News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!

mobile-300x225ಅದೊಂದು ಭಾನುವಾರದ ಸಂಜೆ. ಬಂಧುಗಳೊಬ್ಬರು ಮನೆಗೆ ಬರುವುದಾಗಿ ಫೋನ್ ಮಾಡಿ ಹೇಳಿದ್ದರು. ಬನ್ನಿ ಎಂದು ನಾನೂ ಸ್ವಾಗತಿಸಿದೆ. ಇಡೀ ವಾರ ಕಚೇರಿ ಕೆಲಸದ ಒತ್ತಡ, ಜೊತೆಗೆ ಮನೆಯ ಇನ್ನಿತರ ಅದೂ ಇದೂ ಕೆಲಸಗಳ ಭಾರದಿಂದ ಬಳಲಿದ ಯಾರಿಗೆ ಆದರೂ ಭಾನುವಾರವಾದರೂ ಕೊಂಚ ರಿಲ್ಯಾಕ್ಸ್ ಆಗಬೇಕೆಂದು ಅನಿಸುವುದು ಸಹಜವೇ. ಅದರಲ್ಲೂ ಆತ್ಮೀಯರ ಮನೆಗೆ ಹೋದರೆ, ಅಲ್ಲಿ ಅವರೊಡನೆ ಹರಟೆ ಹೊಡೆದರೆ ಮನಸ್ಸು ಹಗುರಾಗುತ್ತದೆಂಬುದು ಎಲ್ಲರ ಅನುಭವ.

ಬಂಧುಗಳು ನನಗೆ ಫೋನ್ ಮಾಡಿದ ಒಂದರ್ಧ ಗಂಟೆಯ ಬಳಿಕ ನಮ್ಮ ಮನೆಗೆ ಬಂದರು. ಅವರು ಇನ್ನೇನು ನಮ್ಮ ಮನೆಯೊಳಗೆ ಪ್ರವೇಶಿಸಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ಅವರ ಮೊಬೈಲ್ ರಿಂಗಣಿಸತೊಡಗಿತು. ಜೇಬಿನಿಂದ ಮೊಬೈಲ್ ಹೊರತೆಗೆದು ಬಂಧುಗಳು ಮಾತನಾಡತೊಡಗಿದರು. ಅವರು ಇತ್ತೀಚೆಗಷ್ಟೇ ತಮ್ಮ ಊರಿನಲ್ಲಿ ನಿವೇಶನವೊಂದನ್ನು ಖರೀದಿಸಿ ನೋಂದಣಿ ಮಾಡಿಸಿದ ಕುರಿತು ತಮ್ಮ ಸ್ನೇಹಿತರಿಗೆ ವಿವರಿಸುತ್ತಿದ್ದರು. ನಿವೇಶನ ಖರೀದಿಸಲು ತಗಲಿದ ಮೊತ್ತ, ನೋಂದಣಿಗೆ ಮಾಡಿದ ವೆಚ್ಚ – ಎಲ್ಲಾ ಸೇರಿ ಒಟ್ಟು ಎಷ್ಟಾಯಿತು ಇತ್ಯಾದಿ ವಿವರಗಳನ್ನು ತಿಳಿಸಿದರು. ಇದೆಲ್ಲ ಸುಮಾರು 15 ನಿಮಿಷಗಳವರೆಗೆ ನಡೆಯಿತು. ಅಷ್ಟು ಹೊತ್ತು ನಾನು ಮೂಕ ಪ್ರೇಕ್ಷಕನಂತೆ ಸುಮ್ಮನೆ ಕುಳಿತಿರಬೇಕಾಯಿತು.

ಅದೆಲ್ಲ ಮುಗಿದು ಬಂಧುಗಳು ತಮ್ಮ ಮೊಬೈಲನ್ನು ಜೇಬಿನೊಳಗಿಟ್ಟರು. ಇನ್ನಾದರೂ ಇವರ ಬಳಿ ಲೋಕಾಭಿರಾಮ ಮಾತನಾಡೋಣವೆಂದು ನಾನು ಸಿದ್ಧವಾಗುತ್ತಿರುವಾಗಲೇ ಮತ್ತೆ ಅವರ ಮೊಬೈಲ್ ಹೊಡೆದುಕೊಳ್ಳತೊಡಗಿತು. ಪುನಃ ಇನ್ನೊಬ್ಬರಿಂದ ಕರೆ. ವಿಷಯವಾದರೋ ಅಂತಹ ಸೀರಿಯಸ್ ಏನಲ್ಲ. ಅದೇ ಸೈಟ್ ರಿಜಿಸ್ಟ್ರೇಶನ್‌ಗೆ ಸಂಬಂಧಿಸಿದ್ದು. ಅವರಿಗೂ 15-20 ನಿಮಿಷಗಳ ಕಾಲ ಅದನ್ನೆಲ್ಲ ಮೊಬೈಲ್‌ನಲ್ಲಿ ವಿವರಿಸಿದಾಗ ನಮ್ಮ ಮನೆಗೆ ಅವರು ಬಂದು ಅರ್ಧ ತಾಸಿಗಿಂತ ಹೆಚ್ಚು ಸಮಯವೇ ಕಳೆದು ಹೋಗಿತ್ತು. ಅವರ ಬಳಿ ಅಕ್ಷರಶಃ ನನಗೆ ಏನನ್ನೂ ಮಾತನಾಡಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವರ ಮೊಬೈಲ್ ನನ್ನ ಬಳಿ ಮಾತನಾಡದಂತೆ ಅವರನ್ನು ಹಿಡಿದಿಟ್ಟಿತ್ತು. ಆ ವೇಳೆಗೆ ನನ್ನ ಸಹನೆಯ ಕಟ್ಟೆಯೂ ಒಡೆದು ಹೋಗಿ, `ಸ್ವಲ್ಪ ಹೊತ್ತು ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡ್ತೀರಾ, ಪ್ಲೀಸ್’ ಎಂದೆ. ದುರ್ದಾನ ತೆಗೆದುಕೊಂಡವರಂತೆ ಅವರು ಸ್ವಿಚ್ ಆಫ್ ಮಾಡಿದರೋ ಅಥವಾ ಸೈಲೆಂಟ್ ಮೋಡ್‌ಗೆ ಬದಲಿಸಿದರೋ ಗೊತ್ತಾಗಲಿಲ್ಲ. ಆದರೆ ಅನಂತರ ಅವರ ಮೊಬೈಲ್‌ನಿಂದ ರಿಂಗ್‌ಟೋನ್‌ನ ಕರ್ಕಶ ನಾದವಂತೂ ಕೇಳಿ ಬರಲಿಲ್ಲ. ಆದರೂ ಅವರು ಆಗಾಗ ಜೇಬಿನಿಂದ ಮೊಬೈಲ್ ಹೊರತೆಗೆದು ನೋಡುತ್ತಲೇ, ನನ್ನ ಬಳಿ ಅನ್ಯಮನಸ್ಕರಾಗಿ ಮಾತನಾಡುತ್ತಿದ್ದುದನ್ನು ನಾನು ಗಮನಿಸುತ್ತಲೇ ಇದ್ದೆ.

ನಮ್ಮ ಮನೆಯಲ್ಲಿ ಅವರಿದ್ದಿದ್ದೇ ಕೇವಲ ಒಂದೂವರೆ ಗಂಟೆಯ ಕಾಲ ಮಾತ್ರ. ಅದರಲ್ಲಿ ಅರ್ಧ ಗಂಟೆಗೂ ಹೆಚ್ಚು ಅವಧಿಯನ್ನು ಅವರ ಮೊಬೈಲ್ ಕಬಳಿಸಿಬಿಟ್ಟಿತ್ತು. ಅನಂತರ ಅವಸರ ಅವಸರವಾಗಿ ಅವರು ಊಟ ಮುಗಿಸಿ, ಲೇಟ್ ಆಯ್ತು, ಇನ್ನು ಮನೆಗೆ ಹೋಗಬೇಕೆಂದು ಕಾರು ಹತ್ತಿ ಹೊರಟೇ ಬಿಟ್ಟರು. ನಮ್ಮ ಮನೆಗೆ ಬರುವ ಮೊದಲು ಅವರು ಹೇಳಿದ್ದು – ಹೀಗೇ ಆತ್ಮೀಯವಾಗಿ ಮಾತನಾಡಲು ಬರುತ್ತೇವೆಂದು. ಆದರೆ ಆ ಆತ್ಮೀಯ ಮಾತುಕತೆ ನಡೆಯಲೇ ಇಲ್ಲ. ನಡೆಯಲು ಅವರ ಮೊಬೈಲ್ ಅವಕಾಶ ಕೊಟ್ಟಿದ್ದರೆ ತಾನೆ? ನಾನಂತೂ ಅವರೊಡನೆ ನಡೆಯುವ ಆತ್ಮೀಯ ಮಾತುಕತೆಗೆ ಅಡ್ಡಿಯಾಗದಿರಲೆಂದು ಆಗತಾನೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಿಷ್ಟದ ಐಪಿಎಲ್ ಮ್ಯಾಚ್‌ನ ನೇರ ಪ್ರಸಾರವನ್ನು ವೀಕ್ಷಿಸದೆ ಟಿವಿ ಬಂದ್ ಮಾಡಿ ಕುಳಿತಿದ್ದೆ. ಹಾಗಿದ್ದರೂ ಆ ಬಂಧುವಿನೊಡನೆ ಆತ್ಮೀಯವಾಗಿ ಮಾತನಾಡಿ ಕಷ್ಟಸುಖ, ನೋವುನಲಿವುಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲೇ ಇಲ್ಲ.

***

ಇನ್ನೊಂದು ದಿನ ಮತ್ತೊಬ್ಬ ಬಂಧು ಹೀಗೆಯೇ ತಮ್ಮ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಆಗಮಿಸಿದ್ದರು. ಬೆಂಗಳೂರಿನಲ್ಲೇ ಅವರು ವಾಸವಾಗಿದ್ದರೂ ನಮ್ಮ ಮನೆಗೆ ಅವರು ಬರುತ್ತಿದ್ದುದು ವರ್ಷಕ್ಕೊಮ್ಮೆ ಅಥವಾ ತಪ್ಪಿದರೆ 2 ಬಾರಿ. ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟು ನಡೆಸುತ್ತಿರುವ ಅವರಿಗೆ ಬಿಡುವು ಸಿಗುತ್ತಿದ್ದುದೇ ಅಪರೂಪ. ಆ ದಿನ ಹಾಗೂಹೀಗೂ ಬಿಡುವು ಮಾಡಿಕೊಂಡು ಮನೆಗೆ ಬಂದಿದ್ದರು. ಪರಸ್ಪರ ಉಭಯ ಕುಶಲೋಪರಿ ಮುಗಿದು ಇನ್ನೇನು ಮಾತುಕತೆ ಶುರುವಾಗುವ ವೇಳೆಗೆ ಅವರ ಮೊಬೈಲ್ ಕೂಡ ಗುನುಗುನಿಸತೊಡಗಿತು. ಅವರ ಮನೆಯೊಂದು ಖಾಲಿ ಇತ್ತು. ಯಾರೋ ಅಪರಿಚಿತರೊಬ್ಬರು ಆ ಮನೆ ತಮಗೆ ಬೇಕೆಂದೂ ಬಾಡಿಗೆ ಎಷ್ಟಾಗುತ್ತದೆಂದೂ ಅಡ್ವಾನ್ಸ್ ಯಾವಾಗ ಕೊಡಬೇಕೆಂದೂ ವಿಚಾರಿಸುತ್ತಿದ್ದರು. ನಮ್ಮ ಬಂಧು ಅದಕ್ಕೆ ಸಂಬಂಧಿಸಿದ ಮಾಹಿತಿಗಳೆಲ್ಲವನ್ನೂ ಕೊಡುತ್ತಿದ್ದರು. ತಮಾಷೆಯೆಂದರೆ ಅವರು ತಮ್ಮ ಮೊಬೈಲ್‌ನಲ್ಲಿ ಮಾತನಾಡುವಾಗ ಅದರ ಸ್ಪೀಕರ್ ಆನ್ ಮಾಡಿಕೊಂಡಿದ್ದರು. ಬೇಕೆಂದೇ ಆನ್ ಮಾಡಿಕೊಂಡಿದ್ದರೋ ಅಥವಾ ಅವರಿಗರಿವಿಲ್ಲದೇ ಸ್ಪೀಕರ್ ಆನ್ ಆಗಿತ್ತೋ ನನಗೆ ತಿಳಿಯದು. ಸ್ಪೀಕರ್ ಆನ್ ಆಗಿದ್ದರಿಂದ ಅವರಿಬ್ಬರ ನಡುವಿನ ಸಂಭಾಷಣೆಯನ್ನು ನಾನು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಸಹಿಸಲೇಬೇಕಾಗಿತ್ತು. ನಮ್ಮ ಬಂಧುವಾದರೋ ಮೊದಲೇ ಗಟ್ಟಿಯಾಗಿ ಮಾತನಾಡುವ ಸ್ವಭಾವದವರು. ಮೊಬೈಲ್ ಸ್ಪೀಕರ್ ಬೇರೆ ಆನ್ ಆಗಿತ್ತು. ಹೀಗಿದ್ದ ಮೇಲೆ ಇನ್ನು ಕೇಳಬೇಕೆ? ಇಡೀ ಮನೆ ತುಂಬ ಅವರ ಮೊಬೈಲ್ ಸಂಭಾಷಣೆಯೇ ಮೊಳಗತೊಡಗಿತು. ಮನೆಯಲ್ಲಿ ಎಲ್ಲರೂ ತಮ್ಮ ಮಾತುಗಳನ್ನು ನಿಲ್ಲಿಸಿ ಆ ಸಂಭಾಷಣೆಯನ್ನೇ ಅನಿವಾರ್ಯವಾಗಿ ಆಲಿಸಬೇಕಾದ ಪರಿಸ್ಥಿತಿ. ಕೊನೆಗೂ ಆ ಸಂಭಾಷಣೆ ಮುಗಿದ ಬಳಿಕ ಅವರನ್ನು ಊಟಕ್ಕೆಬ್ಬಿಸಿದೆ. ಸದ್ಯ! ಊಟ ಮಾಡುವಾಗ ಮಾತ್ರ ಬೇರಾವುದೇ ಫೋನ್ ಕರೆ ಅವರಿಗೆ ಬರಲಿಲ್ಲ. ನಿಜಕ್ಕೂ ದೇವರು ದೊಡ್ಡವನು! ಹಾಗಾಗಿ ಊಟ ಮಾಡುತ್ತಾ ಒಂದಿಷ್ಟು ಹೊತ್ತು ಅವರೊಂದಿಗೆ ಆತ್ಮೀಯವಾಗಿ ಹರಟೆ ಹೊಡೆಯಲು ಸಾಧ್ಯವಾಯಿತು.

***

ನೀವು ಸಭೆ ಸಮಾರಂಭ, ಮದುವೆ ಮುಂಜಿ, ಪೂಜೆ, ಹೋಮ ಮತ್ತಿತರ ಕಾರ್ಯಕ್ರಮಗಳಿಗೆ ಹೋದಾಗ ಅಪರೂಪಕ್ಕೆ ಭೇಟಿಯಾಗುವ ಬಂಧುಗಳು, ಪರಿಚಿತರು, ಸ್ನೇಹಿತರೊಡನೆ. ಆತ್ಮೀಯವಾಗಿ ಮಾತನಾಡಬೇಕೆಂದು ಅಂದುಕೊಂಡಿರುತ್ತೀರಿ. ಆದರದು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಅವರೆಲ್ಲರೂ ತಮ್ಮ ಕಿವಿಗೆ ಮೊಬೈಲ್ ಅಂಟಿಸಿಕೊಂಡು ಸಂಭಾಷಣೆಯಲ್ಲಿ ನಿರತರಾಗಿರುತ್ತಾರೆ. ಅವರೊಮ್ಮೆ ಬಿಡುವಾಗಿದ್ದರೂ ನಿಮ್ಮ ಮೊಬೈಲ್ ನಿಮ್ಮ ಕಿವಿಗಂಟಿಕೊಂಡು ಯಾರ ಬಳಿಯೋ ಸಂಭಾಷಣೆಯಲ್ಲಿ ನಿರತವಾಗಿರುತ್ತದೆ. ನಿಮ್ಮ ಬಳಿ ಆತ್ಮೀಯವಾಗಿ ಮಾತನಾಡಬೇಕೆಂಬ ಆ ಬಂಧುಗಳ ಬಯಕೆಯೂ ಈಡೇರುವುದಿಲ್ಲ. ಕೊನೆಗೆ ಹಲೋ ಹಲೋ ಎಂಬ ಸಂಬೋಧನೆಗಷ್ಟೇ ಆತ್ಮೀಯತೆ ಸೀಮಿತವಾಗಿ ಬಿಡುತ್ತದೆ.

ಈಗೀಗ ಬ್ಲೂಟೂತ್ ಎಂಬ ಆಭರಣ ಹಲವರ ಕಿವಿಯ ಮೇಲೆ ವಿರಾಜಮಾನವಾಗಿರುತ್ತದೆ. ಹಿಂದೆಲ್ಲ ಕಿವಿಗೆ ಹೆಂಗಸರು ಹಾಗೂ ಗಂಡಸರು ಚಿನ್ನದ ಹರಳಿನ ಓಲೆ ಧರಿಸಿರುತ್ತಿದ್ದರು. ಈಗ ಓಲೆ ಧರಿಸುವವರೇ ಕಡಿಮೆ. ಹೆಂಗಸರೇ ಧರಿಸುತ್ತಿಲ್ಲ. ಇನ್ನು ಗಂಡಸರು ಧರಿಸುವ ಪ್ರಶ್ನೆಯಾದರೂ ಎಲ್ಲಿ? ಆದರೆ ಈಗ ಕಿವಿಯ ಓಲೆಯ ಜಾಗವನ್ನು ಬ್ಲೂಟೂತ್ ಎಂಬ ಆಭರಣ ಆಕ್ರಮಿಸಿದೆ. ಮದುವೆ ಮನೆಯ ಸಡಗರ ಸಂಭ್ರಮ ಅಥವಾ ಸಮಾರಂಭ ಒಂದರ ಸ್ವಾರಸ್ಯ ಸವಿಯಬೇಕಾದ ಮನಸ್ಸುಗಳು ಇನ್ನೆಲ್ಲೋ ಸಂಚರಿಸುತ್ತಿರುತ್ತವೆ. ದೇಹ ಮಾತ್ರ ಅಲ್ಲೇ ಇರುತ್ತದೆ.

ಬನಶಂಕರಿಯ ಚಿತಾಗಾರದ ಬಳಿ ನಡೆದ ಒಂದು ಘಟನೆ. ಪರಿಚಿತರೊಬ್ಬರು ತೀರಿ ಹೋಗಿದ್ದರು. ಇಡೀ ವಾತಾವರಣದಲ್ಲಿ ದುಃಖದ ಛಾಯೆ. ಅವರ ಶವ ಸಂಸ್ಕಾರದ ಮುನ್ನ ನಡೆಯುವ ಅಪರಕ್ರಿಯೆಗೆ ಪುರೋಹಿತರು ಸಿದ್ಧರಾಗಿದ್ದರು. ಅಪರಕ್ರಿಯೆ ಆರಂಭವಾದೊಡನೆ ಅವರಿಗೆ ಎಲ್ಲಿಂದಲೋ ಮೊಬೈಲ್ ಕರೆ. ಪುರೋಹಿತರು ಅಪರಕ್ರಿಯೆಯ ನಡುವೆಯೇ ಫೋನ್ ಎತ್ತಿಕೊಂಡು, `ನೀವು ಶವವನ್ನು ಚಿತಾಗಾರಕ್ಕೆ ತಂದು ಸಿದ್ಧವಾಗಿರಿ. ನಾನು ತುರ್ತಾಗಿ ಇಲ್ಲಿ ಅಪರಕ್ರಿಯೆ ಮುಗಿಸಿ ಅಲ್ಲಿಗೆ ಬರುವೆ’ ಎಂದು ಹೇಳಿ ಅಲ್ಲಿ ನಡೆಯುತ್ತಿದ್ದ ಅಪರಕ್ರಿಯೆಯನ್ನು ಮುಂದುವರಿಸಿದರು. ನಡುನಡುವೆ ಮತ್ತೆ ಅವರಿಗೆ ಫೋನ್ ಕರೆ ಬರುತ್ತಲೇ ಇತ್ತು. ಆ ಕರೆಗಳಿಗೆ ಅವರು ಉತ್ತರಿಸುತ್ತಲೇ ಇದ್ದರು. ಸಾಮಾನ್ಯವಾಗಿ ಅಪರಕ್ರಿಯೆಗಳನ್ನು ನಡೆಸುವ ಪುರೋಹಿತರು ಹಾಗೂ ಕರ್ತೃ ಅದನ್ನು ಶ್ರದ್ಧೆಯಿಂದ ಮನಸ್ಸಿಟ್ಟು ಮಾಡಬೇಕೆಂಬುದು ಅಪೇಕ್ಷೆ. ಪುರೋಹಿತರಂತೂ ಏಕಾಗ್ರತೆಯಿಂದ ಮಾಡಬೇಕು. ಕರ್ತೃವಾದರೋ ಅಗಲಿದವರ ದುಃಖದಿಂದ ಬಳಲಿರುತ್ತಾರೆ. ಏಕಾಗ್ರತೆ ಅವರಿಂದ ಸಾಧ್ಯವಾಗದು. ಆದರೆ ಪುರೋಹಿತರಿಗೆ ಹಾಗಲ್ಲ. ಆದರೂ ಪುರೋಹಿತರು ಕಾಟಾಚಾರಕ್ಕೆಂದು ಅಪರಕ್ರಿಯೆ ನೆರವೇರಿಸಿದರೆ ಹೇಗಾಗಬಹುದು?

ಸತ್ಯನಾರಾಯಣ ಪೂಜೆಯೊಂದಕ್ಕೆ ಹೋಗಿದ್ದೆ. ಪೂಜೆಯ ನೇತೃತ್ವವಹಿಸಿದ್ದ ಆಚಾರ್ಯರು ಮಧ್ಯೆ ಮಧ್ಯೆ ಯಾರೊಡನೆಯೋ ಫೋನ್ ಸಂಭಾಷಣೆ ನಡೆಸುತ್ತಿದ್ದರು. ಕರ್ತೃಗಳಾದರೋ ಭಕ್ತಿಯಿಂದ ಕೈ ಮುಗಿದು ಕುಳಿತಿದ್ದರು. ಆಚಾರ್ಯರು ಮಾತ್ರ ಕಾಟಾಚಾರಕ್ಕೆ ಮಂತ್ರ ಹೇಳುತ್ತಾ, ಇನ್ನಾರದೋ ಜೊತೆ ಫೋನ್ ಸಂಭಾಷಣೆ ಮುಂದುವರೆಸಿದ್ದರು. ಆ ಸಂಭಾಷಣೆಯನ್ನು ಸತ್ಯನಾರಾಯಣ ಪೂಜೆ ಮುಗಿದ ಬಳಿಕ ಮಾಡಬಹುದಿತ್ತು. ಸತ್ಯನಾರಾಯಣ ಪೂಜೆ ಮುಗಿಯುವ ತನಕ ತಮ್ಮ ಮೊಬೈಲ್‌ಗೆ ವಿಶ್ರಾಂತಿ ನೀಡಿದ್ದರೆ ಅಲ್ಲೊಂದು ಭಕ್ತಿಯ ವಾತಾವರಣ ನೆಲೆಸಿರುತ್ತಿತ್ತು. ಪೂಜೆ ನೆರವೇರಿಸಿದ್ದಕ್ಕೆ ಸಾರ್ಥಕತೆಯೂ ಇರುತ್ತಿತ್ತು.

ಮೊನ್ನೆ ನಡೆದ ಇನ್ನೊಂದು ಘಟನೆ ನಿಮಗೆ ಹೇಳಲೇ ಬೇಕು. ತಲೆ ಕ್ಷೌರಕ್ಕೆಂದು ಸಲೂನ್‌ಗೆ ಹೋಗಿದ್ದೆ. ನನ್ನ ಸರದಿ ಬಂದಾಗ ಖಾಲಿ ಕುರ್ಚಿಯಲ್ಲಿ ಹೋಗಿ ಕುಳಿತೆ. ಕ್ಷೌರಿಕ ತನ್ನ ಕೆಲಸ ಆರಂಭಿಸಿದ. ಸ್ವಲ್ಪ ಹೊತ್ತಿಗೇ ಆತನ ಮೊಬೈಲ್ ಗಂಟೆ ಬಾರಿಸತೊಡಗಿತು. ಒಂದು ಕೈಯಲ್ಲಿ ಮೊಬೈಲ್ ಹಿಡಿದು ಕಿವಿಗೆ ಅಂಟಿಸಿ ಮಾತನಾಡುತ್ತಾ ಇನ್ನೊಂದು ಕೈಯಲ್ಲಿ ಕತ್ತರಿ ಹಿಡಿದು ನನ್ನ ತಲೆಯ ಕೂದಲು ಕತ್ತರಿಸತೊಡಗಿದ. ನನಗೆ ಭಯವಾಯಿತು. ಆತ ಮಾತನಾಡುವ ಭರದಲ್ಲಿ ನನ್ನ ತಲೆಗೂದಲು ಕತ್ತರಿಸುತ್ತಾನೋ ಅಥವಾ ಕಿವಿಯನ್ನೇ ಕತ್ತರಿಸಿ ಬಿಡುತ್ತಾನೋ ಎಂಬ ಅಂಜಿಕೆ ಕಾಡತೊಡಗಿತು. ಸದ್ಯ ಮೊಬೈಲ್ ಸಂಭಾಷಣೆ ಬೇಗ ಮುಗಿದಿದ್ದರಿಂದ ನಾನು ನಿರಾಳನಾದೆ.

***

ವಾಹನಗಳು ಕಿಕ್ಕಿರಿದು ತುಂಬಿದ ರಸ್ತೆಗಳ ವೃತ್ತದಲ್ಲಿ , ಸಿಗ್ನಲ್‌ಗಳಲ್ಲಿ ಕಾಲೇಜಿಗೆ ಹೋಗುವ ಹುಡುಗ ಹುಡುಗಿಯರು ರಸ್ತೆ ದಾಟುವಾಗ ಮೊಬೈಲ್‌ಗೆ ಕಿವಿ ಹಚ್ಚಿ ಹೋಗುವುದನ್ನು ನೋಡಿದಾಗ ಅಯ್ಯೋ ದೇವರೇ ಎನಿಸುತ್ತದೆ. ಏಕೆಂದರೆ ಅವರ ಗಮನವೆಲ್ಲ ಮೊಬೈಲ್ ಸಂಭಾಷಣೆಯ ಕಡೆಗಿರುತ್ತದೆ. ಸಿಗ್ನಲ್‌ನ ಹಸಿರು ದೀಪ ಹತ್ತಿಕೊಂಡಿದ್ದು ಅಥವಾ ವಾಹನಗಳು ಶರವೇಗದಿಂದ ತಮ್ಮೆದುರಿನಿಂದ ಬರುತ್ತಿರುವುದು ಅವರ ಬುದ್ಧಿಗೆ ಗೋಚರವಾಗುವುದೇ ಇಲ್ಲ. ಅವಘಡ ಸಂಭವಿಸಿದಾಗಲಷ್ಟೇ ಅದು ಗೊತ್ತಾಗುತ್ತದೆ. ಆದರೆ ಆ ವೇಳೆಗೆ ಕಾಲ ಮಿಂಚಿರುತ್ತದೆ.

ಮೊದಲೆಲ್ಲ ಊರಿಗೆ ಹೊರಟವರು ಆ ಊರಿಗೆ ತಲುಪಿದ ಬಳಿಕ ತಾವು ತಲುಪಿದ್ದೇವೆಂದು ಸ್ಥಿರ ದೂರವಾಣಿ ಮೂಲಕ ತಿಳಿಸುತ್ತಿದ್ದರು. ಅದಕ್ಕೂ ಮೊದಲು ದೂರವಾಣಿ ಬಳಕೆಯೇ ಇಲ್ಲದಿದ್ದ ಕಾಲದಲ್ಲಿ ಅದೂ ಕೂಡ ಇರಲಿಲ್ಲ. ಊರಿಗೆ ಹೋದವರು ವಾಪಸ್ ಮನೆಗೆ ಬಂದ ಮೇಲೆಯೇ ಅವರು ಸುರಕ್ಷಿತವಾಗಿ ತಲುಪಿದ ಮಾಹಿತಿ ಗೊತ್ತಾಗುತ್ತಿತ್ತು. ಈಗ ಮಾತ್ರ ಹಾಗಲ್ಲ. ಮನೆಯಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತಲುಪಿದ ಕೂಡಲೇ ಮನೆಗೆ ಕರೆ ಬರುತ್ತದೆ. ಸುರಕ್ಷಿತವಾಗಿ ಮೆಜೆಸ್ಟಿಕ್ ತಲುಪಿದ್ದೇವೆ ಎಂದು ಮೊಬೈಲ್ ಉಲಿಯುತ್ತದೆ. ಅನಂತರ ಬಸ್ ಹತ್ತಿ ಕುಳಿತ ಬಳಿಕ ಮನೆಗೆ ಮತ್ತೊಂದು ಕರೆ – ಬಸ್ಸಿನಲ್ಲಿ ಕುಳಿತಿದ್ದೇವೆ. ಇನ್ನೇನು ಈಗ ಹೊರಡಬಹುದು ಎಂಬ ಸಂದೇಶ. ಬಸ್ ಹೊರಟ ಮೇಲೆ ಮತ್ತೊಂದು ಕರೆ. ಇನ್ನು ಮರುದಿನ ಊರು ತಲುಪಿದ ಬಳಿಕವಂತೂ ಸುರಕ್ಷಿತವಾಗಿ ತಲುಪಿದ ಬಗ್ಗೆ ಮತ್ತೊಂದು ಕರೆ ಅಥವಾ ಸಂದೇಶ. ಸುರಕ್ಷಿತವಾಗಿ ತಲುಪದೆ ರಾತ್ರಿ ಎಲ್ಲಾದರೂ ಅಪಘಾತಕ್ಕೀಡಾದರೆ ಮಾತ್ರ ಕರೆ ಮಾಡುವ ಅವಕಾಶವೇ ಇರುವುದಿಲ್ಲ!

ಯಾವುದೇ ಕಚೇರಿಗಳಿಗೆ ಹೋದರೂ ಅಲ್ಲಿ ಸಿಬ್ಬಂದಿಗಳ ಕಿವಿಗೆ ಮೊಬೈಲ್ ಅಂಟಿಕೊಂಡಿರುತ್ತದೆ. ಕಚೇರಿಗೆ ಬಂದವರಿಗೆ ಕಣ್‌ಸನ್ನೆಯಲ್ಲೇ ಸ್ವಾಗತ. ಸಾಮಾಜಿಕ ಸಂಘಟನೆಗಳ ಕಾರ್ಯಾಲಯಗಳಲ್ಲೂ ಈಗ ಇಂತಹುದೇ ವಾತಾವರಣ. ಅಲ್ಲಿ ಎಲ್ಲರೂ `ಯಂತ್ರ ಮಾನವರು’! ಯಂತ್ರದೊಂದಿಗೇ ಅವರ ಮಾತುಕತೆ, ನಗು, ಹಾಸ್ಯ, ವ್ಯವಹಾರ. ಮಾನವರೊಂದಿಗೆ ನಗು, ಹಾಸ್ಯ, ಮಾತುಕತೆ ಕಂಡುಬರುವುದೇ ಇಲ್ಲ. ಕೆಲವೊಮ್ಮೆ ಅಂತಹ ಕಾರ್ಯಾಲಯಗಳಿಗೆ ಹೋದಾಗ, ಛೇ, ಇಲ್ಲಿ ಮನುಷ್ಯರೇ ಇಲ್ಲವಲ್ಲ ಎಂದು ಬೇಸರವಾಗುವುದೂ ಉಂಟು.

***

ಇಷ್ಟೆಲ್ಲವನ್ನೂ ನಿಮಗೆ ನಿವೇದಿಸಿದ ನಾನೇನೂ ಖಂಡಿತ ಮೊಬೈಲ್ ಫೋನ್ ವಿರೋಧಿಯಲ್ಲ. ಶರವೇಗದಲ್ಲಿ ಬದಲಾಗುತ್ತಿರುವ ಜೀವನಶೈಲಿಗೆ ಮೊಬೈಲ್‌ನ ಅನಿವಾರ್ಯತೆ ಎಷ್ಟೆಂಬುದು ನನಗೆ ತಿಳಿಯದೆಯೂ ಇಲ್ಲ. ಆದರೆ ನಾವೆಲ್ಲ ಸದಾಕಾಲಕ್ಕೂ ಮೊಬೈಲ್ ಫೋನ್‌ಗೆ ದಾಸರಾಗಿರಬೇಕೆ? ಈ ಪ್ರಶ್ನೆ ನನ್ನನ್ನು ಕಾಡುತ್ತಲೇ ಇರುತ್ತದೆ. ಮೊಬೈಲ್‌ಫೋನ್ ನಮ್ಮ ಗುಲಾಮನಾಗಿರಬೇಕೇ ಹೊರತು ನಾವೇ ಮೊಬೈಲ್‌ಫೋನ್‌ನ ಗುಲಾಮನಾಗಿದ್ದರೆ ಮಮತೆ, ಪ್ರೀತಿ, ಆತ್ಮೀಯತೆ, ವಿಶ್ವಾಸ ಮೊದಲಾದ ಮಾನವೀಯ ಭಾವನೆಗಳನ್ನೇ ಕಳೆದುಕೊಳ್ಳಬೇಕಾದೀತು. ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆಯಿಂದ ನಾವೆಲ್ಲ ಹೊರಬರಲು ಸಾಧ್ಯವಿಲ್ಲವೆ?

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top