ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಅಭಿವೃದ್ಧಿಯ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ನಡೆಸಿದ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಮತ್ತು ಸಾರ್ವಜನಿಕರಿಗೆ ನಡೆದಾಡಲು ಉಪಯೋಗಿಸುವ ಪುಟ್ಪಾತ್ ಅಸಮರ್ಪಕವಾಗಿದೆ ಎಂದು ನಗರ ಪಂಚಾಯಿತಿ ಸದಸ್ಯರು ಮತ್ತು ನಗರದ ಪ್ರಮುಖರು ದೂರಿದ ಹಿನ್ನಲೆಯಲ್ಲಿ ಚರಂಡಿ ಕಾಮಗಾರಿ ಮತ್ತು ಪುಟ್ಪಾಥ್ ಕಾಮಗಾರಿಯನ್ನು ಕೂಡಲೇ ಸಮರ್ಪಕವಾಗಿ ನಿರ್ಮಿಸುವಂತೆ ಸುಳ್ಯ ಶಾಸಕರು ಕೆಆರ್ಡಿಸಿಎಲ್ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಆದೇಶ ನೀಡಿದ್ದಾರೆ. ಶಾಸಕ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಗರ ಪಂಚಾಯಿತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳ, ವರ್ತಕರ ಮತ್ತು ಕೆಆರ್ಡಿಸಿಎಲ್ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆ ನಡೆಯಿತು.
ರಾಜ್ಯ ಹೆದ್ದಾರಿಯ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಅದರ ಅಂಗವಾಗಿ ನಗರದಲ್ಲಿ ಚರಂಡಿ, ಪುಟ್ಪಾಥ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಬ್ಯಾರಿಕೇಡ್ ನಿರ್ಮಾಣ ನಡೆಯುತಿದೆ. ನಗರದಲ್ಲಿ ನಿರ್ಮಿಸಲಾದ ಚರಂಡಿ ಸರಿಯಾಗಿಲ್ಲ, ಮಳೆಯ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆಯೇ ಹರಿಯುತಿದೆ. ಪುಟ್ಪಾಥ್ ಅಸರ್ಮಕವಾಗಿದೆ ಅದರ ಮೇಲೆ ಅಳವಡಿಸಿದ ಸ್ಲಾಬ್ಗಳು ಗಟ್ಟಿಯಾಗಿಲ್ಲ ಅಲ್ಲಲ್ಲಿ ಹೊಂಡ ಬಿದ್ದಿದೆ ಇದರಿಂದ ಜನತೆ ನಡೆದಾಡುವ ಸ್ಥಿತಿಯಲ್ಲಿಲ್ಲ ಎಂದು ನಗರ ಪಂಚಾಯಿತಿ ಸದಸ್ಯರು ಮತ್ತು ವರ್ತಕರು ದೂರಿದರು. ರಸ್ತೆ ಬದಿಯಲ್ಲಿ ಅಳವಡಿಸುವ ಬ್ಯಾರಿಕೇಡ್ ಭಾರೀ ಎತ್ತರದಲ್ಲಿದೆ ಮತ್ತು ಕಬ್ಬಿಣದ ಪೈಪ್ ಭಾರೀ ಗಾತ್ರದಲ್ಲಿದ್ದು ಅಸಮರ್ಪಕವಾಗಿದೆ ಎಂದು ಪ್ರಮುಖರು ದೂರಿದರು.
ಜ್ಯೋತಿ ವೃತ್ತದ ಬಳಿಯಲ್ಲಿ ನೀರು ರಸ್ತೆಗೆ ಬರುತಿದೆ, ಎಸ್ವಿಎಂ ಆಸ್ಪತ್ರೆ ಬಳಿಯಲ್ಲಿ, ಕಾಯರ್ತೋಡಿ ದೇವಸ್ಥಾನಕ್ಕೆ ತೆರಳುವ ಸ್ಥಳಗಳಲ್ಲಿ ಕೂಡು ರಸ್ತೆಗೆ ಹೋಗಲು ಸಮಸ್ಯೆ ಆಗಿದೆ ಎಂದು ಕೆಆರ್ಡಿಸಿಎಲ್ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕುರಿತು ಚರಂಡಿ ಕಾಮಗಾರಿ, ಪುಟ್ಪಾಥ್ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸಲು ಶಾಸಕರು ಸೂಚಿಸಿದರು. ಈಗ ನಡೆಸಿರುವ ಚರಂಡಿ, ಪುಟ್ಪಾಥ್ ಕೆಲಸದಲ್ಲಿ ತೃಪ್ತಿ ಇಲ್ಲ ಕೂಡಲೇ ಕಾಮಗಾರಿಯನ್ನು ಸಮರ್ಪಕವಾಗಿ ಮುಗಿಸುವಂತೆ ಶಾಸಕರು ಸೂಚಿಸಿದರು. ಜನರನ್ನು ಮತ್ತು ನಗರ ಪಂಚಾಯಿತಿಯನ್ನು ವಿಶ್ವಾಸಕ್ಕೆ ತೆಗದುಕೊಳ್ಳದೆ ಕಾಮಗಾರಿ ನಡೆಸಿರುವುದರಿಂದ ಈಗ ಜನರು ಬವಣೆ ಅನುಭವಿಸಬೇಕಾಗಿ ಬಂದಿದೆ ಎಂದು ವರ್ತಕರು ದೂರಿದರು.
ಚರಂಡಿ, ಪುಟ್ಪಾಥ್, ಕಾಮಗಾರಿಯನ್ನು ಕೂಡಲೇ ಸಮರ್ಪಕವಾಗಿ ಮುಗಿಸುವುದಾಗಿ ಕೆಆರ್ಡಿಸಿಎಲ್ನ ಅಧಿಕಾರಿಗಳು ಭರವಸೆ ನೀಡಿದರು. ಬ್ಯಾರಿಕೇಡ್ಗೆ ಎಸ್ಟಿಮೇಟ್ನಲ್ಲಿ ಸೂಚಿಸಿರುವ ಗಾತ್ರದ ಪೈಪ್ಗಳನ್ನೇ ಅಳವಡಿಸಲಾಗುತಿದೆ ಎಂದು ಕೆಆರ್ಡಿಸಿಎಲ್ ಅಧಿಕಾರಿಗಳು ತಿಳಿಸಿದರು. ಬೇಲಿ ಅಳವಡಿಸುವ ಸಂದರ್ಭದಲ್ಲಿ ಅಂಗಡಿ ಮತ್ತು ವಾಣೀಜ್ಯ ಸಂಕೀರ್ಣಕ್ಕೆ ಸಮರ್ಪಕವಾದ ದಾರಿಯನ್ನು ನೀಡಿ. ಜನರಿಗೆ ತೊಂದರೆ ಆಗದಂತೆ ಎಸ್ಟಿಮೇಟ್ ಪ್ರಕಾರ ಬೇಲಿ ಹಾಕುವ ಕಾಮಗಾರಿ ನಡೆಸಿ ಮತ್ತು ಸಮಸ್ಯೆ ಇದ್ದರೆ ಅದನ್ನು ಸರಿಪಡಿಸಿ ಎಂದು ಶಾಸಕರು ಸೂಚಿಸಿದರು.
ನಗರ ಪಂಚಾಯಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮುಖ್ಯಾಧಿಕಾರಿ ಚಂದ್ರಕುಮಾರ್, ಸದಸ್ಯರಾದ ಕೆ.ಎಂ.ಮುಸ್ತಫಾ, ಕೆ.ಗೋಕುಲ್ದಾಸ್, ಗೋಪಾಲ ನಡುಬೈಲು, ಗಿರೀಶ್ ಕಲ್ಲುಗದ್ದೆ, ಕೆ.ಎಸ್.ಉಮ್ಮರ್, ಕಿರಣ್ ಕುರುಂಜಿ, ಸುನಿತಾ, ಪ್ರಮುಖರಾದ ಎಂ.ಬಿ.ಸದಾಶಿವ, ವಿಶ್ವನಾಥ ರಾವ್, ಪಿ.ಕೆ.ಉಮೇಶ್, ಉಮೇಶ್ ವಾಗ್ಲೆ, ವಿಲಿಯಂ ಲಸ್ರದೋ, ಸೋಮನಾಥ ಪೂಜಾರಿ, ಸುಂದರ ರಾವ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ರಿಕ್ಷಾ ಚಾಲಕ ಸಂಘದ ಪದಾಧಿಕಾರಿಗಳು, ವರ್ತಕರು, ಅಂಗಡಿ ಮಾಲಕರು ಚರ್ಚೆಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.