ದೇಶದ ಹಲವೆಡೆ ಮಾನಿನಿಯರ ಮೇಲೆ ಆಗಾಗ ದೌರ್ಜನ್ಯ, ಅತ್ಯಾಚಾರ ನಡೆಯುತ್ತಲೇ ಇದ್ದು ದೇಶದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗುತ್ತಿರುವಾಗ, ಇಬ್ಬರು ಮಾನಿನಿಯರು ದೇಶದ ಮಾನವನ್ನು ಉಳಿಸಿದ್ದಾರೆ. ಅವರಿಬ್ಬರನ್ನು ಇದೀಗ ಇಡೀ ದೇಶ ಕೊಂಡಾಡುತ್ತಿದೆ.
ಇತ್ತೀಚೆಗೆ ರಿಯೊ ಡಿಜೆನೈರೋದಲ್ಲಿ ಮುಕ್ತಾಯಗೊಂಡ ಒಲಿಪಿಂಕ್ಸ್ನಲ್ಲಿ ಪಿ. ವಿ. ಸಿಂಧು (ಬ್ಯಾಡ್ಮಿಂಟನ್), ಸಾಕ್ಷಿ ಮಲಿಕ್ (ಕುಸ್ತಿ) ಪದಕ ಗೆದ್ದು ದೇಶದ ಮರ್ಯಾದೆಯನ್ನು ಕೊಂಚವಾದರೂ ಉಳಿಸಿದ್ದಾರೆ. ಇವರಿಬ್ಬರು ಪದಕ ಗಳಿಸದಿದ್ದಲ್ಲಿ ಭಾರತದ್ದು ಈ ಬಾರಿ ಶೂನ್ಯ ಸಂಪಾದನೆ ಆಗಿ, ನಗೆಪಾಟಲಿಗೀಡಾಗಬೇಕಾಗಿತ್ತು. ಕಳೆದ ಲಂಡನ್ ಒಲಿಂಪಿಕ್ಸ್ನಲ್ಲಿ 2 ಬೆಳ್ಳಿ, 4 ಕಂಚು ಸೇರಿದಂತೆ 6 ಪದಕ ಗಳಿಸಿದ್ದ ಭಾರತ ಈ ಬಾರಿ ಕೇವಲ 2 ಪದಕಗಳಿಗೆ (1 ಬೆಳ್ಳಿ, 1 ಕಂಚು)ತೃಪ್ತಿ ಪಟ್ಟಿರುವುದು ದೇಶದ ಕ್ರೀಡಾಭಿಮಾನಿಗಳಿಗೆ ಆಘಾತ ಉಂಟುಮಾಡದಿರದೆ? ಭರವಸೆಯ ಕ್ರೀಡಾಳುಗಳಾದ ಅಭಿನವ್ ಬಿಂದ್ರಾ, ಸೈನಾ ನೆಹ್ವಾಲ್, ಬಬಿತಾ ಕುಮಾರಿ, ಯೋಗೇಶ್ವರ ದತ್, ದ್ಯುತಿ ಚಾಂದ್, ಟಿಂಟೂ ಲೂಕಾ, ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ, ದೀಪಿಕಾ ಕುಮಾರಿ, ಅತನು ದಾಸ್, ಜಿತು ರೈ, ಅಪೂರ್ವಿ ಚಾಂಡೀಲಾ, ಮಣಿಕಾ ಬಾತ್ರ ಮೊದಲಾದವರು ಪದಕ ಗೆಲ್ಲದೆ ವಿಫಲರಾದರು. ಇವೆಲ್ಲ ಈಗ ಹಳೆಯ ಸಂಗತಿ.
ಈಗ ಹೊಸ ಸಂಗತಿ ಏನೆಂದರೆ ಭಾರತಕ್ಕೆ ಪದಕ ಪಟ್ಟಿಯಲ್ಲಿ 67ನೇ ಸ್ಥಾನ ಪ್ರಾಪ್ತವಾಗಿರುವುದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವುದಿಲ್ಲವೆ ಎಂಬ ಪ್ರಶ್ನೆ. 125 ಕೋಟಿ ಜನಸಂಖ್ಯೆಯ, 100 ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಒಲಿಂಪಿಕ್ಸ್ ಕೂಟಕ್ಕೆ ಕಳುಹಿಸಿದ್ದ ಭಾರತಕ್ಕೆ ಕನಿಷ್ಠ 1 ಚಿನ್ನವನ್ನಾದರೂ ಗೆಲ್ಲಲು ಏಕೆ ಸಾಧ್ಯವಾಗಲಿಲ್ಲ? ಭಾರತಕ್ಕೆ, ಇದುವರೆಗೂ ನಡೆದ ಎಲ್ಲ ಒಲಿಂಪಿಕ್ಸ್ ಕೂಟಗಳಲ್ಲಿ ದೊರೆತ ಒಟ್ಟಾರೆ ಪದಕಗಳು ಕೇವಲ 27. ಅಮೆರಿಕದ ಖ್ಯಾತ ಈಜುಗಾರ ಮೈಕೇಲ್ ಫ್ಲೆಟ್ ಒಬ್ಬನೇ ಇದುವರೆಗೆ ಒಟ್ಟು 25 ಪದಕ ಬಾಚಿಕೊಂಡಿದ್ದಾನೆ. ಹಸಿವಿನ ನಾಡೆಂದು ಕುಖ್ಯಾತವಾಗಿರುವ ಇಥಿಯೋಪಿಯಾ ದೇಶಕ್ಕೆ 1ಚಿನ್ನ, 2ಬೆಳ್ಳಿ, 5ಕಂಚು ಸೇರಿದಂತೆ ಒಟ್ಟು ದೊರಕಿದ ಪದಕಗಳು 8. ಆ ದೇಶದ ಜನಸಂಖ್ಯೆ 8, 66, 13, 986. ನಮ್ಮ ಕರ್ನಾಟಕಕ್ಕಿಂತ ಸ್ವಲ್ಪ ದೊಡ್ಡ ದೇಶ ಅದು, ಅಷ್ಟೆ ! ೨೫ ದಶಲಕ್ಷ ಜನಸಂಖ್ಯೆಯುಳ್ಳ ಉತ್ತರ ಕೊರಿಯಾ ಎಂಬ ಪುಟ್ಟ ದೇಶ ಪಡೆದದ್ದು 2 ಚಿನ್ನ, 3ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 7. ಬೆಲಾರಸ್ ಎಂಬ ನೀವು ಕೇಳಿಯೇ ಇರದ ಇನ್ನೊಂದು ದೇಶಕ್ಕೆ ಈ ಬಾರಿ ದೊರಕಿರುವ ಪದಕಗಳು 1 ಚಿನ್ನ, 4 ಬೆಳ್ಳಿ, 4 ಕಂಚು-ಒಟ್ಟು 9. ಫಿಜಿ ಎಂಬ ಭಾರತೀಯರೇ ಹೆಚ್ಚಾಗಿರುವ ಪುಟ್ಟ ದ್ವೀಪರಾಷ್ಟ್ರಕ್ಕೂ 1 ಚಿನ್ನದ ಪದಕ ದೊರೆತಿದೆ. ಹೀಗಿರುವಾಗ ಭಾರತಕ್ಕೇಕೆ ಪದಕಗಳ ಬರ? ನಮ್ಮ ಕ್ರೀಡಾಪಟುಗಳಿಗೆ ಏನಾಗಿದೆ?
ಕ್ರಿಕೆಟ್ ಆಟವನ್ನೇ ಹೆಚ್ಚಾಗಿ ಆರಾಸುವ ನಮ್ಮ ದೇಶದಲ್ಲಿ ಉಳಿದ ಕ್ರೀಡೆಗಳನ್ನು ಅಷ್ಟಾಗಿ ಯಾರೂ ಗಮನಿಸುತ್ತಿಲ್ಲ ಎಂಬುದು ಈ ಬಾರಿಯ ಒಲಿಂಪಿಕ್ಸ್ನಿಂದ ನಾವು ಕಲಿಯಬೇಕಾದ ಪಾಠ. ಹೆಚ್ಚಿನ ತಂದೆ-ತಾಯಂದಿರಿಗೆ ತಮ್ಮ ಮಕ್ಕಳು ಎಂಜಿನಿಯರ್, ಇಲ್ಲವೇ ಡಾಕ್ಟರ್ ಆಗಿ ಉದ್ಯೋಗ ಹಿಡಿದುಬಿಟ್ಟರೆ ಹೆತ್ತಿದ್ದಕ್ಕೆ ಸಾರ್ಥಕ ಎಂಬ ಭಾವನೆ ಹುದುಗಿದೆ. ನಮ್ಮ ಮಕ್ಕಳು ಉತ್ತಮ ಕ್ರೀಡಾಪಟು ಆಗಿ ದೇಶಕ್ಕೆ ಹೆಮ್ಮೆ ತರಬೇಕೆಂದು ಬಯಸುವವರ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಯಾವುದಾದರೂ ಕುಟುಂಬದಲ್ಲಿ ಕ್ರೀಡಾಸಕ್ತಿ ಹೊಂದಿರುವ ಮಕ್ಕಳಿದ್ದರೆ ಅವರಿಗೆ ತಂದೆ-ತಾಯಿಗಳಿಂದ ಅಷ್ಟಾಗಿ ಪ್ರೋತ್ಸಾಹವೇ ಸಿಗುವುದಿಲ್ಲ. ಸಿಕ್ಕರೂ ರಾಜ್ಯಮಟ್ಟ, ರಾಷ್ಟ್ರಮಟ್ಟಕ್ಕೇರುವ ಸೌಲಭ್ಯ, ತರಬೇತಿ ಮರೀಚಿಕೆಯಾಗಿರುತ್ತದೆ. ಅಷ್ಟೇಕೆ, ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಆಟೋಟ ಚಟುವಟಿಕೆಗಳಿಗೆ ಉತ್ತೇಜನ ನೀಡುವ ವ್ಯವಸ್ಥೆ ಅಷ್ಟಕ್ಕಷ್ಟೆ. ಹೆಚ್ಚಿನ ಶಾಲೆಗಳಲ್ಲಿ ಆಟವಾಡುವುದಕ್ಕೆ ಸೂಕ್ತ ಮೈದಾನವೇ ಇರುವುದಿಲ್ಲ. ಇದ್ದರೂ ಸೂಕ್ತ ಪರಿಕರಗಳಿರುವುದಿಲ್ಲ. ಶಾರೀರಿಕ ಶಿಕ್ಷಕರಿರುವ ಶಾಲೆಗಳ ಸಂಖ್ಯೆ ತೀರಾ ಕಡಿಮೆ. ಇನ್ನು ಕ್ರೀಡಾ ಸಂಸ್ಥೆಗಳು, ಪ್ರಾಕಾರಗಳು ಕ್ರೀಡಾಪಟುಗಳಿಗೆ ನೀಡುತ್ತಿರುವ ತರಬೇತಿ, ಅಗತ್ಯ ಸೌಲಭ್ಯ, ನೆರವು ಕೂಡಾ ತೀರಾ ಕಳಪೆ. ಫೈನಲ್ ಹಂತದವರೆಗೂ ತಲುಪಿದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ತನ್ನ ಜೊತೆಗೆ ಫಿಸಿಯೋಥೆರಪಿಸ್ಟ್ರನ್ನು ರಿಯೊಗೆ ಕರೆದುಕೊಂಡು ಹೋಗಲು ಕ್ರೀಡಾ ಪ್ರಾಕಾರ ಸಮ್ಮತಿಸಲೇ ಇಲ್ಲ. ಆಕೆ ಫೈನಲ್ಗೆ ತಲುಪಿದ ಬಳಿಕ, ತುರ್ತಾಗಿ ಆಕೆಯ ಫಿಸಿಯೋಥೆರಪಿಸ್ಟ್ರನ್ನು ರಿಯೊಗೆ ಅಟ್ಟಲಾಯಿತು. ಮೊದಲೇ ಅವರನ್ನು ಕಳಿಸಿದ್ದರೆ ದೀಪಾ ಖಂಡಿತ ಪದಕ ವಂಚಿತಳಾಗುತ್ತಿರಲಿಲ್ಲ. ದ್ಯುತಿ ಚಾಂದ್ ರಿಯೊಗೆ ಪ್ರಯಾಣಿಸಿದ್ದು ವಿಮಾನದಲ್ಲಿ ಸಾಮಾನ್ಯದರ್ಜೆಯ ಸೀಟಿನಲ್ಲಿ ಕುಳಿತು. ಆದರೆ ನಮ್ಮ ಕ್ರೀಡಾಕಾರಿಗಳು ಪ್ರಯಾಣಿಸಿದ್ದು ಐಶಾರಾಮಿ ದರ್ಜೆಯಲ್ಲಿ !
೨೦೦೮ರ ಒಲಿಂಪಿಕ್ಸ್ನ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಹಾಗೂ 1012 ರಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಚೀನಾ ಈ ಬಾರಿ 3 ನೇ ಸ್ಥಾನಕ್ಕೆ ತಲುಪಿದೆ. ಇಷ್ಟಕ್ಕೇ ಆ ದೇಶ ಗಾಬರಿಗೊಂಡಿದೆ. ನಿರೀಕ್ಷಿತ ಮಟ್ಟದ ಪ್ರದರ್ಶನ ತೋರದಿದ್ದಕ್ಕಾಗಿ ಸೂಕ್ತ ತನಿಖೆ ನಡೆಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ. ಈ ಬಾರಿ ಚೀನಾ ಪಡೆದಿರುವ ಪದಕಗಳ ಸಂಖ್ಯೆ-26 ಚಿನ್ನ, 18 ಬೆಳ್ಳಿ, 26 ಕಂಚು ಸೇರಿದಂತೆ ಒಟ್ಟು 70. ಆದರೂ ಅಲ್ಲಿನ ಸರ್ಕಾರಕ್ಕೆ ಅದು ತೃಪ್ತಿ ತಂದಿಲ್ಲ. ರಿಯೊ ಕೂಟದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲಲಾಗದ್ದಕ್ಕೆ ಉತ್ತರ ಕೊರಿಯಾದ ಸರ್ವಾಕಾರಿ ನಾಯಕ ಕಿಮ್ ಜೊಂಗ್-ಉನ್ ಕ್ರುದ್ಧರಾಗಿದ್ದಾರೆ. ಕೂಟಕ್ಕೂ ಮುನ್ನ ಕಿಮ್, ಕನಿಷ್ಠ 5 ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದು ತರಬೇಕೆಂದು ಕೊರಿಯಾ ಕ್ರೀಡಾ ನಿಯೋಗಕ್ಕೆ ತಾಕೀತು ಮಾಡಿದ್ದರು. ಆದರೆ, ಈ ಬಾರಿ ಕೂಟಕ್ಕೆ ತೆರಳಿದ್ದ 31 ಕೊರಿಯಾ ಕ್ರೀಡಾಪಟುಗಳು ಗೆದ್ದಿರುವುದು 2 ಚಿನ್ನ, 3 ಬೆಳ್ಳಿ ಮತ್ತು 2 ಕಂಚು ಪದಕಗಳನ್ನಷ್ಟೇ. ಅಷ್ಟಾದರೂ ಬಂದಿತಲ್ಲ ಎಂದು ಆ ದೇಶದ ಸರ್ವಾಕಾರಿ ಸಮಾಧಾನ ಪಟ್ಟುಕೊಂಡಿಲ್ಲ. ಕಳಪೆ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಕಲ್ಲಿದ್ದಲು ಗಣಿಯಲ್ಲಿ ಕನಿಷ್ಠ 2 ವರ್ಷ ಕೆಲಸ ಮಾಡುವ ಶಿಕ್ಷೆ ವಿಸಲು ಕಿಮ್ ಜೊಂಗ್ ಚಿಂತನೆ ನಡೆಸಿದ್ದಾರೆಂದು ’ಕೊರಿಯಾ ಟೈಮ್ಸ್ ’ ಪತ್ರಿಕೆಯ ವರದಿ. ಹೀಗೆ ಮಾಡುವುದು ಅದೆಷ್ಟು ಸರಿ ಎಂಬುದು ಬೇರೆ ಪ್ರಶ್ನೆ. ಆದರೆ ದೇಶದ ಗೌರವ ಕ್ರೀಡೆಯ ವಿಷಯದಲ್ಲಿ ಯಾವ ಕಾರಣಕ್ಕೂ ಕಳೆಗುಂದಬಾರದು ಎಂಬ ಕಳಕಳಿ ಇಂತಹ ಚಿಂತನೆಯ ಹಿಂದಿದೆ ಎಂಬುದು ಗಮನಾರ್ಹ.
ಆದರೆ ಈ ಬಾರಿ ಅತ್ಯಂತ ಕಳಪೆ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳ ಬಗ್ಗೆ ಸರ್ಕಾರವಾಗಲೀ, ಕ್ರೀಡಾ ಪ್ರಾಕಾರಗಳಾಗಲೀ ಒಂದಿನಿತಾದರೂ ಯೋಚಿಸಿದ್ದಾರೆಯೇ? ಭಾರತದ ಕಳಪೆ ಸಾಧನೆಯ ಬಗ್ಗೆ ಯಾರಾದರೂ ತಲೆ ಕೆಡಿಸಿಕೊಂಡಿದ್ದಾರೆಯೆ? ಪ್ರಧಾನಿ ನರೇಂದ್ರ ಮೋದಿಯೊಬ್ಬರು ಮಾತ್ರ ಚಿಂತಿಸಿದಂತೆ ಕಾಣುತ್ತದೆ. ಪದಕ ಬೇಟೆಯಲ್ಲಿ ನಿರೀಕ್ಷಿತ ಮಟ್ಟ ಮುಟ್ಟದ ಕಾರಣ ಮುಂದಿನ 2020 (ಟೋಕಿಯೋ), 2024 ಮತ್ತು 2028 ರ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಉದ್ದೇಶಕ್ಕಾಗಿ ಒಂದು ಕಾರ್ಯಪಡೆ (ಟಾಸ್ಕ್ ಫೋರ್ಸ್) ರಚಿಸುವುದಾಗಿ ಘೋಷಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅದು ಅಸ್ತಿತ್ವಕ್ಕೆ ಬರಲಿದೆಯಂತೆ. ಕ್ರೀಡಾ ಸೌಲಭ್ಯಗಳನ್ನು ಸುಧಾರಿಸುವುದು, ಸರಿಯಾದ ಆಯ್ಕೆ ಪ್ರಕ್ರಿಯೆ, ಉತ್ತಮ ತರಬೇತಿ ವ್ಯವಸ್ಥೆ ಹಾಗೂ ಅಥ್ಲಿಟ್ಗಳಿಗೆ ದೇಶೀ ಮತ್ತು ವಿದೇಶಿ ತರಬೇತುದಾರರನ್ನು ಒದಗಿಸುವುದು ಈ ಕಾರ್ಯಪಡೆ ಯೋಜನೆಯ ಉದ್ದೇಶ. ಸದ್ಯ ಪ್ರಧಾನಿಯಾದರೂ ಇಂತಹದೊಂದು ಉತ್ತಮ ಚಿಂತನೆ ನಡೆಸಿರುವುದು ಸ್ವಾಗತಾರ್ಹ.
ಆದರೆ ಕಾರ್ಯಪಡೆ ರಚಿಸಿದ ಮಾತ್ರಕ್ಕೆ ನಾವು ಪದಕಗಳನ್ನು ಕೊಳ್ಳೆ ಹೊಡೆಯಲು ಸಾಧ್ಯವಿಲ್ಲ. ಕಾರ್ಯಪಡೆಯ ಮೀಟಿಂಗ್ ಮತ್ತಿತರ ಖರ್ಚು ವೆಚ್ಚಗಳಿಗೆ ಅಪಾರ ಹಣ ಖರ್ಚಾಗಬಹುದು. ಆದರೆ ಅದರಿಂದ ಕ್ರೀಡಾಪಟುಗಳಿಗೇನು ಲಾಭ? ನಮ್ಮ ಕ್ರೀಡಾ ಇಲಾಖೆಯಲ್ಲಿ ಭ್ರಷ್ಟಾಚಾರ ಬೆಟ್ಟದಷ್ಟು ಹೆಪ್ಪುಗಟ್ಟಿದೆ. ಕ್ರೀಡಾಪಟುಗಳಿಗೆ ದೊರಕಬೇಕಾದ ಹಣ ಇಲಾಖೆಯ ಅಕಾರಿಗಳ ಕಿಸೆಗೆ ಸೇರುತ್ತಿದೆ. ಹಾಗಲ್ಲದಿದ್ದರೆ ದ್ಯುತಿ ಚಾಂದ್ ಎಂಬ ಭರವಸೆಯ ಕ್ರೀಡಾಪಟು ರಿಯೊಗೆ ಸಾಮಾನ್ಯ ದರ್ಜೆಯ ವಿಮಾನ ಪ್ರಯಾಣ ಮಾಡಬೇಕಾದ ದುರ್ಗತಿ ಬರುತ್ತಿರಲಿಲ್ಲ. ಜೈಶಾ ಎಂಬ ಇನ್ನೊಬ್ಬ ಕ್ರೀಡಾಪಟು ಮ್ಯಾರಥಾನ್ ಸ್ಪರ್ಧೆಯ ಸಂದರ್ಭದಲ್ಲಿ ಕುಡಿಯುವ ನೀರಿಲ್ಲದೆ ಪರದಾಡಬೇಕಿರಲಿಲ್ಲ.
ಈ ಬಾರಿ 3 ನೇ ಸ್ಥಾನಕ್ಕೆ ತಲುಪಿರುವ ಚೀನಾದಲ್ಲಿ ಸುಮಾರು 6, 20,000 ಜಿಮ್ನಾಸಿಯಂಗಳು ಹಾಗೂ ಕ್ರೀಡಾಂಗಣಗಳಿವೆ. ಇವುಗಳಲ್ಲಿ ಬಹುತೇಕ ಕಡೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ. ಚೀನಾದ ಇನ್ನೊಂದು ವಿಶೇಷತೆ ಏನೆಂದರೆ ಕ್ರೀಡಾಪಟುಗಳನ್ನು ತರಬೇತುಗೊಳಿಸಿ ಅಷ್ಟಕ್ಕೇ ಬಿಡುವುದಿಲ್ಲ. ಕ್ರೀಡೆಯಲ್ಲಿ ಉತ್ತುಂಗ ತಲುಪುವವರೆಗೆ ಸರ್ಕಾರ ಅಥವಾ ಸಂಬಂಸಿದ ಕ್ಲಬ್ ಸತತ ತರಬೇತಿ, ಅಗತ್ಯವಿರುವ ಎಲ್ಲ ಬಗೆಯ ಸೌಕರ್ಯಗಳನ್ನು ನೀಡುತ್ತದೆ. ಕ್ರೀಡಾಪಟುಗಳಲ್ಲಿ ಅಗ್ರ ಸ್ಥಾನಕ್ಕೆ ತಲುಪಲೇಬೇಕೆಂಬ ಹೆಬ್ಬಯಕೆಯನ್ನು ಮೂಡಿಸುತ್ತದೆ. 4 ವರ್ಷಗಳ ಬಳಿಕ ನಡೆಯುವ ಒಲಿಂಪಿಕ್ಸ್ ಕೂಟಕ್ಕೆ ಪೂರ್ತಿ ೪ವರ್ಷ ಸತತ ಸಿದ್ಧತೆ, ಕಠಿಣ ತರಬೇತಿ ನಡೆಯುತ್ತಲೇ ಇರುತ್ತದೆ. ಇಂತಹ ಕಠಿಣ ತರಬೇತಿ ನಿರಂತರ ನಡೆಯುತ್ತಿರುವುದರಿಂದಲೇ ಚೀನಾ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ.
ಆದರೆ ಭಾರತದ ತಯಾರಿ, ತರಬೇತಿ ಹೇಗಿರುತ್ತದೆ ? 4 ವರ್ಷಗಳಿರಲಿ, ಒಲಿಂಪಿಕ್ಸ್ ಕೂಟಕ್ಕೆ ಇನ್ನೇನು ಕೇವಲ 4 ತಿಂಗಳು ಇದೆ ಎನ್ನುವಾಗಲೂ ನಿಯಮಿತ ತರಬೇತಿ, ಸಿದ್ಧತೆ ಶುರುವಾಗಿರುವುದಿಲ್ಲ. ತಾವು ಒಲಿಂಪಿಕ್ಸ್ ಕೂಟಕ್ಕೆ ಆಯ್ಕೆಯಾಗಿದ್ದೇವೋ ಇಲ್ಲವೋ ಎಂಬ ಮಹತ್ವದ ವಿಷಯವೇ ಸಂಭಾವ್ಯ ಕ್ರೀಡಾಪಟುಗಳಿಗೆ ತಿಳಿದಿರುವುದಿಲ್ಲ. ಎಲ್ಲವೂ ಅನಿಶ್ಚಿತ, ಗೊಂದಲಪೂರಿತ, ರಾಜಕೀಯಪ್ರೇರಿತ. ಹೀಗಿರುವಾಗ ಭಾರತಕ್ಕೆ ಪದಕ ಬೇಟೆಯಲ್ಲಿ ಹಿನ್ನಡೆಯಾಗದೆ ಇನ್ನೇನು? 2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ನಮ್ಮ ಸಾಧನೆ ಹೇಗಿರಬಹುದು ? ಕಾದು ನೋಡೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.