ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ಅವರು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು, ಉಪಮಹಾಪೌರರು, ವಿವಿಧ ಸಮಿತಿಗಳ ಅಧ್ಯಕ್ಷರುಗಳು, ಆಯುಕ್ತರು, ಜಂಟಿ ಆಯುಕ್ತರು ಹಾಗೂ ಮನಪಾದ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಅಭಿವೃದ್ಧಿ ವಿಚಾರಗಳ ಕುರಿತು ಮನಪಾದ ಸಮಿತಿ ಸಭಾಂಗಣದಲ್ಲಿ ಸಭೆ ನಡೆಸಿದರು.
ಮುಖ್ಯವಾಗಿ ಮಳೆಗಾಲದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ನಡೆಸಬೇಕಾದ ಪೂರ್ವ ತಯಾರಿ, ನಗರದ ಪಂಪುವೆಲ್ ಬಳಿ ನೂತನ ಬಸ್ಸ್ಟಾಂಡ್ ನಿರ್ಮಾಣ ಹಾಗೂ ನಗರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣದ ಕುರಿತು ವಿಸ್ತಾರವಾಗಿ ಸಮಾಲೋಚನೆ ನಡೆಸಿದರು.
ನಗರದ ಕೇಂದ್ರ ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ನಿರ್ಮಿಸಿ ಹೊಸ ಆಯಾಮ ನೀಡುವುದರೊಂದಿಗೆ ನಗರದ ಕದ್ರಿ, ಕಂಕನಾಡಿ ಮತ್ತು ಉರ್ವದಲ್ಲಿಯೂ ಆಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತ ಮಾರುಕಟ್ಟೆಗಳನ್ನು ನಿರ್ಮಾಣ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ವಿವಿಧ ದಿನಬಳಕೆಯ ಅಗತ್ಯ ವಸ್ತುಗಳನ್ನು ಇದೀಗ ತಲೆಹೊರೆಯ ವ್ಯವಸ್ಥೆಯಂತೆ ಹಾಗೂ ನೂತನ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಗುಣಮಟ್ಟದ ಸಾಮಾಗ್ರಿಗಳನ್ನು ಈ ಮಾರುಕಟ್ಟೆಯಲ್ಲಿ ಪಡೆಯುವ ಬಗ್ಗೆ ಯೋಜಿಸಲಾಯಿತು.
ಮುಂದಕ್ಕೆ ಈ ಸಭೆಯ ನಡವಳಿಯ ಆಧಾರದಲ್ಲಿ ಮನಪಾ ಆಯುಕ್ತರು ಮಾರುಕಟ್ಟೆಯ ನೀಲಿನಕಾಶೆಯನ್ನು ಪರಿಶೀಲಿಸಿ ಮಹಾಪೌರರೊಂದಿಗೆ ವಿಮರ್ಶಿಸಿ ಮನಪಾದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿ, ಅಂಗೀಕರಿಸಿ ಆದಷ್ಟು ಬೇಗ ಡಿಪಿಆರ್ನ್ನು ತಯಾರಿಸುವ ಬಗ್ಗೆ ನಿರ್ಣಯಿಸಲಾಯಿತು. ಸದ್ರಿ ಯೋಜನೆಗಳಿಗೆ ಅವಶ್ಯಕ ಯೋಜನಾ ವೆಚ್ಚವನ್ನು ಸರಕಾರದಿಂದ ಪಡೆಯುವ ಬಗ್ಗೆ ಮಾನ್ಯ ಶಾಸಕರಾದ ಶ್ರೀ ಜೆ. ಆರ್. ಲೋಬೊ ರವರು ಭರವಸೆ ನೀಡಿದರು. ಇದರಂತೆ ಆದಷ್ಟು ಬೇಗ ಮಾರುಕಟ್ಟೆಗಳ ನಿರ್ಮಾಣದ ಪೂರ್ವ ತಯಾರಿಯನ್ನು ನಡೆಸುವಂತೆ ಅಧಿಕಾರಿಗಳಿಗೆ ತಾಂತ್ರಿಕ ತಜ್ಞರಿಗೆ ಸಲಹೆ ನೀಡಿದರು.
ಸ್ಥಿರಾಸ್ತಿ ದರದ ಬಗ್ಗೆ ಆಕ್ಷೇಪ, ಪುನರ್ ಪರಿಶೀಲನೆಗೆ ಮನವಿ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳಿಗೆ ನಿಗದಿಪಡಿಲಾದ ದರದಲ್ಲಿ ಸಾಕಷ್ಟು ಗೊಂದಲಗಳಿದ್ದು, ಈ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಸಮಾಲೋಚಿಸಲು ಸಭೆಯಲಲ್ಲಿ ವಿಚಾರ ಮಾಡಲಾಯಿತು. ಉಪನೋಂದಣಾ ಕಚೇರಿಯಿಂದ ನಿಗದಿಪಡಿಸಲಾದ ಸ್ಥಿರಾಸ್ತಿಗಳ ಮಾರ್ಗದರ್ಶಿ ದರವನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸಿ ನಿಗದಿಪಡಿಸುವಂತೆ ಶಾಸಕ ಜೆ.ಆರ್.ಲೋಬೋ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಭೆಯ ಚರ್ಚೆಯ ಕೊನೆಯಲ್ಲಿ ಈ ಸಭೆಯ ನಡಾವಳಿಯನ್ನೇ ಆಕ್ಷೇಪವನ್ನಾಗಿ ದಾಖಲಿಸಿ ಸರಕಾರಕ್ಕೆ ಪುನರ್ ಪರಿಶೀಲನೆಗೆ ಮನವಿ ನೀಡುವುದಾಗಿ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಿಯ ಉಪನೋಂದಣಿ ಅಧಿಕಾರಿ ಕಚೇರಿಯ ಮಂಗಳೂರು ನಗರ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮೌಲ್ಯದ ಪರಿಷ್ಕರಣೆ ಕಾರ್ಯವನ್ನು ಸ್ಥಿರ ಸೊತ್ತುಗಳ ಮೌಲ್ಯಮಾಪನ ಉಪಸಮಿತಿ ವತಿಯಿಂದ ಮಾಡಲಾಗಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಲಾದ ಮೌಲ್ಯಮಾಪನ ಸಮರ್ಪಕವಾಗಿಲ್ಲ ಮಾತ್ರವಲ್ಲದೆ ಹಲವಾರು ರಸ್ತೆಗಳಿಗೆ ನಾಮಕರಣವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದ್ದು, ಮೇ 31ರ ಒಳಗೆ ಪಾಲಿಕೆಯ ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಪೊರೇಟರ್ಗಳು ವಿಮರ್ಶಿಸಿ ಅಗತ್ಯವಿದ್ದಲ್ಲಿ ಸ್ಥಳ ಪರಿಶೀಲನೆ ನಡೆಸಿ ರಸ್ತೆಗಳಿಗೆ ಹೆಸರನ್ನು ನಿಗದಿಪಡಿಸುವಂತೆ ಶಾಸಕರು ಸೂಚಿಸಿದರು.
ಕ್ರೆಡೈ ಅಧ್ಯಕ್ಷ ಶ್ರೀ ಡಿ.ಬಿ.ಮೆಹ್ತಾ ಮಾತನಾಡಿ, ನಗರ ವ್ಯಾಪ್ತಿಯ ಅಡ್ಡ ರಸ್ತೆಗಳಿಗೆ ಹೆಸರು ಇಲ್ಲದ ಕಾರಣ ಪ್ರಮುಖ ರಸ್ತೆಯ ಹೆಸರನ್ನೇ ಅಡ್ಡ ರಸ್ತೆಗೂ ಸೂಚಿಸಲಾಗುವ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯ ಮೌಲ್ಯವನ್ನೇ ಅಡ್ಡ ರಸ್ತೆಗಳ ಆಸ್ತಿಗಳಿಗೂ ಅನ್ವಯಿಸಿರುವುದು ಸಮಂಜಸವಲ್ಲ ಎಂದರು.
ಸಮೀಕ್ಷೆ ಕುರಿತು ಸಮನ್ವಯ ಸಾಧಿಸುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಪೊರೇಟರ್ಗಳಿಗೆ ಮೇಯರ್ ಹಾಗೂ ಅಧಿಕಾರಿಗಳಿಗೆ ಕಮಿಷನರ್ ಸುತ್ತೋಲೆ ಕಳುಹಿಸಿ ಕಾರ್ಯಸೂಚಿ ಸಿದ್ಧಪಡಿಸಿ ಎಂದು ಅವರು ಸಲಹೆ ನೀಡಿದರು. ಇನ್ಫ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಫೌಂಡೇಶನ್ನ ಧರ್ಮರಾಜ್ ಮಾತನಾಡಿ, ತಾರ್ಕಿಕವಾಗಿ ಆಸ್ತಿಯ ಮೌಲ್ಯ ನಿಗದಿಗೊಳಿಸಬೇಕು ಎಂದರು.
ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರಿನಾಥ್, ದೀಪಕ್ ಪೂಜಾರಿ, ಕೇಶವ, ಪ್ರಕಾಶ್ ಬಿ.ಸಾಲ್ಯಾನ್, ಕಮಿಷನರ್ ಹೆಫ್ಸಿಬಾ ರಾಣಿ, ತಹಸೀಲ್ದಾರ್ ಮೋಹನ್ ರಾವ್, ಜಿಲ್ಲಾ ಸಹಾಯಕ ನೋಂದಣಾಧಿಕಾರಿಗಳು ಹಾಗೂ ವಿವಿಧ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.