ಗುಜರಾತ್: ಸಂಪೂರ್ಣ ಪಾರದರ್ಶಕತೆಯ ತಳಹದಿಯ ಮೇಲೆ ನೋಟು ಅಮಾನ್ಯೀಕರಣ ಕ್ರಮ ಕೈಗೊಂಡಿದ್ದು, ಜನರೂ ಅದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದರಿಂದ ಹೆಚ್ಚಾದ ಪ್ರಧಾನಿ ಮೋದಿ ಜನಪ್ರಿಯತೆ ಕಾಂಗ್ರೆಸ್ ಪಕ್ಷವನ್ನು ಹತಾಶೆಗೊಳಿಸಿದೆ ಎಂದು ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದರು.
ಗುಜರಾತ್ನಲ್ಲಿ ನಡೆದಿರುವ ವೈಬ್ರಂಟ್ ಗುಜರಾತ್ ಗ್ಲೋಬಲ್ ಸುಮಿತ್ನಲ್ಲಿ ಬುಧವಾರ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೋಟು ಅಮಾನ್ಯೀಕರಣದ ವಿರುದ್ಧ ಟೀಕಿಸುವ ಕಾಂಗ್ರೆಸ್, ತನ್ನ ಅಧಿಕಾರಾವಧಿಯಲ್ಲೇಕೆ ಇಂಥ ದಿಟ್ಟ ನಿರ್ಣಯ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷಗಳಿಗೆ ಹುಸಿ ಆರೋಪಗಳನ್ನು ಮಾಡುವುದು ರೂಢಿಯಾಗಿದೆಯೇ ಹೊರತು, ನೋಟ್ ಬ್ಯಾನ್ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಮಾತ್ರ ಸಿದ್ಧರಿಲ್ಲ ಎಂದರು.
ನೋಟು ಅಮಾನ್ಯೀಕರಣ ನಿರ್ಣಯವನ್ನು ಬಡವರು, ಮಧ್ಯಮ ವರ್ಗ ಹಾಗೂ ಪ್ರಾಮಾಣಿಕ ತೆರಿಗೆದಾರರು ಒಪ್ಪಿಕೊಂಡಿದ್ದಾರೆ. ಎಲ್ಲರಿಗೂ ಸಂತಸವಾಗಿದೆ. ಇದೀಗ ಬ್ಯಾಂಕ್ ಸೇರಿದ ಹಣದಲ್ಲಿ ಎಷ್ಟು ಕಪ್ಪು ಹಾಗೂ ಎಷ್ಟು ನ್ಯಾಯಯುತ ಹಣವಿದೆ ಎಂಬುದು ಪರಿಶೀಲನೆ ನಂತರ ತಿಳಿದು ಬರಲಿದೆ ಎಂದರು.
ಎಲ್ಲ ಸಮೀಕ್ಷೆಯ ವರದಿ ಅನ್ವಯ ಶೇ. 70 ರಿಂದ 80 ರಷ್ಟು ಜನ ಮೋದಿ ಅವರ ಈ ನಿರ್ಣಯವನ್ನು ಪ್ರಶಂಸಿಸಿದ್ದು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಹತಾಶೆಯಿಂದ ಸುಳ್ಳು ಆರೋಪಗಳಲ್ಲಿ ಕಾಳ ಕಳೆಯುತ್ತಿವೆ ಎಂದರು.
ಕಾಂಗ್ರೆಸ್ ಜನರ ಬಳಿ ಹೋಗಿ ನೋಟು ಅಮಾನ್ಯೀಕರಣದ ವಿರುದ್ಧ ಧ್ವನಿ ಎತ್ತುವಂತೆ ಪ್ರೇರೇಪಿಸುತ್ತಿವೆ. ಆದರೆ ಗುಜರಾತ್ ಪಂಚಾಯ್ತಿ ಹಾಗೂ ಮುನ್ಸಿಪಲ್ ಚುನಾವಣೆ, ಚಂಡಿಗರ್ ಮುನ್ಸಿಪಲ್ ಚುನಾವಣೆ, ಫರೀದಾಬಾದ್ ಹಾಗೂ ಮಹಾರಾಷ್ಟ್ರ ಮುನ್ಸಿಪಲ್ ಚುನಾವಣೆಯಲ್ಲಿ ಜನರು ಬಿಜೆಪಿಯನ್ನೇ ಬೆಂಬಲಿಸಿರುವುದು ಮೋದಿ ಜನಪ್ರಿಯತೆಗೆ ಸಾಕ್ಷಿ ಎಂದರು.
ಮೂಲ: ಪಿಟಿಐ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.