ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟ್ಟಿದ್ದು ಧೈರ್ಯದ ಪಾಠ. ದಾಸ್ಯದ ಸಂಕೋಲೆಗೆ ಸಿಲುಕಿದ್ದ ಭಾರತೀಯರಿಗೆ ಕೊಟ್ಟ ಸಂದೇಶ ಇದು.
ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ. ಜೀವನಪೂರ್ತಿ ಸಾಹಸದ ಹೋರಾಟ ನಡೆಸಿದುದರ ಕಾರಣಕ್ಕಾಗಿಯೇ ಅವರನ್ನು ದೇಶವು ಪಂಜಾಬ್ ಕೇಸರಿ ಎಂದು ಕರೆದದ್ದು. ಅವರ ಬಲಿದಾನ ರಣಭೂಮಿಯ ವೀರನ ಮರಣದಂತೆ.
ಲಾಲಾ ಲಜಪತ್ ರಾಯ್ ಪಂಜಾಬ್ ಪ್ರಾಂತ್ಯದ ಫಿರೋಜಪುರ ಜಿಲ್ಲೆಯ ದುಡಿಕೆ ಎಂಬ ಹಳ್ಳಿಯಲ್ಲಿ 1865 ರ ಜನವರಿ 28 ರಂದು ಜನಿಸಿದರು. ಇವರ ತಂದೆ ಲಾಲಾ ರಾಧಾಕಿಷನ್ ಸರಕಾರಿ ಪಾಠಶಾಲೆಯಲ್ಲಿ ಉರ್ದು ಉಪಾಧ್ಯಾಯರಾಗಿದ್ದರು. ಸ್ವಾತಂತ್ರ್ಯ ಪ್ರೇಮ ಹಾಗೂ ಆತ್ಮಾಭಿಮಾನಕ್ಕೆ ಹೆಸರಾದ ಅಗರವಾಲ ಮನೆತನಕ್ಕೆ ಸೇರಿದವರು. ಲಜಪತ್ ರಾಯ್ ಅವರ ತಾಯಿ ಗುಲಾಬ್ದೇವಿ.
ಬಡತನ ಮತ್ತು ಅನಾರೋಗ್ಯ ಅವರ ಉನ್ನತ ವ್ಯಾಸಂಗಗಳಿಗೆ ಅಡ್ಡಿಯಾಗಿದ್ದವು. ವಿದ್ಯಾರ್ಥಿ ವೇತನಗಳನ್ನು ಪಡೆದ. 1880 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದರು. ಅದೇ ವರ್ಷ ಪಂಜಾಬ್ ವಿಶ್ವ ವಿದ್ಯಾನಿಲಯದ ಪ್ರವೇಶ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿದರು. ಅನಂತರ ಲಾಹೋರಿನ ಸರಕಾರಿ ಕಾಲೇಜು ಸೇರಿದರು. ಜೊತೆಯಲ್ಲಿಯೇ ನ್ಯಾಯಶಾಸ್ತ್ರದ ಓದು ಸಾಗಿತು. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣ ಓದು ಎರಡು ವರ್ಷಗಳ ಕಾಲ ನಿಂತು ಹೋಯಿತು.
ಲಾಹೋರಿನಲ್ಲಿ ಕಳೆದ ಆ ಎರಡು ವರ್ಷಗಳು ಲಾಲಾಜಿಯವರ ಜೀವಿತದಲ್ಲಿ ಒಂದು ಮುಖ್ಯವಾದ ಘಟ್ಟ. ಭಾರತದ ಹಿಂದಿನ ವೈಭವದ ಚರಿತ್ರೆ, ಭಾರತದ ಮಹಾಚೇತನಗಳ ಜೀವನ ಚರಿತ್ರೆ ಇವನ್ನು ಓದುತ್ತ ತರುಣ ಲಾಲಾಜಿ ಕಣ್ಣೀರು ಸುರಿಸುತ್ತಿದ್ದರು. ಸ್ವಾತಂತ್ಯ್ರ ಪ್ರೇಮ, ದೇಶ ಸೇವೆ ಮಾಡಬೇಕೆಂಬ ತೀವ್ರ ಹಂಬಲ ಅವರಲ್ಲಿತ್ತು.
1883 ರಲ್ಲಿ ನ್ಯಾಯ ಶಾಸ್ತ್ರದ ಪ್ರಥಮ ಪರೀಕ್ಷೆ ಮುಗಿಸಿದ ಮೇಲೆ ಅವರು ಮುಖ್ತಾರಿ (ಚಿಕ್ಕ ವಕೀಲ) ಕೆಲಸಕ್ಕೆ ಅನುಮತಿ ಪಡೆದರು. ಮನೆಯ ನಿರ್ವಹಣೆಯ ಭಾರವೂ ಸಹ ಅವರಿಗಿತ್ತು. 18 ವರ್ಷದ ಲಾಲಾಜಿ ಜಗ್ರಾಂವ್ ಪಟ್ಟಣದ ರೆವಿನ್ಯೂ ಕೋರ್ಟನಲ್ಲಿ ಮುಖ್ತಾರಿ ವೃತ್ತಿ ನಡೆಸಿದನು. 1889 ರಲ್ಲಿ ಪ್ಲೀಡರ್ ಪರೀಕ್ಷೆ ಮುಗಿಸಿ, ದಕ್ಷಿಣ ಪಂಜಾಬಿನ ಹಿಸಾರ ಎಂಬಲ್ಲಿಗೆ ಬಂದು ವಕೀಲ ವೃತ್ತಿ ಪ್ರಾರಂಭಿಸಿದರು. ಹಣ ಗಳಿಸುವ ಇಚ್ಛೆ ಅವರದಾಗಿರಲಿಲ್ಲ. ಇಟಲಿಯ ವೀರ ಕ್ರಾಂತಿಕಾರಿ ಮ್ಯಾಜಿನಿಯ ಜೀವನ ಚರಿತ್ರೆಯನ್ನು ಓದಬೇಕೆಂದು ಅವರಿಗೆ ಆಸೆಯಾಯಿತು. ಭಾರತದಲ್ಲಿ ಅವರಿಗೆ ಆ ಪುಸ್ತಕ ದೊರೆಯಲಿಲ್ಲ. ಇಂಗ್ಲೆಂಡಿನಲ್ಲಿದ್ದ ಸ್ನೇಹಿತರೊಬ್ಬರಿಗೆ ಬರೆದು ತರಿಸಿಕೊಂಡರು. ಆ ವೀರರ ಸಾಹಸ ಪ್ರವೃತ್ತಿ, ಉದಾರ ಸ್ವಭಾವ ದೇಶಾಭಿಮಾನ ಅವರನ್ನು ರೋಮಾಂಚನಗೊಳಿಸಿದವು.
ಸ್ವಾಮಿ ದಯಾನಂದ ಮರಣದ ನಂತರ ಲಾಲಾಜಿ ತಮ್ಮ ಸಹೋದ್ಯೋಗಿಗಳೊಂದಿಗೆ ದಯಾನಂದ ಅಂಗ್ಲೋ ವೇದಿಕ್ ಕಾಲೇಜಿನ (ಡಿ.ಎ.ವಿ ಕಾಲೇಜು) ಅಭ್ಯುದಯಕ್ಕಾಗಿ ದುಡಿದರು. ಆರ್ಯಸಮಾಜದ ಮೂರು ಧ್ಯೇಯಗಳು ಸಮಾಜ ಸುಧಾರಣೆ, ಹಿಂದೂ ಧರ್ಮದ ಏಳಿಗೆ ಮತ್ತು ವಿದ್ಯಾಭಿವೃದ್ಧಿ. ಲಾಲಾಜಿಯವರ ಮಾಸಿಕ ವರಮಾನ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಾಗಿತ್ತು. ತಂದೆ ನಿರಾತಂಕವಾಗಿರುವಂತೆ ಒಂದಿಷ್ಟು ಹಣವನ್ನು ತೆಗೆದಿಟ್ಟು, ಅದರ ಮೇಲಿನ ಬಡ್ಡಿ ತಂದೆಗೆ ಸಲ್ಲುವಂತೆ ಏರ್ಪಾಡು ಮಾಡಿದರು. ಅವರ ಆದಾಯದಲ್ಲಿ ಹತ್ತರಲ್ಲೊಂದು ಪಾಲು ದೇಶಕ್ಕೆ ಮೀಸಲು. ಅವಿಶ್ರಾಂತವಾಗಿ ಕೆಲಸ ಮಾಡಿ ಆರ್ಯ ಸಮಾಜದ ಶಾಖೆಗಳನ್ನು ಸ್ಥಾಪಿಸಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಅವರು ಜಾತಿಪರ ವ್ಯಕ್ತಿಯಾಗಿರಲಿಲ್ಲ. ಮುಸ್ಲಿಮರು ಅಧಿಕವಾಗಿದ್ದ ಕ್ಷೇತ್ರದಿಂದ ಪುರಸಭೆಯ ಸಮಿತಿಗೆ ಅವಿರೋಧವಾಗಿ ಚುನಾಯಿತರಾದರು.
1888 ರಲ್ಲಿ ಸ್ವಾತಂತ್ಯ್ರದ ತೀವ್ರ ಅಗತ್ಯವನ್ನು ಕಂಡ ಲಾಲಾಜಿ ಸಂಗ್ರಾಮದ ಸಿಪಾಯಿಯಾಗಿ ಕಾಂಗ್ರೆಸ್ ಸೇರಿದರು. ಪಂಜಾಬಿನ ಮುಖ್ಯ ನ್ಯಾಯಾಲಯದಲ್ಲಿ ವಕೀಲ ವೃತಿ ನಡೆಸುವ ಅರ್ಹತೆ ಪಡೆದ ಮೇಲೆ 1892 ರಲ್ಲಿ ಲಾಹೋರಿಗೆ ಬಂದು ನೆಲೆಸಿದರು. ಅವರು ಅಗ್ರಮಾನ್ಯ ರಾಜಕಾರಣಿ ಮಾತ್ರವಲ್ಲ, ಪ್ರಬುದ್ಧ ಲೇಖಕರೂ ಹೌದು. ಉರ್ದು ಭಾಷೆಯಲ್ಲಿ ಅವರು ರಚಿಸಿದ ಜೀವನ ಚರಿತ್ರೆಗಳು ಉಲ್ಲೇಖಾರ್ಹ.
1896 ರಲ್ಲಿ ಮಧ್ಯ ಪ್ರಾಂತ್ಯದಲ್ಲಿ ಭೀಕರ ಕ್ಷಾಮ ದಾಳಿ ಇಟ್ಟಿತ್ತು. ಅನಾವೃಷ್ಟಿಯ ಕಾರಣದಿಂದಾಗಿ ಜನ ತತ್ತರಿಸಿದರು. ಅಧಿಕಸಂಖ್ಯೆಯಲ್ಲಿ ಅನಾಥ ಮಕ್ಕಳು ಮತ್ತು ಜೀವನಾಧಾರವಿಲ್ಲದವರು ಕ್ರೈಸ್ತ ಮತಪ್ರಚಾರಕರ ದಯೆಗೆ ಒಳಗಾಗಿ ಮತಾಂತರ ಹೊಂದುತ್ತಿದ್ದರು. ಜಬ್ಬಲಪುರ, ಬಿಲಾಸಪುರ, ಮತ್ತಿತರ ಜಿಲ್ಲೆಗಳ 250 ಕಂಗಾಲ ಮಕ್ಕಳನ್ನು ರಕ್ಷಿಸಿ ಪಂಜಾಬಿಗೆ ಕರೆತಂದು ಆರ್ಯ ಸಮಾಜದ ಅನಾಥಾಲಯಗಳಲ್ಲಿ ಸೇರಿಸಿದರು. ಅಸಾಧಾರಣ ಚಳವಳಿ ನಡೆಸಿದರು. 2000 ಅನಾಥರ ರಕ್ಷಣೆಯಾದುದಲ್ಲದೇ ಅವರಿಗೆ ಅಹಾರ, ಬಟ್ಟೆ, ವಿದ್ಯೆ, ಉದ್ಯೋಗ ಎಲ್ಲವೂ ದೊರೆತವು. ಸಾರ್ವಜನಿಕ ಸೇವೆಗಾಗಿ ಸಮಯ ದೊರೆಯುವುದಿಲ್ಲವೆಂದು 1899 ರಿಂದ ತಮ್ಮ ವಕೀಲಿಕೆ ಕಡಿಮೆ ಮಾಡಿಕೊಂಡರು. 1901ರಲ್ಲಿ ಸರಕಾರವು ಕ್ಷಾಮ ನಿವಾರಣಾ ನಿಯೋಗವೊಂದನ್ನು ನೇಮಿಸಿ ಅಭಿಪ್ರಾಯ ಪಡೆಯಿತು. ಅವರು ನೀಡಿದ ವಿವರ ಹಾಗೂ ಅಭಿಪ್ರಾಯಗಳಿಂದಾಗಿ ಸರಕಾರವು ಅನಾಥರ ವಿಷಯದಲ್ಲಿ ತನ್ನ ಧೋರಣೆ ಬದಲಾಯಿಸಿತು.
ಲಾಹೋರಿನ ಆರ್ಯಸಮಾಜವು ಪರಿಹಾರ ಸಮತಿಯನ್ನು ರಚಿಸಿತು. ಲಾಲಾಜಿ ಅದರ ಕಾರ್ಯದರ್ಶಿಯಾಗಿ ಪಂಜಾಬ್ ಪ್ರಾಂತವನ್ನು ಪೂರ್ತಿಯಾಗಿ ಪ್ರವಾಸ ಮಾಡಿ ಹಣ ಸಂಗ್ರಹಿಸಿದರು. ಮರೆಯಲಾಗದಂತಹ ಉಪಯುಕ್ತ ಸೇವೆ ಅವರಿಂದ ಸಂದಿತು.
ಅದೇ ವರ್ಷ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟನ್ನಿನ ಮಹಾ ಚುನಾವಣೆಗಳಿಗೆ ಮೊದಲು ಅಲ್ಲಿನ ಜನತೆಗೆ ಭಾರತದ ಸ್ಥಿತಿಗತಿಗಳನ್ನು ಮನದಟ್ಟು ಮಾಡಿಕೊಡಲು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಲು ನಿರ್ಣಯಿಸಿತು. ಲಜಪತರಾಯ್ ಮತ್ತು ಗೋಪಾಲ ಕೃಷ್ಣ ಗೋಖಲೆ ಅವರೇ ಆ ಇಬ್ಬರು ಪ್ರತಿನಿಧಿಗಳು. ಅವರು ಪ್ರವಾಸವನ್ನು ಮುಗಿಸಿ ಹಿಂದಿರುಗಿದಾಗ ಲಾಹೋರಿನ ರೈಲ್ವೆ ನಿಲ್ದಾಣದಲ್ಲಿ ಸಹಸ್ರಾರು ಜನ ಸೇರಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಅವರ ಗಾಡಿ ಕುದುರೆಗಳನ್ನು ಬಿಚ್ಚಿ ತಾವೇ ಗಾಡಿ ಎಳೆದರು.
ಇಂಗ್ಲೆಂಡ್ ಪ್ರವಾಸದಲ್ಲಿ ಲಾಲಾಜಿ ಅಲ್ಲಿನ ಜನರಿಗೆ ಬ್ರೀಟಿಷ್ ಆಡಳಿತದಲ್ಲಿ ಭಾರತೀಯರ ಸ್ಥಿತಿಗತಿ ಏನೆಂಬುವುದನ್ನು ಅನೇಕ ಭಾಷಣಗಳಲ್ಲಿ ತಿಳಿಸಿದರು. ಅದಕ್ಕೂ ಹೆಚ್ಚಾಗಿ ಅವರು ಗ್ರಹಿಸಿ ತಂದ ಅಭಿಪ್ರಾಯಗಳು ಮುಖ್ಯ. ಭಾರತದ ಭವಿಷ್ಯವು ಭಾರತೀಯರಿಂದಲೇ ರೂಪಿತವಾಗಬೇಕೆಂದೂ ಅದಕ್ಕಾಗಿ ಸರಕಾರವು ಜನತೆಯ ಕೈಗೆ ಬರಬೇಕೆಂದೂ ಸ್ಪಷ್ಟ ಆರಿವು ಬಂದಿತ್ತು. ಸ್ವರಾಜ್ಯಕ್ಕೆ ಹೋರಾಟ, ಸ್ವದೇಶಿ ವಸ್ತುಗಳ ಬಳಕೆ, ವಿದೇಶಿ ವಸ್ತುಗಳ ಬಹಿಷ್ಕಾರ ಇವು ಭಾರತದ ಸಂಕಲ್ಪವಾಗಬೇಕೆಂಬುವುದು ಅವರ ನಿರ್ಧಾರ. 1907 ರ ಸೂರತ್ ನಗರದ ಕಾಂಗ್ರೆಸ್ ಅಧಿವೇಶನದಲ್ಲಿ ಈ ಎಲ್ಲ ಅಭಿಪ್ರಾಯಗಳನ್ನು ಅವರು ನಿರೂಪಿಸಿದರು.
ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಸರ್ ಡೆನ್ಸಿಲ್ ಇಬೆಟ್ ಸನ್ ಎಂಬುವನು ಆಗ ಬ್ರೀಟಿಷ್ ಮಂತ್ರಿ ಮಂಡಲದಲ್ಲಿ ಭಾರತದ ವಿಷಯಗಳಿಗೆ ಮಂತ್ರಿಯಾಗಿದ್ದ. ಲಾಡ್ ಮಾರ್ಲೆಗೆ ಹೀಗೆ ಪತ್ರ ಬರೆದ: ಲಾಲಾಜಿಯವರಂತಹ ಕೆಲವು ಮುಖಂಡರು ಬ್ರಿಟಿಷರನ್ನು ಭಾರತದಿಂದ ಹೇಗಾದರೂ ಓಡಿಸುವಂತೆ ಶಪಥ ಮಾಡಿದ ಹಾಗೆ ತೋರುತ್ತದೆ. ಇಂಗ್ಲೀಷ್ ಜನಾಂಗದ ಬಗೆಗೆ ಜನತೆಯಲ್ಲಿ ದ್ವೇಷ ಹುಟ್ಟಿಸಿ ಸರಕಾರದ ಆಡಳಿತ ಯಂತ್ರವನ್ನು ಛಿದ್ರಗೊಳಿಸುವ ಯತ್ನ ನಡೆದಿದೆ. ಲಾಲಾಜಿಯವರನ್ನೂ ಬರ್ಮಾ ದೇಶದ ಮಾಂಡಲೆಗೆ ಗಡಿಪಾರು ಮಾಡಿದ.
ಜನರ ಮತ್ತು ವಕೀಲ ವರ್ಗದ ಪ್ರಚಂಡ ಪ್ರತಿಭಟನೆ, ಪ್ರದರ್ಶನಗಳಿಗೆ ಸರಕಾರವು ಮಣಿಯದೇ ಬೇರೆ ಮಾರ್ಗವಿರಲಿಲ್ಲ. ಗಡಿಪಾರು ಆಜ್ಞೆಯು ಅನುಚಿತ ಮತ್ತು ಅನ್ಯಾಯ ವೆಂಬುವುದನ್ನು ಅರ್ಥಮಾಡಿಕೊಂಡ ಸರಕಾರ ಲಾಲಾಜಿಯವರನ್ನು ಬಿಡುಗಡೆ ಮಾಡಿ ನವೆಂಬರ್ 18 ರಂದು ಲಾಹೋರಿಗೆ ತಂದುಬಿಟ್ಟಿತು.
1920 ರ ಸೆಪ್ಟೆಂಬರ್ನಲ್ಲಿ ಸೇರಿದ ವಿಶೇಷ ಕಾಂಗ್ರೆಸ್ ಅಧಿವೇಶನಕ್ಕೆ ಅವರು ಅಧ್ಯಕ್ಷರಾಗಿ ಚುನಾಯಿತರಾದರು. ಮರು ವರ್ಷ ಗಾಂಧೀಜಿ ಅಸಹಾಕಾರ ಚಳವಳಿಯನ್ನು ಪ್ರಾರಂಭಿಸಿದರು.
1921 ರ ಡಿಸೆಂಬರ್ನಲ್ಲಿ ಲಾಲಾಜಿಯವರ ಬಂಧನವಾಯಿತು. ಲಾಲಾಜಿಯವರಿಗೆ 18 ತಿಂಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ಸಾರ್ವಜನಿಕರ ಪ್ರತಿಭಟನೆ ಮತ್ತು ನ್ಯಾಯಪಂಡಿತರ ವಾದಗಳಿಂದ ಎರೆಡು ತಿಂಗಳ ಅನಂತರ ಅವರ ಬಿಡುಗಡೆ ಆಯಿತು. ಅವರ ಬಿಡುಗಡೆ ಆದಾಗ ರಾತ್ರಿ ಒಂದು ಗಂಟೆ. ಅವರು ಬಾಗಿಲಿನ ಬಳಿ ಬರುತ್ತಲೇ ಮತ್ತೆ ಬಂಧಿಸಲಾಯಿತು.
1928 ರ ಅಕ್ಟೋಬರ್ 30 ನೇ ತಾರೀಕು ಭಾರತದ ರಾಜಕೀಯ ಇತಿಹಾಸದಲ್ಲಿ ದುರ್ದೈವದ ದಿವಸ. ಆ ದಿನ ಸೈಮನ್ ಕಮೀಷನ್ ಲಾಹೋರಿಗೆ ಬರುವುದಿತ್ತು. ಮುಂಜಾಗರೂಕತೆಯಾಗಿ ಆಳರಸರು ಎಲ್ಲ ವ್ಯವಸ್ಥೆಗಳನ್ನು ಮಾಡಿ ಪ್ರತಿಬಂಧಕ ಆಜ್ಞೆಯನ್ನು ಹೊರಡಿಸಿದ್ದನು. ಸೈಮನ್ ಸಮಿತಿಯ ತಂಡ ಬಂದಾಗ ದೇಶದ್ರೋಹಿಗಳಿಂದ ಸ್ವಾಗತವೊಂದು ಕಡೆ. ಕ್ರಾಂತಿಕಾರಿಗಳಿಂದ ಪ್ರತಿಭಟನೆ ಇನ್ನೊಂದು ಕಡೆ. ಅದ್ಭುತ ಹರತಾಳ, ಕಪ್ಪು ಬಾವುಟಗಳ ಸಾಗರ, ಸೈಮನ್, ಹಿಂತಿರುಗು ಎಂದಾಗ ಪೋಲಿಸರ ಲಾಠಿ ಪ್ರಹಾರ ಪ್ರಾರಂಭವಾಯಿತು. ನಿರಪರಾಧಿಗಳ ರಕ್ತ ಹರಿಯಲಾರಂಭಿಸಿತು. ಲಾಲಾಜಿಯವರ ರಕ್ಷಣೆಗಾಗಿ ಅವರ ಮಿತ್ರರಾದ ಸುಖದೇವ, ಯಶಪಾಲ್, ಭಗವತಿ ಚರಣ ಮೊದಲಾದವರು ಸುತ್ತುಗಟ್ಟಿ ನಿಂತರು.
ಪೋಲಿಸ ಅಧೀಕ್ಷಕ ಸ್ಕಾಟ್, ಲಾಲಾಜಿಯವರನ್ನು ಮತ್ತು ಅವರ ರಕ್ಷಕರನ್ನು ನೋಡಿದ. ರಕ್ಷಕರನ್ನು ಹೊಡೆಯಲು ಪೋಲಿಸರಿಗೆ ಸ್ಕಾಟ್ ಆಜ್ಞೆ ಕೊಟ್ಟ. ಸ್ಟಾಂಡರ್ಸ್ ಎಂಬ ಪೋಲಿಸ ಅಧಿಕಾರಿ ಈ ಕೆಲಸಕ್ಕೆ ಮುಂದೆ ಬಂದ. ಲಾಲಾಜಿಯವರ ತಲೆ, ಮೈಮೇಲೆಲ್ಲ ಕೈ ದೊಣ್ಣೆಯ ಪೆಟ್ಟುಗಳು ಬಿದ್ದವು. ಈ ಘಟನೆಯಿಂದ ಮುಂದೆ ರಕ್ತಪಾತ, ಕೊಲೆಗಳು, ಸಂಭವಿಸುವುದನ್ನು ಗ್ರಹಿಸಿದ ಲಾಲಾಜಿ ಕ್ರಾಂತಿಯುವಕ ತಂಡಕ್ಕೆ ಇಲ್ಲಿಂದ ಹೊರಟು ಬಿಡಿ ಎಂದು ಹೇಳಿದರು. ಗುಂಪು ಚದುರಿತು.
ಅಂದೇ ಸಂಜೆ ಪ್ರಚಂಡ ಸಭೆ ಸೇರಿತು. ಪೋಲಿಸರ ಹೇಯ ವರ್ತನೆಯನ್ನು ಉಗ್ರವಾಗಿ ಖಂಡಿಸಿ ಸೈಮನ್ ಸಮಿತಿಯನ್ನು ಬಹಿಷ್ಕರಿಸಿತು. ಆ ಸಭೆಗೆ ಪೋಲಿಸ ಡೆಪ್ಯೂಟಿ ಸೂಪರಿಟೆಂಡೆಂಟ್ ನೀಲ್ ಬಂದಿದ್ದ. ಲಾಲಾಜಿ ನೀಲ್ ಕಡೆಗೆ ತಿರುಗಿ ಅವನಿಗೆ ಅರ್ಥವಾಗಲೆಂದೇ ಇಂಗ್ಲೀಷನಲ್ಲಿ ಹೀಗೆ ಹೇಳಿದರು: ನನ್ನ ಮೇಲೆ ಇಂದು ಬಿದ್ಧ ಹೊಡೆತಗಳು, ಬ್ರಿಟಿಷ್ ಸಾಮ್ರಾಜ್ಯಶಾಹಿಯ ಶವದ ಪೆಟ್ಟಿಗೆಗೆ ಹೊಡೆದ ಕಟ್ಟಕಡೆಯ ಮೊಳೆಗಳು. ನಿಶ್ಯಕ್ತಿಯಿಂದಾಗಿ ಲಾಹೋರಿಗೆ ಹಿಂತಿರುಗಿದರು. ಅಸ್ವಸ್ಥತೆಯಿಂದ ಮಲಗಿದ ಲಾಲಾಜಿಯವರು 1928 ರ ನವೆಂಬರ್ 17 ರಂದು ಹೃದಯಘಾತದಿಂದ ಕಣ್ಮುಚ್ಚಿದರು.
ಲಾಲಾಜಿಯವರ ಮೇಲೆ ದಾಳಿ ನಡೆಸಲು ಪ್ರಮುಖವಾಗಿ ಕಾರಣನಾದ ಪೋಲಿಸ ಅಧಿಕಾರಿ ಸ್ಟ್ಯಾಂಡರ್ಸ್ ತರುಣ ಕ್ರಾಂತಿಕಾರ ಭಗತ್ ಸಿಂಗ್ ಎಂಬುವನಿಂದ ಭೀಕರ ರೀತಿಯಲ್ಲಿ ಕೊಲ್ಲಲ್ಪಟ್ಟ. ಇದು ಲಾಲಾಜಿಯವರು ನಿಧನರಾದ ಒಂದು ತಿಂಗಳಿಗೆ ಸರಿಯಾಗಿ ಡಿಸೆಂಬರ್ 17 ರಂದು ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.