ನವದೆಹಲಿ: ಉರಿ ದಾಳಿಗೆ ಪ್ರತಿಯಾಗಿ ಮೊದಲ ಬಾರಿ ಭಾರತೀಯ ಸೇನೆ ಬಲವಾದ ಪ್ರತ್ಯುತ್ತರ ನೀಡಿದೆ. ಗಡಿ ನುಸುಳುಕೋರರಿಗೆ ಗಡಿ ದಾಟಿಯೇ ಭಾರತ ತಕ್ಕ ಪಾಠ ಕಲಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಉಗ್ರಗಾಮಿಗಳ ನೆಲೆಯನ್ನು ಭಾರತೀಯ ಸೇನೆ ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಧ್ವಂಸಗೊಳಿಸಿದೆ. ನಾವು ಮುಂದೆ ಹೋಗುವ ಯೋಚನೆಯೇನೂ ಇಲ್ಲ. ಆದರೂ ಯಾವುದೇ ಪ್ರತಿರೋಧ ಎದುರಿಸಲು ನಾವು ಸಿದ್ಧ ಎಂದು ಸೇನಾ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್ ಲೆ.ಜ.ರಣಬೀರ್ ಸಿಂಗ್ ಎಚ್ಚರಿಸಿದ್ದಾರೆ.
ಪಾಕಿಸ್ಥಾನ ಈ ಅನಿರೀಕ್ಷಿತ ದಾಳಿಯಿಂದ ಬೆದರಿದ್ದು, ತನ್ನ ಇಬ್ಬರು ಸೈನಿಕರನ್ನು ಭಾರತ ಹತ್ಯೆಗೊಳಿಸಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅಲವತ್ತುಕೊಂಡಿದ್ದಾರೆ.
ಬುಧವಾರ ರಾತ್ರಿ ಖಚಿತ ಮಾಹಿತಿಯನ್ವಯ ನಮಗೆ ಕೆಲ ಉಗ್ರಗಾಮಿಗಳ ತಂಡ ಗಡಿ ನಿಯಂತ್ರಣ ರೇಖೆಯ ಬಳಿ ನೆಲೆಯಾಗಿರುವ ಬಗ್ಗೆ ಸುಳಿವು ದಕ್ಕಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಉಗ್ರರ ನೆಲೆಗಳಿಗೆ ದಾಳಿ ನಡೆಸಿದೆ. ಭಾರತದ ಗಡಿಯೊಳಗೆ ನುಸುಳದಂತೆ ಹಾಗೂ ನಮ್ಮ ನಾಗರಿಕರ ಸುರಕ್ಷತೆಯನ್ನು ಅನುಸರಿಸಿ ಈ ಕಾರ್ಯಾಚರಣೆ ನಡೆಸಿದ್ದೇವೆ. ಕೆಲ ಉಗ್ರಗಾಮಿಗಳು ಹಾಗೂ ಅವರ ಬೆಂಬಲಿಗರಿಗೆ ಗಾಯಗಳಾಗಿವೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಡೈರೆಕ್ಟರ್ ಜನರಲ್ ಲೆ.ಜ.ರಣಬೀರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ ಪಾಕಿಸ್ಥಾನವೂ ಉಗ್ರ ನಿಗ್ರಹಕ್ಕೆ ಬೆಂಬಲ ನೀಡಬೇಕು ಈ ಕುರಿತು ನಾನು ಪಾಕಿಸ್ಥಾನದ ಡಿಜಿಎಂಒ ಜೊತೆ ಮಾತನಾಡಿದ್ದೇನೆ ಎಂದು ರಣಬೀರ್ ಸಿಂಗ್ ಖಡಕ್ ಆಗಿ ನುಡಿದರು. ಸೆ.18ರಂದು ಉರಿಯಲ್ಲಿ ಹದಿನೆಂಟು ವೀರಯೋಧರನ್ನು ಕೊಂದ ಉಗ್ರಗಾಮಿಗಳ ಕೃತ್ಯಕ್ಕೆ ತೀವ್ರ ಪ್ರತಿರೋಧವನ್ನೇ ನೀಡಿದಂತಾಗಿದೆ.
ಪಾಕಿಸ್ಥಾನದ ಡಿಜಿ-ಐಎಸ್ಆರ್ಪಿ ಅವರು ಈ ಕುರಿತು ವೆಬ್ಸೈಟ್ ಒಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಗುಂಡಿನ ವಿನಿಮಯ ಎರಡೂ ಕಡೆಗಳಿಂದ ಬುಧವಾರ ರಾತ್ರಿ ನಡೆದಿದೆ. ಅದರಲ್ಲಿ ಇಬ್ಬರು ಪಾಕಿಸ್ಥಾನೀಯರು ಹತರಾಗಿದ್ದಾರೆ. ಪಾಕಿಸ್ಥಾನಿ ಪಡೆ ಭಾರತದ ದಾಳಿಗೆ ಉತ್ತರ ನೀಡಿದೆ. ಇದು ಬೆಳಗ್ಗೆ 2.30ರಿಂದ 8ವರೆಗೆ ನಡೆದಿತ್ತು ಎಂದು ಪಾಕಿಸ್ಥಾನ ವಕ್ತಾರರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ್ದಾರೆ. ಉಪರಾಷ್ಟ್ರಪತಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಘಟನೆ ಬಗ್ಗೆ ವಿವರ ನೀಡಿದರು. ಘಟನೆ ಬಳಿಕ ಗೃಹಸಚಿವ ರಾಜನಾಥ ಸಿಂಗ್, ಪಂಜಾಬ್, ಬಂಗಾಲ, ಒಡಿಶಾ ಮುಖ್ಯಮಂತ್ರಿಗಳು ಹಾಗೂ ಸಿಪಿಎಂ ನಾಯಕ ಸೀತಾರಾಮ ಯೆಚೂರಿ, ಕಾಂಗ್ರೆಸ್ ನ ಗುಲಾಮ್ ನಬಿ ಆಜಾದ್ ಅವರಿಗೆ ಮಾಹಿತಿ ನೀಡಿದರು.
ನಿಮ್ಮೊಂದಿಗೆ ನಾವಿದ್ದೇವೆ ಎಂದು ಭಾರತೀಯ ಸೇನೆಗೆ ಅಮೇರಿಕಾ ಬೆಂಬಲ ನೀಡಿದೆ. ಅಮೇರಿಕಾ ರಕ್ಷಣಾ ಸಚಿವ ಆಸ್ಟನ್ ಕಾರ್ಟರ್ ಅಜಿತ್ ದೋವಲ್ ಅವರ ಜೊತೆ ಮಾತುಕತೆ ನಡೆಸಿ ಬೆಂಬಲ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.