ಮಂಗಳೂರು ಮಹಾನಗರ ಪಾಲಿಕೆಗೆ ಆಯುಕ್ತರನ್ನು ಆದಷ್ಟು ಬೇಗ ಎತ್ತಂಗಡಿ ಮಾಡಿ, ಅವರಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗೆ ಹೇಳಿದವರು ಬೇರೆ ಯಾರೂ ಅಲ್ಲ, ಸ್ವತ: ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರು. ಉದ್ದೇಶ ಮಂಗಳೂರಿನ ಅಭಿವೃದ್ಧಿಯಾ ಅಥವಾ ಸ್ವ ಅಭಿವೃದ್ಧಿಯಾ, ದೂರು ಕೊಟ್ಟವರಿಗೆನೆ ಗೊತ್ತು, ಆದರೆ ಅದನ್ನು ಹೊರಗೆ ಹಾಕಿದ ಶೈಲಿ ಮಾತ್ರ ಸರಿಯಿರಲೇ ಇಲ್ಲ. ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ಮಂಗಳೂರು ಮಹಾನಗರ ಪಾಲಿಕೆಗೆ ಆಯುಕ್ತರು ಎಂದು ಯಾರೂ ಬೇಡಾ ಹೀಗೆ ಒಂದು ಮನವಿಯನ್ನು ಬರೆದು ಮುಖ್ಯಮಂತ್ರಿಗಳಿಗೆ ನೇರವಾಗಿ ಕೊಟ್ಟಿದ್ದರೆ ಅವರಿಗೆ ಅರ್ಥವಾಗುತ್ತಿತ್ತು. ಅದು ಬಿಟ್ಟು ಅವರು ಮಂಗಳೂರು ಊರುಸ್ಗೆ ಅಂತ ದಡಬಡಾಯಿಸಿ ಎದ್ದು ಬಂದಾಗ ಅರ್ಧ ಗಂಟೆ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಅಡ್ಡ ಹಾಕಿ ಬಿಡುವುದಾ, ಮಂಗಳೂರು ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಮುಖ್ಯಮಂತ್ರಿಯವರು ನಿಲ್ದಾಣದ ವಿವಿಐಪಿ ಕೋಣೆಯಲ್ಲಿ ಸಭೆ ನಡೆಸಿದ್ದು ಇದೇ ಪ್ರಥಮ. ಅಷ್ಟಕ್ಕೂ ಮಂಗಳೂರಿನಲ್ಲಿ ಎನೂ ತುರ್ತು ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಅಷ್ಟಕ್ಕೂ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಿ ನಾಳೆನೆ ಮಂಗಳೂರು ಸ್ಮಾರ್ಟ್ ಸಿಟಿ ಮಾಡಲು ಚರ್ಚೆ ನಡೆದದ್ದಲ್ಲ.
ಒಂದು ರಾಜ್ಯದ ಮುಖ್ಯಮಂತ್ರಿಗಳನ್ನು ಪಾಲಿಕೆಯ ಕೆಲವು ಕಾರ್ಪೊರೇಟರ್ಗಳು ಬರೊಬ್ಬರಿ ಅರ್ಧ ಗಂಟೆ ಕುಳ್ಳಿರಿಸಿ ಕಿರಿಕಿರಿ iಡುತ್ತಾರೆಂದರೆ ಊಹಿಸಿಕೊಳ್ಳಿ ಪಾಲಿಕೆಯ ಸದಸ್ಯರ ಕೆಪಾಸಿಟಿ ಬಗ್ಗೆ. ನೋಡೋಣ, ಎಲ್ಲವೂ ಸರಿಯಾಗುತ್ತೆ ಎಂದು ಸಿದ್ಧರಾಮಯ್ಯನವರು ಬಂದವರನ್ನು ಸಮಾಧಾನಗೊಳಿಸಿ ಕಳುಹಿಸಿಬಿಟ್ಟರೇನೊ ನಿಜ, ಆದರೆ ಈ ವಿಷಯ ಮಾಧ್ಯಮಗಳಲ್ಲಿ ಸೋರಿಕೆಯಾಗಿಯೇ ಹೋಗಿತ್ತು. ಆದರೂ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಗೆ ಈ ವಿಷಯ ಹೊರಗೆ ಗೊತ್ತಾದ ಬಗ್ಗೆ ಕೊಂಚವೂ ಮುಜುಗರವಿಲ್ಲ. ಪಾಲಿಕೆಯ ಮುಖ್ಯಸಚೇತಕ ಶಶಿಧರ್ ಹೆಗ್ಡೆಯವರು ಕೆಲವು ಟಿವಿಯವರನ್ನು ಕರೆದು ಪಾಲಿಕೆಯ ಈಗಿನ ಕಮೀಷನರ್ ಹೆಪ್ಸಿಬಾ ರಾಣಿಯವರ ಬಗ್ಗೆ ಕೆಂಡಕಾರಿದ್ದಾರೆ. ಅಲ್ಲಿಗೆ ಮಂಗಳೂರಿನ ಮಹಾ ಜನರಿಗೆ ಒಂದು ವಿಷಯ ಗ್ಯಾರಂಟಿಯಾಗಿ ಹೋಗಿದೆ. ರಾಣಿ ತುಂಬಾ ದಿನ ಪಾಲಿಕೆಯಲ್ಲಿ ರಾಜ್ಯಭಾರ ಮಾಡುವುದಿಲ್ಲ.
ಆವತ್ತು ವಿಮಾನ ನಿಲ್ದಾಣದಲ್ಲಿ ನಡೆದ ತುರ್ತು ಸಭೆಯಲ್ಲಿ ಉಭಯ ಜಿಲ್ಲೆಯ ಉಸ್ತುವಾರಿ ಸಚಿವರಿದ್ದರು. ಮಂಗಳೂರು ದಕ್ಷಿಣ ಮತ್ತು ಉತ್ತರದ ಶಾಸಕರಿದ್ದರು. ಅವರಿಗೆಲ್ಲಾ ಈ ವಿಷಯವನ್ನು ತಮ್ಮ ತಮ್ಮಲ್ಲೇ ಚರ್ಚಿಸಿ ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ ನಮ್ಮ ಪಾಲಿಕೆಯ ಕಮೀಷನರ್ ಬಂದು ಸರಿಯಾಗಿ ಮಂಗಳೂರನ್ನೇ ನೋಡಿಲ್ಲ. ಮಂಗಳೂರಿಗೆ ಬಂದ ತಕ್ಷಣ ಪ್ರಥಮ ಚುಂಬನಂ ದಂತಭಗ್ನಂ ಎಂಬಂತೆ ಪರಿಷ್ಟಿತ ಜಾತಿಯವರ ಮನೆಯ ಒಳಗೆ ಹೋಗಿಲ್ಲ ಎಂದು ವಿವಾದ ತಂದುಕೊಂಡರು, ಅದರ ಬಳಿಕ ಅದು ಸರಿಯಾಯಿತು, ಅದು ಬೇರೆ ವಿಷಯ. ಅದರ ನಂತರ ಹೆಪ್ಸಿಬಾ ರಾಣಿಯವರು ತಮ್ಮ ಸುತ್ತಲೂ ಕೋಟೆಯೊಂದನ್ನು ಕಟ್ಟಿಕೊಂಡರು. ಪಾಲಿಕೆಯ ವ್ಯಾಪ್ತಿಯಲ್ಲಿ ಜನರೊಂದಿಗೆ ಸಂಪರ್ಕ ಕಡಿದುಕೊಂಡರು. ಯಾರಿಗೂ ಸುಲಭದಲ್ಲಿ ಸಿಗುತ್ತಿರಲಿಲ್ಲ. ಅವರನ್ನು ಭೇಟಿಯಾಗುವುದೆಂದರೆ ಮುಖ್ಯಮಂತ್ರಿಗಳನ್ನು ಭೇಟಿಯಾಗುವುದಕ್ಕಿಂತ ಕಷ್ಟ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು. ಪಾಲಿಕೆಯ ಸದಸ್ಯರು ಇವರನ್ನು ಮಾತನಾಡಿಸಲು ಹೋದರೂ ಭೇಟಿಗಾಗಿ ಕಾಯಬೇಕಾಯಿತು. ಪರಿಸ್ಥಿತಿ ಅಲ್ಲಿಂದ ಹದಗೆಡುತ್ತಾ ಹೋಗಲು ಪ್ರಾರಂಭವಾಯಿತು. ನಾವು ಗೆದ್ದು ಬಂದ ಪಾಲಿಕೆಯ ಸದಸ್ಯರು. ನಮಗೆ ಮರ್ಯಾದೆ ಇಲ್ಲ ಎಂದರೆ ಹೇಗೆ, ಇವರನ್ನು ಹೀಗೆ ಬಿಟ್ಟರೆ ನಾಳೆ ಇವರು ನಾಳೆ ನಮ್ಮ ಆಮ್ದನಿಗೂ ಕಲ್ಲು ಹಾಕುತ್ತಾರೆ. ಇವರನ್ನು ಇಲ್ಲಿಂದ ಓಡಿಸಬೇಕು ಎಂದು ಯೋಚಿಸುವ ಒಂದು ಗುಂಪು ಕಾಂಗ್ರೆಸ್ನಲ್ಲಿ ಹುಟ್ಟಿಕೊಂಡಿತು.
ದೆಹಲಿ ಸ್ಕೂಲ್ ಆಫ್ ಇಕನಾಮಿಕ್ಸ್ನಲ್ಲಿ ಕಲಿತು ಬಂದಿರುವ ರಾಣಿಯವರಿಗೆ ತಾನು ಕಲಿತ ವಿದ್ಯೆಯನ್ನು ಧಾರೆ ಎರೆದು ಪಾಲಿಕೆಯಲ್ಲಿ ಏನಾದರೂ ಮಾಡಬೇಕೆಂಬ ಗುರಿ ಇದೆ. ಆಂಧ್ರಪ್ರದೇಶದಿಂದ ಬಂದಿರುವ ಸಣ್ಣ ವಯಸ್ಸಿನ ಹೆಣ್ಣು ಮಗಳಿಗೆ ತಾನು ಭ್ರಷ್ಟಾಚಾರಿ ಎನಿಸಿಕೊಳ್ಳಲು ಇಷ್ಟವಿಲ್ಲ. ಆದರೆ ಮಂಗಳೂರಿನ ಪಾಲಿಕೆಯ ಆಯುಕ್ತರ ಖುರ್ಚಿ ಫಲವತ್ತಾದ ಹುಲ್ಲುಗಾವಲು. ಇಲ್ಲಿ ನೀವೂ ತಿನ್ನಿ, ನಾವೂ ತಿನ್ನುತ್ತೇವೆ ಎನ್ನುವ ಪಾಲಿಸಿ. ಅಂಥವರು ಇಲ್ಲಿ ತುಂಬಾ ದಿನ ಬಾಳುತ್ತಾರೆ. ಆದರೆ ವಿಭಿನ್ನವಾಗಿ ಏನಾದರೂ ಮಾಡುತ್ತೇನೆ ಎಂದು ಹೊರಡುವವರಿಗೆ ಇಲ್ಲಿ ಪಾಲಿಕೆಯ ಸದಸ್ಯರೇ ಫಿಟ್ಟಿಂಗ್ ಇಟ್ಟು ಬಿಡುತ್ತಾರೆ. ಯಾಕೆ ಗೊತ್ತಾ?
ಮಂಗಳೂರು ಪಾಲಿಕೆಯಲ್ಲಿರುವ ಸದಸ್ಯರಲ್ಲಿ ಅರ್ಧದಷ್ಟು ಮಂದಿಗೆ ಪಾಲಿಕೆಯ ಸದಸ್ಯರಾಗಿ ಇರುವುದೇ ಉದ್ಯೋಗ. ಅವರಿಗೆ ಪಾಲಿಕೆಯ ಕಚೇರಿಗಳೇ ತಮ್ಮ ಜೀವನದ ದಾರಿಗಳು. ಇಲ್ಲಿ ಹುಟ್ಟಿ ಇಲ್ಲಿಯೇ ಬೆಳೆದು ಇಲ್ಲಿಯೇ ಬದುಕುತ್ತೇವೆ ಎನ್ನುವ ಮಟ್ಟಿಗೆ ಕೆಲವರು ಪಾಲಿಕೆಯನ್ನು ತಮ್ಮ ಜೀವನವನ್ನಾಗಿ ಮಾಡಿದ್ದಾರೆ. ಸದಸ್ಯರಾಗಿ ಇದ್ದುಕೊಂಡು ಹೇಗೆ ತಿಂಗಳಿಗೆ ಇಂತಿಷ್ಟು(!) ದುಡಿಯಬೇಕು ಎನ್ನುವುದು ಅವರಿಗೆ ಕರತಲಾಮಲಕ. ಈ ಹಂತದಲ್ಲಿ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ಸಿನ ಮನಸ್ಥಿತಿಯ ವಿರುದ್ಧ ಹೋರಾಡಬೇಕು. ದಕ್ಷ ಆಯುಕ್ತರನ್ನು ಪಾಲಿಕೆಯಿಂದ ಎತ್ತಂಗಡಿ ಮಾಡಲು ಕಾಂಗ್ರೆಸ್ಸಿಗರು ಮಾಡುತ್ತಿರುವ ಸಂಚನ್ನು ಜನರ ಮುಂದೆ ಇಡಬೇಕು. ಸುದ್ದಿಗೋಷ್ಟಿ ಮಾಡುವ ಮೂಲಕ ಕಾಂಗ್ರೆಸ್ಸ್ ಪಕ್ಷಕ್ಕೆ ಪ್ರಾಮಾಣಿಕ ಅಧಿಕಾರಿಗಳು ಯಾಕೆ ಬೇಡಾ ಎನ್ನುವುದನ್ನು ಸಾಬೀತು ಪಡಿಸಿ ತೋರಿಸಬೇಕು.
ಹೆಪ್ಸಿಬಾ ರಾಣಿಯವರು ಪ್ರಚಾರವಿಲ್ಲದೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ವಿವರಿಸಬೇಕು. ಕಳೆದ ಒಂದೂವರೆ ವರ್ಷ ಪಾಲಿಕೆಗೆ ಆಯುಕ್ತರಿಲ್ಲದೆ ಅಭಿವೃದ್ಧಿ ಹೇಗೆ ಸೊರಗಿತು ಎನ್ನುವುದನ್ನು ವಿವರಿಸಬೇಕು. ಹೆಪ್ಸಿಬಾ ರಾಣಿ ಅವರು ಆಯುಕ್ತರಾಗಿ ಮುಂದುವರೆದರೆ ಕಾಂಗ್ರೆಸ್ಗೆ ಯಾಕೆ ತೊಂದರೆ ಎಂದು ಪ್ರಶ್ನಿಸಬೇಕು. ಬಿಜೆಪಿ ಇದ್ಯಾವುದೂ ಮಾಡದೇ ಹೋದರೆ, ಮನಪಾ ಒರ್ವ ಒಳ್ಳೆಯ ಆಯುಕ್ತರನ್ನು ವಿನಾಕಾರಣ ಕಳೆದುಕೊಳ್ಳಲಿದೆ.
ಕಾಂಗ್ರೆಸ್ಸಿನ ಮುಖ್ಯ ಆರೋಪ ಎಂದರೆ ಆಯುಕ್ತರ ಚೇಂಬರ್ ಒಳಗೆ ಹೋಗಲು ನಮಗೆ ಅನುಮತಿ ಪಡೆಯಬೇಕಾಗುತ್ತದೆ. ಹಾಗೆಂದು ಈಗಿನ ಆಯುಕ್ತರು ನಿಯಮ ಮಾಡಿದ್ದಾರೆ. ಅಷ್ಟಕ್ಕೂ ಒಬ್ಬ ಸದಸ್ಯರಿಗೆ ಆಯುಕ್ತರ ಬಳಿ ಆಗಾಗ ಎನು ಕೆಲಸ ಇರುತ್ತೇ, ಈ ಪ್ರಶ್ನೆಗೆ ಕಳೆದ ೧೨ ವರ್ಷಗಳಿಂದ ಸದಸ್ಯರಾಗಿರುವ ಒಬ್ಬ ಕಾರ್ಪೋರೇಟರ್ ಹೀಗೆ ಹೇಳುತ್ತಾರೆ ” ನಾನು ಕಳೆದ ಹನ್ನೆರಡು ವರ್ಷಗಳಲ್ಲಿ ಒಟ್ಟು ೧೦ ಬಾರಿ ಕಮೀಷನರ್ ಚೆಂಬರ್ಗೆ ಹೋಗಿರಬಹುದೇನೊ, ಆದರೆ ಕೆಲವರು ವಿವಿಧ ಫ್ಲಾಟ್ ವಸತಿ ಸಂಕೀರ್ಣಕ್ಕೆ ಪರವಾನಿಗೆ, ಹಾಗೇ ಹೀಗೆ ಎಂದು ವರ್ಷಕ್ಕೆ ಹತ್ತಾರು ಬಾರಿ ಕಮೀಷನರ್ ಬಳಿ ಹೋಗುತ್ತಾರೆ. ವಾರ್ಡಿನ ನೀರು ಇತರೆ ಸಮಸ್ಯೆ ಇದ್ದರೆ ಅದಕ್ಕೆ ಸಹಾಯಕ ಇಂಜಿನಿಯರ್ಗಳು ಇರ್ತಾರೆ, ಅದನ್ನು ಬಿಟ್ಟು ಕಮೀಷನರ್ ಬಳಿ ಯಾಕೆ ಹೋಗ್ತಾರೋ, ಗೊತ್ತಿಲ್ಲ” ಎನ್ನುತ್ತಾರೆ.
ಒಟ್ಟಿನಲ್ಲಿ ಹೊಸ ಆಯುಕ್ತರನ್ನು ಇಲ್ಲಿಯೇ ಉಳಿಸಿದರೆ ಏನಾಗುತ್ತೇ, ಮಂಗಳೂರಿನ ತ್ಯಾಜ ಶೇಖರಣಾ ವ್ಯವಸ್ಥೆಯ ಮೇಲೆ ಪಾಲಿಕೆಗೆ ಹತೋಟಿ ಸಿಗುತ್ತದೆ. ಯಾವುದೇ ಕೆಲಸ ಎಸ್ಟಿಮೇಶನ್ ಆಗದೇ ಪ್ರಾರಂಭವಾಗುವುದಿಲ್ಲ. ಮಂಗಳೂರಿನ ಪುರಭವನಕ್ಕೆ ಆದ ಗತಿ ಬೇರೆ ಕಾಮಗಾರಿಗೆ ಆಗುವುದಿಲ್ಲ. ಭಷ್ಟಾಚಾರ ಕಡಿಮೆಯಾಗುತ್ತದೆ ಮತ್ತು ಕೊನೆಯದಾಗಿ ಮಂಗಳೂರಿನ ತೆರಿಗೆದಾರರ ಶ್ರಮಕ್ಕೆನ್ಯಾಯ ಸಿಗುತ್ತದೆ. ಒಂದು ವೇಳೆ ಹೆಪ್ಸಿಬಾ ರಾಣಿಯವರ ಎತ್ತಂಗಡಿ ಆಯಿತು ಎಂದೇ ಇಟ್ಟುಕೊಳ್ಳೋಣ. ಏನಾಗುತ್ತೇ, ಕಾಂಗ್ರೆಸ್ಸಿಗರ ಬಗ್ಗೆ ಜನರಿಗೆ ಕೆಟ್ಟ ಸಂದೇಶ ಹೋಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.