ಡೆಹ್ರಾಡೂನ್: ಉತ್ತರಾಖಂಡನ ಡೆಹ್ರಾಡೂನ್ನಲ್ಲಿ 900ಕಿ.ಮೀ ಉದ್ದದ ಆಲ್ ವೆದರ್ ರೋಡ್ (ಚಾರ್ ಧಾಮ್)ಗೆ ಮಂಗಳವಾರ ಶಿಲಾನ್ಯಾಸ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಈ ಹೆದ್ದಾರಿ ಯೋಜನೆ ಕೇದಾರನಾಥ ದುರಂತದ ಸಂತ್ರಸ್ತರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದ್ದಾರೆ.
ಡೆಹ್ರಾಡೂನ್ನ ‘ಆಲ್-ವೆದರ್ ರೋಡ್’ನ ಶಿಲಾನ್ಯಾಸ ಮಾಡಿದ ನಂತರ ಪರಿವರ್ತನ್ ರ್ಯಾಲಿನ್ನು ಉದ್ದೇಶಿಸಿ ಮಾತನಾಡುತ್ಯಿದ್ದ ಪ್ರಧಾನಿ ಮೋದಿ ಅವರು, ಉತ್ತರಾಖಂಡ್ ಯಾವುದೇ ವಿಕಾಸ್ (ಅಭಿವೃದ್ಧಿ)ನ್ನು ನಿರೀಕ್ಷಿಸಿ ಕಾಯುವ ಅಗತ್ಯವಿಲ್ಲ. ಇದು ದೇವ, ದೇವತೆಗಳ ಭೂಮಿ. ಇದು ಕೆಚ್ಚೆದೆಯ ಶೂರರ ನಾಡು ಎಂದು ಹೇಳಿದ್ಧಾರೆ.
ಚಾರ್ ಧಾಮ್ ಯೋಜನೆಯ ಉದ್ಘಾಟನೆ ಉತ್ತರಾಖಂಡ್ ಪ್ರವಾಹದಲ್ಲಿ ಪ್ರಾಣ ತೆತ್ತರವರ ಗೌರವ ಕಾಣಿಕೆಯಾಗಿದೆ. ಉತ್ತರಾಖಂಡ್ನ ಜನರು ಅಭಿವೃದ್ಧಿಯನ್ನು ನಿರೀಕ್ಷಿಸಿ ಕಾದು ಕುಳಿತುಕೊಳ್ಳಲು ಬಯಸುವವರಲ್ಲ. ಜನರು ಬದರಿನಾಥ, ಕೇದಾರನಾಥ ಯಾತ್ರೆ ಮಾಡಿದಲ್ಲಿ ಎನ್ಡಿಎ ಸರ್ಕಾರವನ್ನು ನೆನಪಿಸಿಕೊಳ್ಳುತ್ತೀರಿ ಎಂಬ ಭರವಸೆ ಇದೆ ಎಂದು ಮೋದಿ ಅವರು ಹೇಳಿದ್ದಾರೆ.
ಪ್ರವಾಸೋದ್ಯಮ ಉತ್ತರಾಖಂಡ್ನ ಅತಿ ದೊಡ್ಡ ಆಸ್ತಿಯಾಗಿದೆ. ಚಾರ್ ಧಾಮ್ ಯೋಜನೆ ಇಲ್ಲಿಯ ಜನರಿಗೆ ಉದ್ಯೋಗಾಕಾಶವನ್ನು ಕಲ್ಪಿಸಲಿದೆ. ಸ್ವಾತಂತ್ರ್ಯದ 70 ವರ್ಷಗಳ ನಂತರವೂ ದೇಶದ 18,000 ಗ್ರಾಮಗಳು ವಿದ್ಯುತ್ನ್ನು ಕಂಡಿಲ್ಲ. ಎನ್ಡಿಎ ಸರ್ಕಾರ 1000 ದಿನಗಳಲ್ಲಿ ದೇಶದ ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವ ಯೋಜನೆ ಕೈಗೊಂಡಿದ್ದು, ಈವರೆಗೆ 12,000 ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅನಾಣ್ಯೀಕರಣ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, ಕೇಂದ್ರ ಸರ್ಕಾರ ಕಪ್ಪು ಹಣ ಹೂಡಿಕೆದಾರರ ವಿರುದ್ಧ ಹೋರಾಡುತ್ತಿದೆ. ಭ್ರಷ್ಟರನ್ನು ಶಿಕ್ಷಿಸುವ ಬಗ್ಗೆ ನಾವು ನೀಡಿದ ಭರವಸೆಯಂತೆ ಈ ಕಾರ್ಯ ನಡೆಯುತ್ತಿದೆ. ಇದೊಂದು ‘ಸಫಾಯಿ ಅಭಿಯಾನ’ವಾಗಿದೆ. ದೇಶದ ಜನತೆ ನನ್ನನ್ನು ಬೆಂಬಲಿಸದೇ ಇದ್ದಲ್ಲಿ ಭ್ರಷ್ಟರು ನನ್ನ ಮೇಲೆ ದಾಳಿ ನಡಸುತ್ತಿದ್ದರು ಎಂದು ಪ್ಧಾನಿ ಮೋದಿ ಅವರು ಈ ವೇಳೆ ಹೇಳಿದ್ದಾರೆ.
ಇದೇ ವೇಳೆ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, ಈ ಹಿಂದಿನ ಸರ್ಕಾರಗಳು ದೇಶದ 125 ಕೋಟಿ ನಾಗರಿಕರಿಗೆ ಮೂಲಸೌಕರ್ಯ ಒದಗಿಸಲು ವಿಫಲಗೊಂಡಿವೆ. ಜನರಿಗೆ ಇದರ ಬಗ್ಗೆ ಅರಿವಿದೆ. ಜನರಿಗೆ ನಿಮ್ಮ ಬಗ್ಗೆ ಗೊತ್ತಿದೆ ಎಂದು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ದೇಶದ ಸೈನಿಕರು ಓಆರ್ಒಪಿ ನೀಡುವಂತೆ ಕೋರಿದ್ದರೂ ಕಾಂಗ್ರೆಸ್ ಸರ್ಕಾರ ಕಳೆದ ೬೦ ವರ್ಷಗಳಿಂದ ಏನನ್ನೂ ಮಾಡಿಲ್ಲ. ನಾಮ್ಮ ದೇಶದ ಸೈನಿಕರಿಗೆ ನನ್ನ ಸೆಲ್ಯೂಟ್. ಕೇಂದ್ರದ ಬಿಜೆಪಿ ಸರ್ಕಾರ ಈಗಾಗಲೇ ಒಆರ್ಒಪಿ ಅಡಿಯಲ್ಲಿ 6,600 ಕೋಟಿ ರೂ. ಒದಗಿಸಿದೆ. ಸೈನಿಕರು ತಮ್ಮ ಒಆರ್ಒಪಿ ಬಾಕಿ ಪಾವತಿಯನ್ನು ಪಡೆಯಬೇಕು. ಒಆರ್ಒಪಿ ವಾಸ್ತವವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ಚಾರ್ ಧಾಮ್ ಯಾತ್ರೆ(ಕೇದರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ) ಪುಣ್ಯ ಕ್ಷೇತ್ರಗಳ ವಾರ್ಷಿಕ ತೀರ್ಥಯಾತ್ರೆಗೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
12,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 900 ಕಿ.ಮೀ.ನ ಈ ರಸ್ತೆ ಮೂಲಕ ಚಾರ್ ಧಾಮ್ ಯಾತ್ರೆಗೆ ಯಾವುದೇ ತೊಂದರೆ ಇಲ್ಲದೇ ಸಂಚರಿಸಬಹುದಾಗಿದೆ ಮತ್ತು ಪ್ರಖ್ಯಾತ ಸಿಖ್ ಪುಣ್ಯಕ್ಷೇತ್ರವಾದ ಹೇಮಕುಂದ್ ಸಾಹೇಬ್ ಕೂಡ ವೀಕ್ಷಿಸಬಹುದು ಎಂದು ಹೇಳಲಾಗುತ್ತಿದೆ.
ಈ ವರ್ಷದ ಪ್ರಾರಂಭದಲ್ಲಿ, ಉತ್ತರಾಖಂಡದ ಹಿಮಾಲಯದಲ್ಲಿರುವ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕಿಸುವ 900ಕಿ.ಮೀ ಹೆದ್ದಾರಿಯನ್ನು ಕೇಂದ್ರ ಸರ್ಕಾರ ನಿರ್ಮಿಸಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಮತ್ತು ಸರಕು ಸಚಿವ ನಿತಿನ್ ಗಡ್ಕರಿ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.