ಸರ್ವೇಭ್ಯಃ ನಮೋ ನಮಃ
ಸುಸ್ವಾಗತಮ್…
ಸಂಸ್ಕೃತವನ್ನು ಕಲಿಯಬೇಕೆಂಬುದು ಹಲವರ ಆಸೆ. ಆದರೆ ಹೇಗೆ..? ಎಲ್ಲಿಂದ..? ಎಂಬುದು ತೋಚದೇ ತಮ್ಮ ಆಸೆಯನ್ನು ಸುಪ್ತವಾಗಿ ಇರಿಸಿಕೊಂಡವರೇ ಹೆಚ್ಚು. ಸಂಸ್ಕೃತವನ್ನು ಕಲಿಯಲು ಹಲವಾರು ಸಂಘಸಂಸ್ಥೆಗಳು ನೆರವನ್ನು ನೀಡುತ್ತಿವೆ. ಆದರೆ ಸಮಯ ಹಾಗೂ ಸಂಪರ್ಕದ ಅಭಾವ. ಹಾಗಾಗಿ ಜನಸಾಮಾನ್ಯರು ಸುಲಭವಾಗಿ ತಾವಿದ್ದಲ್ಲೇ ಸಂಸ್ಕೃತವನ್ನು ಕಲಿಯಲು ನಾನು ನಿರೂಪಿಸಿದ ಸಾಧನ ಆನ್ಲೈನ್ ಸಂಸ್ಕೃತ ಎಂಬ ತರಗತಿ. ಆನ್ಲೈನ್ ಸಂಸ್ಕೃತ ತರಗತಿಗಳ ಮೂಲಕ ಹಲವಾರು ಸಂಸ್ಕೃತಭಾಷೆಯನ್ನು ಸುಲಭವಾಗಿ ಕಲಿತಿದ್ದಾರೆ. ಸಂಸ್ಕೃತಭಾಷೆಯಯಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಉತ್ಸುಕರಾಗಿದ್ದಾರೆ. ಈ ಆನ್ಲೈನ್ ಸಂಸ್ಕೃತ ತರಗತಿಯನ್ನು ಎಲ್ಲರಿಗೂ ತಲುಪುವಂತೇ ಮಾಡುವುದು ನನ್ನ ಮಹತ್ವಾಕಾಂಕ್ಷೆ. ಅದಕ್ಕೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿದ್ದು ನ್ಯೂಸ್13 ಬಳಗದವರು. ಇಂದಿನಿಂದ ಸಂಸ್ಕೃತಭಾಷೆಯನ್ನು ಕಲಿಯಬೇಕೆಂಬವರಿಗೆ ನ್ಯೂಸ್ 13ನಲ್ಲಿ ಬರಲಿರುವ “ಮಮ ಭಾಷಾ ಸಂಸ್ಕೃತಮ್” ಎಂಬ ಸಂಸ್ಕೃತ ತರಗತಿಗಳ ಧಾರಾವಾಹಿ ಒಂದು ಸೂಕ್ತ ಹಾಗೂ ಅತ್ಯುತ್ತಮ ವೇದಿಕೆಯಾಗಲಿದೆ. ನಿಮ್ಮ ಮಹದಾಸೆಗೆ ನನ್ನಿಂದಾದ ಸಹಾಯವನ್ನು ಮಾಡುತ್ತಿದ್ದೇನೆ.. ನನ್ನ ಉದ್ದೇಶವಿಷ್ಟೇ.. ಸಂಸ್ಕೃತವನ್ನು ಕಲಿಯಬೇಕೆಂದು ಅಪಾರವಾದ ಹುಮ್ಮಸ್ಸಿರುವವರಿಗೆ ಅವಕಾಶವನ್ನು ಕಲ್ಪಿಸಬೇಕು.. ಅದಕ್ಕಾಗಿ ನನ್ನ ಪುಟ್ಟ ಪ್ರಯತ್ನ..
ಸರ್ವಭಾಷಾಣಾಂ ಜನನೀ ಸಂಸ್ಕೃತಭಾಷಾ. ಸಂಸ್ಕೃತ ಎಲ್ಲ ಭಾರತೀಯ ಭಾಷೆಗಳ ಜನನಿ. ಕೇವಲ ಭಾರತೀಯ ಭಾಷೆಗಳಲ್ಲಷ್ಟೇ ಅಲ್ಲ.. ಗ್ರೀಕ್, ಲ್ಯಾಟಿನ್ ಭಾಷೆಗಳಲ್ಲೂ ಸಂಸ್ಕೃತದ ಪದಗಳು ಹೇರಳವಾಗಿ ಸಿಗುತ್ತವೆ. ಇಂಗ್ಲೀಷಿನ್ ಮದರ್ ಮಾತಾ, ಫಾದರ್ ಪಿತಾ ಹೀಗೆ ಅನೇಕ ಶಬ್ದಗಳಲ್ಲೂ ಸಂಸ್ಕೃತದ ಸಾಮ್ಯತೆಯನ್ನು ನಾವು ಗಮನಿಸಬಹುದು. ಭಾಷಾಶಾಸ್ತ್ರವೆಂಬ ಪುಸ್ತಕದಲ್ಲಿ ಸಂಸ್ಕೃತಭಾಷೆ ಹಾಗೂ ವಿದೇಶಿ ಭಾಷೆಗಳಿಗಿರುವ ಸಾಮ್ಯತೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಆ ಪುಸ್ತಕ ಸಂಸ್ಕೃತ ಕಾಲೇಜುಗಳಲ್ಲಿ ಲಭ್ಯವಿರುತ್ತದೆ. ಬಿಡುವಿದ್ದಾಗ ಓದಬಹುದು. ಬಹಳ ಅತ್ಯದ್ಭುತವಾದ ಪುಸ್ತಕ. ಸಂಸ್ಕೃತ ಕೇವಲ ಒಂದು ಭಾಷೆಯಲ್ಲ ಅದು ವೈಜ್ಞಾನಿಕ ಭಾಷೆಯೂ ಕೂಡ. ಅದನ್ನು ಹೇಳಿದ್ದು ಭಾರತೀಯರಲ್ಲ. ಸಂಸ್ಕೃತಭಾಷೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ವಿದೇಶಿ ಸಂಸ್ಥೆಗಳು..!!
ಸಂಸ್ಕೃತವನ್ನು ನಾವೇಕೆ ಓದಬೇಕು..? ಇದು ಪ್ರಸ್ತುತ ವಿಚಾರವಾದಿಗಳೆಂಬುವವರ ಪ್ರಶ್ನೆ..!! ಸಂಸ್ಕೃತಭಾಷೆಯನ್ನು ಹಲವಾರು ವಿದೇಶಿ ವಿಶ್ವವಿದ್ಯಾಲಯಗಳೇ
ಬೋಧಿಸುತ್ತಿರುವಾಗ, ಸಂಸ್ಕೃತವನ್ನು ವಿದೇಶಿಯರೂ ಅಧ್ಯಯನ ಮಾಡುತ್ತಿರುವಾಗ ಭಾರತೀಯರಾದ ನಾವು ನಮ್ಮ ಸಂಸ್ಕೃತವನ್ನು ಏಕೆ ಅಧ್ಯಯನ ಮಾಡಬಾರದು..? ಮುಂದೊಂದು ದಿನ ವಿದೇಶಿಯರು ಬಂದು ನಮಗೆ ಸಂಸ್ಕೃತ ಕಲಿಸಲೆಂದೇ..? ನಮ್ಮ ಸಂಸ್ಕೃತಿ, ಭಾಷೆ, ವಿಚಾರಗಳ ಬಗ್ಗೆ ಉದಾಸೀನತೆಯನ್ನು ಪ್ರದರ್ಶಿಸುವವರು ಭಾರತೀಯರು ಮಾತ್ರ. ಇನ್ನೂ ಕೆಲವು ಅವಿವೇಕಿಗಳು ಇನ್ನೊಂದು ಹೆಚ್ಚೆ ಮುಂದೆ ಸಾಗಿ ಸಂಸ್ಕೃತ “ಮೃತಭಾಷೆ” ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನಿಜವಾಗಲೂ ಸಂಸ್ಕೃತ ಮೃತವಾಗಿಲ್ಲ, ಮೃತವಾಗಿರುವುದು ಅವರ ಮನಸ್ಥಿತಿ..!! ಅವರ ಮನಸ್ಥಿತಿ ದಾಸ್ಯದಿಂದ ಇನ್ನೂ ಹೊರಬಂದಿಲ್ಲವೆಂದು ಸುಮ್ಮನಾಗೋಣ. ಕತ್ತೆ ಬಲ್ಲುದೇ ಕಸ್ತೂರಿಯ ಪರಿಮಳವ..? ಅಂತವರನ್ನು ತಿರಸ್ಕರಿಸುವುದೇ ಉತ್ತಮ. ನಾಲ್ಕು ಜನರು ಮೃತಭಾಷೆ ಎಂದಿದ್ದಕ್ಕೆ ಸಂಸ್ಕೃತ ಮೃತಭಾಷೆಯಾಗಲಾರದು. ತನ್ನ ಅನುಪಮ ಸೌಂದರ್ಯದಿಂದ ಜಗತ್ತಿನ ದೇಶ, ಜನರನ್ನು ಸದಾ ಆಕರ್ಷಿಸುತ್ತಲೇ ಇರುವ ಸಂಸ್ಕೃತಭಾಷೆ ಎಂದಿಗೂ ಚಿರಸ್ಥಾಯಿಯಾಗಿ ನಿಲ್ಲಲಿದೆ. ಅದರಲ್ಲಿ ಅನುಮಾನವೇ ಇಲ್ಲ. ಸಂಸ್ಕೃತಭಾಷೆಯ ಪುನರುತ್ಥಾನವೂ ಆಗಲಿದೆ. ಅದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಸಂಸ್ಕೃತಪದಗಳನ್ನು ಯಾವುದೇ ಭಾರತೀಯ ಭಾಷೆಯಿಂದ ಪಕ್ಕಕ್ಕಿಟ್ಟು ನೋಡಲಿ. ಭಾಷಾ ಸೌಂದರ್ಯ ಜೊಳ್ಳಾಗಿ ಕಾಣಿಸುತ್ತದೆ..!! ಸಂಸ್ಕೃತಪದಗಳಿಗಿರುವ ಸೌಂದರ್ಯ, ಗಾಂಭೀರ್ಯ ಜಗತ್ತಿನ ಯಾವ ಭಾಷೆಗೂ ಇಲ್ಲ. ಇಂತಹ ಭಾಷೆ ಹುಟ್ಟಿದ್ದು ಭಾರತದ ನೆಲದಲ್ಲಿ.. ಇದು ನಮ್ಮ ಭಾಷೆ.. ನಮ್ಮ ಧರ್ಮಗ್ರಂಥಗಳಿರುವುದು ಸಂಸ್ಕೃತದಲ್ಲಿ, ನಮ್ಮ ಸಂಸ್ಕೃತಿಯಿರುವುದು ಸಂಸ್ಕೃತದಲ್ಲಿ, ನಮ್ಮ ದೇಶದ ಗರಿಮೆಯಿರುವುದು ಸಂಸ್ಕೃತದಲ್ಲಿ.. ದೇವಭಾಷೆಯೆಂದು ಹೊಗಳಿಸಿಕೊಂಡ ಜಗತ್ತಿನ ಏಕೈಕ ಭಾಷೆ ಸಂಸ್ಕೃತ.. ಇಡೀ ವಿಶ್ವವೇ ಓದುತ್ತಿರುವ, ಸಂಶೋಧಿಸುತ್ತಿರುವ, ಕಲಿಯಲು ಹಾತೊರೆಯುತ್ತಿರುವ ಭಾಷೆ ಸಂಸ್ಕೃತ..ಹೇಳಿ..ನಾವ್ಯಾಕೆ ಓದಬಾರದು..??
ತಲೆಯಲ್ಲಿ ಸ್ವಲ್ಪ ಬುದ್ಧಿಯಿದ್ದವರಾರೂ ಸಂಸ್ಕೃತಭಾಷೆಯ ವಿರುದ್ಧ ಮಾತನಾಡುವುದಿಲ್ಲ. ಸಂಸ್ಕೃತಭಾಷೆಯ ಅವಶ್ಯಕತೆ ಇಲ್ಲವೆಂದಾದರೆ ಕುವೆಂಪು , ಕಾರಂತ , ಬೈರಪ್ಪ , ಡಿ.ವಿ.ಜಿ ಮುಂತಾದ ಶ್ರೇಷ್ಠ ಕವಿಗಳ, ಲೇಖಕರ ಕೃತಿಗಳಿಗೂ ಬೆಲೆಯಿರುವುದಿಲ್ಲ. ಅಲ್ಲಿರುವವು ಸಂಸ್ಕೃತ ಭೂಯಿಷ್ಟಪದಗಳೆ…!! ಮಾತೃಭಾಷೆಯ ಸಮ್ಯಕ್ ಜ್ಞಾನಕ್ಕೆ ಸಂಸ್ಕೃತದ ಜ್ಞಾನ ತುಂಬಾ ಅಗತ್ಯ.. ಸಂಸ್ಕೃತದಿಂದಲೇ ಸಂಸ್ಕಾರ. ಮಾತೃಭಾಷೆ ಯಾವುದೇ ಇರಲಿ. ಸಂಸ್ಕೃತ ಅಧ್ಯಯನ ಕೂಡ ಅವಶ್ಯಕ. ಸಂಸ್ಕೃತವನ್ನು ಮಕ್ಕಳಿಗೆ ಕಲಿಸಿ. ನಮ್ಮ ದೇಶದ ಸಂಸ್ಕೃತಿಯ ರಾಯಭಾರಿಗಳು ಅವರೇ..!! ಮಕ್ಕಳಿಗೆ ಸುಭಾಷಿತಶ್ಲೋಕಗಳನ್ನು ಕಲಿಸಿ,ಸ್ತೋತ್ರಗಳನ್ನು ಕಲಿಸಿ. ಅವರ ಉಚ್ಚಾರಣೆ ಸುಸ್ಪಷ್ಟವಾಗುತ್ತದೆ. ಬೌದ್ಧಿಕ ಬೆಳವಣಿಗೆಯಾಗುತ್ತದೆ. ಅದು ಪೋಷಕರ ಕರ್ತವ್ಯ. ಎಳೆವೆಯಲ್ಲಿ ಮಕ್ಕಳು ಹಲವು ಭಾಷೆಗಳನ್ನು ಕಲಿಯಬಲ್ಲರು. ಮಾತೃಭಾಷೆ, ಇಂಗ್ಲೀಷ್, ಹಿಂದಿ ಜೊತೆಜೊತೆಗೆ ಸಂಸ್ಕೃತವನ್ನೂ ಕಲಿಸಿ. ಭಾಷಾಕಲಿಕೆಗೆ ಪರಿಮಿತಿಯನ್ನು ಹಾಕಬೇಡಿ. ಹೆಚ್ಚೆಚ್ಚು ಭಾಷೆಗಳನ್ನು ಕಲಿತಂತೇ ಮಕ್ಕಳ ಬೌದ್ಧಿಕಮಟ್ಟವೂ ಹೆಚ್ಚಾಗುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ನನ್ನ ಅನೇಕ ಮಿತ್ರರು ವಿದೇಶದಲ್ಲಿದ್ದಾರೆ. ವಿದೇಶಿ ನೆಲದಲ್ಲಿ ಭಾರತೀಯ ಎಂದು ಗೊತ್ತಾದ ಬಳಿಕ ಅಲ್ಲಿಯವರು ಕೇಳುವಪ್ರಶ್ನೆ ಸಂಸ್ಕೃತ ಗೊತ್ತಾ..? ಗೀತೆ ಗೊತ್ತಾ..? ಆಯುರ್ವೇದ ಗೊತ್ತಾ..? ಯೋಗ ಗೊತ್ತಾ..? ಧ್ಯಾನ ಗೊತ್ತಾ..? ಮುಂತಾದವು. ಯಾವುದೂ ಗೊತ್ತಿಲ್ಲವೆಂದರೆ ಆತ/ಆಕೆ ಭಾರತೀಯನೇ ಅಲ್ಲವೆಂಬ ದೃಷ್ಟಿಯಲ್ಲಿ ನೋಡುತ್ತಾರಂತೆ..!! ಭಾರತೀಯರಾದ ನಮಗೆ ಸಂಸ್ಕೃತ, ಯೋಗ, ಆಯುರ್ವೇದದ ಬಗ್ಗೆ ಕಿಂಚಿತ್ತಾದರೂ ಜ್ಞಾನ ಬೇಕಲ್ಲ..? ಮಧುರವಾದ ಹಣ್ಣನ್ನು ಕೈಯ್ಯಲ್ಲಿರಿಸಿಕೊಂಡು ಕೊಳೆತು ನಾರಿತ್ತಿರುವ ಹಣ್ಣಿಗೆ ಆಸೆ ಪಡುವವ ಪರಮಮೂರ್ಖನಲ್ಲವೇ..?
ಸಂಸ್ಕೃತ ಕಲಿಯಬೇಕೆಂಬ ಸಂಕಲ್ಪವಿದ್ದರೆ ಅದನ್ನು ಈಡೇರಿಸಿಯೇ ಸಿದ್ಧ ಎಂಬ ಮನಸ್ಥಿತಿ ನಮ್ಮದಾಗಬೇಕು. ಹಾರುವ ಶಕ್ತಿಯಿದ್ದರೂ ಹದ್ದು ಕುಳಿತಲ್ಲೇ ಕುಳಿತರೆ ಒಂದಿಂಚೂ ಚಲಿಸದು..!!
“ಗಚ್ಛನ್ ಪಿಪೀಲಿಕೋ ಯಾತಿ ಯೋಜನಾನಾಂ ಶತಾನ್ಯಪಿ |
ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ ||”
ನಿಧಾನವಾಗಿ ಚಲಿಸುವ ಇರುವೆ ತೆವಳುತ್ತಾ ನೂರು ಯೋಜನಗಳಷ್ಟು ನಡೆಯಬಲ್ಲುದಂತೆ.. ವೇಗವಾಗಿ ಹಾರುವ ಸಾಮರ್ಥ್ಯವಿರುವ ಹದ್ದು, ಕುಳಿತಲ್ಲೇ ಕುಳಿತರೆ ಒಂದು ಹೆಜ್ಜೆಯನ್ನು ಕೂಡ ಚಲಿಸಲಾರದಂತೆ. ಸಂಸ್ಕೃತವನ್ನು ಕಲಿಯಲು ನಾವು ಇರುವೆಗಳಂತಾಗೋಣ. ಇರುವೆಯಲ್ಲಿರುವ ಶ್ರದ್ಧೆ ಹಾಗೂ ಕಾರ್ಯೋನ್ಮಾದ ನಮ್ಮಲ್ಲಿರಲಿ. ತೆವಳಿದರೂ ಸರಿ ಅಂತಿಮ ಗುರಿ ನಮ್ಮದಾಗಿರಲಿ.
ಸಂಸ್ಕೃತಭಾಷೆ ಒಂದು ಸಾಗರ.. ಅಲ್ಲಿರುವ ವಿಷಯಗಳನ್ನು ಕಲಿತು ನಾನು ಸರ್ವಜ್ಞ ಎಂದವರು ಯಾರೂ ಇಲ್ಲ.. ನಾನೇನು ಮಹಾಜ್ಞಾನಿಯಲ್ಲ, ಆ ಹಮ್ಮೂ ನನಗಿಲ್ಲ. ನನಗೆ ತಿಳಿದಿದ್ದನ್ನು ನಿಮಗೆ ತಿಳಿಸುತ್ತೇನೆ. ಸರಳ ಸಂಸ್ಕೃತಕ್ಕೆ ನನ್ನ ಆದ್ಯತೆ. ಪಾಂಡಿತ್ಯವನ್ನು ಪ್ರದರ್ಶಿಸುವ, ಶಬ್ದರೂಪವ್ಯುತ್ಪತ್ತಿಯ ಬಗ್ಗೆ, ಅಷ್ಟಾಧ್ಯಾಯಿಯಲ್ಲಿರುವ ಸೂತ್ರದ ಬಗ್ಗೆ ಚರ್ಚಿಸುವ ಗೊಡವೆ ನನಗಿಲ್ಲ. ನನ್ನ ದೃಷ್ಟಿಯಲ್ಲಿ ಜನಸಾಮಾನ್ಯರೂ ಸಂಸ್ಕೃತವನ್ನು ಸರಳವಾಗಿ ಕಲಿಯಬೇಕೆಂಬುದಷ್ಟೇ..
ಶುಭಾಃ ಸಂತು ಪಂಥಾನಃ
ಲೇಖಕರ ಪರಿಚಯ :
ಸಂಸ್ಕೃತದಲ್ಲಿ ಪಡೆದದ್ದು ಸ್ನಾತಕೋತ್ತರ ಪದವಿ. ಬೆಂಗಳೂರಿನ ಒಂದು ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ. ಬಿಡುವಿನ ವೇಳೆಯಲ್ಲಿ ಸಂಸ್ಕೃತ ಹಾಗೂ ಸಂಸ್ಕೃತಿಯ ಪ್ರಸಾರದ ಕಾಯಕ. ಹಲವಾರು ದೇಶಿ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಿದ್ದೇನೆ. ಸಂಸ್ಕೃತ ಆನ್ಲೈನ್ ಕ್ಲಾಸುಗಳನ್ನು ನಡೆಸುತ್ತಿದ್ದೇನೆ. ಆಸಕ್ತರಿಗೆ ಸಂಸ್ಕೃತಸ್ತೋತ್ರ-ಭಗವದ್ಗೀತೆ, ಪೂಜಾಮಂತ್ರ, ಸಂಧ್ಯಾವಂದನೆ ಮುಂತಾದವುಗಳನ್ನು ಕಲಿಸುತ್ತಿದ್ದೇನೆ. ಸಂಸ್ಕೃತಭಾಷೆಯಲ್ಲಿರುವ ವಿಷಯಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಿಳಿಸಲು ಹಲವಾರು ಲೇಖನಗಳನ್ನು ಬರೆದಿದ್ದೇನೆ. ಸುರಭಾರತಿ ಪುನಃ ಸುಪ್ರತಿಷ್ಠಳಾಗಬೇಕೆಂಬುದೇ ನನ್ನ ಬಯಕೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :pradeepkasage@gmail.com
ಮೊಬೈಲ್ ನಂಬರ್ : 8050664384
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.