News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಪರಿವರ್ತನೆಗಾಗಿ ಮತದಾರರು ನೀಡಿದ ಸುವರ್ಣಾವಕಾಶ

ಮೇ 16ಕ್ಕೆ ಮುನ್ನ ಎಲ್ಲರೂ ಅದನ್ನು ಅಲೆ ಎಂದು ಕರೆದಿದ್ದರು. ಆದರೆ ಮೇ 16ರ ಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡ ಸುನಾಮಿ ಎಂಬುದು ಎಲ್ಲರಿಗೂ ಅರಿವಾಗಿತ್ತು. ಈ ಸುನಾಮಿಯಲ್ಲಿ ಕೊಚ್ಚಿಹೋದವರೆಷ್ಟೋ ಈಗಲೂ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ! `ದೇಶದಲ್ಲಿ ಯಾವ ಅಲೆಯೂ ಇಲ್ಲ, ಅದೆಲ್ಲಾ ಮಾಧ್ಯಮಗಳ ಸೃಷ್ಟಿ’ ಎಂದು ಉಡಾಫೆ ಮಾಡುತ್ತಿದ್ದವರೂ ಈ ಸುನಾಮಿಯಲ್ಲಿ ಕೊಚ್ಚಿ ಹೋದರು. ಸುನಾಮಿಯ ಹೊಡೆತಕ್ಕೆ ಸಿಕ್ಕಿದ ಅವರು ಎಲ್ಲಿಗೆ ಹೋದರೋ ಏನಾದರೋ, ಮತ್ತೆ ಜೀವಂತವಾಗಿ ಎದ್ದು ಬರುತ್ತಾರೋ ಯಾವುದೂ ನಿಕ್ಕಿ ಇಲ್ಲ. ಕೆಲವರಂತೂ ಅಲೆಯ ವಿರುದ್ಧ ಭಂಡತನದ ಧೈರ್ಯ ತೋರಿ ಮಾತನಾಡುತ್ತಿದ್ದವರು ಉಸಿರು ಬಿಗಿ ಹಿಡಿದವರಂತೆ ಈಗ ಮೌನವ್ರತಕ್ಕೆ ಶರಣಾಗಿದ್ದಾರೆ. ಉಸಿರು ತೆಗೆಯುವುದಕ್ಕೂ ಅವರಿಗೀಗ ಭಯ!

Modi

ಈ ಅಲೆಯಲ್ಲಿ ತೇಲಿ ಮೇಲೆದ್ದವರೂ ಸಾಕಷ್ಟು ಮಂದಿ. ಚುನಾವಣೆಗೆ ಮುನ್ನ ಅಷ್ಟಾಗಿ ಮತದಾರರಿಗೆ ಪರಿಚಯವೇ ಇರದಿದ್ದ ಕೆಲವರು ಚುನಾವಣೆಗೆ ಸೀಟು ಗಿಟ್ಟಿಸಿ ಸ್ಪರ್ಧಿಸಿದಾಗ ಅವರ ಗೆಲುವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಠೇವಣಿ ಉಳಿದರೆ ಅವರ ಪುಣ್ಯ ಎಂದೇ ಕೆಲವರು ನಂಬಿದ್ದರು. ಆದರೆ ಈ ಪ್ರಚಂಡ ಅಲೆ ಅಂಥವರನ್ನೂ ದಡ ಸೇರಿಸಿದೆ. ಜೀವಮಾನದಲ್ಲಿ ಲೋಕಸಭಾ ಸದಸ್ಯನಾಗುತ್ತೇನೆಂದು ಕನಸು ಕೂಡ ಕಾಣದಿದ್ದವರು ಈಗ ಲೋಕಸಭಾ ಸದಸ್ಯರಾಗಿ ಗೆಲುವಿನ ನಗೆ ಬೀರುತ್ತಿರುವುದು ಈ ಪ್ರಚಂಡ ಅಲೆಯ ಪರಿಣಾಮ. ನಿಜಕ್ಕೂ ಈ ಅಲೆ ಮಾಡಿದ ಪವಾಡ ನಿರೀಕ್ಷೆಗೂ ಮೀರಿದ್ದು.

`ಅಮಿತ್ ಷಾ ಅವರೇ, ನೀವು ಬಿಜೆಪಿಯ ಉತ್ತರಪ್ರದೇಶ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿದ್ದೀರಿ. ಅಭಿನಂದನೆಗಳು. ನಿಮ್ಮ ಪ್ರಕಾರ ಪಕ್ಷಕ್ಕೆ ಎಷ್ಟು ಸ್ಥಾನಗಳು ಬರಬಹುದು?’

– ಹೀಗೆಂದು ಕೆಲವು ದಿನಗಳ ಹಿಂದೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಆಪ್ತ ಅಮಿತ್ ಶಾಗೆ ಹೊಸದಿಲ್ಲಿಯಲ್ಲಿ ಸುದ್ದಿ ವಾಹಿನಿಯೊಂದು ಪ್ರಶ್ನೆ ಕೇಳಿತ್ತು. ಅದಕ್ಕೆ ಅವರು ನೀಡಿದ ಉತ್ತರ – ` ನಮ್ಮ ಪಕ್ಷಕ್ಕೆ 50-55 ಸ್ಥಾನಗಳು ಬರಬಹುದು’ ಎಂದು. ಆದರೆ ಮೇ 16ರಂದು ಫಲಿತಾಂಶ ಪ್ರಕಟವಾದಾಗ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ದೊರಕಿದ್ದು ಬರೋಬ್ಬರಿ 71 ಸ್ಥಾನಗಳು. ಆ ರಾಜ್ಯದಲ್ಲಿ ಆಡಳಿತದಲ್ಲಿದ್ದದ್ದು ಸಮಾಜವಾದಿ ಪಕ್ಷ. ಆದರೆ ಅಲ್ಲಿ ಆ ಪಕ್ಷವೂ ಸೇರಿದಂತೆ ಪ್ರತಿಪಕ್ಷ ಬಿಎಸ್‌ಪಿ, ಕಾಂಗ್ರೆಸ್ ಮತ್ತಿತರ ಪಕ್ಷಗಳು ಹೇಳಹೆಸರಿಲ್ಲದಂತೆ ಚಿಂದಿಚಿತ್ರಾನ್ನವಾಗಿವೆ. ಸ್ವತಃ ಅಮಿತ್ ಶಾ ಅವರಿಗೂ ಇದೊಂದು ಅಚ್ಚರಿ. ಈ ಪರಿಯ ಫಲಿತಾಂಶವನ್ನು ಉತ್ತರ ಪ್ರದೇಶದಲ್ಲಿ ಅವರು ಖಂಡಿತ ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆ ರಾಜ್ಯದಲ್ಲಿ ದಕ್ಕಿದ್ದು ಕೇವಲ ಎರಡೇ ಸ್ಥಾನ. ಅದೂ ಕೂಡ ತಾಯಿ ಸೋನಿಯಾ ಹಾಗೂ ಮಗ ರಾಹುಲ್ ಕ್ರಮವಾಗಿ ರಾಯ್‌ಬರೇಲಿ ಮತ್ತು ಅಮೆಥಿಯಿಂದ ಗೆದ್ದು ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಹ ಸ್ಥಿತಿ! ಮಾಯಾವತಿಯವರ ಬಿಎಸ್‌ಪಿ ಆ ರಾಜ್ಯದಲ್ಲಿ ಮಾಯವಾಗಿ ಬಿಟ್ಟಿದೆ. ಬಿಎಸ್‌ಪಿಯ ಆನೆಗಳು ಯಾವ ಕಾಡಿಗೆ ಪರಾರಿಯಾದವೋ ತಿಳಿಯದು.

ಉತ್ತರ ಪ್ರದೇಶದ್ದು ಈ ಕಥೆಯಾದರೆ ಇನ್ನ್ನು ಗುಜರಾತ್, ರಾಜಸ್ಥಾನ, ದೆಹಲಿ, ಉತ್ತರಾಖಂಡ, ಗೋವಾ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ್ದು ಶೂನ್ಯ ಸಂಪಾದನೆ. ಒಂದೇ ಒಂದು ಸ್ಥಾನವನ್ನೂ ಅಲ್ಲಿ ಅದಕ್ಕೆ ಗೆಲ್ಲಲು ಸಾಧ್ಯವಾಗಿಲ್ಲ. ಬಿಹಾರ, ಮಧ್ಯಪ್ರದೇಶ, ಹರಿಯಾಣ, ಛತ್ತೀಸಗಡ, ಜಾರ್ಖಂಡ್, ಒರಿಸ್ಸಾ, ಸೀಮಾಂಧ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಕಾಂಗ್ರೆಸ್ ಕಥೆ ಅಧೋಗತಿಯ ದೊಡ್ಡ ವ್ಯಥೆ.

ಇದಿಷ್ಟೇ ಆಗಿದ್ದರೆ ಸುಮ್ಮನಿರಬಹುದಿತ್ತು. ಆದರೆ ಸತತ ಹತ್ತು ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಈಗ ಅಧಿಕೃತ ವಿರೋಧ ಪಕ್ಷವಾಗುವುದಕ್ಕೂ ಲಾಯಕ್ ಆಗಿಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರು ಜೀರ್ಣಿಸಿಕೊಳ್ಳುವುದಾದರೂ ಹೇಗೆ? 543 ಸದಸ್ಯರ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಬೇಕಾದರೆ ಕನಿಷ್ಟ 54 ಸ್ಥಾನಗಳನ್ನು ಪಡೆದಿರಬೇಕು. ಕಾಂಗ್ರೆಸ್‌ಗೆ ಈಗ ದೊರಕಿರುವುದು ಕೇವಲ 44. ಕಾಂಗ್ರೆಸ್ ಸೇರಿದಂತೆ ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್ ಯಾವುದೇ ಪಕ್ಷಕ್ಕೂ ಅಧಿಕೃತ ವಿರೋಧ ಪಕ್ಷವಾಗುವ ಅರ್ಹತೆಯೇ ಉಳಿದಿಲ್ಲ. ಹೀಗಾಗಿ ಸದ್ಯ ಲೋಕಸಭೆಯಲ್ಲಿ ವಿಪಕ್ಷ ನಾಯಕರೇ ಇಲ್ಲ! ಸಂವಿಧಾನದ ಪ್ರಕಾರ, ಲೋಕಸಭೆಯ ಒಟ್ಟು ಬಲದ 10ನೇ ಒಂದರಷ್ಟು ಸ್ಥಾನಗಳಿಸುವ ಪಕ್ಷ ಅಧಿಕೃತ ಪ್ರತಿಪಕ್ಷವಾಗಬಲ್ಲದು. ಶತಮಾನಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ 50ಕ್ಕಿಂತ ಕಡಿಮೆ ಸ್ಥಾನಗಳ ಹೀನಾಯ ಸ್ಥಿತಿ ಪ್ರಾಪ್ತವಾಗಿರುವುದು ಇದೇ ಮೊದಲ ಬಾರಿಗೆ. ಅದೇ ರೀತಿ ಸಂಸತ್ ಇತಿಹಾಸದಲ್ಲೇ ಮೊದಲ ಸಲ ಕಾಂಗ್ರೆಸ್ಸೇತರ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿರುವುದೂ ಇದೇ ಮೊದಲ ಸಲ.

ಈ ಫಲಿತಾಂಶ ಎಲ್ಲರನ್ನೂ ಅಚ್ಚರಿಯ ಕಡಲಲ್ಲಿ ಬೀಳಿಸಿರುವುದು ನಿಜ. ಮಾಧ್ಯಮಗಳ ಮತದಾನೋತ್ತರ ಸಮೀಕ್ಷೆಗಳಲ್ಲೂ ಇಂತಹದೊಂದು ಫಲಿತಾಂಶದ ಮುನ್ಸೂಚನೆ ವ್ಯಕ್ತವಾಗಿರಲಿಲ್ಲ. ಚಾಣಕ್ಯ ಸುದ್ದಿ ವಾಹಿನಿ ಪ್ರಕಟಿಸಿದ್ದ ಸಮೀಕ್ಷೆ ಮಾತ್ರ ಹೆಚ್ಚು ನೈಜವಾಗಿತ್ತು. ಸಮೀಕ್ಷೆಗಳ ಭವಿಷ್ಯವನ್ನೂ ಮೀರಿದ ಫಲಿತಾಂಶ ಪ್ರಕಟವಾಗಿದ್ದು ಬಹುಶಃ ಇದೇ ಮೊದಲ ಬಾರಿ. ಸಮೀಕ್ಷೆಗಳೆಲ್ಲ ಸುಳ್ಳು. ಅದನ್ನು ನಾವು ನಂಬುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು. ಬಿಜೆಪಿ ಮುಖಂಡರು ಸಮೀಕ್ಷೆಗಳು ಸಾರಿದ ಭವಿಷ್ಯದಿಂದ ಸಂತಸಪಟ್ಟಿದ್ದರೂ ಸಮೀಕ್ಷೆಗಳನ್ನು ಮೀರಿದ ಫಲಿತಾಂಶವನ್ನು ನಿರೀಕ್ಷಿಸಿರಲಿಲ್ಲ. ಒಂದು ದೃಷ್ಟಿಯಲ್ಲಿ ವಾಹಿನಿಗಳ ಸಮೀಕ್ಷೆಗಳು ಹುಸಿಯಾಗಿವೆ! ನಿಖರವಾದ ಫಲಿತಾಂಶವನ್ನು ಸಾರುವಲ್ಲಿ ಅವು ವಿಫಲವಾಗಿವೆ!

ಮೇ 16 ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಬಹುತೇಕ ಜನರಿಗೆ ಹಾಲು ಕುಡಿದಷ್ಟು ಸಂಭ್ರಮ. ತಮ್ಮ ಕುಟುಂಬದ ಮಗನೋ ಮಗಳೋ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾದಷ್ಟು ಸಡಗರ. ನನ್ನ ಒಬ್ಬ ಗೆಳೆಯನಂತೂ ನನಗೆ ಪೋನ್ ಮಾಡಿ ` ನಾನೇ ಪ್ರಧಾನಿಯಾದಷ್ಟು ಸಂತಸ ನನಗಾಗುತ್ತಿದೆ’ ಎಂದು ಆನಂದತುಂದಿಲನಾಗಿ ಸಂತಸ ವ್ಯಕ್ತಪಡಿಸಿದ್ದ. ಇನ್ನು ಮನೆಯಲ್ಲಿ ಈ ಸಡಗರವನ್ನು ಸಿಹಿ ಹಂಚುವುದರ ಮೂಲಕ ಆಚರಿಸಿದವರು ಅದೆಷ್ಟೋ ಲಕ್ಷಾಂತರ ಮಂದಿ. ಸಂಘದ ಅನೇಕ ಹಿರಿಯ ಕಾರ್ಯಕರ್ತರಿಗೆ, ಸ್ವಯಂಸೇವಕರಿಗೆ ತಾವು ಇದುವರೆಗೆ ಅಹರ್ನಿಶಿ ಈ ಸಮಾಜಕ್ಕಾಗಿ ದುಡಿದ್ದಿದ್ದಕ್ಕೆ ಕೊನೆಗೂ ಫಲ ಸಿಕ್ಕಿತಲ್ಲ ಎಂಬ ಧನ್ಯತಾಭಾವ. ತಮ್ಮ ಶ್ರಮ ವ್ಯರ್ಥವಾಗಲಿಲ್ಲ ಎಂಬ ಸಮಾಧಾನ ಇನ್ನಷ್ಟು ಜನರದ್ದು. ಅನೇಕರ ಕಣ್ಣಲ್ಲಿ ಅಂದು ಸುರಿದಿದ್ದು ಆನಂದಬಾಷ್ಪ. ಅಂತಹ ಆನಂದ ಇದುವರೆಗೂ ಅವರಿಗೆ ಲಭಿಸಿರಲಿಲ್ಲ. ಆದರೆ ಈ ಆನಂದ ಪರಿಶುದ್ಧವಾದುದು. ತಮ್ಮ ಸ್ವಂತಕ್ಕೆ ಯಾರಿಂದಲೂ ಏನನ್ನೂ ಅಪೇಕ್ಷಿಸದ ನಿಸ್ವಾರ್ಥ ಮನೋಭಾವದವರಿಗೆ ಮಾತ್ರ ಇಂತಹ ಹೃದಯ ತುಂಬಿದ ಆನಂದ ಉಂಟಾಗಲು ಸಾಧ್ಯ. ಬಿಜೆಪಿಯ ಈ ಪ್ರಚಂಡ ಜಯದ ಹಿಂದೆ ನರೇಂದ್ರ ಮೋದಿಯವರ ಅಪಾರ ಪರಿಶ್ರಮ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಇಂತಹ ನಿಸ್ವಾರ್ಥಿಗಳ ಸದ್ದಿಲ್ಲದ, ಸ್ವಾರ್ಥರಹಿತ ಪರಿಶ್ರಮ, ತಪಸ್ಸು ಅಡಗಿದೆ. ಆದರೆ ಅದಕ್ಕೆ ಮೋದಿ ಸರ್ಕಾರದಿಂದ ಯಾವ ಪ್ರತಿಫಲವನ್ನೂ ಅವರು ಖಂಡಿತ ನಿರೀಕ್ಷಿಸುವುದಿಲ್ಲ. ಬಿಜೆಪಿಯಿಂದ ಕನಿಷ್ಠ ಒಂದು ಧನ್ಯವಾದವನ್ನು ಕೂಡ ಅಪೇಕ್ಷಿಸುವುದಿಲ್ಲ.

ಫಲಿತಾಂಶ ಪ್ರಕಟವಾದಾಗ ನಿಯೋಜಿತ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು: `ಭಾರತ ಗೆದ್ದಿದೆ. ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ. ಇದು ಜನತೆಯ ವಿಜಯ’. ಹೌದು, ಭಾರತ ಖಂಡಿತ ಗೆದ್ದಿದೆ. ಸೋತು ಹಾಸಿಗೆ ಹಿಡಿದು ಮಲಗಿದ್ದ ಭಾರತವನ್ನು ಮತದಾರರು ಮೇಲೆಬ್ಬಿಸಿ ನಿಲ್ಲಿಸಿದ್ದಾರೆ. `ನಿನ್ನನ್ನು ಸೋಲಲು ಖಂಡಿತ ನಾವು ಬಿಡಲಾರೆವು’ ಎಂಬ ಸಂದೇಶವನ್ನು ತಮ್ಮ ಮತವೆಂಬ ಅಸ್ತ್ರದ ಮೂಲಕ ಅವರು ರವಾನಿಸಿದ್ದಾರೆ. ದೇಶದುದ್ದಗಲಕ್ಕೆ ಎಲ್ಲೆಡೆ ಹರಡಿರುವ ಭ್ರಷ್ಟಾಚಾರ, ಅನ್ಯಾಯ, ದೌರ್ಜನ್ಯ, ಸ್ವಜನಪಕ್ಷಪಾತ, ಭಯೋತ್ಪಾದನೆ, ಕುಸಿದು ಹೋಗಿರುವ ಆರ್ಥಿಕ ಸ್ಥಿತಿ, ಜಾಗತಿಕ ಮಟ್ಟದಲ್ಲಿ ಹರಾಜಾಗಿರುವ ಭಾರತದ ಮಾನ, ಇಷ್ಟೊಂದು ದೊಡ್ಡ ದೇಶವಾಗಿಯೂ ಪದೇ ಪದೇ ಎಲ್ಲ ರಂಗಗಳಲ್ಲಿ ಅನುಭವಿಸಬೇಕಾದ ಅವಮಾನ, ಸ್ವಾತಂತ್ರ್ಯ ಬಂದು 6 ದಶಕಗಳು ಮೀರಿದ್ದರೂ ರಸ್ತೆ, ವಿದ್ಯುತ್, ನೀರು, ನಿರುದ್ಯೋಗ, ಶಾಲೆಗಳ ಕನಿಷ್ಠ ಮೂಲಸೌಕರ್ಯಗಳಗೆ ತತ್ವಾರ… ಹೀಗೆ ಭಾರತವನ್ನು ಕಾಡುತ್ತಿರುವ ಅದೆಷ್ಟೋ ಬೆಟ್ಟದಷ್ಟು ಭಯಾನಕವಾದ ಸಮಸ್ಯೆಗಳಿಗೆ ಈಗಲಾದರೂ ಪರಿಹಾರ ದೊರಕಬಹುದೆಂಬ ಆಸೆ ಅವರಲ್ಲಿದೆ. ಪ್ರಧಾನಿಯಾಗಲಿರುವ ನರೇಂದ್ರ ಮೋದಿ ಅವರೆಲ್ಲರ ಪಾಲಿಗೆ ಒಂದು ಹೊಸ ಆಶಾಕಿರಣ. ಗುಜರಾತ್‌ನಲ್ಲಿ ಮಾಡಿ ತೋರಿಸಿದ ಸಾಧನೆಯನ್ನು ಇಡೀ ಭಾರತದಲ್ಲಿ ಮೋದಿ ಮಾಡಿ ತೋರಿಸಿಯಾರೆಂಬ ಭರವಸೆಯಲ್ಲಿ ಮತದಾರರು ಈ ಬಾರಿ ಸಂಪೂರ್ಣ ಬೆಂಬಲ ಸಾರಿದ್ದಾರೆ. ಇದುವರೆಗೆ ಯಾರದ್ದೋ ಹಂಗಿನಲ್ಲಿ ಅವರ ಮರ್ಜಿಗೆ ತಕ್ಕಂತೆ ಸರ್ಕಾರ ನಡೆಸಬೇಕಾಗಿತ್ತು. ಕೇಂದ್ರದಲ್ಲಿ ಸುಸ್ಥಿರ ಸರ್ಕಾರವೇ ಇರಲಿಲ್ಲ. ಹಾಗಾಗಿ ಪ್ರಧಾನಿಯಾದವರಿಗೆ ಯಾವುದೇ ದೃಢ ನಿರ್ಧಾರ ಕೈಗೊಳ್ಳುವ ತಾಕತ್ತೇ ಇರಲಿಲ್ಲ. ಈ ಬಾರಿ ಹಾಗಾಗ ಕೂಡದೆಂದೇ ಜನರು ನರೇಂದ್ರ ಮೋದಿಗೆ ನಿಚ್ಚಳ ಬಹುಮತ ನೀಡಿದ್ದಾರೆ. ಇನ್ನೈದು ವರ್ಷಗಳ ಕಾಲ ಯಾವ ಪಕ್ಷದ ಹಂಗೂ ಇಲ್ಲದೆ, ಸ್ವತಂತ್ರವಾಗಿ ಆಳ್ವಿಕೆ ನಡೆಸಲು ಅನುವು ಮಾಡಿ ಕೊಟ್ಟಿದ್ದಾರೆ. ಈ ಅವಕಾಶವನ್ನು ಬಿಜೆಪಿ ಈ ಬಾರಿ ಸಮರ್ಥವಾಗಿ ಬಳಸಿಕೊಳ್ಳದಿದ್ದರೆ ಜನರು ಖಂಡಿತ ಕ್ಷಮಿಸಲಾರರು.

ಜನರ ನಿರೀಕ್ಷೆಗಳಂತೂ ಅಪಾರ. ಆ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಮೋದಿ ಸರ್ಕಾರ ಪೂರೈಸಬಲ್ಲದು? ಇದು ಈಗಿರುವ ಕುತೂಹಲ. ಅಧಿಕಾರಕ್ಕೆ ಏರಿದ ಕೆಲವೇ ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಖಂಡಿತ ಸಾಧ್ಯವಿಲ್ಲ. ಏಕೆಂದರೆ ಮೋದಿಯ ಬಳಿ ಅಂತಹ ಮಂತ್ರದಂಡವಿಲ್ಲ. ಆದರೆ ಅವರು ಸಮಸ್ಯೆಗಳನ್ನು ಪರಿಹರಿಸಬಲ್ಲರು. 125 ಕೋಟಿ ಭಾರತಿಯರಿಗೆ ನೆಮ್ಮದಿಯ ದಿನಗಳನ್ನು ಕರುಣಿಸಬಲ್ಲರು ಎಂಬ ವಿಶ್ವಾಸವಂತೂ ಬಹುತೇಕರಲ್ಲಿದೆ. ಏಕೆಂದರೆ ಗುಜರಾತಿನಲ್ಲಿ ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಮೋದಿ ಭ್ರಷ್ಟಾಚಾರವೆಸಗಲಿಲ್ಲ. ಸ್ವಜನಪಕ್ಷಪಾತ ಮಾಡಲಿಲ್ಲ. ತಮ್ಮ ಕುಟುಂಬದ ಸದಸ್ಯರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಮೊನ್ನೆ ಗೆದ್ದ ಬಳಿಕ ತಾಯಿಯ ಆಶೀರ್ವಾದ ಪಡೆಯಲು ಅವರು ಹೋಗಿದ್ದು ಒಂದು ಸಾಧಾರಣ ಮನೆಗೆ. ಅಲ್ಲಿ ಅವರಿಗೆ ಕುಳಿತುಕೊಳ್ಳಲು ಹಾಕಿದ್ದು ಒಂದು ಸಾಧಾರಣ ಪ್ಲಾಸ್ಟಿಕ್ ಕುರ್ಚಿ. ಹತ್ತು ವರ್ಷಕಾಲ ಮುಖ್ಯಮಂತ್ರಿಯಾಗಿದ್ದವರೊಬ್ಬರ ತಾಯಿಯ ಮನೆಯ ಭವ್ಯ ಆರ್ಥಿಕ ಸ್ಥಿತಿ ಇದು! ಮೊನ್ನೆ ಮತ ಚಲಾಯಿಸಲು ಅವರ ವಯಸ್ಸಾದ ತಾಯಿ ಮತಗಟ್ಟೆಗೆ ಆಗಮಿಸಿದ್ದು ಒಂದು ಅಟೋ ರಿಕ್ಷಾದಲ್ಲಿ. ಮುಖ್ಯಮಂತ್ರಿ ಮೋದಿ ತನ್ನ ತಾಯಿಗಾಗಿ ಯಾವುದೇ ಸರ್ಕಾರಿ ಕಾರು ಕಳಿಸಲಿಲ್ಲ. ಮೋದಿಗೆ ಹೀಗೆ ನಿಸ್ವಾರ್ಥ ಭಾವನೆ ಇರುವುದರಿಂದಲೇ ಅವರು ಭಾರತವನ್ನು ಸಶಕ್ತವಾಗಿ ಕಟ್ಟಬಲ್ಲರು ಎಂಬ ನಂಬಿಕೆ ಮತದಾರರದ್ದು.

ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ, 20 ಸಾವಿರಕ್ಕೂ ಹೆಚ್ಚು ಮಂದಿಯ ಕಗ್ಗೊಲೆಯಾಗುತ್ತದೆ. ಮುಸ್ಲಿಮರು ದೇಶ ಬಿಟ್ಟು ಓಡಿ ಹೋಗಬೇಕಾಗುತ್ತದೆ… ಮುಂತಾದ ಮೋದಿ ವಿರೋಧಿಗಳ ಆರೋಪಗಳಿಗೆ ಇನ್ನು ಕವಡೆ ಕಾಸಿನ ಕಿಮತ್ತು ಇರುವುದಿಲ್ಲ. ಹಾಗೆ ಆರೋಪಿಸುವವರನ್ನು ಜನರೇ ವಿಚಾರಿಸಿಕೊಳ್ಳುತ್ತಾರೆ, ಬಿಡಿ. ಭರ್ಜರಿ ಬಹುಮತ ಬಂದಿದೆಯೆಂದು ಬಿಜೆಪಿ ನಾಯಕರು ಬೀಗುವ ಅಗತ್ಯವಿಲ್ಲ. ಅಧಿಕಾರವೆಂಬುದು ಕ್ಷಣಿಕ, ಅದು ಶಾಶ್ವತವಲ್ಲ. ಅಧಿಕಾರ ಬಂದಾಗ ಅದನ್ನು ಹೇಗೆ ಸದುಪಯೋಗ ಮಾಡಿಕೊಂಡರು ಎಂಬುದಷ್ಟೇ ಜನರು ಸದಾಕಾಲ ನೆನಪಿಡುವ ಸಂಗತಿ. ಮೋದಿ ಸರ್ಕಾರ ಈ ಸುವರ್ಣಾವಕಾಶವನ್ನು ಸಾರ್ಥಕಪಡಿಸಿಕೊಳ್ಳಲಿ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top