ಮಂಗಳೂರು : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 92 ನೇ ಜನ್ಮದಿನಾಚರಣೆಯ ಅಂಗವಾಗಿ ದೇಶದಾದ್ಯಂತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಮಾರ್ಗದರ್ಶನದಲ್ಲಿ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಯೋಜಕತ್ವದಲ್ಲಿ ಪ್ರತೀ ಜಿಲ್ಲೆ ಹಾಗೂ ವಿಧಾನಸಭಾ ಮಟ್ಟದಲ್ಲಿ ಬಿಜೆಪಿ ನಾಯಕರುಗಳು ಹಾಗೂ ವಿವಿಧ ಪ್ರಕೋಷ್ಠಗಳ ಸಹಕಾರದೊಂದಿಗೆ ಅಲ್ಲಿಯ ವೈದ್ಯಕೀಯ ಪ್ರಕೋಷ್ಠಗಳು ವಿವಿಧ ರೀತಿಯ ವೈದ್ಯಕೀಯ, ದಂತ ವೈದ್ಯಕೀಯ ಶಿಬಿರ ಹಾಗೂ ಆರೋಗ್ಯ ಜನಜಾಗೃತಿ ಕಾರ್ಯಕ್ರಮಗಳನ್ನು ದಿನಾಂಕ 25-12-2016 ರಂದು ಭಾನುವಾರ ಹಮ್ಮಿಕೊಂಡಿದ್ದು ಕರಾವಳಿ, ಮಲೆನಾಡು ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ, ಮಡಿಕೇರಿ, ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಪ್ರತೀ ವಿಧಾನಸಭೆಯಲ್ಲಿ ಕನಿಷ್ಠ ಒಂದು ಆರೋಗ್ಯ ಶಿಬಿರವನ್ನು ನಿಯೋಜಿಸಲಾಗಿದ್ದು, ಸುಮಾರು 40 ಕ್ಕೂ ಅಧಿಕ ಶಿಬಿರಗಳು ಆಯೋಜಿತವಾಗಿದ್ದು ಆಯಾಯ ಜಿಲ್ಲೆಗಳ ಸಂಚಾಲಕರುಗಳಾದ ಡಾ|.ರಾಘವೇಂದ್ರ ಭಟ್ ಮಂಗಳೂರು, ಡಾ|.ಪ್ರದೀಪ್ ವರ್ಣೇಕರ್ ಉಡುಪಿ, ಡಾ|.ನವೀನ್ ಕೊಡಗು, ಡಾ|.ರಮೇಶ್ ಚಿಕ್ಕಮಂಗಳೂರು, ಡಾ|ಜಿ.ಜಿ.ಹೆಗಡೆ ಹೊನ್ನಾವರ ಇವರಗಳು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.
ಅದಲ್ಲದೇ 5 ಜಿಲ್ಲೆಗಳಲ್ಲಿ ಸಾಕಷ್ಟು ನುರಿತ ವೈದ್ಯರುಗಳಲ್ಲಿ ನಾಡು ಕಂಡ ಕವಿ ಹೃದಯದ ರಾಜಕೀಯ ಮುತ್ಸದ್ಧಿಯಾದ ಅಟಲ ಬಿಹಾರಿ ವಾಜಪೇಯಿಯವರ ಹೆಸರಲ್ಲಿ ಬಡರೋಗಿಗಳಿಗೆ ತಮ್ಮ ತಮ್ಮ ಕ್ಲಿನಿಕ್ಗಳಲ್ಲಿ ಕನಿಷ್ಠ 1 ಅಥವಾ 2 ಬಡರೋಗಿಗಳಿಗೆ ಉಚಿತ ಸಲಹೆ, ತಪಾಸಣೆ ಹಾಗೂ ಮಾರ್ಗದರ್ಶನ ನೀಡುವಂತೆ ಕೇಳಿಕೊಂಡಾಗ ಈಗಾಗಲೇ ನಗರದ ಸುಮಾರು 25 ಕ್ಕೂ ಅಧಿಕ ತಜ್ಞರು, ರೇಡಿಯೋಲಜಿಸ್ಟ್, ಮಕ್ಕಳ ತಜ್ಞರು, ಕುಟುಂಬ ವೈದ್ಯರು, ವೈದ್ಯಕೀಯ ತಜ್ಞರು, ಎಲುಬು ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ರೋಗ ತಜ್ಞರು, ಶಸ್ತ್ರಚಿಕಿತ್ಸಕರು, ದಂತವೈದ್ಯರು, ಸ್ತ್ರೀರೋಗ ತಜ್ಞರು , ಕಿವಿ ಮೂಗು ಗಂಟಲು ತಜ್ಞರು , ಕಣ್ಣಿನ ತಜ್ಞರು, ಹೃದಯರೋಗ ತಜ್ಞರು ಉಚಿತ ಸೇವೆ ನೀಡಲು ಒಪ್ಪಿಕೊಂಡಿದ್ದು ಡಿಸೆಂಬರ್ 24 ಹಾಗೂ 25 ರಂದು ಆಯ್ದ ಬಡರೋಗಿಗಳಿಗೆ ಸಹಾಯ ಮಾಡಲಿದ್ದಾರೆ.
ಇನ್ನು ಹಲವು ವೈದ್ಯರುಗಳು ಈ 5 ಜಿಲ್ಲೆಗಳಲ್ಲಿ ಬಡರೋಗಿಗಳ ಸಹಾಯಕ್ಕೆ ಮುಂದೆ ಬರುವ ಸಾಧ್ಯತೆ ಇದ್ದು ಮತ್ತಷ್ಟು ವೈದ್ಯಕೀಯ ಸಹಾಯ ಬಡರೋಗಿಗಳಿಗೆ ಸಿಗಲಿದೆ. ಆಸಕ್ತರು ಆಯಾಯ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರನ್ನು ಸಂಪರ್ಕಿಸಿ ಬಡರೋಗಿಗಳಿಗೆ ಸಹಾಯ ದೊರಕಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸಹಸಂಚಾಲಕರೂ ಹಾಗೂ ಕರಾವಳಿ, ಮಲೆನಾಡು ವಿಭಾಗದ ಉಸ್ತುವಾರಿಯಾದ ಡಾ|.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.