ನವದೆಹಲಿ: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಕೇಂದ್ರದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಸಂಪೂರ್ಣ ವಿಫಲವಾಗಿದೆ. ಒಂದೆಡೆ ಹನಿ ನೀರು ನಮ್ಮಲ್ಲಿಲ್ಲ ಎಂಬ ವಾದವನ್ನು ಕರ್ನಾಟಕ ಮಂಡಿಸಿದರೆ, ಸುಪ್ರೀಂ ಆದೇಶ ಪಾಲನೆಗೆ ತಮಿಳುನಾಡು ಪಟ್ಟು ಹಿಡಿದಿದೆ.
ಉಭಯ ರಾಜ್ಯಗಳಿಗೆ ಕೇಂದ್ರದ ತಂಡವನ್ನು ಕಳುಹಿಸಬೇಕೆಂಬ ಕರ್ನಾಟಕದ ಪ್ರಸ್ತಾಪವನ್ನೂ ತಮಿಳುನಾಡು ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ.
ಮಾತುಕತೆ ಮುರಿದುಬೀಳುವ ಮೂಲಕ ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಬುಧವಾರ ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದ ಅಧಿಕಾರಿಗಳ ಸಭೆ ನಡೆಸಿದರು.
ಸುದೀರ್ಘ ಚರ್ಚೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಭಯ ರಾಜ್ಯಗಳಿಗೂ ಕೇಂದ್ರದ ತಂಡ ಕಳುಹಿಸಿ ವಾಸ್ತವಾಂಶ ತಿಳಿದುಕೊಳ್ಳಬೇಕೆಂದು ಮನವಿ ಮಾಡಿದರು. ಆದರೆ ತಜ್ಞರ ತಂಡ ಕಳುಹಿಸುವ ಪ್ರಸ್ತಾಪಕ್ಕೆ ತಮಿಳುನಾಡು ತೀವ್ರವಾಗಿ ಆಕ್ಷೇಪ ಸಲ್ಲಿಸಿತು.
ಉಮಾಭಾರತಿ ಎರಡೂ ರಾಜ್ಯಗಳ ವಾದ, ಪ್ರತಿವಾದವನ್ನು ಆಲಿಸಿದರು. ಪ್ರತ್ಯೇಕವಾಗಿಯೂ ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಆದರೆ ಕರ್ನಾಟಕದ ಪ್ರಸ್ತಾಪಕ್ಕೆ ತಮಿಳುನಾಡು ಅಧಿಕಾರಿಗಳು ಒಪ್ಪಿಲ್ಲ, ಉಮಾಭಾರತಿಯೂ ಸ್ಪಷ್ಟ ತೀರ್ಮಾನ ಕೈಗೊಳ್ಳಲಿಲ್ಲ.
ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ. ಪಾಟೀಲ್, ಟಿ.ಬಿ. ಜಯಚಂದ್ರ, ರಾಜ್ಯದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ನೀರಾವರಿ ಇಲಾಖೆ ಕಾರ್ಯರ್ಶಿ ರಾಕೇಶ್ ಸಿಂಗ್ ಭಾಗವಹಿಸಿದ್ದರು.
ತಮಿಳುನಾಡು ಸರ್ಕಾರದ ಪರವಾಗಿ ಪಿಡಬ್ಲ್ಯುಡಿ ಸಚಿವ ಪಳನಿಸ್ವಾಮಿ, ರಾಜ್ಯದ ಮುಖ್ಯಕಾರ್ಯದರ್ಶಿ ರಾಮ್ ಮೋಹನ್ ರಾವ್, ಕಾವೇರಿ ತಾಂತ್ರಿಕ ಘಟಕದ ಅಧ್ಯಕ್ಷ ಸುಬ್ರಮಣಿಯನ್ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.