ನವದೆಹಲಿ: ಪಾಕಿಸ್ಥಾನ ಮತ್ತೆ ಡಬಲ್ ಗೇಮ್ ಆಡುತ್ತಿದೆ. ಶುಕ್ರವಾರ ತನ್ನ ನೆಲದಲ್ಲಿ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಮಾತುಕತೆ ನಡೆಸುವ ಪ್ರಸ್ತಾಪವನ್ನೂ ಮುಂದಿಟ್ಟಿದೆ. ಭಾರತದ ಮುಂದಿನ ನಡೆ ಈಗ ಕುತೂಹಲಕಾರಿ.
ಕಾಶ್ಮೀರ ಸಹಿತ ಬಾಕಿ ಇರುವ ಎಲ್ಲ ವಿವಾದಗಳ ಕುರಿತು ಭಾರತದೊಂದಿಗೆ ಯಾವುದೇ ಷರತ್ತುಗಳಿಲ್ಲದೆ ಮಾತುಕತೆ ನಡೆಸಲು ಪಾಕಿಸ್ಥಾನ ಸಿದ್ಧವಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿ ಅಚ್ಚರಿಗೆ ಕಾರಣರಾಗಿದ್ದಾರೆ.
ಇದು ಪಾಕಿಸ್ತಾನದ ಚಾಣಾಕ್ಷ ನಡೆಗಳಲ್ಲೊಂದು ಎಂದು ವಿಶ್ಲೇಷಿಸಲಾಗುತ್ತಿದೆ.
ಉರಿ ಸೇನಾ ಶಿಬಿರದ ಮೇಲೆ ಪಾಕ್ ಉಗ್ರರು ಕಳೆದ ಭಾನುವಾರ ನಸುಕಿನ ವೇಳೆ ದಾಳಿ ನಡೆಸಿ 18 ಭಾರತೀಯ ಯೋಧರನ್ನು ಕೊಂದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಪರಾಕಾಷ್ಠೆಗೇರಿತ್ತು. ಭಾರತ, ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕಿಸ್ಥಾನವು ಭಯೋತ್ಪಾದಕ ದೇಶವೆಂದು ಹೇಳಿತ್ತಲ್ಲದೆ ಸಮಗ್ರ ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ಥಾನವನ್ನು ದೂರ ಇರಿಸುವಂತೆ ಕರೆ ಮಾಡಿತ್ತು.
ವಿಶ್ವಸಂಸ್ಥೆಯಲ್ಲಿ ಭಾರತವು ಪಾಕಿಸ್ಥಾನದ ವಿರುದ್ಧ ರಾಜತಾಂತ್ರಿಕ ಮಹಾ ವಿಜಯವನ್ನು ಸಾಧಿಸಿದ ಪರಿಣಾಮಮಾಗಿ ಇಸ್ಲಾಮಾಬಾದ್ ಈಗ ಹಠಾತ್ತನೆ ಮೆತ್ತಗಾಗಿದ್ದು ಭಾರತದೊಂದಿಗೆ ತಾನು ಮಾತುಕತೆಗೆ ಸಿದ್ಧವಿರುವುದಾಗಿ ಹೇಳಿದೆ.
ವಿಶ್ವಸಂಸ್ಥೆಯ ಮಹಾ ನಿರ್ದೇಶಕ ಬಾನ್ ಕಿ ಮೂನ್ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕಾಶ್ಮೀರ ವಿವಾದದಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವುದಿಲ್ಲವೆಂದೂ, ಕಾಶ್ಮೀರ ಸಹಿತವಾಗಿ ಯಾವುದೇ ವಿವಾದವನ್ನು ಪಾಕಿಸ್ಥಾನವು ಭಾರತದೊಂದಿಗೆ ಮಾತುಕತೆಯ ಮೂಲಕವೇ ಬಗೆ ಹರಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಪಾಕಿಸ್ಥಾನವು ಭಯೋತ್ಪಾದಕ ದೇಶವೆಂಬುದನ್ನು ಅಧಿಕೃತವಾಗಿ ಪರಿಗಣಿಸಲು ಅಮೆರಿಕ ಸಂಸತ್ತಿನಲ್ಲಿ ವಿಧೇಯಕದ ಮಂಡನೆಯೂ ಆಗಿತ್ತು.
ಇದೀಗ ಈ ಎಲ್ಲ ಬೆಳವಣಿಗೆಗಳಿಂದ ಕಂಗೆಟ್ಟಿರುವ ಪಾಕಿಸ್ಥಾನ, ಭಾರತದೊಂದಿಗೆ ತಾನು ಯಾವುದೇ ಷರತ್ತುಗಳಿಲ್ಲದೆ ಮಾತುಕತೆಗೆ ಸಿದ್ಧ ಎಂದು ಹೇಳಿರುವುದು ಗಮನಾರ್ಹ .
ಆದರೆ ಇದೇ ಹೊತ್ತಿನಲ್ಲಿ ಪಾಕಿಸ್ಥಾನ ಯುದ್ಧಕ್ಕೂ ಸಿದ್ಧವಾಗುತ್ತಿದೆ ಎನ್ನಲಾಗುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳುವ ಎಲ್ಲ ಪ್ರಯಾಣಿಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಜತೆಗೆ ಈಗ ಎರಡು ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ವಿಮಾನ ಹಾರಾಟಗಳನ್ನು ನಡೆಸಿ ‘ಯುದ್ಧ ತಾಲೀಮು’ ಆರಂಭಿಸಿದೆ.
ಪಾಕಿಸ್ಥಾನದಲ್ಲಿ ಎಂ1 ಹಾಗೂ ಎಂ2 ಎಂಬ ಎರಡು ಹೆದ್ದಾರಿಗಳಿವೆ. ಪೇಶಾವರದಿಂದ ರಾವಲ್ಪಿಂಡಿಗೆ ಸಂಪರ್ಕ ಕಲ್ಪಿಸುವ ಎಂ1 ಹೆದ್ದಾರಿ 155 ಕಿ.ಮೀ. ಉದ್ದವಿದೆ. ಇಸ್ಲಾಮಾಬಾದ್ನಿಂದ ಲಾಹೋರ್ಗೆ (ಅಮೃತಸರದಿಂದ ಇಲ್ಲಿಗೆ ಕೇವಲ 50 ಕಿ.ಮೀ.) ಸಂಪರ್ಕ ಬೆಸೆಯುವ ಎಂ2 ಹೆದ್ದಾರಿಯ ಉದ್ದ 375 ಕಿ.ಮೀಟರ್. ಈ ಎರಡೂ ಹೆದ್ದಾರಿಗಳಲ್ಲಿ ಸಂಪರ್ಕ ಸ್ಥಗಿತಗೊಳಿಸಿರುವ ಪಾಕಿಸ್ಥಾನ, ತನ್ನ ವಾಯುಪಡೆಯ ವಿಮಾನಗಳ ಹಾರಾಟಕ್ಕೆ ಈ ಹೆದ್ದಾರಿಗಳನ್ನು ಬಳಸಿ ಕೊಳ್ಳುತ್ತಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಪಾಕ್ ಹೂಡಿಕೆದಾರರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಭಾರತ- ಪಾಕ್ ನಡುವೆ ಘರ್ಷಣೆ ಸಂಭವಿಸಿಬಿಡುತ್ತದೆ ಎಂಬ ಭಾವನೆಯನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಸೃಷ್ಟಿಸುತ್ತಿವೆ. ಆದ್ದರಿಂದ ಹೀಗೆಲ್ಲಾ ಆಗುತ್ತಿದೆ ಎಂದು ಕರಾಚಿ ಷೇರುಪೇಟೆ ಮುಖ್ಯಸ್ಥ ಆರೀಫ್ ಹಬೀಬ್ ಸಬೂಬು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.