರ್ಯಾಧ್ಯಕ್ಷ ಡಾ.ಡಿ.ಎಂ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ ನಿರೂಪಿಸಿ ವಂದಿಸಿದರು.
ರಾ. ಹ. ದೇಶಪಾಂಡೆಅವರ ೧೫೬ ನೇ ಜನ್ಮದಿನದ ಶುಭ ಸಂದರ್ಭದಲ್ಲಿ ಸಂಘದಲ್ಲಿಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹಾಗೂ ವೇದಿಕೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಸುಗಮ ಸಂಗೀತ ಕಲಾವಿದೆ ಶಕ್ತಿ ಪಾಟೀಲ ಸಂಗೀತ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಅಲ್ಲಮಪ್ರಭು ಕಟಕೋಳ ತಬಲಾ ಸಾಥ್ ನೀಡಿದರು. ನಿಂಗಣ್ಣಕುಂಟಿ, ಜಿ. ಬಿ. ಹೊಂಬಳ, ಗಿರಿಜಾಶಂಕರ ಪಾಟೀಲ, ಕಾರಟಗಿ ಬಿ. ಕೆ. ಹೊಂಗಲ, ಎಸ್. ಡಿ. ರತ್ನಾಕರ, ಎಚ್. ಡಿ. ನದಾಫ, ಬಿ.ಎಸ್. ಶಿರೋಳ, ನಾಗರಾಜ ಶೆಟ್ಟಿ, ಮಾರ್ಕಂಡೇಯ ದೊಡಮನಿ, ಎಸ್. ಆರ್.ಮಾಳಗಿಮನಿ, ಎಸ್. ಕೆ.ಬಿದರಕಟ್ಟಿ, ಡಾ. ಸಂಜೀವ ಕುಲಕರ್ಣಿ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.