ಚಿಂವ್ ಚಿಂವ್..
ನನ್ನೊಲವಿನ ಮನುಜನೆ
ಹೇಗಿದ್ದೀಯಾ ? ಹೇಗೇ ನಡೆದಿದೆ ನಿನ್ನ ಆಧುನಿಕ ಜೀವನ? ಎಲ್ಲಿಗೆ ಬಂತು ಅಭಿವೃದ್ಧಿಯ ಕನಸು ? ನಿನ್ನ ಕನಸಿನ ದಾರಿಗೆ ಅಪರೂಪದ ಸಾಕ್ಷಿ ನಾನಾಗುವೆ ಎಂದು ಆಶಿಸಿದ್ದೆ. ಆದರೆ ದಾರಿಗುಂಟ ನೆಟ್ಟ ಗಿಡ ಮರಗಳ ಬುಡಕ್ಕೆ ಕೊಡಲಿ ಏಟು ಕೊಟ್ಟು ಬಿಟ್ಟಿರುವಿ, ಎಲ್ಲಿ ನೆಲೆಸಲಿ ಹೇಳು ? ವಿಳಾಸವೇ ಇಲ್ಲ ನೋಡು ನನಗೆ. ಅಷ್ಟಕ್ಕೂ ನಾನು ಯಾರು ಗೊತ್ತಾಯಿತೆ?
ನಾನು ಕಣೊ. ಗುಬ್ಬಚ್ಚಿ ಎಂದು ನನ್ನ ಹೆಸರು. ಚಿಂವ್ ಚಿಂವ್ ಎಂದು ಚಿಲಿಪಿಲಿಗುಟ್ಟಿ ಮಕ್ಕಳನ್ನು ಮುದಗೊಳಿಸುತ್ತಿದ್ದ ನಿರುಪದ್ರವಿ ಜೀವಿ. ಅದೇ ಗಿಡ, ಮರ, ರೆಂಬೆ, ಕೊಂಬೆ, ಬೇಲಿ, ಮುಳ್ಳು, ಮನೆಯ ಮೂಲೆಗಳು ಹೀಗೆ ಅಲ್ಲಲ್ಲಿ ನನ್ನ ಪುಟ್ಟ ನಿವಾಸ ಕಟ್ಟಿಸಿಕೊಳ್ಳುತ್ತಿದ್ದೆನಲ್ಲ, ನೆನಪಾಯಿತೆ ?
ಪಾಪ..! 30 40, 60 40 ಸೈಟ್, ಲೇಯೌಟ್, ಅಪಾರ್ಟ್ಮೆಂಟ್ ಲೆಕ್ಕದಲ್ಲಿ ನಿನ್ನ ಬದುಕು ಸಾಗಿದೆ. ಆಕಾಶಕ್ಕೆ ಮುತ್ತು ನೀಡುವ ಎತ್ತರದ ಬಹುಮಹಡಿ ಕಟ್ಟಡಗಳು, ಮೊಬೈಲ್ ಟಾವರ್ಗಳು, ಚತುಷ್ಪಥ, ಅಷ್ಟಪಥ, ಹೆದ್ದಾರಿ ಹೀಗೇ ಥಳ ಥಳ ಹೊಳೆಯುವ ನುಣ್ಣನೆಯ ಬೆಣ್ಣೆಯಂಥ ರಸ್ತೆಗಳು ನಿನ್ನ ಅಭಿವೃದ್ಧಿಯ ಕಥೆಯನ್ನು ಹೇಳುತ್ತವೆ ಬಿಡು. ಆದರೆ ನನ್ನ ಪಾಡೂ ಚೂರು ಕೇಳು ಮಾರಾಯ.
ಮಾಫಿಯಾದ ನಿನ್ನ ಉಸುಕು ಬೇಡ, ನಿನ್ನಷ್ಟು ದೊಡ್ಡ ಜಾಗವೂ ಬೇಡ, ನೀವೆಲ್ಲ ಉಪಯೋಗಿಸಿ ಬಿಟ್ಟ ಕಸ ಕಡ್ಡಿಗಳೇ ನನ್ನ ಮನೆಗೆ ಸಾಕು. ಮನೆ ಕಟ್ಟಲೊಂದು ತುಣುಕು ಜಾಗವನ್ನಾದರೂ ಬಿಡು. ಕೆರೆ ಕಟ್ಟೆಗಳಿಗೆಲ್ಲ ಸಮಾಧಿ ಕಟ್ಟಿರುವಿ, ಕೊಳವೆ ಬಾವಿಗೆ ಶರಣು ಹೋಗಿ, ನೀ ಏನೋ ಆರಾಮಾಗಿದೀಯಾ, ಆದರೆ ಗುಟುಕು ನೀರು ನನಗೆ ಸಿಗದಂತೆ ಮಾಡಿರುವ ನಿನಗೆ ಏನೂ ಅನಿಸುತ್ತಿಲ್ಲವೇ?
ತಾಯಂದಿರೇ ಸ್ವಲ್ಪ ಕೇಳಿ
ಅಕ್ಕಿ, ಜೋಳ, ಗೋಧಿಯನ್ನು ಆರಿಸುವುದನ್ನೇ ಮರೆತ ತಾಯಂದಿರೇ ನನ್ನ ಅಳಲು ಕೇಳಿಸದೇ? ಅಷ್ಟಾದರೂ ಸಿಗುತ್ತಿದ್ದ ಚಿಕ್ಕ ಪುಟ್ಟ ಹುಳು ಹುಪ್ಪಡಿ, ಕಾಳುಗಳನ್ನು ಹೆಕ್ಕೆ ತಿನ್ನುವ ಸಂಸ್ಕೃತಿಗೆ ತಿಲಾಂಜಲಿಯನ್ನೇ ನೀಡುತ್ತಿರುವುದು ಅದ್ಯಾವ ನ್ಯಾಯ ಹೇಳಿ ? ರೆಡಿಮೇಡ್ ಹಿಟ್ಟುಗಳ ಯುಗದಲ್ಲಿ ನನ್ನ ಹೊಟ್ಟೆಯ ಪಾಡು ನಿಮಗ್ಹೇಗೆ ಅರ್ಥವಾಗಬೇಕು ಅಲ್ಲವೇ?
ಅಂಚೆ ಚೀಟಿಗಳಲ್ಲಿ, ಶಾಲಾ ಪಠ್ಯ ಹೀಗೇ ಅಲ್ಲಲ್ಲಿ ನನ್ನ ಬಗ್ಗೆ ಗೌರವ, ಮೆಚ್ಚುಗೆ ವ್ಯಕ್ತವಾಗುತ್ತಿವೆ. ಕೆಲವು ಲ್ಯಾಬ್ಗಳು, ಸಂಶೋಧನಾ ಕೇಂದ್ರಗಳು ನನ್ನ ಬಗ್ಗೆ ವರದಿಯನ್ನು ಸಿದ್ಧಪಡಿಸಿವೆ. ಪಾಪ ಕೆಲವರು ವಿಡಿಯೊಗಳನ್ನು ಮಾಡಿ ಪಕ್ಷಿ ಪ್ರೇಮ ಮೆರೆಯುವುದನ್ನೂ ಕಂಡಿರುವೆ. ಇನ್ನೂ ಕೆಲವರು ತಮ್ಮ ತಾರಸಿಯ ಮೇಲೆ ಪಕ್ಷಿಧಾಮವನ್ನೇ ಸೃಷ್ಟಿಸಿದ್ದಾರೆ. ಅಲ್ಲಲ್ಲಿ ಕೆಲವರು ಕಿಟಕಿ, ಮನೆ ಬಾಗಿಲ ಬಳಿ ಪುಟ್ಟ ಬಟ್ಟಲಿನಲ್ಲಿ ಕಾಳು, ನೀರನ್ನು ನಮಗಾಗಿ ಮೀಸಲಿಟ್ಟು ಮಾನವೀಯತೆ ಮೆರೆಯುವ ಸಹೃದಯಿಗಳೂ ಇದ್ದಾರೆ. ಅಷ್ಟರ ಮಟ್ಟಿಗೆ ತುಸು ಸಮಾಧಾನ.
ನಿನ್ನಲ್ಲೊಂದು ಬಿನ್ನಹ
ಪ್ರೀತಿಯ ಮಾನವನೇ, ನಿನ್ನಲ್ಲೊಂದು ಅರಿಕೆ. ನನ್ನ ಬಗ್ಗೆ ನಿನ್ನ ಕೃತಕ ಆದರಕ್ಕಿಂತ ಸಹಜತೆಗೆ ಆದ್ಯತೆ ನೀಡು. ಪರಿಸರಕ್ಕೆ ಪೂರಕವಾಗಿ ನಿನ್ನ ಬದುಕನ್ನು ಬದಲಾಯಿಸಿಕೊ. ಅದರಿಂದ ನಿನ್ನ ನೈಜ ಅಭಿವೃದ್ಧಿಗೂ ಅದು ಪೂರಕ. ನಿನ್ನ ಮನೆಯಲ್ಲಿಟ್ಟ ಪುಟ್ಟ ಬಟ್ಟಲಿನ ನೀರು ಅದೆಷ್ಟು ಗುಬ್ಬಚ್ಚಿಗಳಿಗೆ ಗೊತ್ತಾಗಬೇಕು ಹೇಳು? ನೀನಿಟ್ಟ ನೀರಿನ ಮಾಹಿತಿ ಅವಕ್ಕೆ ತಿಳಿಯುವುದಾದರೂ ಹೇಗೇ? ಪರಿಸರ ಸಂರಕ್ಷಣೆಗೆ ಇಲಾಖೆಯೇ ಇದೆ. ಅವೆಷ್ಟೋ ಪುಸ್ತಕ, ಮ್ಯಾಗಜಿನ್ಗಳಿಗೆ ನಮ್ಮ ಕುಲವೇ ಆಹಾರವಾಗಿದೆ ಎನ್ನುವುದನ್ನು ಮರೆಯಬೇಡ. ಮೊದಲೇ ವಿನಾಶದ ಅಂಚಿನಲ್ಲಿರುವ ನಮ್ಮನ್ನು ಇನ್ನಿಲ್ಲವಾಗಿಸಬೇಡ ಪ್ಲೀಸ್.
ದಿನ ಮೀಸಲಿಗೆ ಋಣಿ
ನಮಗೂ ಬದುಕುವ ಆಸೆ ಇದೆ. ಪರಿಸರ ಸ್ನೇಹಿ ಬದುಕಿಗೆ ಎರವಾಗಬೇಡ. ವಿಶ್ವ ಗುಬ್ಬಚ್ಚಿ ದಿನ ಎಂದು ನನಗಾಗಿ ಒಂದು ದಿನ ಮೀಸಲಿಟ್ಟಿದ್ದಕ್ಕೆ ನಿನಗೆ ನಾನು ಋಣಿ. ಇದು ನನ್ನ ಸಂಭ್ರಮದ ದಿನವಾಗಲಿ. ಕೇವಲ ನನ್ನ ಸ್ಮರಿಸುವ ದಿನವಾದರೆ ನಾನು ಇದ್ದೂ ಇಲ್ಲದಂತೆಯೇ ಅಲ್ಲವೇ?
ನಿನ್ನ ಆಧುನಿಕ ಕನಸಿಗೆ ಅಡ್ಡಿಯಾಗುವ ಉದ್ದೇಶ ನನಗಿಲ್ಲ, ಮೊಬೈಲ್ನಲ್ಲಿ ಅನುರಣಿಸುವ ಪಿಸುಮಾತುಗಳ ಬಗ್ಗೆ ನನ್ನ ದೂರಿಲ್ಲ, ಆದರೆ ಆ ಕಿರಣಗಳು ನನ್ನ ಕುತ್ತಿಗೆಯನ್ನೇ ಕೊಯ್ಯುತ್ತಿವೆ ಕಣೊ. ಅರ್ಥ ಮಾಡಿಕೊ. ಹಗಲು, ರಾತ್ರಿ ಎನ್ನದೇ ಝುಮ್ ಎನ್ನುವ ಆ ಹರಿತವಾದ ಮಿಂಚು ನಮ್ಮ ಕುಲಕ್ಕೆ ಸಂಚಕಾರವನ್ನೇ ತಂದಿದೆ. ಜೀವನ ಸಾಕು ಸಾಕಾಗಿದೆ ನೋಡು.
ಕ್ಷಮಿಸು
ನೀನು ನನಗಾಗಿ ಮಾಡುತ್ತಿರುವ ಅವೆಷ್ಟೋ ಕಾರ್ಯಗಳ ಮಧ್ಯೆಯೂ ನಿನ್ನ ಅಪಸವ್ಯಗಳನ್ನೇ ಎತ್ತಿ ಹೇಳಿದ್ದೇನೆ. ನಿನ್ನ ಮೇಲಿನ ದ್ವೇಷದಿಂದಲ್ಲ, ಪ್ರೀತಿಯಿಂದ. ಪರಿಸರ ಉಳಿವಿಗೆ ಮುಂದಾಗು ನೀನು ಬದುಕುತ್ತೀಯಾ. ನೀನು ಬದುಕಿದರೆ ನಾನು ಬದುಕುವೆ.
ಅಂದ್ಹಾಗೆ ನೀರಿನ ದಾಹವಾಗಿದೆ, ಬಿಸಿಲು ನೆತ್ತಿ ಸುಡುತ್ತಿದೆ, ಹೊಟ್ಟೆ ತಾಳ ಹಾಕುತ್ತಿದೆ. ತಣ್ಣಗೆ ಮಲಗಲು ಗೂಡನ್ನೇ ಕಟ್ಟಿಲ್ಲ. ಎಲ್ಲಿ ಹೋಗಲಿ ?
-ಇಂತಿ ನಿನ್ನ
ಗುಬ್ಬಚ್ಚಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.