ಗಿನ್ನೆಸ್ ದಾಖಲೆಯನ್ನೂ ಮೀರಿ ಮುಂದುವರಿದ ಹನುಮಾನ್ ಚಾಲೀಸಾ ಮಹಾ ಜಪಯಜ್ಞ
• ಫೆ. 19 ಕ್ಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏಕಕಾಲಕ್ಕೆ ಸಹಸ್ರ ಸಹಸ್ರ ಕಂಠಗಳಿಂದ ಹನುಮಾನ್ ಚಾಲೀಸಾ ಪಠಣ
• ದತ್ತಾವಧೂತ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಮಹಾಸಂಕಲ್ಪ
• ಗಿರಿನಗರದ ಶ್ರೀಕಾರ್ಯಸಿದ್ಧಿ ಆಂಜನೇಯ ಟ್ರಸ್ಟ್ ಆಯೋಜನೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಮಹಾಯಜ್ಞಕ್ಕೆ ಸಿದ್ಧಗೊಳ್ಳುತ್ತಿದೆ. ಗಿರಿನಗರದ ಕಾರ್ಯಸಿದ್ಧಿ ಆಂಜನೇಯ ಟ್ರಸ್ಟ್ ವತಿಯಿಂದ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞವನ್ನು ಆಯೋಜಿಸಲಾಗಿದೆ.
ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ 12ನೇ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ನಡೆಯಲಿದೆ. ಫೆ. 19 ರಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಜಾತಿ, ಮತಭೇದಗಳನ್ನು ಮರೆತು ಸಹಸ್ರ ಸಹಸ್ರ ಮಂದಿ ಭಕ್ತರು ಭಾಗವಹಿಸುತ್ತಿದ್ದಾರೆ.
ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ ಮಹಾಸಂಕಲ್ಪ:
ಗೋಸ್ವಾಮಿ ತುಲಸೀದಾಸರು ರಚಿಸಿರುವ ಮಹಾಮಂತ್ರ ಹನುಮಾನ್ ಚಾಲೀಸಾ. ಈ ಮಹಾಮಂತ್ರದಲ್ಲಿ ಹನುಮಂತನ ಮಹಾಶಕ್ತಿಯನ್ನು ಬಣ್ಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹನುಮಂತನ ಮಹಾನ್ ಭಕ್ತರಾಗಿರುವ ಮೈಸೂರಿನ ಅವಧೂತ ದತ್ತಪೀಠದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ 2015 ರಲ್ಲಿ ವಿಶ್ವ ಶಾಂತಿಗಾಗಿ 1008 ಕೋಟಿ ಹನುಮಾನ್ ಚಾಲೀಸಾ ಜಪ ಯಜ್ಞ ನಡೆಸಲು ಸಂಕಲ್ಪಿಸಿದ್ದರು. ವಿಶೇಷವೆಂದರೆ ಸ್ವಾಮೀಜಿಗಳ ಈ ಮಹಾಸಂಕಲ್ಪ ಕೇವಲ ಒಂದೇ ವರ್ಷದಲ್ಲಿ ಈಡೇರಿದೆ. 1500 ಕೋಟಿ (15 ಬಿಲಿಯನ್) ಜಪ ಪೂರ್ಣಗೊಂಡಿದೆ.
ವಿಶೇಷವೆಂದರೆ 2015 ಜನವರಿ 31 ರಂದು ಸ್ವಾಮೀಜಿಯವರ ‘ಹನುಮಾನ್ ಚಾಲೀಸಾ ಮಹಾಯಜ್ಞ’ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದೆ. ಆಂಧ್ರಪ್ರದೇಶದ ತೆನಾಲಿಯ 60 ಎಕರೆ ಪ್ರದೇಶದಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ 1 ಲಕ್ಷ 28 ಸಾವಿರದ 918 ಮಂದಿ ಏಕಕಾಲಕ್ಕೆ ಹನುಮಾನ್ ಚಾಲೀಸಾ ಪಠಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಒಂದೇ ವೇದಿಕೆಯಲ್ಲಿ ಲಕ್ಷಾಂತರ ಮಂದಿ ಏಕಕಾಲಕ್ಕೆ 133 ಕೋಟಿ ಹನುಮಾನ್ ಚಾಲೀಸಾ ಜಪಿಸಿ ವಿಶ್ವದಾಖಲೆ ಬರೆದಿದ್ದರು.
‘ಪಂಚಭೂತಗಳನ್ನು ಪ್ರತಿನಿಧಿಸುವ ಪವನಸುತ ಹನುಮಂತನನ್ನು ಸ್ತುತಿಸುವ ಈ ಮಹಾಮಂತ್ರವನ್ನು ಪ್ರತಿದಿನ ಪಠಿಸಿದರೆ ವೈಯಕ್ತಿಕ ಜೀವನದಲ್ಲಿ ಯಶಸ್ಸು, ನೆಮ್ಮದಿ ಲಭಿಸುತ್ತದೆ. ಕಲಿಯುಗದಲ್ಲಿ ಹನುಮಂತ ಪ್ರಾರ್ಥನೆ, ಆರಾಧನೆ ಮಾಡಿದರೆ ಇಚ್ಛಿತಫಲ, ಕಾರ್ಯಸಿದ್ಧಿ ಶತಸಿದ್ಧ..’ ಎನ್ನುತ್ತಾರೆ ಪರಮಪೂಜ್ಯ ಶ್ರೀದತ್ತಾವಧೂತ ಗಣಪತಿ ಸಚ್ಚಿದಾನಂದ ಸ್ವಾಮೀಜಿ.
ಭಾರತದ ಮಾತ್ರವಲ್ಲ, ಅಮೆರಿಕಾದ ಡಲ್ಲಾಸ್, ಟೆಕ್ಸಾಸ್, ವೆಸ್ಟ್ ಇಂಡೀಸ್ನ ಕಾರಾಪಿಚ್ಚೈಮಾ ಸೇರಿದಂತೆ ವಿಶ್ವದ 68ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹನುಮಾನ್ ಚಾಲೀಸಾ ಮಹಾ ಜಪಯಜ್ಞ ನಡೆದಿದೆ. ಗಿನ್ನೆಸ್ ದಾಖಲೆಯನ್ನೂ ಮೀರಿ ಮುಂದುವರಿದಿರುವ ಈ ಮಹಾಯಜ್ಞ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಹೆಚ್ಚಿನ ಮಾಹಿತಿಗೆ: 90084-52605, 90029-22677 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.