ಬೆಂಗಳೂರು: ನೆರಳು ಇದೊಂದು ಪ್ರೀತಿಯ ಹಬ್ಬ. ಆಸಕ್ತರು ಪ್ರತಿದಿನವೂ ಪ್ರೀತಿಯಲ್ಲಿ ಬೀಳುವಂತೆ ಈ ಹಬ್ಬದ ಸಂಘಟಕರ ಆಹ್ವಾನ ಬೇರೆ. ಆದರೂ ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಪರಿಸರ ಸ್ನೇಹಿ ಹಬ್ಬ.
ಹೌದು. ಬೆಂಗಳೂರಿನಲ್ಲಿ ನಾಗರಿಕರೇ ಸೇರಿ ಆರಂಭಿಸಿದ ಹಬ್ಬವಿದು. ಆದರೆ ಇಲ್ಲಿ ಪ್ರೀತಿಸಬೇಕಿರುವುದು ನಮ್ಮ ನಿಮ್ಮೆಲ್ಲರ ಸುತ್ತಮುತ್ತಲಿರುವ ಮರಗಿಡಗಳನ್ನು ಎಂಬುದು ವಿಶೇಷ. ಅನೇಕ ಫ್ಲೈಓವರ್, ಬಹುಮಹಡಿ ಕಟ್ಟಡಗಳಿಗೆ ಅಸಂಖ್ಯ ಗಿಡಮರಗಳು ನಾಶವಾಗಿದ್ದನ್ನು ಸರಿದೂಗಿಸಿ ಪ್ರಕೃತಿ ಮಾತೆಯನ್ನು ಸಂರಕ್ಷಿಸುವ ಪ್ರಯತ್ನವೇ ನೆರಳು ಧ್ಯೇಯ.
ನೆರಳು ಎಂಬುದು ಸಾಮೂಹಿಕ ಕಲ್ಪನೆಯ ಫಲ. ಈ ಹಬ್ಬ ಆಚರಿಸುವ ಸಂಘಟಕರಲ್ಲಿ ಯಾವುದೇ ಮೇಲು ಕೀಳು ಮನೋಭಾವ, ಹುದ್ದೆಗಳ ಲೆಕ್ಕಾಚಾರವಿಲ್ಲ. ಇಲ್ಲಿ ಎಲ್ಲರೂ ಸಮಾನರು. ನಮ್ಮ ನಡುವೆ ಯಾವುದೇ ವಿರೋಧಗಳಿಲ್ಲ, ಈ ವರ್ಷ ಹಬ್ಬವನ್ನು ಆಚರಿಸುವುದು ಹೇಗೆ ಎಂದ ನಿರ್ಣಯಿಸಿದವರೇ ಮುಂದಿನ ವರ್ಷವೂ ನಿರ್ಣಯಿಸುತ್ತಾರೆ ಎಂದಿಲ್ಲ. ಪರಿಸರ ಪ್ರೀತಿಯುಳ್ಳ ಯಾರೇ ನೂತನ ಕಲ್ಪನೆ ಒದಗಿಸಿದರೆ ಸ್ವಾಗತವಿದೆ ಎನ್ನುತ್ತಾರೆ ಈ ಹಬ್ಬದ ಸಂಘಟಕರಲ್ಲಿ ಒಬ್ಬರಾದ ರಾಜಿ ಸುಂದರ್ಕೃಷ್ಣನ್.
ಇದೇ ಫೆ.18 ಮತ್ತು 19 ರಂದು ಈ ಹಬ್ಬವನ್ನು ಆಯೋಜಿಸಲಾಗಿದೆ. ಹಬ್ಬಕ್ಕೂ ಒಂದು ತಿಂಗಳು ಮೊದಲೇ ಇದರ ಕಾರ್ಯಕರ್ತರು ಸಿದ್ಧತೆಗೆ ಮುಂದಾಗುತ್ತಾರ. 200ಕ್ಕೂ ಹೆಚ್ಚು ಜನ ಸ್ವಯಂ ಸೇವಕರನ್ನು ಈ ನೆರಳು ಬಳಗ ಹೊಂದಿದೆ.
ಕಾರ್ಯಾಗಾರ, ನೃತ್ಯ ಮತ್ತು ಸಂಗೀತ, ಚಿತ್ರಕಲೆಗಳ ಮೂಲಕ ಪರಿಸರ ಜಾಗೃತಿಯನ್ನು ನಗರದಾದ್ಯಂತ ಮೂಡಿಸಲಾಗುತ್ತದೆ. ಭಾರತೀಯ ಸಂಗೀತ ಹಾಗೂ ನೃತ್ಯಗಳು ಸಾಮಾನ್ಯವಾಗಿ ಪರಿಸರವನ್ನು ಆರಾಧಿಸುವ ಸಿದ್ಧಾಂತವನ್ನೇ ಒಳಗೊಂಡಿರುವುದು ಗಮನಾರ್ಹ. ಕಾರ್ಯಾಗಾರಗಳು ಕಲೆ ಹಾಗೂ ವಿಜ್ಞಾನವನ್ನು ಆಧರಿಸಿರುತ್ತವೆ.
ಕಳೆದ ಹಬ್ಬಗಳಿಗಿಂತ ಈ ಬಾರಿ ಟ್ರೀ ವಾಕ್ ವಿಶೇಷ. ಇದು ಹೆಚ್ಚು ಜನರನ್ನು ತನ್ನತ್ತ ಗಮನಸೆಳೆಯಬಹುದು ಎಂಬ ಆಶಯವಿದೆ. ವಿಶೇಷವಾಗಿ ಐಟಿ ಕಂಪನಿಗಳು ಇರುವ ಪ್ರದೇಶದಲ್ಲಿ ಟ್ರೀ ವಾಕ್ ಇದೆ. ವಿಜ್ಞಾನಿಗಳು, ಪರಿಸರ ತಜ್ಞರು ಹೀಗೇ ವಿವಿಧ ವಿಷಯಗಳ ಆಳವಾದ ಜ್ಞಾನ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳೂ ಇದರಲ್ಲಿ ಭಾಗವಹಿಸುವುದು ವಿಶೇಷ ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ಶಾಲೆಯ ಮಕ್ಕಳಿಗೂ ಕೂಡಾ ಪ್ರಕೃತಿಯ ವೈಶಿಷ್ಟ್ಯವನ್ನು ತಿಳಿಸಿಕೊಡುವ ಯೋಜನೆಯನ್ನು ಹೊಂದಿದ್ದು, ಪೂರಕ ಕಿಟ್ಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರನ್ನೂ ಈ ಹಬ್ಬದಲ್ಲಿ ಪರೋಕ್ಷವಾಗಿ ಸೇರಿಸಿಕೊಳ್ಳಲಾಗುತ್ತದೆ.
ಪರಿಸರವನ್ನು ಪ್ರೀತಿಸುವ ಈ ಅವಕಾಶವನ್ನು ಪ್ರೇಮಿಗಳು ಬಳಸಿಕೊಳ್ಳಬಹುದು ಎಂದು ಸುಂದರನ್ ಅವರು ಕೋರಿದ್ದಾರೆ. ಈ ರೀತಿಯ ಹಬ್ಬ ಇತರರಿಗೂ ಮಾದರಿಯಾಗಲಿ ಎಂಬುದೇ ಎಲ್ಲರ ಆಶಯ.
ಚಿತ್ರ ಕೃಪೆ : ರಾಜೆ ಸುಂದರಕೃಷ್ಣನ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.