ಜೈಪುರ: ಗ್ರೀಕ್ಸ್, ರೋಮನ್ಸ್, ಶೇಕ್ಸಪಿಯರ್ ಇವರನ್ನೇ ಇಂದಿನ ಪಠ್ಯದಲ್ಲಿ ಓದುವುದಾಗಿದೆ. ಆದರೆ ನಮ್ಮ ಸಂಸ್ಕೃತಿ, ನಾಗರಿಕತೆಗೆ ಪೂರಕವಾಗಿ ರಾಮಾಯಣ, ಮಹಾಭಾರತ ಕಾವ್ಯಗಳ ಕುರಿತು ಮಕ್ಕಳಿಗೆ ನಾವಿಂದು ಕಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಜೈಪುರದಲ್ಲಿ ನಡೆದಿರುವ ಸಾಹಿತ್ಯಿಕ ಹಬ್ಬದಲ್ಲಿ ’ರಿಮೆಂಬರಿಂಗ್ ದಿ ರಾಜ್’ ಗೋಷ್ಠಿಯಲ್ಲಿ ಭಾಗವಹಿಸಿ, ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಿಟಿಷರು ಭಾರತೀಯರನ್ನು ಮಾನಸಿಕ ಗುಲಾಮರನ್ನಾಗಿ ಮಾಡಿದ್ದರು. ಭಾರತದಲ್ಲಿ ಅವರು ಪರಿಚಯಿಸಿದ ಯಾವುದೇ ಶಿಕ್ಷಣ ಪದ್ಧತಿ ಇರಲಿ ಅದು ಅವರ ರಾಜಪ್ರಭುತ್ವ ಹಾಗೂ ನಮ್ಮ ಗುಲಾಮಿತನವನ್ನು ಬೆಳೆಸುವುದೇ ಆಗಿತ್ತು. ಅದರ ಪರಿಣಾಮ 70 ವರ್ಷದ ನಂತರವೂ ಇಂದಿಗೂ ನಾವು ಮಕ್ಕಳಿಗೆ ಶೇಕ್ಸಪಿಯರ್ನ ಬಗ್ಗೆ ಪಾಠ ಮಾಡುತ್ತೇವೆಯೇ ಹೊರತು, ನಮ್ಮ ಹೆಮ್ಮೆಯ ಕಾಳಿದಾಸನ ಬಗ್ಗೆ ಅಲ್ಲ ಎಂದು ತರೂರ್ ಹೇಳಿದ್ದಾರೆ.
ಶಾಲೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಕುರಿತು ಮಕ್ಕಳಿಗೆ ಕಲಿಸುವುದರ ಪರವಾಗಿ ನಾನಿದ್ದೇನೆ. ಇದರಿಂದ ನಮ್ಮ ಶಿಕ್ಷಣ ಪದ್ಧತಿ ನಮ್ಮ ಪಾರಂಪರಿಕ ಸಂಸ್ಕೃತಿಯೊಂದಿಗೆ ವೃದ್ಧಿಸುತ್ತದೆ. ಆ ಎರಡು ಮಹಾಕಾವ್ಯಗಳು ನಮ್ಮ ನಾಗರಿಕತೆಯ ಬೆನ್ನೆಲಬುಗಳು ಎಂದಿದ್ದಾರೆ.
ನಮ್ಮ ಬದುಕಿನ ಬೆಳಕು, ಮಾರ್ಗದರ್ಶಿ, ಸ್ವಯಂ ಕೈಪಿಡಿಯಾಗಿರುವ ಭಗವದ್ಗೀತೆ ಧರ್ಮಾತೀತವಾಗಿ ಎಲ್ಲರಿಗೂ ಅನ್ವಯವಾಗುವಂತದ್ದು. ಇದನ್ನು ಅಭ್ಯಸಿಸಲು ಯಾವುದೇ ವಯಸ್ಸು, ಸಮಯ, ಜಾತಿಯ ಹಂಗಿಲ್ಲ. ಇದನ್ನು ತಿಳಿಯುವ ಮೂಲಕ ನಮ್ಮ ಬದುಕನ್ನು ಉತ್ತಮಗೊಳಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.
ದೇಶದ ಹಿತ ದೃಷ್ಟಿಯಿಂದ ಎಲ್ಲ ಪಕ್ಷಗಳೂ, ರಾಜಕೀಯವನ್ನು ಬಿಟ್ಟು ಶಿಕ್ಷಣ ಪದ್ಧತಿಯ ಅಮೂಲಾಗ್ರ ಬದಲಾವಣೆಗೆ ಕಂಕಣಬದ್ಧರಾಗಬೇಕಿದೆ. ಸಾಧ್ಯವಾದಷ್ಟು ಬ್ರಿಟಿಷ್ ಶಿಕ್ಷಣ ಪದ್ಧತಿಯನ್ನು ತೊಲಗಿಸಲು ಒಗ್ಗಟ್ಟಾಗಿ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ.ಮನಮೋಹನ ವೈದ್ಯ ಅವರೂ, ಶಿಕ್ಷಣ ಪದ್ಧತಿಯ ಬದಲಾವಣೆ ಅಗತ್ಯ ಎಂದಿದ್ದರು. ಇದೀಗ ಕಾಂಗ್ರೆಸ್ನ ಶಶಿ ತರೂರ್ ಕೂಡಾ ಅವರ ಆಶಯಕ್ಕೆ ಪೂರಕವಾಗಿಯೇ ಮಾತನಾಡಿದ್ದು ಗಮನಿಸಬೇಕಾದ ಸಂಗತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.