ಭಾರತ ದೇಶದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಬಹುಷಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣದಂಡನೆಗೆ ಒಳಗಾದ ಮೊದಲ ವ್ಯಕ್ತಿ ಮದನ್ಲಾಲ್ ಧಿಂಗ್ರ. ಅವರು ತಮ್ಮನ್ನು ನೇಣಿಗೆ ಒಡ್ಡಿಕೊಂಡ ದಿನ ಆಗಸ್ಟ್ 17, 1909.
ಅಮೃತಸರದಲ್ಲಿ ಜನಿಸಿದ ಮದನ್ಲಾಲ್ ಧಿಂಗ್ರ ಅವರದ್ದು ಅತ್ಯಂತ ಶ್ರೀಮಂತ ಕುಟುಂಬ. ಅವರ ತಂದೆ ದಿತ್ತ ಮಲ್ ಅವರು ಸರ್ಕಾರಿ ಹಿರಿಯ ವೈದ್ಯರಾಗಿ ನಿವೃತ್ತಿ ಪಡೆದಿದ್ದವರು. ಅವರಿಗೆ ಏಳು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದರು. ಮೂರು ಗಂಡು ಮಕ್ಕಳು ವೈದ್ಯರಾದರೆ, ಮೂರು ಮಕ್ಕಳು ಬ್ಯಾರಿಸ್ಟರ್ ಪದವಿ ಪಡೆದವರು. ಇನ್ನೊಬ್ಬ ಪುತ್ರ …… ಆತನೇ ಕ್ರಾಂತಿಕಾರಿಯಾದ ಮದನ್ಲಾಲ್ ಧಿಂಗ್ರ.
ತನ್ನ ಓದಿನ ದಿನಗಳಲ್ಲಿ ಮದನ್ಲಾಲ್ ಧಿಂಗ್ರ, ಲಾಲಾ ಲಜಪತ್ ರಾಯ್ ಮತ್ತು ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ ಅವರುಗಳು ಸಂಘಟಿಸಿದ್ದ ‘ಪಗ್ಡಿ ಸಂಬಾಲ್ ಜತ್ತ’ ಎಂಬ ಚಳವಳಿಯಲ್ಲಿ ಪಾಲ್ಗೊಂಡು ಅದಕ್ಕಾಗಿ ದೈಹಿಕವಾಗಿ ಶ್ರಮಿಸಿದರು. ಭಾರತೀಯ ಬಡತನ ಮತ್ತು ಕ್ಷಾಮದ ಪರಿಸ್ಥಿತಿಯ ಕುರಿತಾಗಿನ ತೀವ್ರವಾದ ಅಧ್ಯಯನವನ್ನು ಧಿಂಗ್ರ ಕೈಗೊಂಡರು. ಸ್ವದೇಶಿ ಚಳುವಳಿಗೆ ಬದ್ಧನಾಗಿ ಲಾಹೋರಿನ ಕಾಲೇಜಿನ ದಿನಗಳಲ್ಲಿ ಬ್ರಿಟಿಷ್ ಸರ್ಕಾರ ವಿದೇಶಿ ಬಟ್ಟೆಯಲ್ಲಿ ತಯಾರಿಸಿದ ಕೋಟು ಧರಿಸಬೇಕೆಂದು ವಿಧಿಸಿದ್ದ ಶಿಸ್ತನ್ನು ವಿರೋಧಿಸಿ ಕಾಲೇಜಿನಿಂದಲೂ ಹೊರಹಾಕಲ್ಪಟ್ಟರು.
ಇಂಗ್ಲೆಂಡಿಗೆ ಬಂದ ಧಿಂಗ್ರ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೊಡಗಿದರೂ ಶೀಘ್ರದಲ್ಲಿ ಸ್ವಾತಂತ್ರ್ಯ ಚಳವಳಿಗೆ ಇಳಿದುಬಿಟ್ಟರು. ಶ್ಯಾಮ್ಜಿ ಕೃಷ್ಣ ವರ್ಮ ಮತ್ತು ವೀರ ಸಾವರ್ಕರ್ ಅವರ ಪ್ರಭಾವ ಧಿಂಗ್ರ ಅವರನ್ನು ಸೆಳೆದುಬಿಟ್ಟಿತು. ಒಂದೇ ವಯಸ್ಸಿನವರಾದ ಶ್ಯಾಮ್ಜಿ ಕೃಷ್ಣ ವರ್ಮ ಮತ್ತು ಧಿಂಗ್ರ ಜೊತೆ ಜೊತೆಯಾಗಿ ಸ್ವಾತಂತ್ರ್ಯ ಕಾರ್ಯಗಳಲ್ಲಿ ತೊಡಗಿದ್ದರು. ಆದರೆ ಬ್ರಿಟಿಷ್ ಸರ್ಕಾರದ ಕಿರುಕಳ ಹೆಚ್ಚಾಗಿ ಶ್ಯಾಮ್ಜಿ ವರ್ಮ ಪ್ಯಾರಿಸ್ಸಿಗೆ ವಲಸೆ ಹೋಗಬೇಕಾಯಿತು. ಇತ್ತ ವೀರ ಸಾವರ್ಕರ್ ಅವರಿಂದ ಪ್ರೋತ್ಸಾಹಿತರಾದ ಧಿಂಗ್ರ ಇಂಗ್ಲೆಂಡಿನಲ್ಲಿ ಭಾರತೀಯರನ್ನು ಗುಪ್ತಚರರಾಗಿ ಬಳಸುವುದರಲ್ಲಿ ನಿಷ್ಣಾತನಾಗಿದ್ದ ಸರ್ ವಿಲಿಯಮ್ ಹಟ್ಟ್ ಕರ್ಜನ್ ವೈಲಿ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದರು.
ಸುಮಾರು ಒಂದೂವರೆ ತಿಂಗಳುಗಳ ಕಾಲ ವಿಚಾರಣೆಯ ನಂತರ ಆಗಸ್ಟ್ 17, 1909 ರಂದು 26ರ ಹರೆಯದ ಧಿಂಗ್ರರನ್ನು ಗಲ್ಲಿಗೇರಿಸಲಾಯಿತು. ಭಗತ್ ಸಿಂಗರು ಭಾರತದ ಕ್ರಾಂತಿಕಾರಿಗಳ ಕುರಿತಾದ ಬರಹದಲ್ಲಿ ಮದನ್ ಲಾಲ್ ಧಿಂಗ್ರರನ್ನು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.
“ಎಲ್ಲಿಯವರೆಗೆ ಹೊರಗಿನವರ ತುಪಾಕಿಗಳ ನಿಯಂತ್ರಣವು ಸ್ವದೇಶಿಯರ ಮೇಲಿರುವುದೋ ಅಲ್ಲಿಯವರೆಗೂ ದೇಶಕ್ಕೆ ಯುದ್ಧದ ಛಾಯೆ ಆವರಿಸಿರುತ್ತದೆ. ಶಸ್ತ್ರ ರಹಿತರಾದ ನಮ್ಮಂತಹವರಿಗೆ ಮುಕ್ತವಾದ ಯುದ್ಧ ಸಾಧ್ಯವಿಲ್ಲ. ಆದ್ದರಿಂದಲೇ ಮುನ್ಸೂಚನೆಯಿಲ್ಲದೆ ನಾನು ದಾಳಿ ಮಾಡಬೇಕಾಯಿತು. ಐಶ್ವರ್ಯ ಹಾಗೂ ಬುದ್ಧಿಯಲ್ಲಿ ಬಡವನಾದ ನಾನು, ನನ್ನ ತಾಯಿ ಭಾರತಿಗೆ ನನ್ನ ರಕ್ತವನ್ನಲ್ಲದೆ ಇನ್ನೇನನ್ನೂ ತಾನೆ ಅರ್ಪಿಸಲು ಸಾಧ್ಯ. ನಾನು ಅದನ್ನೆ ಆಕೆಗೆ ಬಲಿದಾನ ಕೊಟ್ಟಿದ್ದೇನೆ. ಇಂದು ಭಾರತೀಯರಿಗೆ ಅಗತ್ಯವಿರುವ ಏಕೈಕ ಪಾಠ ‘ವೀರಮರಣ’. ಅದನ್ನು ಕಲಿಸುವ ಏಕೈಕ ವಿಧಾನ ನಮ್ಮನ್ನು ನಾವೆ ಅರ್ಪಿಸಿಕೊಳ್ಳುವುದು. ಭಗವಂತನಲ್ಲಿ ನನ್ನ ಒಂದೇ ಪ್ರಾರ್ಥನೆಯೆಂದರೆ ಮತ್ತೆ ನಾನು ನನ್ನ ತಾಯಿನಾಡಲ್ಲಿ ಹುಟ್ಟುವುದು, ಹಾಗೂ ಇದೇ ಕಾರಣಕ್ಕಾಗೆ ಪುನಃ ಸಾಯುವುದು. ವಂದೇ ಮಾತರಂ”
– ಮದನ್ಲಾಲ್ ಧಿಂಗ್ರ
ಫೆಬ್ರವರಿ 18, 1883 – ಆಗಸ್ಟ್ 17,1909
ಇಂದು ಈ ಮಹಾನ್ ಕ್ರಾಂತಿಕಾರಿಯ ಸ್ಮೃತಿ ದಿನ. ಬನ್ನಿ ಈತನ ತ್ಯಾಗ ಬಲಿದಾನವನ್ನು ಸ್ಮರಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.