ನವದೆಹಲಿ: ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತಕ್ಕೆ 39 ನೇ ಲಭಿಸಿದ್ದು, ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ಗಳನ್ನು ಹಿಂದಿಕ್ಕಿ ಕಳೆದ ಬಾರಿಗಿಂತ 16 ಸ್ಥಾನ ಮೇಲಕ್ಕೇರಿ ಗಮನಾರ್ಹ ಸಾಧನೆ ಮಾಡಿದೆ.
ವಿಶ್ವ ಆರ್ಥಿಕ ವೇದಿಕೆ ಸಿದ್ಧಪಡಿಸಿದ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕ 2016-17 ನೇ ವರದಿ ಬಿಡುಗಡೆ ಮಾಡಿದ್ದು, ಇದರಲ್ಲಿರುವ ಒಟ್ಟು 138 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 39 ನೇ ಸ್ಥಾನ ಗಳಿಸಿರುವುದು ಪ್ರಗತಿಯ ಸಂಕೇತ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಜಿ-20 ರಾಷ್ಟ್ರಗಳ ಪೈಕಿ ಭಾರತ ಅತ್ಯಂತ ಹೆಚ್ಚು ಅಭಿವೃದ್ಧಿ ದಾಖಲಿಸಿರುವ ರಾಷ್ಟ್ರ ಎಂದು ವರದಿ ತಿಳಿಸಿದೆ.
ಉತ್ತಮ ಮೂಲಸೌಕರ್ಯ ಮತ್ತು ಬಲಿಷ್ಠ ಆರ್ಥಿಕ ಬೆಳವಣಿಗೆ ಭಾರತದ ಈ ಸಾಧನೆಗೆ ಕಾರಣವಾಗಿದೆ. ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧದ ಹೋರಾಟದ ನಡುವೆಯೂ ಭಾರತ ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದ ಪಟ್ಟಿಯಲ್ಲಿ ಮಾಡಿರುವ ಸಾಧನೆ ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಸಾರ್ವಜನಿಕ ಸೇವೆಗಳಲ್ಲಿ ಅಭಿವೃದ್ಧಿ, ವಿದೇಶಿ ಹೂಡಿಕೆಗಳಲ್ಲಿ ಅನಿಯಮಿತ ಅವಕಾಶ, ಹಣಕಾಸು ವ್ಯವಹಾರಗಳಲ್ಲಿನ ಪಾರದರ್ಶಕತೆ ಭಾರತವು ಸೂಚ್ಯಂಕದಲ್ಲಿ ಏರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಆದರೆ ಕಾರ್ಮಿಕರ ಸಮಸ್ಯೆ, ಸಾರ್ವಜನಿಕ ಮಾರುಕಟ್ಟೆಯಲ್ಲಿನ ಕೆಲವೊಂದು ಲೋಪದೋಷಗಳು ಇದ್ದು, ಮೂಲಸೌಕರ್ಯದ ಕೊರತೆ ಇದೆ. ಇವುಗಳನ್ನು ಸರಿಪಡಿಸಿಕೊಂಡರೆ ಇನ್ನಷ್ಟು ಪ್ರಗತಿ ಹೊಂದಲು ಸಾಧ್ಯ ಎಂದು ಆರ್ಥಿಕ ವೇದಿಕೆ ಅಭಿಪ್ರಾಯ ಪಟ್ಟಿದೆ.
ಚೀನಾ 28 ನೇ ಸ್ಥಾನ, ಶ್ರೀಲಂಕಾ 71ನೇ ಸ್ಥಾನ, ಭೂತಾನ್ 97ನೇ ಸ್ಥಾನ, ನೇಪಾಳ 98ನೇ ಸ್ಥಾನ, ಬಾಂಗ್ಲಾದೇಶ 106ನೇ ಸ್ಥಾನ ಪಡೆದಿದೆ. ಕಳಪೆ ಸಾಧನೆ ತೋರುವ ಮೂಲಕ ಪಾಕಿಸ್ಥಾನ 122 ನೇ ಸ್ಥಾನ ಪಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.