ಬೆಂಗಳೂರು : ಹಿಂದುತ್ವ ಎಂದರೆ ಅದೊಂದು ‘ಜೀವನ ಪದ್ಧತಿ’ – ನಮ್ಮೆಲ್ಲಾ ಸಂಸ್ಕೃತಿ, ಪರಂಪರೆಗಳ ಸುಂದರ ಸಂಗಮವಾಗಿದೆ. ಹಿಂದು ಧರ್ಮವೆನಿಸಿಕೊಂಡಿದೆ. ಹಿಂದುತ್ವಕ್ಕೆ ಆಧ್ಯಾತ್ಮದ ನೆಲೆಗಟ್ಟು ಹಾಗೂ ಸೇವೆಯ ಚೌಕಟ್ಟು ಎರಡೂ ಜತೆಗೂಡಿರುವುದು ಅದರ ಔನ್ನತ್ಯವನ್ನು ತಲೆ ತಲಾಂತರಗಳಿಂದ ಜಗತ್ತಿಗೆ ಸಾರಿದೆ.
ಪ್ರಖರ ಹಿಂದುತ್ವವಾದಿ ಹಾಗೂ ಪ್ರಖ್ಯಾತ ಆರ್ಥಿಕ ತಜ್ಞ, ಚೆನ್ನೈನ ಎಸ್.ಗುರುಮೂರ್ತಿಯವರ ಪ್ರೇರಣೆಯಿಂದ ಪ್ರಾರಂಭಗೊಂಡಿದ್ದ ‘ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ’. ಚೆನ್ನೈನಲ್ಲಿ ಹಲವು ವರ್ಷಗಳಿಂದ ಒಂದು ವಾರ ಕಾಲ ಈ ಮೇಳ ಸಂಪನ್ನಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ 5 ದಿನಗಳ ಕಾಲ ನಡೆದ ಈ ಮೇಳ ಅತ್ಯಂತ ಯಶಸ್ವಿಯಾಗಿತ್ತು ಮತ್ತು ಸುಮಾರು 3 ಲಕ್ಷ ಜನರನ್ನು ತನ್ನೆಡೆಗೆ ಸೆಳೆದಿತ್ತು. ರಾಜ್ಯದ ಇನ್ನೂರಕ್ಕಿಂತಲೂ ಹೆಚ್ಚು ಸೇವಾ ಮಳಿಗೆಗಳು ಈ ಮೇಳದಲ್ಲಿ ಭಾಗವಹಿಸಿ ತಮ್ಮ ಸೇವಾ ಚಟುವಟಿಕೆಗಳನ್ನು ಬಂದಂತಹ ಸಾರ್ವಜನಿಕರಿಗೆ ಪರಿಚಯಿಸಿದ್ದವು.
ಈ ವರ್ಷವೂ ಎರಡನೆ ‘ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ’ ಡಿಸೆಂಬರ್ 14 ರಿಂದ 18 ರ ವರೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನ, ಬಸವನಗುಡಿಯಲ್ಲಿ ಆಯೋಜಿಸಲಾಗಿದೆ. ಮೇಳದ ಧ್ಯೇಯ ವಾಕ್ಯವೆಂದರೆ – ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ (ತನ್ನ ಮುಕ್ತಿ ಹಾಗೂ ಜಗತ್ತಿನ ಹಿತಕ್ಕಾಗಿ) ಮತ್ತು ‘ಈಶಾವಾಸ್ಯಮಿದಂ ಸರ್ವಮ್’ (ಜಗತ್ತಿನ ಕಣಕಣವೂ ಭಗವಂತನಿಂದ ಆವರಿಸಲ್ಪಟ್ಟಿದೆ) ಎಂಬುದಾಗಿದೆ.
ಆರು ಪ್ರಮುಖವಾದ ಧ್ಯೇಯಗಳೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದೆ. ಅವುಗಳೆಂದರೆ – 1.) ವನ ಮತ್ತು ವನ್ಯಜೀವಿ ಸಂರಕ್ಷಣೆ 2.) ಪರಿಸರ ಕಾಳಜಿ 3.) ಮಾಲಿನ್ಯ ನಿಯಂತ್ರಣ 4.) ಕುಟುಂಬ ಹಾಗೂ ಮಾನವೀಯ ಮೌಲ್ಯಗಳು 5.) ಸ್ತ್ರೀ ಗೌರವ ಮತ್ತು 6.) ರಾಷ್ಟ್ರಭಕ್ತಿ ಜಾಗೃತಿ. ಈ ಧ್ಯೇಯಗಳಿಗೆ ಪೂರಕವಾಗಿ 5 ದಿನಗಳ ಮೇಳದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
14, ಡಿಸೆಂಬರ್, ಬುಧವಾರ ಮಧ್ಯಾಹ್ನ 2.30 ಗಂಟೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಿಂದ ನ್ಯಾಷನಲ್ ಕಾಲೇಜ್ ಮೈದಾನದವರೆಗೆ ಆಕರ್ಷಕ ಶೋಭಾ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಖ್ಯಾತ ಸಂಶೋಧಕರು ಮತ್ತು ಚಿಂತಕರಾದ ಡಾ|| ಚಿದಾನಂದ ಮೂರ್ತಿ ಮತ್ತು ಖ್ಯಾತ ಜನಪದ ಸಾಹಿತಿ ಡಾ|| ದೊಡ್ಡರಂಗೇಗೌಡರು ಈ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಹಾಗೂ ಬೆಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಪೂಜ್ಯ ಶ್ರೀ ಶ್ರೀ ಭಗವದಾನಂದ ಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಸಂಜೆ 5.00 ಗಂಟೆಗೆ ಮೇಳದ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅದರಲ್ಲಿ ಶ್ರೀ ಕ್ಷೇತ್ರ ಸುತ್ತೂರು ಮಠಾಧೀಶರಾದ ಜಗದ್ಗುರು ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತುಮಕೂರಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಶ್ರೀ ವೀರೇಶಾನಂದ ಸ್ವಾಮೀಜಿ, ಬೀದರ್ನ ಪೂಜ್ಯ ಶ್ರೀ ಬಂತೆ ವರಜ್ಯೋತಿ ಸ್ವಾಮೀಜಿ ಹಾಗೂ ಗುರುದ್ವಾರ ನಾನಕ್ ಝರಾ ಸಾಹೇಬ ಮಂದಿರ ಬೀದರ್ನ ಪೂಜ್ಯ ಶ್ರೀ ಶ್ರೀ ಗ್ಯಾನಿ ದರ್ಬಾರ್ ಸಿಂಗ್ ಜೀ ಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಡಾ|| ಕಸ್ತೂರಿ ರಂಗನ್ (ಇಸ್ರೋದ ಮಾಜಿ ಅಧ್ಯಕ್ಷರು) ರವರು ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಾಸ್ತಾವಿಕ ನುಡಿಯನ್ನು ಪ್ರೊ|| ಎಂ.ಕೆ.ಶ್ರೀಧರ್ ರವರು ನಡೆಸಿಕೊಟ್ಟರು. ಸಂಜೆ 7 ರಿಂದ 9 ರ ವರೆಗೆ ಜಗದೀಶ ಜಾಲರಿಂದ ಸಂಯೋಜನೆಗೊಳ್ಳುತ್ತಿರುವ ‘ಜಾನಪದ ವೈಭವ’ ಮನೋರಂಜನಾ ಕಾರ್ಯಕ್ರಮ ನಡೆಯಿತು.
15 ಡಿಸೆಂಬರ್, ಗುರುವಾರ ಬೆಳಿಗ್ಗೆ 11 ರಿಂದ 12.30 ರ ವರೆಗೆ ‘ರಾಷ್ಟ್ರವಂದನಾ’ (ರಾಷ್ಟ್ರಭಕ್ತಿ ಜಾಗೃತಿ ಕಾರ್ಯಕ್ರಮ) ಜರುಗಲಿದೆ. ದಿವ್ಯ ಸಾನಿಧ್ಯವನ್ನು ಜಗದ್ಗುರು ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ (ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಶ್ರೀ ಕ್ಷೇತ್ರ ಆದಿಚುಂಚನಗಿರಿ) ನಡೆಸಿಕೊಡಲಿದ್ದಾರೆ ಮತ್ತು ಅಭ್ಯಾಗತರಾಗಿ ಮಾನ್ಯ ಸು. ರಾಮಣ್ಣ (ಅಖಿಲ ಭಾರತೀಯ ಸಹ ಸಂಯೋಜಕ, ಕುಟುಂಬ ಪ್ರಬೋಧನ) ಆಗಮಿಸಲಿದ್ದಾರೆ. ಸಂಜೆ ಡಾ|| ಕಿಕ್ಕೇರಿ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ‘ಬಾರಿಸು ಕನ್ನಡ ಡಿಂಡಿಮವ….’ ಸುಗಮ ಸಂಗೀತ ಕಾರ್ಯಕ್ರಮವಿರುತ್ತದೆ. ಅದೇ ದಿನ ಮಧ್ಯಾಹ್ನ ಸ್ವಯಂ ಸೇವಾ ಸಂಸ್ಥೆಗಳಿಗಾಗಿ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು ಹಲವಾರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
16, ಡಿಸೆಂಬರ್, ಶುಕ್ರವಾರ ಬೆಳಿಗ್ಗೆ 11 ರಿಂದ 12.30 ರ ವರೆಗೆ ‘ಮಾತೃವಂದನಾ’ (ಸ್ತ್ರೀ ಗೌರವ ನಿಮಿತ್ತ) ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶ್ರೀ ಮ.ನಿ.ಪ್ರ.ಸಿದ್ದಲಿಂಗ ಸ್ವಾಮೀಜಿ ವಹಿಸಲಿದ್ದು, ಅಭ್ಯಾಗತರಾಗಿ ಡಾ. ಆರತಿ ವಿ.ಬಿ. (ಸಂಸ್ಥಾಪಕರು, ವಿಭು ಅಕಾಡಮಿ) ಆಗಮಿಸಲಿದ್ದಾರೆ. ಮಧ್ಯಾಹ್ನ 2.30 ರಿಂದ 3.30 ರ ವರೆಗೆ ಆರೋಗ್ಯಕರ ಜೀವನದ ಬಗ್ಗೆ ಡಾ|| ಮಂಜುನಾಥ್ ರಿಂದ ಮಾರ್ಗದರ್ಶನ ಲಭ್ಯವಾಗಲಿದೆ. ಸಂಜೆ 7 ರಿಂದ 9 ಗಂಟೆವರೆಗೆ ೞಕಲ್ಲು ಸಕ್ಕರೆ ಕೊಳ್ಳಿರೋ….ೞ ಭಕ್ತಿಗೀತೆ ಕಾರ್ಯಕ್ರಮವನ್ನು ಶ್ರೀ ವಿದ್ಯಾಭೂಷಣರು ನಡೆಸಿಕೊಡಲಿದ್ದಾರೆ.
17 ಡಿಸೆಂಬರ್, ಶನಿವಾರ ಬೆಳಿಗ್ಗೆ 11 ರಿಂದ 12.30 ರ ವರೆಗೆ ‘ಭೂಮಿವಂದನಾ’ (ಪರಿಸರ ಕಾಳಜಿಯ ಬಗ್ಗೆ) ಕಾರ್ಯಕ್ರಮ ಜರುಗಲಿದ್ದು, ಕೂಡಲಸಂಗಮದ ಪೂಜ್ಯ ಶ್ರೀ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣವನ್ನು ನೀಡಲು ಕುಟುಂಬ ಪ್ರಭೋದನ್ನ ಅಖಿಲ ಭಾರತೀಯ ಸಂಯೋಜಕರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಬರಲಿದ್ದಾರೆ. ಅಭ್ಯಾಗತರು ಸಾಗರದ ಸಾವಯವ ಕೃಷಿ ಪರಿವಾರದ ಡಾ|| ಆನಂದ. ಆ ದಿನ ಸಂಜೆ 7 ರಿಂದ 9 ಗಂಟೆಯವರೆಗೆ, ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ಆಳ್ವ್ವಾಸ್ ಸಾಂಸ್ಕೃತಿಕ ಸೌರಭ’ ಮೂಡಿಬರಲಿದೆ.
18 ಡಿಸೆಂಬರ್, ಭಾನುವಾರ ಬೆಳಿಗ್ಗೆ 11 ರಿಂದ 12.30 ರ ವರೆಗೆ ‘ಕುಟುಂಬ ವಂದನಾ’ (ಕುಟುಂಬ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ) ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿಗಳು (ಪುತ್ತಿಗೆ ಮಠ, ಉಡುಪಿ) ವಹಿಸಿಕೊಳ್ಳಲಿದ್ದು, ಅಭ್ಯಾಗತರಾಗಿ ಶ್ರೀ ಟಿ.ಎನ್.ಪ್ರಭಾಕರ್ ಆಗಮಿಸಲಿದ್ದಾರೆ. ಅದೇ ದಿನ ಸಂಜೆ 5 ಗಂಟೆಯಿಂದ ಸಮಾರೋಪ ಸಮಾರಂಭ ಜರುಗಲಿದ್ದು ದಿವ್ಯ ಸಾನಿಧ್ಯವನ್ನು ಮಂತ್ರಾಲಯದ ಪೂಜ್ಯ ಶ್ರೀ ಶ್ರೀ 108 ವಿಭುದೇಂದ್ರತೀರ್ಥ ಸ್ವಾಮೀಜಿ, ಶ್ರೀ ಮಾದಾರ ಚೆನ್ನಯ್ಯ ಗುರುಪೀಠ, ಚಿತ್ರದುರ್ಗದ ಪೂಜ್ಯ ಶ್ರೀ ಶ್ರೀ ಬಸವ ಮಾದಾರ ಚೆನ್ನಯ್ಯ ಸ್ವಾಮೀಜಿ ಮತ್ತು ಶ್ರೀ ಗುರು ಬಸವ ಮಹಾಮನೆ, ಮನಗುಂದಿ, ಧಾರವಾಡದ ಪೂಜ್ಯ ಶ್ರೀ ಮ.ನಿ.ಪ್ರ. ಬಸವಾನಂದ ಸ್ವಾಮೀಜಿ ವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣವನ್ನು ಶ್ರೀ ಗುಣವಂತ ಸಿಂಗ್ ಕೊಠಾರಿ (ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಯ ಅಖಿಲ ಭಾರತೀಯ ಸಂಯೋಜಕರು) ನೀಡಲಿದ್ದಾರೆ. ಯುವ ಬ್ರಿಗೇಡ್ನ ಸಂಚಾಲಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅಭ್ಯಾಗತರಾಗಿ ಆಗಮಿಸಲಿದ್ದಾರೆ. ಸಂಜೆ 7 ರಿಂದ 9 ಗಂಟೆಯವರೆಗೆ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ನಿರ್ದೇಶನದ ‘ಲಯ ಲಹರಿ’ ತಾಳ ವಾದ್ಯಗೋಷ್ಠಿ ಮತ್ತು ಸುರಮಣಿ ವಿದ್ವಾನ್ ಪ್ರವೀಣ್ ಗೋಡ್ಖಿಂಡಿ ಮತ್ತು ನಾದಜ್ಯೋತಿ ವಿದ್ವಾನ್ ಎಂ.ಕೆ.ಪ್ರಾಣೇಶ್ ರಿಂದ ಯುಗಳ ಕೊಳಲುವಾದನ ಜರುಗಲಿದೆ.
ಈ ಮೇಳದ ಯಶಸ್ವಿಗಾಗಿ ಕಳೆದೆರಡು ತಿಂಗಳಿಂದ ಪೂರ್ವಭಾವೀ ಸಿದ್ದತೆಗಳು ನಡೆದಿದ್ದು ಹತ್ತು ಹಲವು ವಿಭಾಗಗಳ ಮೂಲಕ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಯತ್ನಗಳು ಸಾಗಿವೆ. ಈ ಬಾರಿ ಪೂರ್ವಭಾವಿಯಾಗಿ 9-11-2016 ರಂದು ‘ಪ್ರಕೃತಿ ವಂದನಾ’ ಕಾರ್ಯಕ್ರಮವು ನೆರವೇರಿದ್ದು ಪರಿಸರ ತಜ್ಞ ಡಾ|| ಯಲ್ಲಪ್ಪ ರೆಡ್ಡಿ ಹಾಗೂ ಶಿವನಹಳ್ಳಿಯ ಜಿಗಣೇ ರಾಮಕೃಷ್ಣಾಶ್ರಮದ ಪೂಜ್ಯ ಸ್ವಾಮೀಜಿ ಇದರಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ್ದರು. ಸ್ಪೂರ್ತಿ ಇಂಟರ್ನ್ಯಾಷನಲ್ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇರಣೆಯನ್ನು ಪಡೆದರು. ದಿನಾಂಕ 11-11-2016 ರಂದು ‘ಗೋ ವಂದನಾ’ ಕಾರ್ಯಕ್ರಮ ಕಾಚರಕನಹಳ್ಳಿಯಲ್ಲಿ ಜರುಗಿದ್ದು, ಪೂಜ್ಯ ಶ್ರೀ ಅಭಯ ಚೈತನ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಿದ್ದು, ಗೋಶಾಲಾ ಪ್ರಮುಖರಾದ ಶ್ರೀ ರಾಘವೇಂದ್ರ ಮತ್ತು ಸಾವಯವ ಕೃಷಿಯ ಶ್ರೀ ಸಂಪತ್ ಭಾಗವಹಿಸಿದ್ದು, ಸಾವಿರಾರು ಜನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ‘ಪುಣ್ಯಕೋಟಿ’ ನೃತ್ಯರೂಪಕವನ್ನು ಪ್ರಸ್ತುತಪಡಿಸಲಾಯಿತು. ದಿನಾಂಕ 11-14-2016 ರಂದು ‘ಯೋಧ ವಂದನಾ’ ಕಾರ್ಯಕ್ರಮ ಕೋರಮಂಗಲದ ರೆಡ್ಡಿ ಜನಸಂಘದ ಕಾಲೇಜಿನಲ್ಲಿ ಜರುಗಿದ್ದು, ಪೂಜ್ಯ ಶ್ರೀ ತ್ಯಾಗೇಶ್ವರನಂದ ಸ್ವಾಮೀಜಿ (ರಾಮಕೃಷ್ಣ ಆಶ್ರಮ, ಹಲಸೂರು) ದಿವ್ಯ ಸಾನಿಧ್ಯವಿತ್ತು. ಮೇಜರ್ ಜನರಲ್ ಬೆಳ್ಳಿಯಪ್ಪ ಹಾಗೂ ಮೇಜರ್ ಜನರಲ್ ಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಯೋಧ ನಮನ ಕಾರ್ಯಕ್ರಮವಿತ್ತು. ಮೊದಲು ಉಪಸ್ಥಿತರಿದ್ದ ಎಲ್ಲರಿಗೂ ‘ಪ್ರತಿಜ್ಞಾವಿಧಿ’ಯನ್ನು ಬೋಧಿಸಲಾಯಿತು. 8-12-2016 ರಂದು ಹಲಸೂರಿನ ಯೋಗೇಶ್ವರನಂದಾ ಶಾಲೆಯಲ್ಲಿ ಮಧ್ಯಾಹ್ನ ‘ಗುರು ವಂದನಾ’ ಕಾರ್ಯಕ್ರಮ ನಡೆಯಿತು.
ಈ ಮೇಳದಲ್ಲಿ ರಾಜ್ಯದ ವಿವಿಧೆಡೆಯ 250 ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ತಮ್ಮ ಮಳಿಗೆಯೊಂದಿಗೆ ಭಾಗವಹಿಸುವುದು ಈ ಬಾರಿಯ ವಿಶೇಷತೆ. ಮೇಳದ ವಿಶೇಷ ಆಕರ್ಷಣೆಯಾಗಿ ‘ಯುವ ಮಂಟಪ’ ವನ್ನು ಆಯೋಜಿಸಲಾಗಿದೆ. ಅಲ್ಲಿ ‘ಭಾರತ – ನಿನ್ನೆ, ಇಂದು, ನಾಳೆ’ ಎಂಬ ವಿಡೀಯೋ ಪ್ರದರ್ಶನವಿರುತ್ತದೆ. ಈ ರೀತಿ ಹತ್ತು ಹಲವು ಕಾರ್ಯಕ್ರಮಗಳು, ಸೇವಾದಿನದ ಆಯೋಜನೆ, 17 ರಂದು ಶನಿವಾರ ‘ಹ್ಯಾಕಥಾನ್’ (ಐಟಿ ಉದ್ಯೋಗಿಗಳಿಂದ) ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 3-4 ಲಕ್ಷ ಜನರು ಮೇಳವನ್ನು ವೀಕ್ಷಿಸುವ ಸಂಭವವಿದೆ. ಬೆಂಗಳೂರಿನ ಮಹಾಜನತೆಯ ಹೃದಯಪೂರ್ವಕ ಸಹಕಾರ, ಸಹಯೋಗದ ನಿರೀಕ್ಷೆಯಿದೆ. ಬನ್ನಿ, ಪಾಲ್ಗೊಳ್ಳಿ.
– ವೆಂಕಟೇಶ ಹೆಗಡೆ
ಚಿತ್ರ ಕೃಪೆ : samvada.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.