ಸೂರತ್ನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ 37 ವರ್ಷ ಜಿತೇಂದ್ರ ಕಳೆದ 12 ವರ್ಷಗಳಿಂದ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಪತ್ರವನ್ನು ಬರೆದು ಅವರಿಗೆ ಸಾಂತ್ವನ, ಗೌರವ ನೀಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ.
ಇದುವರೆಗೆ ಅವರು ದೇಶದಾದ್ಯಂತ ಇರುವ 3 ಸಾವಿರ ಹುತಾತ್ಮ ಯೋಧರ ಕುಟುಂಬಗಳಿಗೆ ಪತ್ರವನ್ನು ಬರೆದಿದ್ದಾರೆ.
‘ದೇಶಕ್ಕಾಗಿ ನೀವು ಮಾಡಿದ ತ್ಯಾಗಕ್ಕೆ ನಾನು ತಲೆಬಾಗುತ್ತೇನೆ. ನಿಮ್ಮ ಮಗನ ಬಲಿದಾನ ನಗಣ್ಯವಾಗಲಾರದು ಎಂದು ನಾನು ಭರವಸೆ ನೀಡುತ್ತೇನೆ’ ಎಂದು ಜಿತೇಂದ್ರ ಭೂಪೇಂದ್ರ ಜಾತ್ ಎಂಬ ಹುತಾತ್ಮ ಯೋಧನ ತಂದೆಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಈ ರೀತಿ ಹುತಾತ್ಮರ ಕುಟುಂಬಿಕರಿಗೆ ಸಾಂತ್ವನ ತುಂಬುವ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭಾವ ತುಂಬಿಸುವ ಹಲವಾರು ಪತ್ರಗಳನ್ನು ಅವರು ಬರೆದಿದ್ದಾರೆ.
ಕಾರ್ಗಿಲ್ ಯುದ್ಧದ ಬಳಿಕ ಪತ್ರ ಬರೆಯುವುದನ್ನು ಆರಂಭಿಸಿದ ಅವರು,’ಸೇನೆಯಲ್ಲಿರುವುದು ಅತ್ಯಂತ ಕಠಿಣ ಕೆಲಸ, ಹುತಾತ್ಮರನ್ನು ಗೌರವಿಸುವುದು ಈ ದೇಶದ ಕರ್ತವ್ಯ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಹಲವಾರು ಮಂದಿ ದುಃಖದಲ್ಲಿದ್ದಾರೆ. ಅವರ ಜೀವನಕ್ಕೆ ಮೋಡ ಆವರಿಸಿದೆ. ಅವರಿಗಾಗಿ ನಾವು ನೈತಿಕ ಕರ್ತವ್ಯವನ್ನು ಪಾಲಿಸಬೇಕಿದೆ’ ಎನ್ನುತ್ತಾರೆ.
ಹುತಾತ್ಮರ ಊರಿನ ಸ್ಥಳಿಯ ಮಾಧ್ಯಮಗಳಿಂದ ಅವರು ವಿಳಾಸ ಮತ್ತು ವಿವರಗಳನ್ನು ಪಡೆಯುತ್ತಾರೆ. ಅವರ ಬಳಿ 20 ಸಾವಿರಕ್ಕೂ ಅಧಿಕ ಹುತಾತ್ಮರ ವಿವರಗಳಿವೆ. ಪತ್ರ ಕಳುಹಿಸಲು, ಮಾಹಿತಿ ಸಂಗ್ರಹಿಸಲು ತಗುಲುವ ವೆಚ್ಚವನ್ನು ಇವರು ತಮ್ಮ ಕೈಯಿಂದಲೇ ಭರಿಸುತ್ತಾರೆ.
ಎಲ್ಲರಿಗೂ ದೇಶಕ್ಕಾಗಿ ಏನಾದರು ಮಾಡಬೇಕು ಎಂಬ ತುಡಿತವಿರುತ್ತದೆ, ಆದರೆ ಹೆಚ್ಚಿನವರಿಗೆ ಅದು ಸಾಧ್ಯವಾಗುದಿಲ್ಲ. ಆದರೆ ಆರ್ಥಿಕವಾಗಿ ಸಬಲತೆಯಿಲ್ಲದಿರುವ ಜಿತೇಂದ್ರ ಹುತಾತ್ಮರ ಕುಟುಂಬಕ್ಕೆ ಆರ್ಥಿಕ ನೆರವಿಗಿಂತಲೂ ಬಹುಮುಖ್ಯವಾದ ನೈತಿಕ ಸ್ಥೈರ್ಯ ತುಂಬುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.