ಭಾರತ ಕಂಡ ಶ್ರೇಷ್ಠ ಕವಿ ರಾಷ್ಟ್ರವಾದಿ, ಒಬ್ಬ ಹಿರಿಯ ಶಕ್ತಿ ಪುಂಜ ಶ್ರೀ ಅರವಿಂದ ಘೋಷರ ಸ್ಮೃತಿ ದಿನವಿಂದು.
ಅವರಲ್ಲಿದ್ದ ರಾಷ್ಟ್ರೀಯತೆ ಅಪಾರ. ಭಾರತವನ್ನು ತಾಯಿಯಾಗಿ, ದುರ್ಗೆಯಾಗಿ, ಜಗನ್ಮಾತೆಯಾಗಿ ಅನೇಕ ಕ್ರಾಂತಿಕಾರಿಗಳಿಗೆ ಭಾರತಾಂಬೆಯನ್ನು ಆರಾಧ್ಯ ದೈವವನ್ನಾಗಿಸಿದರು.
ನನಗೆ ಅತ್ಯಂತ ಇಷ್ಟವಾಗುವ ಅವರ ಸಾಲುಗಳು ಹೀಗಿವೆ :
“ರಾಷ್ತ್ರ ಎಂದರೇನು? ಅದೊಂದು ಹಿಡಿ ಮಣ್ಣಲ್ಲ. ಮನಃಕಲ್ಪನೆಯಲ್ಲ. ಅದೊಂದು ಪ್ರಚಂಡ ಶಕ್ತಿ ಸ್ರೋತ. ತಾಯಿ ಭಾರತಿಯೇ ಕಾಳಿ, ದುರ್ಗೆ, ಚಂಡಿ, ಚಾಮುಂಡಿ! ಹಿಂದೆ ಆಸುರೀ ಶಕ್ತಿಗಳ ಸಂಹಾರಕ್ಕಾಗಿ ತಾಯಿ ಆ ಅವತಾರ ತಾಳಿದಳು. ಈ ದೇಶದ ಪ್ರಜಾ ಸಮೂಹದಲ್ಲಿ ಮತ್ತೆ ಶಕ್ತಿ ತುಂಬಲು ಸರ್ವಸ್ವವನ್ನು ತ್ಯಾಗ ಮಾಡುವ ಮನೋಧರ್ಮದ ತ್ಯಾಗಿಗಳು ಬೇಕು. ಆ ಸನ್ಯಾಸಿಗಳಿಗೊಬ್ಬಳು ಆರಾಧ್ಯದೇವತೆ ಬೇಕು. ಭಾರತ ಮಾತೆಯೇ ಆ ದೇವಿ! ಆಕೆ ಇಂದು ಎಲ್ಲ ಭಾರತೀಯರ ಮೈ ಮನಗಳಲ್ಲಿ ಮೈತಾಳಬೇಕಾಗಿದೆ. ಏಕನಿಷ್ಠೆಯಿಂದ ಆಕೆಯ ಅರ್ಚನೆ ಮಾಡಿದಾಗಲೇ ಆಕೆ ಅವಿರ್ಭವಿಸುವುದು. ಈ ಮಣ್ಣಿನ ಮಕ್ಕಳು ಆಕೆಯನ್ನು ಅರ್ಚಿಸಿ, ಶಕ್ತಿಗಳಿಸಿ ಹೋರಾಡಿದಾಗಲೇ ಆಕೆ ಮತ್ತೆ ಜಗದ್ಗುರುವಾಗುವಳು.”
ಇಂತಹ ಅದಮ್ಯ ಶಕ್ತಿಯನ್ನು ಭಾರತೀಯರಲ್ಲಿ ತುಂಬಿಸಿ ದೇಶದ ಮಹಾನ್ ಚೇತನವಾದ ಶ್ರೀ ಅರವಿಂದರಿಗೆ ಕೋಟಿ ಕೋಟಿ ನಮನ. ಅರವಿಂದರು ಭಾರತದ ಪ್ರಸಿದ್ಧ ದಾರ್ಶನಿಕ, ಕವಿ, ನಾಟಕಕಾರ, ವಿಮರ್ಶಕ. ಸಾಹಿತಿಯಾಗಿ ಗಳಿಸಿರುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯವನ್ನು ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಖ್ಯಾತಿವೆತ್ತ ಅರವಿಂದ ಘೋಷರು ಪ್ರಾತಃಸ್ಮರಣೀಯರು.
ಅರವಿಂದ ಘೋಷರ ತಂದೆ ಕೃಷ್ಣಧನ ಘೋಷ್. ತಾಯಿ ಸ್ವರ್ಣಲತಾದೇವಿ. ನಾಲ್ಕು ಮಕ್ಕಳಲ್ಲಿ ಎರಡನೆಯವರಾದ ಇವರು 1872 ರ ಅಗಸ್ಟ್ 15ರಂದು ಜನಿಸಿದರು. ವಿನಯಭೂಷಣ ಅಣ್ಣ, ಮನಮೋಹನ ತಮ್ಮ, ಸರೋಜಿನಿ ತಂಗಿ. ತಮ್ಮ ಐದನೆಯ ವರುಷದಿಂದ ಸುಮಾರು ಹದಿನಾಲ್ಕು ವರುಷಗಳ ಕಾಲ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ನಡೆಸಿದರು.
ಐದು ವರ್ಷ ವಯಸ್ಸಾದಾಗ ತಮ್ಮ ಸಹೋದರರೊಡನೆ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಆರಂಭವಾಯಿತು. 1879-92ವರೆಗೆ, ಹದಿನಾಲ್ಕು ವರ್ಷಗಳ ಕಾಲ ಮ್ಯಾಂಚೆಸ್ಟರ್, ಲಂಡನ್, ಕೇಂಬ್ರಿಜ್ಗಳಲ್ಲಿ ಅಧ್ಯಯನ ಮಾಡಿ ಲ್ಯಾಟಿನ್, ಗ್ರೀಕ್ ಭಾಷೆಗಳಲ್ಲಿ ಅದ್ವಿತೀಯ ಪಾಂಡಿತ್ಯ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ತಂದೆಯ ಅಭಿಲಾಷೆಯಂತೆ ಐ. ಸಿ. ಎಸ್. ಪರೀಕೆಯಲ್ಲಿ ಉತ್ತೀರ್ಣರಾದರೂ ಕುದುರೆ ಸವಾರಿಯ ಪರೀಕ್ಷೆಗೆ ಹೋಗದಿದ್ದುದರಿಂದ ಐ. ಸಿ. ಎಸ್. ಪದವಿಗೆ ಅನರ್ಹರಾದರು.
ಗಾಯಕವಾಡದ ಮಹಾರಾಜರ ಆಹ್ವಾನವನ್ನು ಸ್ವೀಕರಿಸಿ 1893ರ ಫೆಬ್ರವರಿ 2ರಂದು ಬರೋಡವನ್ನು ಸೇರಿದರು. ಕೆಲವು ಕಾಲದ ಬಳಿಕ ಬರೋಡ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. ಜೊತೆಗೆ ಅವರು ಮಹಾರಾಜರ ಆಪ್ತ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಬೇಕಾಯಿತು. ಇದೇ ಸಮಯದಲ್ಲಿ ತಂದೆ ಕಾಲವಾಗಲು ತಾಯಿ, ತಮ್ಮ, ತಂಗಿಯರ ಜೀವನ ನಿರ್ವಹಣದ ಹೊರೆ ಇವರ ಮೇಲೆಯೇ ಬಿತ್ತು. ಅರವಿಂದರ ದೃಷ್ಟಿ ತಮ್ಮ ಮಾತೃಭಾಷೆಯಾದ ಬಂಗಾಲಿಯನ್ನು ಕಲಿತು, ಬಂಕಿಮಚಂದ್ರರ ಮಧುಸೂದನದತ್ ಹಾಗೂ ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಕೂರ್ ಮೊದಲಾದವರ ಕೃತಿಗಳನ್ನು ಮೂಲದಲ್ಲಿಯೇ ಅಧ್ಯಯನ ಮಾಡುವತ್ತ ಹರಿಯಿತು. ಸ್ವಾಮಿ ವಿವೇಕಾನಂದರ ಕೃತಿಗಳ ಭಾಷೆಯ ಶಕ್ತಿ, ಗಾಂಭೀರ್ಯ, ಅವುಗಳ ರಸಾಸ್ವಾದನೆ ಅವರನ್ನು ಆಕರ್ಷಿಸಿತು. ಅವರ ಮೇಲೆ ಪ್ರಭಾವ ಬೀರಿದ ಶ್ರೇಷ್ಠ ಕೃತಿ ಶ್ರೀ ರಾಮಕೃಷ್ಣ ಪರಮಹಂಸರ ವಚನಾಮೃತ, ಭರ್ತಹರಿಯ ನೀತಿಶತಕ, ಕಾಳಿದಾಸನ ವಿಕ್ರಮೋರ್ವಶೀಯ ಮೊದಲಾದವು. ಈ ಸಂಸ್ಕೃತ ಕೃತಿಗಳನ್ನು ಅವರು ಇಂಗ್ಲಿಷಿಗೆ ಭಾಷಾಂತರ ಮಾಡಿದುದಲ್ಲದೆ, ವಾಲ್ಮೀಕಿ ರಾಮಾಯಣ ಮತ್ತು ವ್ಯಾಸ ಭಾರತದ ಕೆಲವು ಭಾಗಗಳನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿದ್ದಾರೆ.
ಮೃಣಾಲಿನಿ ಎಂಬ 14 ವರ್ಷದ ಕನ್ಯೆಯನ್ನು 1901ರಲ್ಲಿ ಅರವಿಂದರು ವಿವಾಹವಾದರು. ಆ ಸಮಯದಲ್ಲಿ ಅವರು ಬರೋಡ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಆಗ ಅವರಿಗೆ ಬರುತ್ತಿದ್ದ ಮಾಸಿಕ ವೇತನ 710 ರೂಪಾಯಿಗಳು. ಅಂತರ್ಮುಖಿಗಳಾದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಂಕಲ್ಪ ಮಾಡಿದರು. ಸರ್ಕಾರದ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಕೇವಲ 150 ರೂಪಾಯಿಗಳ ಮಾಸಿಕ ವೇತನಕ್ಕೆ ರಾಷ್ಟ್ರೀಯ ಕಾಲೇಜಿನ ಪ್ರಾಂಶುಪಾಲರಾದರು. 1906ರ ಡಿಸೆಂಬರ್ 26 ರಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಪೂರ್ಣಸ್ವಾತಂತ್ರ್ಯವೇ ಕಾಂಗ್ರೆಸ್ಸಿನ ಧ್ಯೇಯವೆಂದು ನಿರ್ಣಯ ಮಾಡಲು ಅರವಿಂದರು ಕಾರಣರಾದರು.
ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೆ ಕಾಂಗ್ರೆಸ್ಸಿನ ಧ್ಯೇಯ ಅದೇ ಆಗಿತ್ತು. 1907ರ ಡಿಸೆಂಬರ್ ತಿಂಗಳಲ್ಲಿ ಬೊಂಬಾಯಿ ಪ್ರಾಂತ್ಯದಲ್ಲಿ ಸಂಚರಿಸಿ, ಜನರಲ್ಲಿ ದೇಶಪ್ರೇಮವನ್ನುಕ್ಕಿಸುವ ಉಜ್ವಲ ಭಾಷಣ ಮಾಡಿದರು. ಬೊಂಬಾಯಿಯಿಂದ ಬರೋಡಕ್ಕೆ ಹೋದಾಗ, ಅಲ್ಲಿ ವಿಷ್ಣು ಭಾಸ್ಕರಲೀಲೆ ಎಂಬ ಯೋಗಿಯ ಸಂದರ್ಶನವಾಯಿತು. ಅವನ ಸಾನ್ನಿಧ್ಯದಲ್ಲಿ ಪ್ರಾಣಾಯಾಮ ಮೊದಲಾದ ಯೋಗಸಾಧನೆ ಮಾಡಿ ವಿಶೇಷ ಅನುಭವಗಳನ್ನು ಪಡೆದರು. ಈ ಜಗತ್ತು ಈಶ್ವರನ ಭೂಮಿಕೆ ಎಂಬುದು ಅವರಿಗೆ ಸ್ಪಷ್ಟವಾಯಿತು. ಭಾರತಮಾತೆ ಸಾಕ್ಷಾತ್ ರಾಜೇಶ್ವರಿಯಾಗಿ ಅವರಿಗೆ ಕಾಣಿಸಿದಳು. ಬ್ರಹ್ಮತೇಜಸ್ಸಿನಿಂದಲೇ ಭಾರತದ ಸ್ವಾತಂತ್ರ್ಯ ಸಾಧ್ಯವೆಂದು ಅವರಿಗೆ ಭಾಸವಾಯಿತು.
ಕೊಲ್ಕತ್ತಾಗೆ ಹಿಂತಿರುಗಿದ ಬಳಿಕ, ಬಿಪಿನ್ ಚಂದ್ರಪಾಲರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ವಂದೇ ಮಾತರಂ’ ಎಂಬ ಇಂಗ್ಲಿಷ್ ವಾರಪತ್ರಿಕೆಯಲ್ಲಿ ತೇಜೋಪೂರ್ಣವಾದ ಲೇಖನಗಳನ್ನು ಬರೆದು ಯುವಕರನ್ನು ಸ್ವಾತಂತ್ರ್ಯ ಸಮರಕ್ಕೆ ಸಿದ್ಧಮಾಡಿದರು. ಫಲವಾಗಿ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಉಗ್ರರೂಪಕ್ಕೆ ತಿರುಗಿತು. ಅದನ್ನು ಕಂಡ ಬ್ರಿಟಿಷ್ ಸರ್ಕಾರ ಆ ಪತ್ರಿಕೆಯ ಸಂಪಾದಕರನ್ನೂ, ಅರವಿಂದರನ್ನೂ ರಾಜದ್ರೋಹದ ಆಪಾದನೆಯ ಮೇಲೆ ಸೆರೆಮನೆಗೆ ಕಳುಹಿಸಿತು. ಕೆಲವು ದಿನಗಳ ಬಳಿಕ ಅರವಿಂದರನ್ನು ಬಿಟ್ಟರೂ ಪುನಃ 1908ರ ಮೇ 4 ರಂದು ಸುಮಾರು ಒಂದು ವರ್ಷ ಕಾಲ ಅವರಿಗೆ ಕಾರಾಗೃಹವಾಸದ ಶಿಕ್ಷೆಯಾಯಿತು. ಸೆರೆಮನೆ ಅವರಿಗೆ ಯೋಗಸಾಧನೆಯ ಕ್ಷೇತ್ರವಾಯಿತು. ವೇದ, ಉಪನಿಷತ್ತು, ಗೀತೆ ಮೊದಲಾದ ಸದ್ಗ್ರಂಥಗಳ ಪಠಣದಿಂದ ಅವರಿಗಾದುದು ‘ಸರ್ವಂ ಖಲ್ವಿದಂ ಬ್ರಹ್ಮಂ’ ಎಂಬುದರ ಅನುಭೂತಿ. ಕಡೆಗೆ ಕೊಲ್ಕತ್ತಾದ ಸುಪ್ರಸಿದ್ಧ ವಕೀಲರಾದ ಚಿತ್ತರಂಜನದಾಸರ ಪ್ರಯತ್ನದಿಂದಾಗಿ ಸೆರೆಮನೆಯಿಂದ ಹೊರಬರುವಂತಾಯಿತು.
ಕಾರಾಗೃಹದಿಂದ ಹೊರಬಂದ ಅರವಿಂದರು ಇಂಗ್ಲಿಷಿನಲ್ಲಿ ‘ಕರ್ಮಯೋಗಿ’, ‘ಬಂಗಾಳಿ’ಯಲ್ಲಿ ‘ಧರ್ಮ’ ಎಂಬ ಸಾಪ್ತಾಹಿಕಗಳನ್ನು ಆರಂಭಿಸಿದರು.
ಪ್ರಚಂಡಶಕ್ತಿಯ ಅವತರಣವಾಗದೆ ಭಾರತಕ್ಕೆ ಸ್ವಾತಂತ್ರ್ಯ ಅಸಾಧ್ಯವೆಂಬುದು ಅವರ ಲೇಖನಗಳಲ್ಲಿ ವ್ಯಕ್ತವಾಯಿತು. ಅವರ ಲೇಖನಗಳು ಅನೇಕ ಯುವಕರಿಗೆ ಸ್ಫೂರ್ತಿ ನೀಡಿದವು. ಅಂತರ್ಮುಖಿಗಳಾದ ಅವರು ಯೋಗಸಾಧನೆಯಲ್ಲಿ ತೊಡಗಲು ಸಂಕಲ್ಪಮಾಡಿದರು. 1910 ಏಪ್ರಿಲ್ 4 ರಂದು ಪಾಂಡಿಚೆರಿಯನ್ನು ಪ್ರವೇಶಿಸಿ, ತಮ್ಮ ಭೌತಿಕ ಶರೀರವನ್ನು ತ್ಯಜಿಸುವವರೆಗೆ ಅವರು ಅಲ್ಲಿಂದ ಚಲಿಸಲಿಲ್ಲ. ದಿವ್ಯಜೀವನದಲ್ಲಿ ಸುಪ್ರತಿಷ್ಠಿತವಾಗುವುದೇ ಮಾನವನ ಆದರ್ಶವೆಂಬುದು ಅವರಿಗೆ ಸ್ಪಷ್ಟವಾಯಿತು. ಸುಮಾರು 7 ವರ್ಷಗಳ ಕಾಲ ಆರ್ಯ ಎಂಬ ಪ್ರತಿಕೆಯಲ್ಲಿ ವೇದರಹಸ್ಯ, ಉಪನಿಷತ್ತುಗಳ ವ್ಯಾಖ್ಯಾನ, ದಿವ್ಯಜೀವನದ ಆದರ್ಶ, ಯೋಗಸಮನ್ವಯ, ಭಾರತೀಯ ಸಂಸ್ಕೃತಿಯ ಹಿರಿಮೆ, ಮಾನವಕುಲದ ಅಭ್ಯುದಯ, ಸಾಹಿತ್ಯ, ದರ್ಶನ ಇತ್ಯಾದಿ ಹಲವು ವಿಷಯಗಳನ್ನು ಕುರಿತ ಅವರ ಪ್ರಬುದ್ಧ ಲೇಖನಗಳು ಪ್ರಕಟವಾದವು.
1920 ಏಪ್ರಿಲ್ 24ರಂದು ಮೇರಿ ರಿಚರ್ಡ್ಸ್ ಎಂಬ ಫ್ರಾನ್ಸ್ ದೇಶದ ಮಹಿಳೆ ಅರವಿಂದರ ಶಿಷ್ಯೆಯಾಗಿ ಪಾಂಡಿಚೆರಿಯಲ್ಲಿ ನೆಲೆಸಿ ಅರವಿಂದಾಶ್ರಮವನ್ನು ರೂಪಿಸಿವುದರಲ್ಲಿ ಕಾರ್ಯಶೀಲಳಾದಳು. ಮಹಾಸಾಧಕರಾದ ಅರವಿಂದರಲ್ಲಿ 1926ರ ನವೆಂಬರ್ 24ರಂದು ಅತಿಮಾನವತ್ವ ಅವತರಣವಾಯಿತು. ಅಷ್ಟರಿಂದಲೇ ಅವರು ತೃಪ್ತರಾಗದೇ, ಸಮಷ್ಟಿಯಲ್ಲಿ ಅತಿಮಾನವತ್ವ ಅವಿರ್ಭವಿಸಲೆಂಬ ಅಭೀಪ್ಸೆಯಿಂದ ಅವರು ಮಹತ್ತರ ತಪಸ್ಸಿನಲ್ಲಿ ನಿರತರಾದರು. ಅವರ ಸಂದರ್ಶನ ದೊರಕುವುದು ಸಾಧಕರಿಗೆ ದುರ್ಲಭವಾದರೂ ವರ್ಷಕ್ಕೆ ನಾಲ್ಕು ಬಾರಿ ಅವರನ್ನು ಸಂದರ್ಶಿಸಲು ಅವಕಾಶವಿತ್ತರು. ಸಾಧಕರು ಬರೆಯುತ್ತಿದ್ದ ಸಹಸ್ರಾರು ಪತ್ರಗಳಿಗೆ ಉತ್ತರ ಬರೆಯಲು ಅವರು ಮರೆಯುತ್ತಿರಲಿಲ್ಲ. ಮಹಾಯೋಗಿ ಅರವಿಂದರು 1950 ಡಿಸೆಂಬರ್ 5ರಂದು ತಮ್ಮ ಶರೀರವನ್ನು ತ್ಯಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.