News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮರಳು ಲಾರಿಗಳ ಅನಾಹುತ ತಡೆಗೆ ಕ್ರಮ

ಬೆಳ್ತಂಗಡಿ: ಶಾಸಕರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ತಾಲೂಕಿನಲ್ಲಿ ಮರಳು ಲಾರಿಗಳಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಚರ್ಚೆ ನಡೆಯಿತು.

4k_d_p1
ಕಿರಿದಾಗಿರುವ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಚಾರ್ಮಾಡಿ ಘಾಟಿಯ ಮೂಲಕ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಮರಳು ಸಾಗಾಟದ ಲಾರಿಗಳೇ ಸಂಚರಿಸುತ್ತಿದ್ದು ಇತರ ವಾಹನಗಳು ಮತ್ತು ಜನಸಂಚಾರವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಹಲವು ಜೀವಗಳನ್ನು ಬಲಿ ಪಡೆದುಕೊಂಡಿದೆ. ಇವುಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕು ಪಂಚಾಯತ್‌ನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ ಪರವಾನಿಗೆ ಇರುವ ಲಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಚಾರ್ಮಾಡಿ ಘಾಟ್ ರಸ್ತೆ ಮೂಲಕ ಪ್ರತಿನಿತ್ಯ 500-700ರಷ್ಟು ಮರಳು ಲಾರಿಗಳು ಸಂಚರಿಸುತ್ತಿದೆ. ಇದನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕಾನೂನು ಬಾಹಿರವಾಗಿ ಸಂಚರಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ ಎಂದರು. ಇದಕ್ಕೆ ಶಾಸಕರು ತಾಲೂಕಿನಲ್ಲಿ ಈಗಾಗಲೇ ಮರಳು ಲಾರಿಗೆ ಹಲವಾರು ಜೀವಗಳು ಬಲಿಯಾಗಿದೇ ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸುತ್ತೇನೆ. ಯಾವ ರೀತಿಯಲ್ಲಾದರೂ ನಿಯಂತ್ರಣಕ್ಕೆ ತರಬೇಕು ಎಂದರು.

ತಾಲೂಕಿನಲ್ಲಿ ರಾಜೀವಗಾಂಧಿ ವಿದ್ಯುದೀಕರಣ ಯೋಜನೆ ಬಹುತೇಕ ಪೂರ್ಣಗೊಂಡಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಪ್ರಸ್ತಾವಿಸಿದ ಶಾಸಕರು ಇನ್ನೂ ಹಲವಾರು ಗ್ರಾಮೀಣ ಪ್ರದೇಶದ ಮನೆಗಳಿಗೆ ವಿದ್ಯುತ್ ತಲುಪಿಲ್ಲ. ಮೇ ತಿಂಗಳ ಅಂತ್ಯದೊಳಗೆ ತಾಲೂಕಿನ ಎಲ್ಲಾ ಮನೆಗಳಿಗೂ ವಿದ್ಯುತ್ ತಲುಪಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ತಾಲೂಕಿನ ಹಲವು ಪ್ರದೇಶಗಳಲ್ಲಿ ಹಳೆಯ ವಿದ್ಯುತ್ ತಂತಿಗಳು ಬೀಳುತ್ತಿದೆ. ಇದರಿಂದ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಕೆಡಿಪಿ ಸದಸ್ಯ ಹರೀಶ್ ಗೌಡ ಗಮನ ಸೆಳೆದರು. ಈ ಬಗ್ಗೆ ತಾಲೂಕಿನ ಅಗತ್ಯವಿರುವ ಪ್ರದೇಶಗಳಲ್ಲಿ ತಂತಿಗಳ ಬದಲಾವಣೆಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ನಕಲಿ ಮದ್ಯ ಹರಿದಾಡುತ್ತಿದ್ದು, ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕಿನಲ್ಲಿ ಮದ್ಯ ದುರಂತ ಸಂಭವಿಸುವ ಅಪಾಯವಿರುವ ಬಗ್ಗೆ ಈ ಹಿಂದೆಯೇ ಸೂಚನೆ ನೀಡಿದ್ದೇನೆ. ಆದರೆ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಅಕ್ರಮ ಮದ್ಯ ಮರಾಟಗಾರರ ವಿರುದ್ಧವೂ ಕೂಡಲೇ ಕ್ರಮ ಕ್ಯಗೊಳ್ಳಿ, ಹೊಟೇಲ್‌ಗಳಲ್ಲಿ ನಡೆಯುತ್ತಿರುವ ಮದ್ಯಮಾರಾಟಗಳನ್ನು ನಿಲ್ಲಿಸುವಂತೆ ಶಾಸಕರು ಅಬಕಾರಿ ಇಲಾಖೆಗೆ ಸೂಚಿಸಿದರು.

ಕಂದಾಯ ಇಲಾಖೆಯ ಹಾಗೂ ಸರ್ವೇ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಜನರ ಅಗತ್ಯಗಳಿಗೆ ಸ್ಪಂದಿಸಿ ಸರಿಯಾಗಿ ಕೆಲಸ ಮಾಡುವಂತೆ ಸೂಚಿಸಿದರು. ಧರ್ಮಸ್ಧಳ ಪೊಲೀಸ್ ಠಾಣೆಗೆ 70 ಸೆನ್ಸ್ ಜಾಗ ಗುರುತಿಸಲಾಗಿದ್ದು ಕಂದಾಯ ಇಲಾಖೆ ಅದನ್ನು ಅಳತೆ ಮಾಡಿ ಕಾದಿರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ತಾಲೂಕಿನ ಹಲವು ಅಂಗನವಾಡಿ ಕಟ್ಟಡಗಳ ಕಾಮಗಾರಿಗಳು ಅರಂಭಗೊಂಡಿದ್ದರೂ ಅನುದಾನದ ಕೊರತೆಯಿಂದಾಗಿ ಅರ್ಧದಲ್ಲಿಯೇ ಉಳಿದಿದೆ ಎಂದು ಗಮನ ಸೆಳೆಯಲಾಯಿತು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಕೊರೆಯುವ ಕೊಳವೆ ಬಾವಿಗಳು ನಿರಂತರ ವಿಫಲವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೊಳವೆ ಬಾವಿಗಳಿಗಿಂತಲೂ ನದಿ ಹಾಗೂ ಇತರ ನೀರಿನ ಮೂಲಗಳನ್ನು ಕುಡಿಯುವ ನೀರಿನ ಯೋಜನೆಗಳಿಗೆ ಉಪಯೊಗಿಸುವಂತೆ ಸದಸ್ಯರು ಸೂಚಿಸಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಹೆಚ್ಚು ಒತ್ತು ನೀಡುವಂತೆ ಹಾಗೂ ಯೋಜನೆಗಳ ಬಗ್ಗೆ ಗಮನ ಹರಿಸುವಂತೆ ಶಾಸಕರು ಸೂಚಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಪರಿಶೀಲಿಸಲಾಯಿತು. ತಾಲೂಕು ಪಂಚಯಿತಿ ಉಪಾಧ್ಯಕ್ಷ ವಿಷ್ಣು ಮರಠೆ, ಜಿ. ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಧಾಯಿ ಸಮಿತಿ ಅಧ್ಯಕ್ಷೆ ಸಿ. ಕೆ. ಚಂದ್ರಕಲಾ, ಜಿಪಂ ಸದಸ್ಯರುಗಳಾದ ಕೊರಗಪ್ಪ ನಾಯ್ಕ, ಧನಲಕ್ಷ್ಮೀ ಜನಾರ್ಧನ್, ದೇವಕಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹಂತೇಶ್ ಉಪಸ್ಧಿತರಿದ್ದರು.

ಕೃಷಿ ಇಲಾಖೆಯಿಂದ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ವೇಳೆ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಶಾಸಕರು ವಿತರಿಸಿದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ 25 ಕುಟುಂಬಗಳಿಗೆ ಸರಕಾರದಿಂದ ಮಂಜೂರಾಗಿರುವರೂ 1.35 ಕೋಟಿಯ ಚೆಕ್‌ಗಳನ್ನು ಶಾಸಕರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಅರಣ್ಯದಿಂದ ಹೊರ ಬರುವ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಹಲವಾರು ಮಧ್ಯವರ್ತಿಗಳು ಈ ಜನರನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದು ಅಂತಹವರ ಬಗ್ಗೆ ಜನರು ಎಚ್ಚರ ವಹಿಸಬೇಕು. ಯಾರಿಗೂ ಯಾವುದೇ ಕಾರಣಕ್ಕೂ ಪರಿಹಾರ ದೊರಕಿಸಿದ ಬಗ್ಗೆ ಲಂಚ ನೀಡದಂತೆ ಸಲಹೆ ನೀಡಿದರು.

ಸರಿಯಾದ ಅಧಿಕಾರಿಗಳನ್ನು ನೇಮಿಸಿ, ಕೃಷಿಕರನ್ನು ಸಹಕರಿಸುವಂತೆ ಶಾಸಕರು ಒತ್ತಾಯಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top