ನವದೆಹಲಿ : ಪಠಾಣ್ಕೋಟ್ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮೂಲಕ ಪ್ರಸಾರ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಎನ್ಡಿಟಿವಿ ಇಂಡಿಯಾಗೆ 1 ದಿನದ ಕಾಲ ಪ್ರಸಾರ ನಿಷೇಧ ಹೇರಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ಪ್ರಸಾರ, ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ನಿಷೇಧ ಹೇರಲಾಗಿದೆ ಎನ್ನಲಾಗಿದೆ.
ಜನವರಿ ತಿಂಗಳಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಪಠಾಣ್ಕೋಟೆ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಯುದ್ಧ ವಿಮಾನಗಳು, ಇಂಧನ್ ಟ್ಯಾಂಕ್, ಮಾರ್ಟರ್ಗಳು, ಹೆಲಿಕಾಪ್ಟರ್ಗಳು, ರಾಕೆಟ್ ಉಡಾವಕಗಳು, ಮಿಗ್ ಯುದ್ಧ ವಿಮಾನಗಳು, ಹೀಗೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ಎನ್ಡಿಟಿವಿ ಪ್ರಸಾರ ಮಾಡಿತ್ತು. ಇದನ್ನು ಉಗ್ರರು ಗಮನಿಸಿದ್ದರೆ ಇದು ರಾಷ್ಟ್ರೀಯ ಭದ್ರತೆಗೆ ಮಾತ್ರವಲ್ಲದೆ ನಾಗರಿಕರು, ಶಾಲಾ ಮಕ್ಕಳು ಮತ್ತು ರಕ್ಷಣಾ ಸಿಬ್ಬಂದಿಗಳ ಪ್ರಾಣಕ್ಕೆ ಭಾರಿ ಹಾನಿಯುಂಟು ಮಾಡುತ್ತಿತ್ತು. ಇದೊಂದು ಸೂಕ್ಷ್ಮ ವಿಷಯವಾಗಿದ್ದು ಎನ್ಡಿಟಿವಿ ಸುದ್ದಿ ಬಿತ್ತರದ ಭರದಲ್ಲಿ ಪ್ರಸಾರ ನಿಯಮವನ್ನು ಉಲ್ಲಂಘಿಸಿದೆ. ಹೀಗಾಗಿ 1 ದಿನದ ಕಾಲ ಯಾವುದೇ ಕಾರ್ಯಕ್ರಮಗಳು ಹಾಗೂ ಸುದ್ದಿಯನ್ನು ಪ್ರಸಾರ ಮಾಡದಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಆದರೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಎನ್ಡಿಟಿವಿ ಇಂಡಿಯಾ, ಬಹಳಷ್ಟು ಪತ್ರಿಕೆಗಳು, ಸುದ್ದಿವಾಹಿನಿಗಳು, ಅಂತರ್ಜಾಲ ತಾಣಗಳಲ್ಲಿ ಕೆಲ ಮಾಹಿತಿಗಳನ್ನು ಈ ಮೊದಲೇ ಬಳಕೆ ಮಾಡಲಾಗಿತ್ತು. ನಾವು ಕೂಡಾ ಇದೇ ಮಾಹಿತಿಯನ್ನಷ್ಟೇ ಪ್ರಸಾರ ಮಾಡಿದ್ದೇವೆ ಎಂದಿದೆ.
ಉಗ್ರರ ದಾಳಿಗಳ ಸುದ್ದಿ ಬಿತ್ತರದ ಕುರಿತು ಸುದ್ದಿ ವಾಹಿನಿಯೊಂದರ ವಿರುದ್ಧ ನೀಡಿರುವ ಮೊದಲ ಆದೇಶ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.