ಸಾಹಿತ್ಯದ್ದು ನೆಡುವ ಸಂಸ್ಕೃತಿ: ಪ್ರೊ.ಕೆ.ಇ.ರಾಧಾಕೃಷ್ಣ
ಉಜಿರೆ : ಸಾಹಿತ್ಯ ಸುಡುವ ಸಂಸ್ಕೃತಿಯನ್ನು ಹೇಳುವುದಿಲ್ಲ, ನೆಡುವ ಸಂಸ್ಕೃತಿಯನ್ನು ಹೇಳುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಅಭಿಪ್ರಾಯಪಟ್ಟರು.
ಉಜಿರೆಯಲ್ಲಿ ಮೂರು ದಿನಗಳ ಕಾಲ ನಡೆದ ದಕ್ಷಿಣ ಕನ್ನಡ ಜಿಲ್ಲಾ 21 ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಪ್ರಸ್ತುತಪಡಿಸಿದರು.
ಸಮ್ಮೇಳನದ ಮುಖ್ಯ ಪರಿಕಲ್ಪನೆಯಾದ ’ಸ್ವಚ್ಛತೆ’ಯನ್ನು ಉಲ್ಲೇಖಿಸಿದ ಅವರು ಹಿಂದಿನ ಸಾಹಿತಿಗಳ ಕಾಣ್ಕೆಗಳ ದೃಷ್ಟಿಯಲ್ಲಿ ಸ್ವಚ್ಛತೆಯ ಆಯಾಮಗಳನ್ನು ಬಿಡಿಸಿಟ್ಟರು. ಪಡೆಯುವುದು ಕೊಡುವುದಕ್ಕೆ ಎಂದು ಪಂಪ ಹೇಳುತ್ತಾನೆ. ಕಾವ್ಯ ಶಾಂತರಸ ಮತ್ತು ಜೀವಕಾರುಣ್ಯ ಹೊಮ್ಮಿಸಬೇಕು. ಈ ನೆಲೆಯಲ್ಲಿ ಸ್ವಚ್ಛತೆ ಪರಿಕಲ್ಪನೆ ಹರಿಯಲಿ ಎಂದು ಆಶಿಸಿದರು.
ಸಾಹಿತ್ಯದಲ್ಲಿನ ಭಾಷಾ ಶುದ್ಧಿಯೂ ಅಂತರಂಗದ ಶುದ್ಧಿಯೂ ಆಗಿದೆ. ಸ್ವಚ್ಛತೆಯೆಂಬುದು ಅಂತರಂಗದ್ದೇ ಅಥವಾ ಬಹಿರಂಗದ್ದೇ ಎಂಬುದು ಮುಖ್ಯವಾಗುತ್ತದೆ. ನದಿಯನ್ನು ಸ್ವಚ್ಛ ಮಾಡುವುದು ಸ್ವಚ್ಛತೆಯಲ್ಲ, ನಾವು ನಮ್ಮೊಳಗೆ ಸ್ವಚ್ಛವಾಗಬೇಕು. ಅಂತರಂಗದ ಸ್ವಚ್ಛತೆಯೇ ಮೌಲಿಕವಾದದು ಎಂದು ಅವರು ಹೇಳಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ.ಕೆ.ಚಿನ್ನಪ್ಪ ಗೌಡ, ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ಕುಮಾರ ಕಲ್ಕೂರ, ಬೆಳ್ತಂಗಡಿ ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷರಾದ ಡಾ.ಬಿ.ಯಶೋವರ್ಮ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಯತಿರಾಜ್ ಬ್ಯಾಲಹಳ್ಳಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.