ಸರ್ದಾರ್ ಪಟೇಲರು ಹುಟ್ಟಿದ ದಿನ ಅಕ್ಟೋಬರ್ 31 1875. ನಿರ್ಣಯಗಳಲ್ಲಿ ‘ಉಕ್ಕಿನ ಮನುಷ್ಯ’ರಾಗಿ, ಹೃದಯವಂತಿಕೆಯಲ್ಲಿ, ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತೆಯಲ್ಲಿ ಮಹಾ ಮಾನವರಾದ ಪಟೇಲರು ಸಾರ್ವಕಾಲಿಕವಾಗಿ ನಮ್ಮ ಭಾರತೀಯ ಹೃದಯಗಳಲ್ಲಿ ಪ್ರಜ್ವಲಿತ ಹಣತೆಯಂತೆ ಬೆಳಗುತ್ತಲೇ ಇದ್ದಾರೆ. ಗುಜರಾತಿನ ನಡಿಯಾದ್ ಪಟೇಲರು ಹುಟ್ಟಿದ ಊರು.
ಪಟೇಲರು ಶಾಲೆ ಸೇರಿದ್ದು ತಡವಾಗಿ. ಪಟೇಲರು ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದಾಗ ಅವರಿಗೆ 22 ವರ್ಷ! ಈ ಘಟ್ಟದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಸ್ವತಃ ಪಟೇಲರಿಗೆ ಪ್ಲೀಡರ್ ಪರೀಕ್ಷೆ ಪಾಸು ಮಾಡಿ ವಕೀಲರಾಗಬೇಕೆಂದು ಅಪೇಕ್ಷೆಯಿತ್ತು. ಅದಕ್ಕಾಗಿ ಹಣ ಒಟ್ಟುಮಾಡಿ, ತಮ್ಮ 36ನೆಯ ವಯಸ್ಸಿನಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದ ವಲ್ಲಭಭಾಯ್ ಅವರು ಮೂವತ್ತಾರು ತಿಂಗಳುಗಳ ಬ್ಯಾರಿಸ್ಟರ್ ಕೋರ್ಸನ್ನು ಮೂವತ್ತೇ ತಿಂಗಳಲ್ಲಿ ಮುಗಿಸಿ, ಕಾಲೇಜು ವಿದ್ಯಾಭ್ಯಾಸದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ, ತರಗತಿಗೆ ಪ್ರಥಮರಾಗಿ ಉತ್ತೀರ್ಣರಾದರು. ಅಲ್ಲಿಂದ ಹಿಂತಿರುಗಿ ಅಹಮದಾಬಾದಿನಲ್ಲಿ ನೆಲೆನಿಂತು, ಅಲ್ಲಿನ ಅಗ್ರಮಾನ್ಯ ಬ್ಯಾರಿಸ್ಟರುಗಳಲ್ಲಿ ಒಬ್ಬರೆಂದು ಹೆಸರಾದರು.
1918ರಲ್ಲಿ ಪಟೇಲರು ಚೆನ್ನಾಗಿ ನಡೆಯುತ್ತಿದ್ದ ತಮ್ಮ ವಕೀಲಿ ವೃತ್ತಿ, ಅದರ ಘನತೆ, ಗೌರವ, ದೊಡ್ಡ ಮನೆ, ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ ಮತ್ತು ಕಷ್ಟಕಾರ್ಪಣ್ಯಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತಮ್ಮ ಮಿತ್ರರೊಂದಿಗೆ ಗಾಂಧೀಜಿಯವರ ರಾಜಕೀಯ ರೀತಿನೀತಿಗಳನ್ನು ಲೇವಡಿ ಮಾಡಿದ್ದರೂ, ಅನ್ನಿಬೆಸಂಟರ ಬಂಧನಕ್ಕೆ ವಿರುದ್ಧ ಸಾರ್ವಜನಿಕ ಪ್ರತಿಭಟನೆಮಾಡಬೇಕು ಎಂದು ಗಾಂಧೀಜಿಯವರು ಸೂಚಿಸಿದಾಗ, ಅವರ ಮನಃಪರಿವರ್ತನೆಯಾಯಿತು. ಗಾಂಧಿಯವರ ಚಂಪಾರಣ್ಯದ ಸತ್ಯಾಗ್ರಹದ ನಂತರವಂತೂ ಪಟೇಲರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಯಗಳಿಸಲು ಗಾಂಧಿ ಸಮರ್ಥರು ಎಂಬ ನಂಬಿಕೆ ಬಲವಾಯಿತು. ಗಾಂಧೀಜಿಯವರು ಭಾರತೀಯ ಮೌಲ್ಯಗಳಲ್ಲಿ ಹೊಂದಿದ್ದ ಶ್ರದ್ಧೆ ಮತ್ತು ಸರಳ ಜೀವನಗಳಿಂದ ಆಕರ್ಷಿತರಾದ ಪಟೇಲರು ಗಾಂಧೀಜಿಯವರ ಆಪ್ತರಾದರು. ಪಟೇಲರು ಕಾಂಗ್ರೆಸ್ ಪಕ್ಷ ಸೇರಿದ್ದು 1918ರ ನಂತರದಲ್ಲಿ. ಅವರು ಕಾರ್ಯದರ್ಶಿಯಾಗಿದ್ದ ಗುಜರಾತ್ ಸಭಾ 1920ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯಾಗಿ ಬದಲಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಅವರು 1947ರವರೆಗೂ ಅಲ್ಲಿ ಸೇವೆ ಸಲ್ಲಿಸಿದರು.
1928ರಲ್ಲಿ ಬಾರ್ಡೋಲಿ ಪ್ರದೇಶವು ದುರವಸ್ಥೆಗೀಡಾಯಿತು. ಗುಜರಾತಿನ ಬಹುತೇಕ ಭಾಗಗಳು ಕ್ಷಾಮದಿಂದ ತತ್ತರಿಸುವುದರೊಂದಿಗೆ, ಸರ್ಕಾರ ಕಂದಾಯವನ್ನೂ ಹೆಚ್ಚು ಮಾಡಿತು. ಇದರ ವಿರುದ್ಧವಾಗಿ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆಯು ದೇಶದಲ್ಲೆಲ್ಲ ಪ್ರಸಿದ್ಧಿ ಪಡೆಯಿತು. ಖೇಡಾ ಸತ್ಯಾಗ್ರಹಕ್ಕಿಂತ ಉಗ್ರವಾಗಿದ್ದ ಈ ಪ್ರತಿಭಟನೆಗೆ ಬೆಂಬಲವಾಗಿ ಗುಜರಾತಿನ ಅನೇಕ ಕಡೆಗಳಲ್ಲಿ ಜನರು ಸತ್ಯಾಗ್ರಹ ಹೂಡಿದರು. ಈ ಎರಡೂ ಹೋರಾಟಗಳು ಮುಗಿದ ನಂತರದಲ್ಲಿ ಪಟೇಲರು, ಜನಸಾಮಾನ್ಯರು ಕಳೆದುಕೊಂಡಿದ್ದ ಭೂಮಿಕಾಣಿ ಹಾಗೂ ಆಸ್ತಿಪಾಸ್ತಿಗಳನ್ನು ಮತ್ತೆ ಅವರಿಗೆ ಹಿಂದಿರುಗಿಸಿಕೊಡಲು ಹಗಲೂರಾತ್ರಿ ಶ್ರಮಿಸಿದರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರ್ದಾರ್ ಎಂಬ ಬಿರುದು ಪ್ರಾಪ್ತವಾಯಿತು. ಗುಜರಾತಿನ ಲಕ್ಷಾಂತರ ಜನರಿಗೆ ಪಟೇಲರು ಆರಾಧ್ಯದೈವವಾದರು.
ಜಿನ್ನಾರ ನಾಯಕತ್ವದಲ್ಲಿ ದಿನೇದಿನೇ ಹೆಚ್ಚುತ್ತಿದ್ದ ಮುಸ್ಲಿಮ್ ಪ್ರತ್ಯೇಕತಾ ಬೇಡಿಕೆಯಿಂದ ಭಾರತದ ವಿಭಜನೆ ಅನಿವಾರ್ಯ ಎಂಬ ನಿರ್ಣಯಕ್ಕೆ ಬಂದ ಮೊದಮೊದಲ ಕಾಂಗ್ರೆಸ್ ನಾಯಕರುಗಳಲ್ಲಿ ಪಟೇಲರೂ ಒಬ್ಬರಾಗಿದ್ದರು. ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಮಧ್ಯೆ ಸಂಧಾನದ ಪ್ರಯತ್ನಗಳನ್ನು ವಿಫಲಗೊಳಿಸಿ, ಜಿನ್ನಾ ತನ್ನ ಹಿಂಬಾಲಕರನ್ನು ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದದ್ದು ಪಟೇಲರಿಗೆ ತೀವ್ರ ಅಸಮಾಧಾನ ಉಂಟುಮಾಡಿತ್ತು. (ಜಿನ್ನಾ ಕರೆ ಕೊಟ್ಟ ಡೈರೆಕ್ಟ್ ಆಕ್ಷನ್ ಡೇ ಎಂಬ ಅಂದೋಳನದಲ್ಲಿ 5000ಕ್ಕೂ ಹೆಚ್ಚು ಮಂದಿ ಕೊಲೆಗೀಡಾದರು). ಆದರೂ ಜಿನ್ನಾ ಮುಸ್ಲಿಮರ ಜನಪ್ರಿಯ ನಾಯಕನಾಗಿರುವುದರಿಂದ, ರಾಷ್ಟ್ರೀಯವಾದಿಗಳೊಂದಿಗಿನ ಅವರ ಭಿನ್ನಾಭಿಪ್ರಾಯಗಳು, ಬೃಹತ್ ಹಿಂದೂ ಮುಸ್ಲಿಮ್ ದಂಗೆಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳ ಅರಿವೂ ಅವರಿಗಿತ್ತು. ನೆಹರು ಮತ್ತಿತರರೂ ವಿಭಜನೆಯ ಸಾಧ್ಯತೆಯನ್ನು ಅನಿವಾರ್ಯವೆಂದು ಒಪ್ಪಿದ ಮೇಲೆ, ಈ ವಿಷಯದಲ್ಲಿ ಅತ್ಯಂತ ದುಃಖಿಗಳಾಗಿದ್ದ ಗಾಂಧಿಯನ್ನು ವಿಭಜನೆಯ ಅನಿವಾರ್ಯತೆಯ ಬಗ್ಗೆ ಒಪ್ಪಿಸುವ ಕಾರ್ಯವನ್ನು ಪಟೇಲರೇ ವಹಿಸಿಕೊಂಡರು.
ಪಾರ್ಟಿಷನ್ ಕೌನ್ಸಿಲ್ಲಿನಲ್ಲಿ ಭಾರತದ ಪರವಾದ ಸದಸ್ಯರಾಗಿ ಪಟೇಲರು ಸರಕಾರಿ ಆಡಳಿತ ಯಂತ್ರಗಳ, ಆಸ್ತಿಪಾಸ್ತಿಗಳ ಸೂಕ್ತಹಂಚಿಕೆಯ ಮೇಲುಸ್ತುವಾರಿ ವಹಿಸಿದ್ದರು. ನೆಹರೂ ಮತ್ತು ಪಟೇಲರು ಜಂಟಿಯಾಗಿ ಕೇಂದ್ರ ಮಂತ್ರಿಮಂಡಲವನ್ನು ನಿರ್ಣಯಿಸಿ, ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು.
ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ, 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ, ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ, ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು. ಅಷ್ಟೇ ಅಲ್ಲದೆ ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ, ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು.
1947ರ ಮೇ 6ರಂದು ಪಟೇಲರು ರಾಜಸಂಸ್ಥಾನದ ಮುಖ್ಯಸ್ಥರುಗಳ ಜೊತೆ ವಿಲೀನದ ಮಾತುಕತೆಯನ್ನು ಪ್ರಾರಂಭಿಸಿದರು. ಈ ಮಾತುಕತೆಗಳ ಉದ್ದೇಶವೆಂದರೆ ಈ ರಾಜರಿಂದ ಭವಿಷ್ಯದ ಭಾರತ ಸರ್ಕಾರಕ್ಕೆ ಸಹಕಾರವನ್ನು ಪಡೆದು, ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಪ್ರಾರಂಭದ ಹಂತದಲ್ಲೇ ಚಿವುಟಿಹಾಕುವುದಾಗಿತ್ತು. ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಸತ್ಕಾರ ಕೂಟವನ್ನು ಏರ್ಪಡಿಸಿದ ಪಟೇಲರು ಈ ರಾಜರುಗಳನ್ನು ವಿಲೀನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಕಾಂಗ್ರೆಸ್ ಮತ್ತು ಈ ರಾಜಕುಮಾರರ ನಡುವೆ ಮೂಲಭೂತವಾದ ಯಾವುದೇ ಚಕಮಕಿಯಿಲ್ಲ ಎಂದು ಪಟೇಲರು ಸ್ಪಷ್ಟಪಡಿಸಿದರೂ, 1947 ಆಗಸ್ಟ್ 15ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು. ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆ ಈ ರಾಜರುಗಳ ಮನವೊಲಿಸಿದ ಪಟೇಲರು, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ ನಿರರ್ಥಕತೆಯನ್ನು ಅವರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಪಟೇಲರು ನೀಡಿದರು. ಕಾಶ್ಮೀರ, ಹೈದರಾಬಾದು ಮತ್ತು ಜುನಾಘಢ ರಾಜ್ಯಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು.
ಕಾಶ್ಮೀರದ ಬಗ್ಗೆ ಮಾತ್ರ ಜನಮತಾಭಿಪ್ರಾಯ ಪಡೆಯಬೇಕೆಂದ ಜಿನ್ನಾ ಜುನಾಘಡ ಮತ್ತು ಹೈದರಾಬಾದಿನ ವಿಚಾರದಲ್ಲಿ ಕುತಂತ್ರದ ನೀತಿ ಅನುಸರಿಸಿದ್ದುದನ್ನು ಗಮನಿಸಿದ ಪಟೇಲರು ಜಿನ್ನಾ ಅವರಿಗೆ ನೇರ ಮಾತುಗಳಲ್ಲಿ ಬಿಸಿ ಮುಟ್ಟಿಸಿದರು. ಅಂದು ಜಿನ್ನಾ ಮತ್ತು ಅವರ ಹಿಂಬಾಲಕರು ಅಂತಹ ಕುಟಿಲ ತಂತ್ರಗಳಲ್ಲಿ ತೊಡಗಿಲ್ಲದಿದ್ದ ಪಕ್ಷದಲ್ಲಿ ಸರ್ದಾರರು ಕಾಶ್ಮೀರದ ಬಗ್ಗೆ ಸಹಕಾರ ಮನೋಭಾವ ಹೊಂದಿದ್ದರೆಂದು ಪಟೇಲರ ಜೀವನ ಚರಿತ್ರೆಯಲ್ಲಿ ರಾಜ ಮೋಹನ್ ಗಾಂಧಿ ಉಲ್ಲೇಖಿಸಿದ್ದಾರೆ.
ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲದೆ ಅಲ್ಲಿನ ಜನಸಂಖ್ಯೆಯ ಶೇಕಡಾ 80ರಷ್ಟು ಹಿಂದುಗಳಾಗಿದ್ದರು. ಪಟೇಲರು ತಮ್ಮ ಮುತ್ಸದ್ದಿತನದೊಡನೆ, ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನವು ಜುನಾಘಡದಿಂದ ದೂರವಿರುವಂತೆಯೂ, ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡವನ್ನು ತಂದರು. ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು. ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ 99.5 ಮಂದಿ ಭಾರತದೊಂದಿಗೆ ವಿಲೀನವಾಗುವುದರ ಪರವಾಗಿ ಮತನೀಡಿದರು.
ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಪ್ರಾಂತ್ಯವು ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಈ ಸಂಸ್ಥಾನದ ಜನಸಂಖ್ಯೆಯ ಶೇಕಡಾ 80ರಷ್ಟು ಜನ ಹಿಂದೂಗಳಾಗಿದ್ದರು. ಹೈದರಾಬಾದಿನ ನವಾಬನು ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಮತ್ತು ಬ್ರಿಟೀಷರ ಬೆಂಬಲದಿಂದ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಬಿಟ್ಟ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳಲ್ಲದೆ ಅವಶ್ಯಕ ತರಬೇತಿಯನ್ನೂ ಬ್ರಿಟೀಷರು ನೀಡಿದರು. ಕಾಸೀಂ ರಜ್ವಿಯಂಬ ಮತಾಂಧ ಉಗ್ರವಾದಿಯ ಮುಂದಾಳತ್ವದಲ್ಲಿ ಸಾವಿರಾರು ಜನ ರಜಾಕರು, ಹೈದರಾಬಾದ್ ಸಂಸ್ಥಾನದಲ್ಲಿದ್ದ ಜನಸಾಮಾನ್ಯರ ಮೇಲೆ ಹಿಂಸಾತ್ಮಕ ಆಕ್ರಮಣ ನೆಡೆಸಿದರು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲರು, ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.
ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾಗಿದರೂ, ಹೈದರಾಬಾದಿನ ನಿಜಾಮ ತನ್ನ ನಿಲುವನ್ನು ಬದಲಾಯಿಸಿ, ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಆತನದಾಗಿತ್ತು. 1948ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು. ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕರು ಕೊಲ್ಲಲ್ಪಟ್ಟರು. 1948 ಸೆಪ್ಟೆ೦ಬರ್ 17 ರ೦ದು ಈಗಿನ ಬೀದರ್ ಜಿಲ್ಲೆಯ ಹುಮಾನಾಬಾದಿನಲ್ಲಿ ನಿಜಾಮನ ಸೇನೆ ಶರಣಾಯಿತು. ಹೀಗೆ ಹೈದರಾಬಾದ್ ಸಂಸ್ಥಾನವು ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಈ ಕಾರ್ಯಚರಣೆಯನ್ನು, ಭಾರತ ಸರ್ಕಾರೀ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ. ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದೂ ಇಲ್ಲಿ ಗಮನಾರ್ಹ.
ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ, ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೆ ಸವಾಲಾಗುವುದಷ್ಟೇ ಅಲ್ಲದೆ, ಅದರಿಂದಾಗಿ ಹಿಂದೂಗಳಿಗಾಗಲಿ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಸಮರ್ಥವಾಗಿ ಪ್ರತಿಪಾದಿಸಿದರು. ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೆ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಭಾರತೀಯ ಮುಸ್ಲಿಮರೂ ಕೊಂಡಾಡಿದರು. ನಿಜಾಮನ ಮೇಲೆ ಅಸಮಾಧಾನ ಹೊಂದಿದ್ದರೂ, ಪಟೇಲರು ಆತನನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದಾಗಿ, ಪಟೇಲರು ದೊಡ್ಡ ಮನಸ್ಸಿನಿಂದ ಕ್ಷಮೆ ನೀಡಿ ತಮ್ಮ ಮನಸ್ಸಿನಲ್ಲಿದ್ದ ಕಹಿಯನ್ನು ಮರೆತರು.
ಪಟೇಲರ ಅಪ್ರತಿಮ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ‘ಬಿಸ್ಮಾರ್ಕ್’ ಎ೦ದೇ ಕರೆಯಲಾಗುತ್ತದೆ. ಪಟೇಲರು ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರ್ಕಾರಕ್ಕೆ ರಕ್ಷಣಾತ್ಮಕ ಅಧಿಕಾರವಿರುವ ಮತ್ತು ಪ್ರಜೆಗಳಿಗೆ ವ್ಯಾಪಕವಾದ ವೈಯಕ್ತಿಕ ಸ್ವಾತಂತ್ರ್ಯವಿರುವ ವ್ಯವಸ್ಥೆಗಳಿಗೆ ಅವರು ಒತ್ತು ನೀಡಿದ್ದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೆ, ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು.
ಇಷ್ಟೆಲ್ಲಾ ಸಾಧನೆಯನ್ನು ಮಾಡಿದ ಈ ಉಕ್ಕಿನ ಮನುಷ್ಯ ಭಾರತಕ್ಕೆ ಸ್ವಾತಂತ್ರ ಬಂದ ಮೂರು ವರ್ಷಗಳ ನಂತರ ಉಳಿಯಲಿಲ್ಲ ಎಂಬುದ ದುರ್ಧೈವದ ಸಂಗತಿ. 1950ರ ಡಿಸೆಂಬರ್ 15ರಂದು ಅವರು ಹೃದಯಾಘಾತದಿಂದ ಈ ಲೋಕವನ್ನಗಲಿದರು. ಅವರು ನಿಧನರಾದ ಎಷ್ಟೋ ವರ್ಷದ ನಂತರ 1991ರಲ್ಲಿ ಘೋಷಿತವಾದ ‘ಭಾರತರತ್ನ’ ಪ್ರಶಸ್ತಿಯು ಪಟೇಲರ ಹೃದಯ ವೈಶಾಲ್ಯ, ಸಿದ್ಧಿ ಸಾಮರ್ಥ್ಯಗಳ ಮುಂದೆ ತೇಜೋಹೀನವಾದದ್ದು. ಭಾರತದ ಅಪ್ರತಿಮ ಪುತ್ರ ಸರ್ದಾರರು ಭಾರತೀಯರ ಜನಮಾನಸದಲ್ಲಿ ನಿರಂತರವಾಗಿ ಮನೆಮಾಡಿರುವ ಅನರ್ಘ್ಯ ರತ್ನ. ಈ ಮಹಾನ್ ನಾಯಕರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.