News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ಮಾತೆಯರ ಮಮತೆಗೆ ಬೆಲೆ ಕಟ್ಟಲು ಸಾಧ್ಯವೆ?

Motherಅದು 1975 ರ ತುರ್ತುಪರಿಸ್ಥಿತಿಯ ಕರಾಳ ದಿನಗಳು. ಆರೆಸ್ಸೆಸ್ ಮೇಲೆ ಸರ್ಕಾರ ನಿಷೇಧ ಹೇರಿದ್ದರಿಂದ ಸಂಘದ ಕಾರ್ಯಕರ್ತರೆಲ್ಲ ಭೂಗತರಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ ಸಂದರ್ಭ. ನಾನು ಆಗಷ್ಟೇ ಪದವಿ ಮುಗಿಸಿ ಸಂಘದ ತಾಲೂಕು ಪ್ರಚಾರಕನಾಗಿ ದಕ್ಷಿಣ ಕನ್ನಡದ ಸುಳ್ಯಕ್ಕೆ ಬಂದಿದ್ದೆ. ಅಲ್ಲಿಗೆ ಬಂದ ಒಂದು ವಾರದಲ್ಲೇ ಸಂಘದ ಮೇಲೆ ನಿಷೇಧ ಹೇರಿದ್ದರಿಂದಾಗಿ ಯಾವುದೇ ಚಟುವಟಿಕೆಗಳನ್ನು ಬಹಿರಂಗವಾಗಿ ನಡೆಸುವಂತಿರಲಿಲ್ಲ. ಕಾರ್ಯಾಲಯಗಳಿಗೆ ಬೀಗ ಮುದ್ರೆ ಬಿದ್ದಿದ್ದರಿಂದಾಗಿ ಹಿತೈಷಿಗಳ ಮನೆಯಲ್ಲೇ ವಾಸ . ಸಂಘದ ಕಾರ್ಯಕರ್ತರೆಂದು ಅನುಮಾನ ಬಂದರೆ ಅಂತಹ ಮನೆಗಳ ಮೇಲೂ ಪೊಲೀಸರು ದಾಳಿ ನಡೆಸಿ, ಅಲ್ಲಿರುತ್ತಿದ್ದ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ಯುತ್ತಿದ್ದರು. ಸಂಘದ ಪ್ರಮುಖ ಕಾರ್ಯಕರ್ತರನ್ನು ಮನೆಗೆ ಸೇರಿಸುವುದೆಂದರೆ ಬೀದಿಯಲ್ಲಿದ್ದ ಮಾರಿಯನ್ನು ಮನೆಗೆ ಕರೆತಂದಂತೆ ಅಥವಾ ವಿಪತ್ತೆಂಬ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡಂತೆ ಎಂಬುದು ಗೊತ್ತಿದ್ದರೂ ಆಗ ಆನೇಕ ಮನೆಗಳು ಸಂಘದ ಕಾರ್ಯಕರ್ತರ ಸುರಕ್ಷಿತ ಅಡಗುದಾಣಗಳಾಗಿದ್ದವು. ಮುಖ್ಯವಾಗಿ ಆ ಮನೆಗಳ ತಾಯಂದಿರು ಧೈರ್ಯವಹಿಸಿ ಕಾರ್ಯಕರ್ತರಿಗೆ ಆಶ್ರಯ, ಊಟ ತಿಂಡಿ, ಧೈರ್ಯ, ಪ್ರೀತಿ, ಭರವಸೆ ಎಲ್ಲವನ್ನೂ ನೀಡಿದ್ದರಿಂದಲೇ ಸಂಘ ನಿಷೇಧದ ಬ್ರಹ್ಮಾಸ್ತ್ರದಿಂದ ಪಾರಾಗಿ ಗಟ್ಟಿಯಾಗಿಯೇ ಬೆಳೆದದ್ದು. ಮನೆಯ ಗಂಡಸರು ಕೊಂಚ ಹೆದರಿದ್ದರೂ ತಾಯಂದಿರು ಮಾತ್ರ ಧೈರ್ಯ ವಹಿಸಿ, ಪೊಲೀಸರ ಪಾಲಾಗಬೇಕಿದ್ದ ಕಾರ್ಯಕರ್ತರಿಗೆ ರಕ್ಷಣೆ ನೀಡಿದ್ದನ್ನು ಎಂದಿಗೂ ಮರೆಯುವಂತಿಲ್ಲ. ಸುಳ್ಯ ಸಮೀಪದ ಜಾಲ್ಸೂರು ಉಪೇಂದ್ರ ಕಾಮತ್ ಅವರ ಪತ್ನಿ ಪದ್ಮಕ್ಕ, ಸುಬ್ರಹ್ಮಣ್ಯದ ಅನಂತ ನಲ್ಲೂರಾಯರ ಪತ್ನಿ, ಸುಳ್ಯದ ದಿವಂಗತ ಪಟ್ಟಪ್ಪ ಜೋಶಿಯವರ ಅಕ್ಕ, ಧನಂಜಯ ವಾಗ್ಲೆ, ಉಮೇಶ್, ಕುಕ್ಕುಜಡ್ಕದ ರವೀಶ್ ಅವರ ತಾಯಂದಿರು ಆಗ ಸಂಘದ ಕಾರ್ಯಕರ್ತರಿಗೆ ಮಾಡಿದ ಸೇವೆ ನಿಜಕ್ಕೂ ಬೆಲೆ ಕಟ್ಟಲಾಗದಂತಹದು. ರಾತ್ರಿ ಎಷ್ಟೇ ಹೊತ್ತಿಗೆ ಬಂದರೂ ಬೇಸರವಿಲ್ಲದೆ ಬಾಗಿಲು ತೆಗೆದು ಊಟ ಹಾಕಿ, ಕೆಲವೊಮ್ಮೆ ಅವರಿಗೆ ಅಗತ್ಯವಿರುವ ಬಟ್ಟೆಬರೆ ಒದಗಿಸಿ, ಹುಷಾರಾಗಿರಿ, ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳಬೇಡಿ ಎಂದು ಎಚ್ಚರಿಕೆಯ ಮಾತು ಹೇಳುವವರೆಗೂ ಕಾಳಜಿ ತೋರಿಸುತ್ತಿದ್ದರು. ಜಾಲ್ಸೂರು ಪದ್ಮಕ್ಕ ಅವರಂತೂ ನನಗೆ `ದುಗು, ಈ ಊರಿನ ಪರಿಚಯ ನಿನಗೆ ಅಷ್ಟಾಗಿ ಇಲ್ಲ. ಎಲ್ಲೆಲ್ಲೋ ತಿರುಗಾಡಿ ಸಿಕ್ಕಿಹಾಕಿಕೊಳ್ಳಬೇಡ. ಹುಷಾರಾಗಿರಬೇಕು’ ಎಂದು ಅದೇಷ್ಟೋ ಬಾರಿ ಪ್ರೀತಿಯಿಂದ ಹೇಳಿದ್ದರು. ಇತ್ತೀಚೆಗೊಮ್ಮೆ ಅವರ ಮನೆಗೆ ಹೋದಾಗ , ಮತ್ತೆ ಅದೇ ವಾತ್ಸಲ್ಯಪೂರ್ಣ ಧ್ವನಿಯಲ್ಲಿ `ದುಗು, ಈಗ ನೀವೆಲ್ಲ ದೊಡ್ಡ ಮನುಷ್ಯರಾಗಿದ್ದೀರಿ. ನಮ್ಮ ಮನೆಗೇ ಬರೊದಿಲ್ಲ ಅಲ್ವಾ? ಬರೀ ಪೇಪರ್‌ನಲ್ಲೇ ನಿಮ್ಮ ಚಿತ್ರ ನೋಡ್ಬೇಕಾ?’ ಎಂದು ಹುಸಿಮುನಿಸು ತೋರಿ ಮಾತನಾಡಿಸಿದ್ದರು. ತುರ್ತುಪರಿಸ್ಥಿತಿಯ ದಿನಗಳಲ್ಲಿ ನಾವೆಲ್ಲ ಅವರ ಮನೆಗೆ ಪೊಲೀಸರಿಗೆ ಗೊತ್ತಾಗದಂತೆ ಹೋಗಿ ಊಟ ಮಾಡಿ ಬರುತ್ತಿದ್ದುದು, ಅಲ್ಲೇ ಬೈಠಕ್ ನಡೆಸುತ್ತಿದ್ದುದು ಎಲ್ಲವನ್ನೂ ಅವರು ನೆನಪಿಸಿಕೊಂಡಿದ್ದರು.

***

ತುರ್ತುಪರಿಸ್ಥಿತಿಯ ಸಂದರ್ಭದಲ್ಲೇ ಬೆಂಗಳೂರಿನ ಜಯನಗರದಲ್ಲಿ ಬಿ.ಎನ್. ಮೂರ್ತಿ (ಶಾಸಕ ಬಿ. ಎನ್. ವಿಜಯಕುಮಾರ್ ಅವರ ಅಣ್ಣ) ಅವರ ಮನೆಯಲ್ಲಿ ಕೆಲ ದಿನಗಳಿದ್ದೆ. ಮೂರ್ತಿಯವರ ತಾಯಿಗೆ ನನ್ನನ್ನು ಕಂಡರೆ ಅದೇನೋ ಅಕ್ಕರೆ. ಅವರ ಮನೆಗೆ ನಾನು ಹೋದ ಮೊದಲನೆಯ ದಿನವೇ ನನ್ನನ್ನು ಪ್ರೀತಿಯಿಂದ ಮಾತನಾಡಿಸಿ ಊಟ ಹಾಕಿದ್ದರು. ಅವರ ಮಗ ಹರಿಯನ್ನು ನಾನು ಹೋಲುತ್ತಿದ್ದೆನಂತೆ. ಹಾಗೆಂದು ಮೂರ್ತಿಯವರ ತಾಯಿಯೇ ಒಮ್ಮೆ ನನಗೆ ಹೇಳಿದ್ದರು. ನಾನು ಸಂಘದ ಭೂಗತ ಚಟುವಟಿಕೆಗಳನ್ನು ಮುಗಿಸಿ ರಾತ್ರಿ ವೇಳೆ ಮನೆಗೆ ಬರುವುದು ಕೊಂಚ ತಡವಾದರೂ ಆ ತಾಯಿ ಆತಂಕ ಪಡುತ್ತಿದ್ದರು. ಒಂದು ತಿಂಗಳ ಬಳಿಕ ಸಂಘದ ಪ್ರಮುಖರು ನನ್ನನ್ನು ಮಲೇಶ್ವರ ಕ್ಷೇತ್ರಕ್ಕೆ ಹೋಗಲು ತಿಳಿಸಿದರು. ಪ್ರಮುಖರ ಸೂಚನೆಯಂತೆ ನಾನು ಅವರ ಮನೆಯಿಂದ ಹೊರಡಲು ಇನ್ನೇನು ತಯಾರಿ ನಡೆಸುತ್ತಿರುವಂತೆಯೇ ಆ ತಾಯಿ ಬೇಸರ ಪಟ್ಟುಕೊಂಡು ಕಣ್ಣೀರು ಹಾಕಿದ್ದರು. ನಾನಾದರೋ `ಏಕೆ ಬೇಸರ ಮಾಡಿಕೊಳ್ತೀರಿ? ನಾನು ಬೆಂಗಳೂರಿನಲ್ಲೇ ಇರ್‍ತೀನಲ್ಲಾ ‘ ಎಂದೆ. ಆದರೂ ಅವರಿಗೆ ಸಮಾಧಾನವಾಗಿರಲಿಲ್ಲ. ಅವರ ಮನೆಯಿಂದ ನಾನು ದೂರ ಹೋಗುವುದೇ ಅವರಿಗೆ ಇಷ್ಟವಿರಲಿಲ್ಲ. ಅಷ್ಟರ ಮಟ್ಟಿಗೆ ನನ್ನನ್ನು ಅವರು ಹಚ್ಚಿಕೊಂಡಿದ್ದರು. ಕೊನೆಗವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸಾವಿಗೀಡಾದಾಗ ವಿಲ್ಸನ್ ಗಾರ್ಡನ್‌ನ ಚಿತಾಗಾರದಲ್ಲಿ ಕೊನೆಯ ಬಾರಿ ಅವರ ದರ್ಶನ ಮಾಡಿದ್ದೆ. ಸಾಮಾಜಿಕ ಕಾರ್ಯಕರ್ತರ ಮೇಲೆ ಆ ತಾಯಿ ಸುರಿಸಿದ ಇಂತಹ ನಿರ್ವ್ಯಾಜ ಪ್ರೇಮವನ್ನು ಮರೆಯುವುದು ಹೇಗೆ?

***

1980 ರಿಂದ 85 ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಘದ ಪ್ರಚಾರಕನಾಗಿದ್ದಾಗಲೂ ಇಂತಹ ಇನ್ನಷ್ಟು ಸ್ಮರಣೀಯ ಅನುಭವಗಳು. ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ಟಿ.ಎನ್.ಸ್ವಾಮಿ ಎಂಬ ಕಾರ್ಯಕರ್ತರ ತಾಯಿ ನಾನು ಹೋದಾಗಲೆಲ್ಲ ಹೊಟ್ಟೆ ತುಂಬಾ ಊಟ ಹಾಕುತ್ತಿದ್ದರು. ಬೆಳಿಗ್ಗೆ ಅಷ್ಟೊತ್ತಿಗೇ ಎದ್ದು ಹಂಡೆಯಲ್ಲಿ ಬಿಸಿ ನೀರು ಕಾಯಿಸಿ, ಅನಂತರ ನನ್ನನ್ನು ಎಬ್ಬಿಸಿ ಎಣ್ಣೆ ಸ್ನಾನ ಮಾಡಿಸುತ್ತಿದ್ದರು. ಮೊದಮೊದಲು ನನಗೆ ತೀರಾ ಮುಜುಗರವಾಗಿದ್ದೂ ಉಂಟು. ಆದರೆ ಆ ತಾಯಿಯ ನಿಷ್ಕಲ್ಮಶ ಪ್ರೀತಿಯ ಸೇವೆಯಿಂದ ಮನಸ್ಸಿಗೆ , ಶರೀರಕ್ಕೆ ಬಣ್ಣಿಸಲಾಗದಂತಹ ಆನಂದ ಸಿಗುತ್ತಿದ್ದುದಂತೂ ನಿಜ. ನಾನು ಅವರ ಮನೆಗೆ ಹೋದಾಗಲೆಲ್ಲ ಈ `ಸೇವೆ’ ತಪ್ಪುತ್ತಿರಲಿಲ್ಲ. ಬುದ್ಧಿ ತಿಳಿದ ಬಳಿಕ ನನ್ನ ಸ್ವಂತ ತಾಯಿ ನನಗೆ ಎಣ್ಣೆ ನೀರಿನ ಸ್ನಾನ ಮಾಡಿಸಿದ ನೆನಪು ನನಗಿಲ್ಲ. ಆದರೆ ಮತ್ತೂರಿನ ಆ ತಾಯಿಯ ಅಂತಃಕರಣಪೂರ್ವಕ ಪ್ರೀತಿ ನನಗೆ ಆನೆಯ ಬಲವನ್ನೇ ನೀಡಿದೆ ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ.

ಶಿವಮೊಗ್ಗ ಸಮೀಪದ ಮಂಡೇನಕೊಪ್ಪ ಎಂಬುದು ಒಂದು ಲಂಬಾಣಿ ತಾಂಡ. ಅಲ್ಲಿನ ಮನೆಯೊಂದಕ್ಕೆ ಒಮ್ಮೆ ನಾವು ಕೆಲವು ಕಾರ್ಯಕರ್ತರು ಊಟಕ್ಕಾಗಿ ಹೋಗಿದ್ದೆವು. ಮನೆಯನ್ನೆಲ್ಲ ಸೆಗಣಿಯಿಂದ ಸಾರಿಸಿ, ಶುಚಿಗೊಳಿಸಿ ತಟ್ಟೆ ಹಾಕಿ ಊಟ ಬಡಿಸಿದರು. ಊಟವಾದ ಬಳಿಕ ಎಂಜಲು ಬಳಿದು ಶುಚಿಗೊಳಿಸಿ, ನಾವು ಹೊರಡುವ ಮುನ್ನ ಅಡುಗೆ ಮಾಡಿ ಬಡಿಸಿದ ಆ ಮನೆಯ ತಾಯಿ ನಮ್ಮೆಲ್ಲರ ಕಾಲುಗಳಿಗೆ ಸಾಷ್ಟಾಂಗವೆರಗಿದ್ದರು ! ಶಿವಮೊಗ್ಗದ ಅಂಗಳಯ್ಯನ ಕೇರಿಯ ಕಾರ್ಯಕರ್ತರೊಬ್ಬರ ಮನೆಗೆ ಹೋದಾಗಲೂ ಅದೇ ರೀತಿಯ ಅನುಭವ. ಊಟವಾದ ಬಳಿಕ ನಮ್ಮೆಲ್ಲರಿಗೂ ಆ ಮನೆಯ ತಾಯಿ ಸಾಷ್ಟಾಂಗ ನಮಸ್ಕಾರ ಮಾಡಿದಾಗ ತೀವ್ರ ಮುಜುಗರವಾಗಿತ್ತು. ಸಾಮಾಜಿಕ ಕಾರ್ಯಕರ್ತರೆಂದರೆ ದೇವರಿಗೆ ಸಮಾನ ಎಂಬ ಈ ತಾಯಂದಿರ ಶ್ರದ್ಧೆ, ಗೌರವಗಳಿಗೆ ನಾವೆಲ್ಲ ನಿಜವಾಗಿಯೂ ಅರ್ಹರೆ ಎಂಬ ಪ್ರಶ್ನೆ ನನ್ನನ್ನು ಪದೇ ಪದೇ ಕಾಡಿದ್ದುಂಟು.

***

1978 ರಲ್ಲಿ ಅರಸೀಕೆರೆಯಲ್ಲಿದ್ದಾಗ ರಾಮಚಂದ್ರ ಎಂಬ ಕಾರ್ಯಕರ್ತರ ಮನೆಗೆ ಆಗಾಗ ಊಟಕ್ಕೆ ಹೋಗುತ್ತಿದ್ದೆ. ಮೊದಲ ದಿನ ಊಟಕ್ಕೆ ಹೋದಾಗ ತಟ್ಟೆಯಲ್ಲಿ ರಾಗಿ ಮುದ್ದೆ ತಂದಿಟ್ಟು, ತಟ್ಟೆಯ ಕೆಳಗೆ ಒಂದು ಇದ್ದಿಲು ತುಂಡನ್ನು ಇಟ್ಟರು. ಅನಂತರ ರಾಗಿ ಮುದ್ದೆ ನಂಜಿಕೊಳ್ಳಲು ಬಸ್ಸಾರು ಬಡಿಸಿದರು. ನನಗೆ ರಾಗಿ ಮುದ್ದೆ ತಿನ್ನುವುದು ಹೇಗೆಂದೇ ಅದುವರೆಗೆ ಗೊತ್ತಿರಲಿಲ್ಲ. ಮುದ್ದೆ ಮುರಿದು ಊಟ ಮಾಡುವುದು ಹೇಗೆಂದು ಕಲಿಸಿಕೊಟ್ಟವರು ರಾಮಚಂದ್ರ ಅವರ ಪತ್ನಿ, ಆ ಮಹಾ ತಾಯಿ. ಮುದ್ದೆ ತಿನ್ನುವ ಸಂದರ್ಭ ಬಂದಾಗಲೆಲ್ಲ ಆ ಮಹಾ ತಾಯಿಯ ನೆನಪು ಆಗುತ್ತಿರುತ್ತದೆ. ಆದೇ ಊರಿನ ಮಾಜಿ ಶಾಸಕರಾಗಿದ್ದ ಬಸವರಾಜ್ ಅವರ ಪತ್ನಿ ವಿಶಾಲಕ್ಕ ನಾನು ಜ್ವರಪೀಡಿತನಾಗಿ , ಪ್ರಜ್ಞೆ ತಪ್ಪಿ ಅಸ್ಪತ್ರೆಯಲ್ಲಿದ್ದಾಗ ಮಾಡಿದ ಆರೈಕೆಯನ್ನಂತೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನನ್ನು ಮನೆಯ ಮಗನಂತೆ ಅವರು ಆಗ ನೋಡಿಕೊಂಡು ಉಪಚರಿಸಿದ್ದರು.

***

ಶಿವಮೊಗ್ಗದಲ್ಲಿದ್ದಾಗ ಹಲವು ಬಾರಿ ಜಿಲ್ಲೆಯ ಪ್ರವಾಸ ಮುಗಿಸಿ ತಡರಾತ್ರಿ ಮರಳಿ ಬಂದಾಗ ಊಟಕ್ಕೆ ಎಲ್ಲಿಗೆ ಹೋಗುವುದೆಂಬುದು ಬಹು ದೊಡ್ಡ ಸಮಸ್ಯೆಯಾಗಿ ಕಾಡಿದ್ದುಂಟು. ಆಗ ತಕ್ಷಣ ನೆನಪಿಗೆ ಬರುತ್ತಿದ್ದುದು ಬಿ.ಹೆಚ್. ರಸ್ತೆಯಲ್ಲಿರುವ ಸೋಮಯ್ಯ ಬಂಗ್ಲೆಯ ಪಾಂಡುರಂಗ ಮಲ್ಯ(ಈಗ ಕಾರ್ಪೋರೇಶನ್ ಬ್ಯಾಂಕಿನ ಹಿರಿಯ ಅಧಿಕಾರಿ) ಅವರ ಮನೆ. ಮಲ್ಯನ ತಾಯಿ ಆಗ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಿ ಬಹುಕಷ್ಟದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಮನೆಗೆ ಯಾರೇ ಹೋದರೂ ಅವರನ್ನು ಹಾಗೆಯೇ ಕಳಿಸುತ್ತಿರಲಿಲ್ಲ. ಸಂಘದ ಪ್ರಚಾರಕರು ಹೋದರಂತೂ ಊಟ ಮಾಡಿಕೊಂಡೇ ಹೋಗಬೇಕೆಂಬ ಅಲಿಖಿತ ನಿಯಮ ಮಾಡಿದ್ದರು. ತಡರಾತ್ರಿ ಎಷ್ಟು ಹೊತ್ತಿಗೆ ಹೋದರೂ ಗಂಜಿ ಊಟ, ಜೊತೆಗೆ ಉಪ್ಪಿನಕಾಯಿ ಇದ್ದೇ ಇರುತ್ತಿತ್ತು. ಸಂಘದ ಕಾರ್ಯಕರ್ತರನ್ನು, ಪ್ರಚಾರಕರನ್ನು ಅವರು ಸನ್ಯಾಸಿಗಳ ಸಮಾನ ಎಂದೇ ಭಾವಿಸಿದ್ದರು. ಮಲ್ಯನ ತಾಯಿಯ ಕೈಯಿಂದ ಅದೆಷ್ಟು ಬಾರಿ ನಾನು ಊಟ ಮಾಡಿದ್ದೆನೋ ಲೆಕ್ಕ ಸಿಗುತ್ತಿಲ್ಲ!

***

ಇತ್ತೀಚೆಗೆ `ವಿಕ್ರಮ’ ವಾರಪತ್ರಿಕೆಯಲ್ಲಿ `ಚರಣ ‘ ಎಂಬ ಹೆಸರಿನಲ್ಲಿ ಸಂಘದ ಪ್ರಚಾರಕರೊಬ್ಬರು `ಹೆತ್ತಮ್ಮ ಒಬ್ಬಳಾದರೆ ಸಲಹಿದ ಅಮ್ಮಂದಿರು ನೂರಾರು’ ಎಂಬ ಮಾರ್ಮಿಕ ಲೇಖನವೊಂದನ್ನು ಬರೆದು ತಮ್ಮ ಹೃದ್ಯ ಅನುಭವಗಳನ್ನು ದಾಖಲಿಸಿದ್ದರು. ಅವರ ಲೇಖನದ ಕೆಲವು ಸಾಲುಗಳು : `…ಈಗ ಬಹುಶಃ ಈ ಎಲ್ಲಾ ಅಮ್ಮಂದಿರು ಕುಡಿಸುವ, ತಿನ್ನಿಸುವ ಹಾಲು, ಮೊಸರು, ಬೆಣ್ಣೆ ಇತ್ಯಾದಿಗಳ ಕಾರಣದಿಂದಲೇ ಶರೀರದ ಸಣ್ಣಪುಟ್ಟ ಸಮಸ್ಯೆಗಳ ಅನುಭವ ನಮಗಾಗುವುದೇ ಇಲ್ಲ. ಅದೆಷ್ಟು ಪುಣ್ಯವಂತರು ನಾವು ಎಂಬ ಭಾವ ಮೂಡುತ್ತದೆ. ಹೆತ್ತಮ್ಮನನ್ನು ಬಿಟ್ಟು ಎಲ್ಲೋ ಇರುವ ಪ್ರಚಾರಕರಿಗೆ ಅದೆಷ್ಟು ಅಮ್ಮಂದಿರ ಪ್ರೀತಿಯನ್ನು ಸವಿಯುವ ಭಾಗ್ಯ. ತಮ್ಮ ಮಕ್ಕಳಿಗೆ ಉಳಿಸದೇ ಈ ಸಾಕು ಮಕ್ಕಳಿಗೆ ಉಣಿಸುವ ಆತುರ. ಸ್ವಲ್ಪ ಊಟ ಕಡಿಮೆ ಮಾಡಿದರೆ ಸಿಡುಕುವ ಆ ಪರಿ. ತಿಂದು ಹೆಚ್ಚಾಯಿತೆಂದು ಒಂದು ಹೊತ್ತು ಉಪವಾಸ ಮಾಡಿದರೆ ಹಿರಿಯರಿಗೆ ಹೇಳುತ್ತೇನೆಂಬ ಧಮಕಿ! … ಪತಿ, ಮಕ್ಕಳೊಂದಿಗೆ ತಿರುಗಾಡಲೆಂದು ಹೊರಟು ಮನೆಯ ಬೀಗ ಹಾಕುತ್ತಿರುವಾಗಲೇ ನಾವು ಬಂದೆವೆಂದು ತಿರುಗಾಟ ರದ್ದು ಮಾಡಿದ ಅಮ್ಮಂದಿರೆಷ್ಟು , ಪ್ರಚಾರಕರಿಗೆ ಆರೋಗ್ಯ ಸರಿಯಾಗಲೆಂದು ದೇವರ ಮುಂದೆ ಪ್ರಾರ್ಥಿಸುತ್ತ ಕೂಡುವ ಅಮ್ಮಂದಿರೆಷ್ಟು , ಬಟ್ಟೆ ಒಗೆಯಲೆಂದು ನೆನೆಸಿಟ್ಟು ಹೊರ ಹೋಗಿ ಬರುವಷ್ಟರಲ್ಲಿ ಒಗೆದು ಒಣಗಿಸಿ ಇಸ್ತ್ರಿ ಮಾಡಿಟ್ಟ ಅಮ್ಮಂದಿರೆಷ್ಟು – ಹೀಗೆ ಅವರ ಪ್ರೀತಿ, ವಾತ್ಸಲ್ಯಗಳನ್ನು ನೆನಪು ಮಾಡಿಕೊಂಡಂತೆ ಮನದ ಧನ್ಯತೆಯ ಭಾವ ಕಣ್ಣಂಚಿನಲ್ಲಿ ನೀರಾಗಿ ಹೊರ ಬರುತ್ತದೆ…’

***

ಇಂತಹ ಅಮ್ಮಂದಿರು ಯಾವ ಪ್ರಚಾರವನ್ನೂ ಬಯಸಿದವರಲ್ಲ. ತಮ್ಮ ಮನೆಗೆ ಬಂದ ಸಾಮಾಜಿಕ ಕಾರ್ಯಕರ್ತರನ್ನು ಉಪಚರಿಸಿದ ಬಳಿಕ ಕೊನೆಗೆ ಅವರಿಂದ ಒಂದು ಧನ್ಯವಾದವನ್ನೂ ನಿರೀಕ್ಷಿಸಿದವರಲ್ಲ. ಸಾಮಾಜಿಕ ಕಾರ್ಯಕರ್ತರಿಗೆ ತಮ್ಮಿಂದಾದ ಸೇವೆ, ಉಪಚಾರ ಮಾಡುವುದೇ ತಮ್ಮ ಕರ್ತವ್ಯ ಎಂದು ಭಾವಿಸಿದವರು ಅವರು. ಅದರಲ್ಲೇ ಧನ್ಯತೆಯನ್ನು ಕಾಣುವವರು.

ವರ್ಷಕ್ಕೊಮ್ಮೆ `ತಾಯಂದಿರ ದಿನ ‘ ವನ್ನು ಬೇರೆಯವರು ಆಚರಿಸಿದಾಗಲೂ ಈ ಅಮ್ಮಂದಿರಿಗೆ ಅದರ ಪರಿವೆಯೇ ಬಹುಶಃ ಇರುವುದಿಲ್ಲ. ಏಕೆಂದರೆ ವರ್ಷಕ್ಕೊಮ್ಮೆ ಮಾತ್ರ ಇವರು ತಾಯಂದಿರಾಗಿ ಸೇವಾನಿರತರಲ್ಲ. ಇವರೇನಿದ್ದರೂ ಪ್ರತಿನಿತ್ಯವೂ ಪ್ರತಿಕ್ಷಣವೂ ಎಲ್ಲರಿಗೂ ತಾಯಂದಿರು. ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿಯುವವರು. ಊದುಕಡ್ಡಿಯಂತೆ ಉರಿದು ಸುತ್ತಮುತ್ತ ಸುಗಂಧದ ಸೌರಭ ಬೀರುವವರು. `ತಾಯಂದಿರ ದಿನ ‘ ದಂದು ಇವೆಲ್ಲ ನೆನಪಾಗಿ ಇಲ್ಲಿ ದಾಖಲಿಸಬೇಕೆಂದು ನನಗನ್ನಿಸಿದ್ದರಿಂದ ನಿಮ್ಮೊಡನೆ ಇದನ್ನೆಲ್ಲ ಹಂಚಿಕೊಂಡಿರುವೆ. ಇಂತಹ ಮಾತೆಯರ ಮಮತೆಗೆ ಬೆಲೆ ಕಟ್ಟಲು ಸಾಧ್ಯವೆ?

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top