ಚಿಕ್ಕ ವಯಸ್ಸಿನಲ್ಲೆ ರಾಷ್ಟ್ರೀಯ ಆದರ್ಶಗಳನ್ನು ಬೆಳೆಸಿಕೊಂಡ ಕನ್ನಡ ನಾಡಿನ ವೀರ ಮಹಿಳೆ ಅಬ್ಬಕ್ಕ ದೇವಿ. ಅಂದು ಪೋರ್ಚುಗೀಸರಿಗೆ ಬೆವರಿಳಿಸಿದ ರಾಣಿ ಅಬ್ಬಕ್ಕ ಭಾರತದ ಇತಿಹಾಸದ ಪುಟದಲ್ಲಿ ಮೆರೆದ ಕನ್ನಡದ ರತ್ನ.
ಕರ್ನಾಟಕದ ಪಶ್ಚಿಮ ಕರಾವಳಿಯನ್ನು ತುಳುನಾಡು ಎಂದು ಕರೆಯುವುದು ರೂಢಿ. ಅಬ್ಬಕ್ಕದೇವಿ ಮೂಡುಬಿದಿರೆಯ ಚೌಟ ಮನೆತನಕ್ಕೆ ಸೇರಿದ ತಿರುಮಲ ರಾಯರ ಸೋದರ ಸೊಸೆ. ಚಿಕ್ಕಂದಿನಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಅಬ್ಬಕ್ಕನನ್ನು ತಿರುಮಲ ರಾಯರೇ ಬೆಳಸಿದರು.
ಮಂಗಳೂರನ್ನು ಆಗ ವೀರ ನರಸಿಂಹ ಬಂಗರಾಜರು ಆಳುತ್ತಿದ್ದರು. ಯುವರಾಜ ಲಕ್ಷ್ಮಪ್ಪರಸ ಬಂಗರಾಜರ ದೇಶಾಭಿಮಾನ ಪರಾಕ್ರಮಗಳ ಸುದ್ದಿ ಮೂಡುಬಿದರೆಯಲ್ಲಿ ಜನಜನಿತವಾಗಿತ್ತು. ಶೌರ್ಯ ಪರಾಕ್ರಮಗಳಿದ್ದರೂ ಸೌಮ್ಯ ಸ್ವಭಾವದ ಲಕ್ಷ್ಮಪ್ಪರಸರ ಸ್ವಭಾವವು ತಿರುಮಲರಾಯರಿಗೆ ಒಪ್ಪಿಗೆಯಾಯಿತು. ತಿರುಮಲ ರಾಯರು ಅಬ್ಬಕ್ಕನನ್ನು ಲಕ್ಷ್ಮಪ್ಪರಸ ಬಂಗರಾಜರಿಗೆ ಮದುವೆ ಮಾಡಿ ಕೊಡುವ ಯೋಚನೆ ಮಾಡಿದರು. ಸಾತ್ವಿಕತನವು ಸತ್ವಹೀನತೆಯ ಲಕ್ಷಣವಲ್ಲ. ಅದು ಸೌಜನ್ಯದ ಪ್ರಕಾಶದಿಂದ ಕೂಡಿದ ಶಕ್ತಿಯ ಮಂದ ಪ್ರಕಾಶ, ಅಬ್ಬಕ್ಕ ಯುವರಾಜನಲ್ಲಿ ಗುರುತಿಸಿದ ಲಕ್ಷಣ. ಇಬ್ಬರಿಗೂ ಮದುವೆಯಾಯಿತು.
1544 ರಲ್ಲಿ ಅಬ್ಬಕ್ಕ ದೇವಿ ಉಳ್ಳಾಲದ ರಾಣಿಯಾದಳು. ಅಬ್ಬಕ್ಕ ಮಂಗಳೂರಿನಲ್ಲಿಯೇ ಇದ್ದು ತನ್ನ ಗಂಡನಿಗೆ ಆಳ್ವಿಕೆಯಲ್ಲಿ ಬೇಕಾದ ಸಲಹೆಗಳನ್ನು ಕೊಟ್ಟು ಸಹಾಯ ಮಾಡುತ್ತಿದ್ದಳು. ವೀರನರಸಿಂಹ ಬಂಗರಾಜರು ಸ್ವರ್ಗಸ್ಥರಾದ ಮೇಲೆ ಅಳಿಯ ಕಾಮರಾಯನಿಗೆ ಯುವರಾಜ ಪಟ್ಟ ಕಟ್ಟಿದರು. ಈತನಿಗೆ ಅಬ್ಬಕ್ಕನ ಮೇಲೆ ದ್ವೇಷ ಹೆಚ್ಚಿತು, ಹೇಗಾದರೂ ಮಾಡಿ ಆಕೆಯನ್ನು ಮಂಗಳೂರಿನಿಂದ ಹೊರಡಿಸಬೇಕೆಂದು, ಸಿಂಹಾಸನವನ್ನೇರಬೇಕೆಂದು ಯೋಚಿಸುತ್ತಿದ್ದನಾದರೂ ರಟ್ಟೆಯಲ್ಲಿ ಶಕ್ತಿ ಇರಲಿಲ್ಲ.
ಕಾಲ ಕಳೆದಂತೆ ಅಬ್ಬಕ್ಕ ದೇವಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದವು. ಲಕ್ಷ್ಮಪ್ಪರಸ ಬಂಗರಾಜರು ಪಟ್ಟಕ್ಕೆ ಬಂದ ಮೇಲೆ ಹಿಂದೆ ಪೋರ್ಚುಗೀಸರಿಗೆ ನೀಡುತ್ತಿದ್ದ ಕಪ್ಪಕಾಣಿಕೆಯನ್ನು ನಿಲ್ಲಿಸಿದರು. ನೆರೆಹೊರೆಯ ಸಾಮಂತರು ಮಂಗಳೂರಿನ ಸ್ನೇಹಿತರಾದರು. ಕೆಂಡಾಮಂಡಲವಾದ ಪೋರ್ಚುಗೀಸರು ಮಂಗಳೂರಿಗೆ ಪತ್ರದ ಮುಖೇನ ಕಪ್ಪ ಕಾಣಿಕೆ ಸಲ್ಲಿಸುವಂತೆ ಬೆದರಿಕೆ ಹಾಕಿದರು. ಆ ಪತ್ರಕ್ಕೆ ಉತ್ತರಿಸಲು ಮಂತ್ರಿಗಳ ಮುಂದೆ ಇಟ್ಟಾಗ, ಅಬ್ಬಕ್ಕ ದೇವಿಯು “ಪೋರ್ಚುಗೀಸರಿಗೆ ಕಪ್ಪ ಕಾಣಿಕೆ ಕೊಡಬಾರದು. ನಾಡನ್ನು ನಾಡಿನ ಜನರನ್ನು ದಾಸ್ಯಕ್ಕೆ ಒಡ್ಡುವುದು ಸರಿಯಲ್ಲ. ನಾಡಿಗಾಗಿ ಹೋರಾಡಿ ಮಾಡಿದರೆ ಅದೇ ಸ್ವರ್ಗ, ದಾಸ್ಯದ ಬದುಕೇ ನರಕ” ಎಂದು ಹುರಿದುಂಬಿಸಿದರು. ಆದರೆ ಕಾಮರಾಯರು ಇದನ್ನು ವಿರೋಧಿಸಿ ಹೇಡಿಗಳಂತೆ ಪೋರ್ಚುಗೀಸರಿಗೆ ಕಪ್ಪ ಕಾಣಿಕೆ ಕೊಡುವುದಾಗಿ ನಿರ್ಣಯಕ್ಕೆ ಬಂದರು.
ಸ್ವಾಭಿಮಾನಿಯಾಗಿದ್ದ ಅಬ್ಬಕ್ಕ ದೇವಿಗೆ ಈ ನಿರ್ಣಯವನ್ನು ಸಹಿಸಲಿಕ್ಕಾಗಲಿಲ್ಲ. ದಾಸ್ಯದ ಜೀವನದಲ್ಲಿ ತಾನಿರಲಾರನೆಂದು ಮಂಗಳೂರನ್ನು ಬಿಡುವ ಮತ್ತು ಉಲ್ಲಾಳವನ್ನು ಪೋರ್ಚುಗೀಸರಿಂದ ರಕ್ಷಿಸಬೇಕೆಂಬ ನಿರ್ಧಾರವನ್ನು ಕೈಗೊಂಡಳು. ಪೋರ್ಚುಗೀಸ್ ನಾವಿಕರು ಮೀನು ಹಿಡಿಯಲು ಹೋದ ಮೊಗವೀರರಿಗೆ ಕಿರುಕುಳ ಕೊಡುತ್ತಿದ್ದರು. ಇದನ್ನು ತಪ್ಪಿಸಲು ಅಬ್ಬಕ್ಕ ಪೋರ್ಚುಗೀಸ್ ಗವರ್ನರನಿಗೆ ಓಲೆ ಕಳುಹಿಸಲು, ಆ ಗವರ್ನರ್ ವ್ಯಾಪಾರ ಮಾಡಬೇಕಿದ್ದರೆ ನಮ್ಮ ಆಜ್ಞೆಯನ್ನು ಪಡೆಯಬೇಕು, ಇದನ್ನು ಉಲ್ಲಂಘಿಸಿರುವುದರಿಂದ ದಂಡವನ್ನು ಕೊಡಬೇಕು ಎಂದು ಮರು ಉತ್ತರ ಅಬ್ಬಕ್ಕನಿಗೆ ತಲುಪಿತು.
ಒಂದು ಉಪಾಯಮಾಡಿ ಪೋರ್ಚುಗೀಸರಿಗೆ ಕಪ್ಪ ಕಳಿಸುತ್ತೇವೆ ಎಂದು ಹೇಳಿ, ಇನ್ನೊಂದು ಕಡೆ ಪೋರ್ಚುಗೀಸರ ನೌಕೆಗೆ ಮುತ್ತಿಗೆ ಹಾಕುವ ಏರ್ಪಾಡಾಯಿತು. ಸೈನಿಕರೆಲ್ಲರು ಮೈ-ಮೋರೆಗಳಿಗೆ ಮಸಿ ಬಳಿದುಕೊಂಡರು. ಚಿಕ್ಕ ಪುಟ್ಟ ದೋಣಿಗಳಲ್ಲಿ ಎಣ್ಣೆ ಅದ್ದಿದ ಕೊಂಡಿಗಳು, ತೆಂದಿಗೆ ಸೋಗೆಯ ಸೋತೆಗಳು ಸಂಗ್ರಹವಾದವು. ಕತ್ತಲಲ್ಲಿ ದೋಣಿಗಳೆಲ್ಲಾ ಹಡಗುಗಳ ಸಮೀಪಕ್ಕೆ ಬಂದು ಹಡಗುಗಳನ್ನು ಸುತ್ತುವರಿದು ಒಳನುಗ್ಗಿದವು. ಉಲ್ಲಾಳದ ಸೈನಿಕರು ಹಡಗುಗಳಿಗೆ ಬೆಂಕಿಯನ್ನು ಹಚ್ಚಿದರು. ಬಾಣಗಳು ಎಲ್ಲಿಂದಲೋ ಬಂದು ತಾಗುತ್ತಿದ್ದವು. ಗಾಬರಿಗೊಂಡ ಪೋರ್ಚುಗೀಸರು ಕಂಡ ಕಡೆಗೆ ಗುಂಡು ಹಾರಿಸುತ್ತಿದ್ದರು ಅಬ್ಬಕ್ಕ ರಾಣಿ ಗಂಡುಡುಗೆಯಲ್ಲಿ ಮಿಂಚಿನ ವೇಗದಲ್ಲಿ ಸಂಚರಿಸಿ ಸೈನಿಕರಿಗೆ ನಿರ್ದೇಶನ ನೀಡುತ್ತಿದ್ದಳು. ಇಷ್ಟಾಗುವಾಗ ಪೋರ್ಚುಗೀಸರ 2 ನೌಕೆಗಳು ಸಂಪೂರ್ಣ ಸುಟ್ಟು ಹೋದವು. ಉಲ್ಲಾಳದ ತುಳುವ ಸೇನೆ ಸರಿಯಾದ ಬುದ್ಧಿ ಕಲಿಸಿತು. ಕಾಮರಾಯ ಮತ್ತು ಪೋರ್ಚುಗೀಸರ ವೈಸರಾಯರು ಸೆರೆಸಿಕ್ಕರು.
ಹೀಗೆ ಧೈರ್ಯ ಸಾಹಸವನ್ನು ಪ್ರದರ್ಶಿಸಿದ ಅಬ್ಬಕ್ಕ ದೇವಿ ಕಡೆಗೆ ತನ್ನ ಅಳಿಯ ಕಾಮರಾಯನ ಮೋಸದಾಟಕ್ಕೆ ಮುಂದೆ ಪ್ರಾಣ ತೆತ್ತಬೇಕಾಯಿತು. ಆಕೆಯ ದೇಶಾಭಿಮಾನದ ಕಿಚ್ಚು ಇಂದಿಗೂ ಎಲ್ಲರನ್ನು ಪ್ರೇರೇಪಿಸುತ್ತದೆ.
ಬನ್ನಿ ನಮ್ಮ ಕನ್ನಡದ ವೀರ ಮಹಿಳೆಯನ್ನು ಸ್ಮರಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.