ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭ. ಇಂದು ಮಧ್ಯಾಹ್ನ 2.16ಕ್ಕೆ ಶುಭ ಮಕರ ಲಗ್ನದಲ್ಲಿ ಇತಿಹಾಸ ಪ್ರಸಿದ್ಧ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೀಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 2.45ಕ್ಕೆ ಅರಮನೆ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4.45ರ ಸುಮಾರಿಗೆ ಮೈಸೂರು ದಸರಾ ಮೆರವಣಿಗೆ ಪ್ರಾರಂಭವಾಗಲಿದೆ.
ಕಳೆದ 4 ವರ್ಷಗಳಿಂದ 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಯಶಸ್ವಿಯಾಗಿ ಮೆರವಣಿಗೆಯ ಆಕರ್ಷಕ ಕೇಂದ್ರವಾಗಿರುವ ಗಜರಾಜ ಅರ್ಜುನನೇ ಈ ಬಾರಿಯೂ ನಾಡದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ರಾಜಗಂಭೀರ್ಯದಿಂದ ಗಜಪಡೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾನೆ.
ನಾಡದೇವತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಲಿದ್ದಾರೆ. ಇವರ ಜೊತೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮತ್ತಿನ್ನಿತರ ಗಣ್ಯರು ಉಪಸ್ಥಿತರಿರುವರು.
ಮೈಸೂರು ಅರಮನೆಯಿಂದ ಪ್ರಾರಂಭವಾಗುವ ವಿಶ್ವವಿಖ್ಯಾತ ಮೆರವಣಿಗೆ ಸುಮಾರು 6 ಕಿ.ಮೀ. ದೂರ ಸಾಗಿ ಬನ್ನಿಮಂಟಪದ ಮೈದಾನದಲ್ಲಿ ಅಂತ್ಯಗೊಳ್ಳಲಿದೆ. ಮೆರವಣಿಗೆಯಲ್ಲಿ ಎಂದಿನಂತೆ ಆಕರ್ಷಕ ಟ್ಯಾಬ್ಲೋಗಳು, ನಂದೀಧ್ವಜ, ನಾದಸ್ವರ, ಪೊಲೀಸ್ ಬ್ಯಾಂಡ್, ವೀರಗಾಸೆ ಸೇರಿದಂತೆ 50 ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ ಎನ್ನಲಾಗಿದೆ.
ವಿಶ್ವವಿಖ್ಯಾತ ಜಂಬೂಸವಾರಿಯನ್ನು ವೀಕ್ಷಿಸಲು ದೇಶ-ವಿದೇಶಿ ಪ್ರವಾಸಿಗರು ಸೇರಿದಂತೆ ಸಹಸ್ರಾರು ಮಂದಿ ಈ ವೈಭವವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.